ಮೈಸೂರು: ವಚನ ಕಂಠಪಾಠ ಸ್ಪರ್ಧೆಯಲ್ಲಿ ಸಾವಿರ ವಚನಗಳನ್ನು ಹೇಳುವವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿರುವುದು ವಿಶ್ವದಲ್ಲೇ ಮೊದಲ ಪ್ರಯತ್ನವಾಗಿದೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ಮೈಸೂರಿನ ಬೋಗಾದಿ ಶಾರದಾನಗರ ರೈಲ್ವೆ ಬಡಾವಣೆಯಲ್ಲಿರುವ ಶರಣು ವಿಶ್ವವಚನ ಫೌಂಡೇಷನ್ ಕಚೇರಿ ಶರಣು ಕುಠೀರದಲ್ಲಿ ನೆಲಮಂಗಲದ ಪವಾಡ ಶ್ರೀ ಬಸವಣ್ಣದೇವರ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರನ್ನು ಗೌರವಿಸಿ ಅವರು ಮಾತನಾಡಿದರು.

ನೆಲಮಂಗಲದ ಪವಾಡ ಶ್ರೀ ಬಸವಣ್ಣದೇವರ ಮಠದ ವತಿಯಿಂದ ಪ್ರತಿವರ್ಷ ನಡೆಯುವ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ವಚನ ಕಂಠಪಾಠ ಸ್ಪರ್ಧೆ ಆಯೋಜಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಸಾವಿರ ವಚನಗಳನ್ನು ಕಂಠಪಾಠವಾಗಿ ಹೇಳುವವರಿಗೆ ಪ್ರತಿವರ್ಷ ಒಂದು ಲಕ್ಷ ರೂಪಾಯಿ ಬಹುಮಾನ ನೀಡುತ್ತಿರುವುದು ವಚನ ಸಾಹಿತ್ಯದ ಪ್ರಸಾರ ಹಾಗೂ ಬಸವ ತತ್ವಗಳ ಬೆಳವಣಿಗೆಗೆ ಮಹತ್ವದ ಹೆಜ್ಜೆಯಾಗಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಯುವಪೀಳಿಗೆಯಲ್ಲಿ ವಚನಗಳ ಬಗ್ಗೆ ಆಸಕ್ತಿ ಮೂಡಿಸಿ, ಬಸವಣ್ಣನ ತತ್ವಗಳನ್ನು ಸಮಾಜದೊಳಗೆ ಹರಡುವ ಕಾರ್ಯ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.

ಗೌರವ ಸ್ವೀಕರಿಸಿ ಮಾತನಾಡಿದ ನೆಲಮಂಗಲದ ಪವಾಡ ಶ್ರೀ ಬಸವಣ್ಣದೇವರ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಶರಣು ವಿಶ್ವವಚನ ಫೌಂಡೇಷನ್ ನಡೆಸುತ್ತಿರುವ ಚಟುವಟಿಕೆಗಳು ಬಸವತತ್ವಗಳ ಪ್ರಸಾರಕ್ಕೆ ಪೂರಕವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ವಿಶೇಷವಾಗಿ “ಶಾಲೆಗಳೆಡೆಗೆ ವಚನಗಳ ನಡಿಗೆ” ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಬಾಲ್ಯದಲ್ಲಿಯೇ ಸಂಸ್ಕಾರ ಬೆಳೆಸುವ ಮಹತ್ವದ ಕಾರ್ಯವಾಗಿದೆ.

ಇಂದಿನ ಪೀಳಿಗೆಗೆ ವಚನಗಳ ಸಾರ ತಿಳಿಸುವುದು ಅತ್ಯಂತ ಅಗತ್ಯ. ಬಾಲ್ಯದಲ್ಲೇ ಬಸವಣ್ಣನ ವಚನಗಳು ಮನಸ್ಸಿಗೆ ಬಿತ್ತನೆಗೊಂಡರೆ ಅವರು ನೈತಿಕ ಮೌಲ್ಯಗಳೊಂದಿಗೆ ಬೆಳೆದ ಉತ್ತಮ ನಾಗರಿಕರಾಗುತ್ತಾರೆ. ವಚನಗ್ರಾಮ ಕಾರ್ಯಕ್ರಮದ ಬಗ್ಗೆ ಕೂಡ ಸಂತಸ ವ್ಯಕ್ತಪಡಿಸಿದ ಅವರು, ಗ್ರಾಮೀಣ ಜನರ ಬದುಕಿನಲ್ಲಿ ಕಾಯಕ ತತ್ವಕ್ಕೆ ಪ್ರೇರಣೆ ನೀಡುವಂತಹ ಕಾರ್ಯಕ್ರಮವಾಗಿದೆ. ಬಸವಣ್ಣನ ಕಾಯಕ ಮತ್ತು ದಾಸೋಹ ತತ್ವಗಳನ್ನು ಜನಜೀವನದಲ್ಲಿ ಅಳವಡಿಸಿಕೊಳ್ಳಲು ಇಂತಹ ಚಟುವಟಿಕೆಗಳು ಅತ್ಯಂತ ಉಪಯುಕ್ತವಾಗಿವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಚೆನ್ನಪಟ್ಟಣ ವಿರಕ್ತಮಠದ ಶ್ರೀ ಶಿವರುದ್ರಸ್ವಾಮಿಗಳು ಮತ್ತು ಹೆಬ್ಬಣಿ ಮಠದ ಶ್ರೀ ಶಂಭುಲಿಂಗ ಸ್ವಾಮಿಗಳವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ ಉಪಸ್ಥಿತರಿದ್ದರು.






