FoodLatest

ಸೀಗಡಿಯಿಂದ ರುಚಿಕರವಾದ ಖಾದ್ಯಗಳನ್ನು ತಯಾರಿಸಿ, ಸೇವಿಸಿ ಖುಷಿ ಪಡಿ… ತಯಾರಿಸುವ ವಿಧಾನ ಹೇಗೆ?

ಸೀಗಡಿಯಿಂದ ಹತ್ತು ಹಲವು ರೀತಿಯ ರುಚಿಕರವಾದ ಖಾದ್ಯವನ್ನು ನಾವು ತಯಾರಿಸಬಹುದಾಗಿದೆ.. ಹೀಗಾಗಿ ಏನೆಲ್ಲ ತಯಾರಿಸಿ ನಾವು ಸೇವಿಸಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ನೀವು ನಿಮ್ಮ ಮನೆಯಲ್ಲಿಯೇ ಇಲ್ಲಿರುವ ಖಾದ್ಯಗಳನ್ನೇಕೆ  ತಯಾರಿಸಬಾರದು? ಒಮ್ಮೆ ಪ್ರಯತ್ನಿಸಿ ನೋಡಿ

ಗೋಡಂಬಿ ಮಿಕ್ಸ್ ಸೀಗಡಿ ಫ್ರೈ

ಸೀಗಡಿ ಮೀನಿನ ಖಾದ್ಯ ಎಂದರೆ ಎಲ್ಲರೂ ಇಷ್ಟಪಡುತ್ತಾರೆ. ಇನ್ನು ಇದಕ್ಕೆ ಗೋಡಂಬಿ ಮಿಕ್ಸ್ ಮಾಡಿ ಫ್ರೈ ಮಾಡಿದರಂತು ಅದರ ರುಚಿಯೇ ವಿಭಿನ್ನವಾಗಿರುತ್ತದೆ. ಪಾರ್ಟಿಗಳಲ್ಲಿ ಮೇಲೋಗರವಾಗಿ ಸೇವಿಸಲು ಚೆನ್ನಾಗಿರುತ್ತದೆ. ಇಷ್ಟಕ್ಕೂ ಗೋಡಂಬಿ ಮಿಕ್ಸ್ ಸೀಗಡಿ ಫ್ರೈ ಮಾಡಲು ಏನೇನು ಪದಾರ್ಥಗಳು ಬೇಕು ಮತ್ತು ಹೇಗೆ ಮಾಡುವುದು ಎಂಬುದರ ವಿವರ ಇಲ್ಲಿದೆ.

ಬೇಕಾಗುವ ಪದಾರ್ಥಗಳು: ಹಸಿ ಸೀಗಡಿ ಮೀನು- ಅರ್ಧ ಕೆಜಿ, ಚಿಲ್ಲಿಸಾಸ್- ಒಂದು ಟೀ ಚಮಚ, ಸೋಯಾಸಾಸ್- ಒಂದು ಟೀ ಚಮಚ, ಅರಸಿನಪುಡಿ- ಅರ್ಧ ಟೀ ಚಮಚ, ಈರುಳ್ಳಿ- ಒಂದು, ಇಡಿ ಗೋಡಂಬಿ- ಅರ್ಧ ಕಪ್, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- ಹುರಿಯಲು ಅಗತ್ಯವಿರುವಷ್ಟು, ನಿಂಬೆಹಣ್ಣು- ಅರ್ಧ ಹೋಳು, ಕೊತ್ತಂಬರಿ ಸೊಪ್ಪು- ಅರ್ಧಕಟ್ಟು,

ಮಾಡುವ ವಿಧಾನ: ಮೊದಲಿಗೆ ಹಸಿ ಸೀಗಡಿ ಮೀನನ್ನು ಶುಚಿ ಮಾಡಿಟ್ಟುಕೊಳ್ಳಬೇಕು. ಇನ್ನೊಂದೆಡೆ ಈರುಳ್ಳಿಯನ್ನು ಚಿಕ್ಕದಾಗಿ ಹಚ್ಚಿಕೊಳ್ಳಬೇಕು. ಕೊತ್ತಂಬರಿ ಸೊಪ್ಪನ್ನು ಕೂಡ ಪ್ರತ್ಯೇಕವಾಗಿ ಹಚ್ಚಿಟ್ಟುಕೊಳ್ಳಬೇಕು.

ಒಂದು ಪಾತ್ರೆಯಲ್ಲಿ ಸೀಗಡಿ ಮೀನು ಹಾಕಿ ಅದಕ್ಕೆ ಸ್ವಲ್ಪ ಉಪ್ಪು(ರುಚಿಗೆ ತಕ್ಕಂತೆ), ಸೋಯಾ, ಚಿಲ್ಲಿಸಾಸ್, ಅರಶಿಣ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಬೇಕು. ಆ ನಂತರ ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಕಾದ ಮೇಲೆ ಅದಕ್ಕೆ ಈರುಳ್ಳಿ ಹಾಕಿ ಚೆನ್ನಾಗಿ ಕಂದು ಬಣ್ಣ ಬರುವ ತನಕ ಹುರಿಯಬೇಕು.

ನಂತರ ಮೊದಲೇ ಮಸಾಲೆ ಬೆರೆಸಿಟ್ಟಿರುವ ಸೀಗಡಿಯನ್ನು ಹಾಕಿ ಚೆನ್ನಾಗಿ ತಿರುಗಿಸುತ್ತಾ ಹುರಿಯಬೇಕು, ಅದರಲ್ಲಿದ್ದ ನೀರು ಆವಿಯಾಗಿ ಕಂದು ಬಣ್ಣ ಬರುವ ತನಕ ತಳ ಹಿಡಿಯದಂತೆ ತಿರುಗಿಸುತ್ತಾ ಬೇಯಿಸಬೇಕು. ಬಳಿಕ ಗೋಡಂಬಿಯನ್ನು ಅದಕ್ಕೆ ಹಾಕಿ ಮಿಕ್ಸ್ ಮಾಡಿ ತಿರುಗಿಸಬೇಕು. ಬಳಿಕ ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಗೋಡಂಬಿ ಮಿಕ್ಸ್ ಸೀಗಡಿ ಫ್ರೈ ಸವಿಯಲು ಸಿದ್ಧವಾದಂತೆಯೇ…

ತೆಂಗಿನ ಹಾಲಿನ ಪ್ರಾನ್ ಕರ್ರಿ

ಪ್ರಾನ್ ಮಾಂಸಹಾರಿಗಳ ನೆಚ್ಚಿನ ತಿನಿಸಾಗಿದ್ದು, ಇದರಿಂದ ಹಲವು ರೀತಿಯ ಖಾದ್ಯಗಳನ್ನು ತಯಾರಿಸಬಹುದಾಗಿದೆ. ಅದರಲ್ಲಿ ಪ್ರಾನ್ ತೆಂಗಿನ ಕರ್ರಿಯೂ ಒಂದಾಗಿದೆ. ಇದನ್ನು ತಯಾರಿಸಲು ಬೇಕಾಗುವ ಪದಾರ್ಥಗಳು ಮತ್ತು ತಯಾರಿಸುವ ವಿಧಾನ ಈ ಕೆಳಗಿನಂತಿದೆ.

ಬೇಕಾಗುವ ಪದಾರ್ಥಗಳು: ಪ್ರಾನ್- ಅರ್ಧ ಕೆಜಿ, ಈರುಳ್ಳಿ- 1, ಸಾಸಿವೆ- ಅರ್ಧ ಟೀ ಚಮಚೆ, ಕರಿಬೇವು- ಸ್ವಲ್ಪ, ಬೆಳ್ಳುಳ್ಳಿ ಶುಂಠಿ ಪೇಸ್ಟ್- ಒಂದು ಟೀ ಚಮಚೆ, ಮೆಣಸಿನಪುಡಿ- ಎರಡು ಟೀ ಚಮಚೆ, ದನಿಯಪುಡಿ- ಎರಡು ಟೀ ಚಮಚೆ, ಜೀರಿಗೆಪುಡಿ- ಒಂದು ಟೀ ಚಮಚೆ, ಅರಸಿನ- ಅರ್ಧ ಟೀ ಚಮಚೆ, ಉಪ್ಪು- ಒಂದೂವರೆ ಟೀ ಚಮಚೆ, ಎಣ್ಣೆ- ಎರಡು ಟೇಬಲ್ ಚಮಚೆ, ತೆಂಗಿನ ಹಾಲು- ಅರ್ಧ ಬಟ್ಟಲು.

ಮಾಡುವ ವಿಧಾನ: ಮೊದಲಿಗೆ ಪ್ರಾನ್ ನ್ನು ನಾಳ ತೆಗೆದು ಶುಚಿಗೊಳಿಸಿಟ್ಟುಕೊಳ್ಳಬೇಕು, ಈರುಳ್ಳಿಯನ್ನು ಸಣ್ಣದಾಗಿ ಹಚ್ಚಿಕೊಳ್ಳಬೇಕು. ತೆಂಗಿನ ಕಾಯಿಯನ್ನು ತುರಿದು ಹಿಂಡಿ ಹಾಲನ್ನು ತಯಾರಿಸಿಟ್ಟುಕೊಳ್ಳಬೇಕು. ಆ ನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಅದನ್ನು ಸ್ಟೌವ್ ಮೇಲಿಟ್ಟು ನಿಧಾನ ಉರಿಯಲ್ಲಿ ಎಣ್ಣೆಯನ್ನು ಹಾಕಿ ಅದು ಕಾಯುತ್ತಿದ್ದಂತೆಯೇ ಸಾಸಿವೆ ಹಾಕಿ ಅದು ಸಿಡಿದ ಬಳಿಕ ಈರುಳ್ಳಿ, ಕರಿಬೇವು ಹಾಕಿ ಚೆನ್ನಾಗಿ ಹುರಿಯಬೇಕು. ಬಳಿಕ ಅದಕ್ಕೆ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಹಾಕಿ ತಿರುಗಿಸಬೇಕು. ಇದಾದ ಬಳಿಕ ಮೆಣಸಿನಪುಡಿ, ದನಿಯಪುಡಿ, ಜೀರಿಗೆ ಪುಡಿ, ಅರಸಿನಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲೆಸಬೇಕು. ಇಷ್ಟು ಮಾಡಿದ ಬಳಿಕ ಹಸಿ ಪ್ರಾನ್‌ಗಳನ್ನು ಹಾಕಿ ತೆಂಗಿನ ಹಾಲು ಸೇರಿಸಿ (ಅಗತ್ಯವಿದ್ದರೆ ಸ್ವಲ್ಪ ನೀರು ಹಾಕಿ) ಬೇಯಿಸಿ ಇಳಿಸಿದರೆ ಪ್ರಾನ್ ತೆಂಗಿನ ಹಾಲಿನ ಕರ್ರಿ ಸವಿಯಲು ರೆಡಿಯಾದಂತೆಯೇ….. 

ಸಿಂಪಲ್ ಸೀಗಡಿ ಫ್ರೈ

ಸೀಗಡಿಯಿಂದ ಬಹುದಾದ ಖಾದ್ಯಗಳಲ್ಲಿ ಫ್ರೈ ಕೂಡ ಒಂದಾಗಿದ್ದು ಅದನ್ನು ಮಾಡುವುದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಯಬಹುದು.

ಬೇಕಾಗುವ ಪದಾರ್ಥಗಳು: ಸೀಗಡಿ ಮೀನು: ಅರ್ಧಕೆಜಿ, ಮೆಣಸಿನಪುಡಿ: ಒಂದೂವರೆ ಚಮಚ, ಅರಶಿನಪುಡಿ: ಕಾಲು ಚಮಚ ಉಪ್ಪು: ರುಚಿಗೆ ತಕ್ಕಷ್ಟು, ಸೋಯಾಸಾಸ್: ಒಂದು ಚಮಚ, ಈರುಳ್ಳಿ: ದೊಡ್ಡಗಾತ್ರದ್ದು ಒಂದು, ನಿಂಬೆರಸ: ಸ್ವಲ್ಪ, ಎಣ್ಣೆ: ಸ್ವಲ್ಪ

ಮಾಡುವುದು ಹೇಗೆ?: ಮೊದಲಿಗೆ ಸೀಗಡಿ ಮೀನನ್ನು ಶುಚಿಗೊಳಿಸಿಟ್ಟುಕೊಳ್ಳಬೇಕು. ಆ ನಂತರ ಈರುಳ್ಳಿಯನ್ನು ಚಿಕ್ಕದಾಗಿ ಹಚ್ಚಿಟ್ಟುಕೊಳ್ಳಬೇಕು. ಒಂದು ಪಾತ್ರೆಗೆ ಸೀಗಡಿ ಮೀನನ್ನು ಹಾಕಿ ಅದಕ್ಕೆ ಮೆಣಸಿನಪುಡಿ, ಉಪ್ಪು, ಅರಶಿಣ, ಸೋಯಾಸಾಸ್ ಎಲ್ಲವನ್ನು ಹಾಕಿ ಎರಡು ಚಮಚೆಯಷ್ಟು ನೀರು ಹಾಕಿ ನೀರು ಆವಿ ಆಗುವವರೆಗೆ ಬೇಯಿಸಿ ಇಳಿಸಿಟ್ಟುಕೊಳ್ಳಬೇಕು. ಇನ್ನೊಂದು ಕಡೆ ಬಾಣಲೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಹಚ್ಚಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಅದಕ್ಕೆ ಬೇಯಿಸಿಟ್ಟ ಸೀಗಡಿ ಮೀನನ್ನು ಹಾಕಿ ಚೆನ್ನಾಗಿ ಹುರಿಯಬೇಕು. ನಂತರ ಇಳಿಸಿ ನಿಂಬೆ ರಸ ಹಿಂಡಿ ಊಟದೊಂದಿಗೆ ಸೇವಿಸಬಹುದಾಗಿದೆ.

ಇದನ್ನೂ ಓದಿ: ಕಾಯಿ ತುರಿ ಮಿಕ್ಸ್ ಸೀಗಡಿ ಫ್ರೈ , ಆನಿಯನ್ ಮಿಕ್ಸ್ ಸೀಗಡಿ ಫ್ರೈ, ರುಚಿಕರ ಸೀಗಡಿ ಪಲಾವ್ ಮಾಡುವುದು ಹೇಗೆ?

 

admin
the authoradmin

ನಿಮ್ಮದೊಂದು ಉತ್ತರ

Translate to any language you want