ಮೈಸೂರು: ಅದೇನಾಗಿದೆಯೋ ಗೊತ್ತಿಲ್ಲ ಇತ್ತೀಚೆಗೆ ಲೈಂಗಿಕ ಕಿರುಕುಳ, ದೌರ್ಜನ್ಯದ ಸುದ್ದಿಗಳೇ ಹೆಚ್ಚು ಹೆಚ್ಚಾಗಿ ಕೇಳಿ ಬರುತ್ತಿದೆ. ಮಹಿಳೆಯರ ಮುಂದೆ ಸಭ್ಯರಂತೆ ನಟಿಸಿ ಬಳಿಕ ಕಾಮುಕರಂತೆ ವರ್ತಿಸುವ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿವೆ. ಅಸಹಾಯಕ ಮಹಿಳೆಯರು ಕಾಮುಕ ಕೆಂಗಣ್ಣಿಗೆ ಗುರಿಯಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೀಗ ಮನೆಮಾಲೀಕ ನೀಡುತ್ತಿದ್ದ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಸಂಸಾರಸ್ಥ ಮಹಿಳೆಗೆ ಮೆಸೇಜ್ ಮಾಡುವಂತೆ ಸದಾ ಕಿರುಕುಳ ನೀಡಿದ್ದಲ್ಲದೆ, ನನ್ನೊಂದಿಗೆ ಸುತ್ತಾಡಲು ಬರದೆ ಇದ್ದರೆ ನಿನ್ನ ಹೆಸರು ಬರೆದಿಟ್ಟು ಮನೆಯ ಮೇಲಿಂದ ಬಿದ್ದು ಸಾಯುವುದಾಗಿ ಹೆದರಿಸಿ ಆಕೆಯನ್ನು ತನ್ನ ಬೈಕ್ ನಲ್ಲಿ ಕರೆದುಕೊಂಡು ಹೋಗಿದ್ದು ತದನಂತರ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಆಕೆ ನೊಂದು ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಇದೀಗ ಕಾಮುಕನ ಮುಖವಾಡ ಬಯಲಾಗಿದೆ.

ಈ ಘಟನೆ ಮೈಸೂರಿನ ಪಾಪಣ್ಣ ಲೇಔಟ್ ನಲ್ಲಿ ನಡೆದಿದ್ದು, ಅಲ್ಲಿನ ನಿವಾಸಿ ಮನೆ ಮಾಲೀಕ ಮೋಹನ್ ಎಂಬಾತನ ವಿರುದ್ಧ ಇದೀಗ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಷ್ಟಕ್ಕೂ ಆಗಿದ್ದೇನು ಎಂಬುದನ್ನು ನೋಡಿದ್ದೇ ಆದರೆ ಮನೆ ಮಾಲೀಕ ಮೋಹನ್ ಮನೆಯಲ್ಲಿ ಸಂತ್ರಸ್ತೆ ಸಂಸಾರ ಸಮೇತ ಕಳೆದ ನಾಲ್ಕು ವರ್ಷಗಳಿಂದ ಬಾಡಿಗೆಗೆ ಇದ್ದಾರೆ ಎಂದು ಹೇಳಲಾಗಿದೆ. ಆದರೆ ಕಳೆದ ವರ್ಷದಿಂದ ಮನೆ ಮಾಲೀಕ ಮೋಹನ್ ಗೃಹಿಣಿ ಜತೆಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದನು.
ನೀನು ಮೆಸೇಜ್ ಮಾಡು, ಬಾ ಜೊತೆಗೆ ಓಡಾಡಿಕೊಂಡು ಬರೋಣ ಎಂದೆಲ್ಲ ಆಕೆಯನ್ನು ಪೀಡಿಸಲಾರಂಭಿಸಿದ್ದನು. ಈತನ ವರ್ತನೆ ಗಂಡನಿಗೂ ಗೊತ್ತಾಗಿದ್ದು, ಈ ವಿಚಾರದಲ್ಲಿ ಗಲಾಟೆ ನಡೆದರೂ ಮೋಹನ್ ಮಾತ್ರ ಸುಮ್ಮನೆ ಆಗಿರಲಿಲ್ಲ. ಆಕೆಯನ್ನು ಬೆದರಿಸುತ್ತಿದ್ದನು. ಈ ನಡುವೆ ಆಕೆ ದೇವಸ್ಥಾನದ ಬಳಿಯಿದ್ದಾಗ ಅಲ್ಲಿಗೆ ಬಂದ ಮೋಹನ್ ಆಕೆಯನ್ನು ನನ್ನೊಂದಿಗೆ ಬಂದು ಸಹಕರಿಸು ಎನ್ನುತ್ತಾ ತನ್ನ ಬೈಕ್ ಗೆ ಹತ್ತುವಂತೆ ಹೇಳಿದ್ದಾನೆ. ಆಕೆ ಒಪ್ಪದೆ ಇದ್ದಾಗ ನೀನು ಬೈಕ್ ಗೆ ಹತ್ತದೆ ಹೋದರೆ ನಿನ್ನ ಹೆಸರು ಬರೆದಿಟ್ಟು ಬಿಲ್ಡಿಂಗ್ ನಿಂದ ಹಾರಿ ಸಾಯುವುದಾಗಿ ಬೆದರಿಸಿದ್ದಾನೆ.
ಆತನ ಬೆದರಿಕೆಗೆ ಹೆದರಿ ಆಕೆ ಆತನ ಬೈಕ್ ಗೆ ಹತ್ತಿದ್ದು ಆಕೆಯನ್ನು ಕರೆದೊಯ್ದ ಆತ ಅನುಚಿತವಾಗಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದ್ದು, ಆ ನಂತರ ಇದರಿಂದ ಬೇಸತ್ತ ಆಕೆ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಮಹಿಳೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಕಾಮುಕರು ಎಲ್ಲೆಡೆ ಇರಬಹುದು ಆದ್ದರಿಂದ ಹೆಣ್ಮಕ್ಕಳೇ ಹುಷಾರಾಗಿರಿ…








