Mysore

ಯಾಚೇನಹಳ್ಳಿರಾಮಕೃಷ್ಣ ಸೇವಾ ಕೇಂದ್ರದಲ್ಲಿ ಸಾಹಿತ್ಯ ಸೌರಭದ ಸಂಭ್ರಮ… ಕಾರ್ಯಕ್ರಮದ ವಿಶೇಷತೆಗಳೇನು?

ಮೈಸೂರು: ಜಗತ್ತು ಸಂಘರ್ಷಮಯವಾಗಿದೆ. ದೊಡ್ಡಣ್ಣ ಎನಿಸಿಕೊಂಡ ಅಮೆರಿಕ ಎಲ್ಲಾ ದೇಶಗಳ ಮೇಲೆ ದಾಳಿ ಮಾಡುವ ಸಂಚು ರೂಪಿಸಿದೆ. ಆದರೆ, ಇಂದು ನಮಗೆ ಸಹಬಾಳ್ವೆ ಬೇಕಿದೆ. ಬುದ್ಧನ ಬೆಳಕು ನಮ್ಮದಾಗಬೇಕಿದೆ. ನಾವೆಲ್ಲ ಸಹಬಾಳ್ವೆಯಿಂದ ಬದುಕೋಣ ಎಂದು ನಾದಾನಂದನಾಥ ಸ್ವಾಮೀಜಿ ಕರೆ ನೀಡಿದರು.

ಬನ್ನೂರಿನ ಸಮೀಪದ ಯಾಚೇನಹಳ್ಳಿಯ ರಾಮಕೃಷ್ಣ ಸೇವಾ ಕೇಂದ್ರದಲ್ಲಿ ನಡೆದ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಲೇಖಕಿ ಕೆ.ಎಸ್. ಮಮತಾ ಅವರ ‘ಮಮತೆಯ ಕಡಲು’ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕ ಮತ್ತು ಅಂಕಣಕಾರ ಮಣ್ಣೆ ಮೋಹನ್ ಮಾತನಾಡಿ, ಗಂಗರಾಜರು ಮಣ್ಣೆಯಿಂದ ತಲಕಾಡಿನವರೆಗೂ ಸಾಮ್ರಾಜ್ಯ ಸ್ಥಾಪಿಸಿದಂತೆ, ಜ್ಞಾನ ಗಂಗಾ ಸಂಸ್ಥೆಯ ವತಿಯಿಂದ ರಾಜ್ಯದ 31 ಜಿಲ್ಲೆಗಳಲ್ಲಿಯೂ ‘ಸಾಹಿತ್ಯ ಸೌರಭ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ಜಿಲ್ಲೆಯ ಉದಯೋನ್ಮುಖ ಸಾಹಿತಿಗಳ ಹೊತ್ತಿಗೆ ಲೋಕಾರ್ಪಣೆ, ಸಾಧಕರಿಗೆ ಸನ್ಮಾನ, ಕವಿಗೋಷ್ಠಿ, ವಿಚಾರಗೋಷ್ಠಿ, ಸಾಂಸ್ಕೃತಿಕ ಗೋಷ್ಠಿಗಳ ಮೂಲಕ, ಎಲ್ಲಾ ಜಿಲ್ಲೆಗಳ ಸಾಹಿತ್ಯ ಸಾಂಸ್ಕೃತಿಕ ಪರಂಪರೆಯನ್ನು ಮುನ್ನಲೆಗೆ ತರುವುದು ನಮ್ಮ ಕರ್ತವ್ಯವಾಗಿದೆ ಎಂದರು.

ವೇದಿಕೆಯಲ್ಲಿ ಸಮಾಜ ಸೇವಕ ಬಿ.ಆರ್. ಪ್ರದೀಪ್ ಕುಮಾರ್, ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ರಾಘವೇಂದ್ರಚಾರ್, ಪ್ರಧಾನ ಕಾರ್ಯದರ್ಶಿ ಆಶಾ, ಕೆ.ಪಿ. ಚೋಂದಮ್ಮ, ಸಮಾಜ ಸೇವಕ ಸುರೇಶ್ ಕೌಜಲಗಿ, ಕೈಗಾರಿಕೋದ್ಯಮಿ ಎಸ್. ಶೇಖರಪ್ಪ, ಶೇಷಾದ್ರಿ ಶಾಸ್ತ್ರಿ, ಚಂದ್ರೇಗೌಡ, ಕಾರ್ಯಕ್ರಮ ಆಯೋಜಕಿ ಸಮಲತಾ ಬನ್ನೂರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಣ್ಣೆ ಮೋಹನ್ ಅವರ ‘ಕರ್ನಾಟಕ ಕದನ ಕಲಿಗಳು’, ಪ್ರೊ. ಭೋಗಣ್ಣ ಅವರ ‘ಜೀವನ ದರ್ಪಣ’, ಚೈತ್ರ ಗೋವರ್ಧನ್ ಅವರ ‘ಅಂಧರ ಅಂದದ ಅಂಗಳ’, ಪರಮಾನಂದ ಬಳ್ಳೊಳ್ಳಿ ಅವರ ‘ಮನಸ್ಸಿನ ಮಾತು ಕಾಗದದ ಮೇಲೆ’, ಕೆ.ಎಸ್. ಮಮತಾ ಅವರ ‘ಮಮತೆಯ ಕಡಲು’, ಸರಿತಾ ಹೆಚ್. ಕಾಡು ಮಲ್ಲಿಗೆ ಅವರ ‘ಮರಳಿ ನೆನಪುಗಳ ದಾರಿಯಲ್ಲಿ’ ಕೃತಿಗಳು ಲೋಕಾರ್ಪಣೆಗೊಂಡವು.

ವಿವಿಧ ಕ್ಷೇತ್ರದಲ್ಲಿ ಸಾಧಕರಾದ ಡಾ. ಸರಳಾ ಕೀಕೊ, ಡಾ. ಹರ್ಷ, ಜೆ.ಕೆ. ಬಸವರಾಜು, ಮಾದೇಗೌಡ, ಹೆಚ್.ಡಿ. ಪುಷ್ಪ, ಸಿದ್ದೇಗೌಡ, ವೈ.ಕೆ. ಚಂದ್ರು, ಬನ್ನೂರು ನಾರಾಯಣ್, ಬಿ. ಧನಪಾಲ್, ಚಾಮಮ್ಮ, ಮರಮ್ಮ, ಮಂಜುಳಾ, ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು.

ವಿವಿಧ ವಿಷಯಗಳ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ ಡಾ. ಸರಳಾ ಕೀಕೊ ‘ಸಮೃದ್ಧ ಆಹಾರದಿಂದ ಸುಸ್ಥಿರ ಆರೋಗ್ಯದೆಡೆಗೆ’, ರೈತ ಮುಖಂಡ ಬನ್ನೂರು ನಾರಾಯಣ್ ‘ರೈತರ ಇಂದಿನ ಸಂಕಷ್ಟ ಮತ್ತು ಪರಿಹಾರ’ ಸಾಹಿತಿ ಟಿ. ಸತೀಶ್ ಜವರೇಗೌಡ ‘ಮಣ್ಣೆಮೋಹನ್ ವಿರಚಿತ ‘ಕರುನಾಡ ಕದನ ಕಲಿಗಳು’ ಕೃತಿಯಲ್ಲಿ ಮೂಡಿ ಬಂದಿರುವ ಕರ್ನಾಟಕದ ಸ್ವಾತಂತ್ರ್ಯ ಸಂಗ್ರಾಮ ಕುರಿತು ವಿಚಾರ ಮಂಡಿಸಿದರು. ಬಳಿಕ ನಡೆದ ಕವಿಗೋಷ್ಠಿಯಲ್ಲಿ 30 ಕ್ಕೂ ಅಧಿಕ ಮಂದಿ ಕವಿಗಳು ಕವನ ವಾಚಿಸಿದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want