Crime

ಸುಬ್ರಹ್ಮಣ್ಯದ ಸವಾರಿ ಮಂಟಪ ಬಳಿ  ಸಿಕ್ಕ ಶವದ ಗುರುತು ಪತ್ತೆ… ಯಾರು ಈತ?

ಸುಬ್ರಹ್ಮಣ್ಯ: ಈಗ ಪುಣ್ಯ ಕ್ಷೇತ್ರಗಳಲ್ಲಿ ಶವ ಸಿಕ್ಕರೆ ಅದು ಬೇರೆಯದ್ದೇ ಆದ ಪ್ರಚಾರ ಪಡೆಯುತ್ತಿದ್ದು ಅದರಂತೆ  ಸುಬ್ರಹ್ಮಣ್ಯದ ಸವಾರಿ ಮಂಟಪ ಬಳಿ  ಶವವೊಂದು ಪತ್ತೆಯಾಗಿತ್ತು.. ಅಲ್ಲದೆ ಸಾವನ್ನಪ್ಪಿದ ವ್ಯಕ್ತಿ ಯಾರು ಎಂಬುದರ ಚರ್ಚೆಯೂ ಜೋರಾಗಿಯೇ ನಡೆದಿತ್ತು. ಇದೀಗ ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆಯಾಗಿದ್ದು ಆತ  ಕೂತ್ಕುಂಜ ಗ್ರಾಮದ ಕಲ್ಕ ಮನೆ ದೇವಿಪ್ರಸಾದ್ ಎಂದು ಗುರುತಿಸಲಾಗಿದೆ.

ಈತನ ಗುರುತನ್ನು ತಾಯಿ ಕಲ್ಕ ಮನೆ ಲಕ್ಷ್ಮೀ ಅವರು ಪತ್ತೆ ಹಚ್ಚಿದ್ದಾರೆ. ಮೃತ ದೇವಿಪ್ರಸಾದ್ ಕೂತ್ಕುಂಜ ಗ್ರಾಮದ ಕಲ್ಕ ಮನೆ  ನಿವಾಸಿ ಲಕ್ಷ್ಮೀ ಮತ್ತು  ದಿ.ಅರುಣ ಬೆಳ್ಚಪ್ಪಾಡ ದಂಪತಿ ಪುತ್ರನಾಗಿದ್ದಾನೆ. ಈತನಿಗೆ ಇಬ್ಬರು ಸಹೋದರಿಯರು ಇದ್ದಾರೆ.  ಮೃತ ದೇವಿಪ್ರಸಾದ್ ಸುಮಾರು 17 ವರ್ಷಗಳ ಹಿಂದೆ ಪಡ್ಪಿನಂಗಡಿಯ ಜಯಂತಿ ಎಂಬವಳನ್ನು ಪ್ರೀತಿಸಿ ವಿವಾಹವಾಗಿ ಮನೆ ಬಿಟ್ಟು ಹೋಗಿದ್ದನು. ಈತನಿಗೆ 2 ಮಕ್ಕಳು ಇದ್ದಾರೆ.

ದೇವಿಪ್ರಸಾದ್ ಇತ್ತೀಚೆಗೆ 4 ತಿಂಗಳ ಹಿಂದೆ ತಾಯಿ ಲಕ್ಷ್ಮಿಯನ್ನು ನೋಡಲು ಮನೆಗೆ ಬಂದು ನಂತರ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆ ಬಿಟ್ಟು ಹೋಗಿದ್ದನು.  ಈತ ಪರೀತವಾಗಿ ಮದ್ಯ ಸೇವನೆ ಮಾಡುವ ಅಭ್ಯಾಸ ಹೊಂದಿದ್ದು,  ಈತ ಮದ್ಯಸೇವಿಸಿ ಬಿದ್ದಿದ್ದನು. ಹೀಗಾಗಿ ಡಿಸೆಂಬರ್  11 ರಂದು ಬೆಳಿಗ್ಗೆ ಸುಮಾರು 08.00 ಗಂಟೆ ಸಮಯಕ್ಕೆ ತಾಯಿ ಲಕ್ಷ್ಮಿ ಅವರ  ಅಳಿಯ ಶಶಿಧರ   ಫೊನ್ ಮಾಡಿ ದೇವಪ್ರಸಾದ್ ಸುಬ್ರಹ್ಮಣ್ಯದಲ್ಲಿ ರಕ್ತ ವಾಂತಿ ಮಾಡಿಕೊಂಡು ಬಿದ್ದಿರುವ ಬಗ್ಗೆ ತಿಳಿಸಿದ್ದರು.

ತಕ್ಷಣವೇ ತಾಯಿ ಲಕ್ಷ್ಮಿ ಹಾಗೂ ಮಗಳಾದ ಆಶಾ ಮತ್ತು ನೆರೆಕೆರೆಯವರಾದ ವಿರೇಶ್ ಎಂಬವರು ಸುಬ್ರಹ್ಮಣ್ಯಕ್ಕೆ ಬಂದಿದ್ದು ಮಗ  ದೇವಿಪ್ರಸಾದ್ ಸವಾರಿ ಮಂಟಪದ ಎದುರು ಇರುವ ಕುಕ್ಕೆಲಿಂಗ ಕಟ್ಟಡದ ಅಂಗಳದಲ್ಲಿ ಹಳೆಯ ಬ್ರಹ್ಮರಥ ಇರುವ ಸ್ಥಳದಲ್ಲಿ ಮರದ ಕೆಳಗೆ ಮಲಗಿದ್ದ ಸ್ಥಿತಿಯಲ್ಲಿ ಕಂಡು ಬಂದಿದ್ದು ಹತ್ತಿರ ಹೋಗಿ ನೋಡಿದಾಗ ಮೃತಪಟ್ಟಿದ್ದನು. ಈ ಸಂಬಂಧ ತಾಯಿ ಲಕ್ಷ್ಮಿ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಯುಡಿಆರ್ ನಂಬ್ರ: 37/2025 ಕಲಂ: 194(3)(IV) BNSS. ಯಂತೆ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

admin
the authoradmin

Leave a Reply