ಪ್ರತಿಯೊಬ್ಬರೂ ಜೀವನದಲ್ಲಿ ಸಾಮಾಜಿಕ ಸೇವಾ ಮನೋಭಾವನೆ ಅಳವಡಿಸಿಕೊಳ್ಳಿ: ಕೆ.ಸಿ.ಪುಟ್ಟಸಿದ್ದಶೆಟ್ಟಿ

ಮೈಸೂರು: ಪ್ರತಿಯೊಬ್ಬರೂ ಕೂಡ ಸಾಮಾಜಿಕ ಸೇವಾ ಮನೋಭಾವನೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ಹೇಳಿದರು.
ನಗರದ ರೋಟರಿ ಭವನದಲ್ಲಿ ಕೆ.ಆರ್.ನಗರದ ಕರುನಾಡ ದೀಪ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿವಿಧ ಕ್ಷೇತ್ರಗಳ ನಾಡಿನ ಸಾಧಕರುಗಳಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಾವುಗಳು ಯಾವ ಕ್ಷೇತ್ರದಲ್ಲಿ ನಮ್ಮನ್ನು ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದೇವೋ ಅದರಲ್ಲಿ ನಿಸ್ವಾರ್ಥ ಮನೋಭಾವನೆಯಿಂದ ಕಾರ್ಯನಿರ್ವಹಿಸಬೇಕು. ಆ ದಾರಿಯಲ್ಲಿ ಎಲ್ಲರೂ ಸಾಗಬೇಕು ಎಂದರು. ಸಂಘಟನೆಗಳು ಸದಾ ಕ್ರಿಯಾಶೀಲವಾಗಿದ್ದುಕೊಂಡು ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಜಿ ಎಸ್ ಟಿ ಆಪೀಲು ನ್ಯಾಯಾಧಿಕರಣ ತಾಂತ್ರಿಕ ಸದಸ್ಯ (ಕರ್ನಾಟಕ ರಾಜ್ಯ) ಡಿ.ಜಗನ್ನಾಥ್ ಸಾಗರ್ ಮಾತನಾಡಿ ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಎಲೆ ಮರೆಯ ಕಾಯಿಯಂತೆ ಇದ್ದುಕೊಂಡು ಸೇವೆಯನ್ನು ಮಾಡುತ್ತಿರುವಂತಹ ಸಾಧಕರುಗಳನ್ನು ಸಂಘ – ಸಂಸ್ಥೆಗಳು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡಬೇಕು. ಆ ನಿಟ್ಟಿನಲ್ಲಿ ಕರುನಾಡ ದೀಪ ಸೇವಾ ಟ್ರಸ್ಟ್ ನಾಡಿನ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ಸಾಧಕರನ್ನು ಅಭಿನಂದಿಸುವ ಕಾರ್ಯ ಮಾಡಿರುವುದು ಉತ್ತಮ ಕಾರ್ಯವಾಗಿದೆ. ಆ ಮೂಲಕ ಸಾಧಕರುಗಳನ್ನು ಸಮಾಜಕ್ಕೆ ಪರಿಚಯಿಸುವುದರ ಜೊತೆಗೆ ಅವರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಇಂತಹ ಸಾಮಾಜಿಕ ಸೇವಾ ಕಾರ್ಯಕ್ಕೆ ಸರ್ವರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಸೈಬರ್ ಕ್ರೈಂ ಡಿವೈಎಸ್ಪಿ ಆರ್.ಶ್ರೀಕಾಂತ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ವಿವಿಧ ಮಾದರಿಯ ಅಪರಾಧ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಸದಾ ಜಾಗೃತಿವಹಿಸಬೇಕು. ಯಾವುದಾದರೂ ಇಂತಹ ವಿಚಾರಗಳಿಗೆ ಸಂಬಂಧಿಸಿದ ಮಾಹಿತಿ ತಿಳಿದರೆ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅಂತಹ ಘಟನೆಗಳು ನಡೆಯದಂತೆ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಸಾಲಿಗ್ರಾಮದ ಶ್ರೀ ದ್ವಯ ಸಿದ್ಧಾಂತ ಪೀಠ ಶ್ರೀ ಭಾಷ್ಯಾಕಾರ ಸ್ವಾಮಿ ದೇವಸ್ಥಾನದ ಶ್ರೀ ಧನುರ್ ದಾಸ ರಾಮಾನುಜ ಜೀಯರ್ ಸ್ವಾಮಿಗಳು ಮಾತನಾಡಿ ಯಾರಾದರೂ ನಮ್ಮ ಸುತ್ತಮುತ್ತಲಿನಲ್ಲಿ ಕಷ್ಟಗಳಲ್ಲಿ ಸಿಲುಕಿದರೆ ಅಂತಹವರ ನೆರವಿಗೆ ಸರ್ವರು ಕೈಜೋಡಿಸುವಂತಹ ಕೆಲಸವನ್ನು ಮಾಡಬೇಕು. ನಮ್ಮ ಕೈಯಲ್ಲಿ ಯಾವ ಕೆಲಸವನ್ನು ಮಾಡಲು ಸಾಧ್ಯವೋ ಅದನ್ನು ಅತ್ಯಂತ ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಮಾಡಿದಾಗ ಅದರಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ಎಲ್ಲರೂ ಕೂಡ ತಮ್ಮ ಅಳಿಲು ಸೇವೆಯನ್ನು ಸಮಾಜಕ್ಕೆ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರುನಾಡ ದೀಪ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಮೋಹನ್ ಕುಮಾರ್, ಮೈಸೂರು, ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಎಸ್.ಆರ್.ನಾರಾಯಣರಾವ್, ನಿರ್ದೇಶಕ ಇಂದ್ರೇಶ್, ಗ್ರಾಮೀಣ ನಿಧಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಆರ್.ಶ್ಯಾಮಸುಂದರ್, ನಿರ್ದೇಶಕ ಎಂ.ಎಸ್.ನರಸಿಂಹ, ನಿವೃತ್ತ ಪ್ರಾಂಶುಪಾಲ ಡಾ.ಎಂ.ಗೋವಿಂದರಾಜು, ಮುಖ್ಯ ಶಿಕ್ಷಕ ಎಚ್.ಪಿ.ಲೋಕೇಶ್, ನಗರ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ವಿನೋದ್, ಜಿಲ್ಲಾ ಭಗೀರಥ ಉಪ್ಪಾರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ, ನಿವೃತ್ತ ಅರಣ್ಯ ಅಧಿಕಾರಿ ಮಲ್ಲಶೆಟ್ಟಿ, ನಿವೃತ್ತ ಎ ಎಸ್ ಐ ಜವರಶೆಟ್ಟಿ, ಕಾರ್ಮಿಕ ಸಂಘಟನೆಯ ನಾಗೇಶ್, ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ರವಿ, ಕೆ.ಆರ್.ನಗರ ತಾಲ್ಲೂಕು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಮಹದೇವ, ನಿವೃತ್ತ ಶಿಕ್ಷಕ ಸುಂದರ ಕುಮಾರ್, ಮುಖಂಡರುಗಳಾದ ಪ್ರದೀಪ್, ಮಹದೇವ, ಸುಧಾಕರ್ ಸೇರಿದಂತೆ ಹಲವರು ಇದ್ದರು.
ಇದೇ ವೇಳೆ ವಿವಿಧ ಕ್ಷೇತ್ರಗಳ ನಾಡಿನ ಸಾಧಕರುಗಳಾದ ಸೋಮಶೇಖರ್, ಬಿ.ಪಿ.ಕುಮಾರ್, ಎನ್.ಅಜ್ಜಪ್ಪ, ಡಾ.ವಿ.ದೇವಿಕಾ, ಕರಳಾಪುರ ನಾಗರಾಜು, ಸಿ.ಕೆ.ಬಾಲಮನೋಹರ, ಎನ್.ಮಹೇಶ್, ಸಿ.ವೈ.ಅಭಿಲಾಷ್, ಬಿ.ಕೆ.ಮಂಜಪ್ಪ, ಎಂ.ಸಿ.ಶಿವಕುಮಾರ್, ಸಿ.ಆರ್.ಸತೀಶ್ ಕುಮಾರ್, ಕೆ.ಎಸ್.ಆದಿತ್ಯ, ಬಿ.ಮಹದೇವ, ಶಿವು, ಕೆ.ಪಿ.ಶಿವಕುಮಾರ, ಸಿದ್ದೇಗೌಡ, ಹೇಮಂತ್ ಕುಮಾರ್, ಕೆ.ಮೋಹನ್, ಎಸ್.ಎಸ್.ಸುನಿಲ್, ಗೀತಾಂಜಲಿ ಅವರುಗಳನ್ನು ಸನ್ಮಾನಿಸಲಾಯಿತು.







