ಕುಶಾಲನಗರ (ರಘುಹೆಬ್ಬಾಲೆ): ಉತ್ತರ ಕೊಡಗಿನ ಅರೆಮಲೆನಾಡು ಹಾಗೂ ಬಯಲುಸೀಮೆ ಪ್ರದೇಶವಾದ ಶಿರಂಗಾಲ ಗ್ರಾಮದಲ್ಲಿ ಸೋಮವಾರ ಶ್ರೀ ಉಮಾ ಮಹೇಶ್ವರ ಸ್ವಾಮಿ ವಾರ್ಷಿಕ ರಥೋತ್ಸವ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಗ್ರಾಮದ ಪವಿತ್ರ ಕಾವೇರಿ ನದಿ ದಂಡೆ ಮೇಲಿರುವ ಇತಿಹಾಸ ಪ್ರಸಿದ್ಧ ಉಮಾಮಹೇಶ್ವರ ದೇವಾಲಯ ಹಾಗೂ ಗ್ರಾಮದ ಮಂಟಿಗಮ್ಮ ದೇವಾಲಯ ಸಮಿತಿ ವತಿಯಿಂದ ಪ್ರತಿವರ್ಷ ದಂತೆ ಈ ಬಾರಿಯೂ ವೈಶಿಷ್ಟ್ಯಪೂರ್ಣವಾಗಿ ರಥೋತ್ಸವ ಆಚರಿಸಿ ಸಂಭ್ರಮಿಸಿದರು.ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಅರ್ಚಕ ಗಣೇಶ್ ಹಾಗೂ ಸಚಿನ್ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು.ಶ್ರೀ ಉಮಾಮಹೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ನೆರೆಯ ಹಾಸನ ಮತ್ತು ಮೈಸೂರು ಜಿಲ್ಲೆಗಳ ಗಡಿಭಾಗದ ಗ್ರಾಮಗಳನೂರಾರು ಭಕ್ತರು ಭಾಗಿಯಾಗಿ ತೇರನ್ನು ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ಪುಷ್ಪ ಹಾಗೂ ವಿವಿಧ ಧ್ವಜಗಳಿಂದ ಅಲಂಕೃತ ಗೊಂಡಿದ್ದ ತೇರಿನಲ್ಲಿ ಶ್ರೀ ಉಮಾ ಮಹೇಶ್ವರ, ಪಾರ್ವತಿ, ಗಣೇಶ, ನಂದಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು.ನಂತರ ಮಹಾ ಮಹಾಮಂಗಳಾರತಿಯೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಕಲಾವಿದ ಉದ್ದೂರು ಹೊಸಳ್ಳಿಯ ರವಿ ನೇತೃತ್ವದ ವೀರಗಾಸೆ ಕುಣಿತ ಮತ್ತು ಮಂಡ್ಯದ ಡೊಳ್ಳು ಕುಣಿತ ಕಲಾಪ್ರದರ್ಶನ ರಥೋತ್ಸವಕ್ಕೆ ಮೆರುಗು ನೀಡಿತು.
ಭಕ್ತರು ರಥವನ್ನು ದೇವಾಲಯ ಬಳಿಯಿಂದ ಗ್ರಾಮದ ಪ್ರಮುಖ ಬೀದಿ ಮೂಲಕ ಸಂತೆಮಾಳದವರೆಗೂ ಎಳೆದರು. ರಥೋತ್ಸವದ ಮೆರವಣಿಗೆಯಲ್ಲಿ ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು. ಈಡುಗಾಯಿ, ಹಣ್ಣು ಜವನ ರಥಕ್ಕೆ ಎಸೆದು ಭಕ್ತಿ ಮೆರೆದರು. ಮೆರವಣಿಗೆ ಸಂದರ್ಭ ಗ್ರಾಮಸ್ಥರು ಬಿಸಿಲಿನ ಧಗೆಯ ನಡುವೆ ಮಜ್ಜಿಗೆ, ಪಾನಕ ವಿತರಿಸಿ ಭಕ್ತರ ಧಣಿವಾರಿಸಿದರು.

ರಥೋತ್ಸವವು ಮಂಗಳವಾದ್ಯ ದೊಂದಿಗೆ ಗ್ರಾಮದಲ್ಲಿ ಸಂಚರಿಸಿ ನಂತರ ತೇರು ಊರಿನ ಸಂತೆಮಾಳದ ಬಳಿ ಸಮಾಪನ ಗೊಂಡಿತು. ಹೊಳೆಗುಂಡಿ ಜಾತ್ರೆ ಎಂದೇ ಪ್ರಸಿದ್ಧಿಯಾಗಿರುವ ಉಮಾ ಮಹೇಶ್ವರ ರಥೋತ್ಸವವು ಬಯಲು ಸೀಮೆಯ ಜನರ ಪ್ರಮುಖ ಆಕರ್ಷಣೆಯಾಗಿದೆ. ಈ ಜಾತ್ರೆ ಸುತ್ತಮುತ್ತಲಿನ ಅಪಾರ ಭಕ್ತರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ಪುನೀತರಾದರು.ಎಲ್ಲಾ ಭಕ್ತರಿಗೆ ದೇವಾಲಯ ಸಮಿತಿ ವತಿಯಿಂದ ಅನ್ನಸಂತರ್ಪಣೆ ನೆರವೇರಿಸಲಾಯಿತು ಎಂದು ತಿಳಿಸಿದರು.

ರಥೋತ್ಸವದ ಅಂಗವಾಗಿ ದೇವಸ್ಥಾನ ವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗ ಳಿಂದ ಶೃಂಗರಿಸಲಾಗಿತ್ತು. ಹಸಿರು ತಳಿರು ತೋರಣಗಳಿಂದ ಗ್ರಾಮವನ್ನು ಅಲಂಕರಿ ಸಲಾಗಿತ್ತು. ದೇವಸ್ಥಾನ ಸಮಿತಿ ಅಧ್ಯಕ್ಷ ನೇಮೇಶ್ ಕಾರ್ಯದರ್ಶಿ ಎಸ್.ಟಿ.ವೆಂಕಟೇಶ್ ನೇತೃತ್ವದಲ್ಲಿ ವಾರ್ಷಿಕ ರಥೋತ್ಸವದ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು

ಈ ಸಂದರ್ಭ ದೇವಾಲಯ ಸಮಿತಿ ಉಪಾಧ್ಯಕ್ಷ ಬೋಜರಾಜ್, ಗ್ರಾಮದ ಮುಖಂಡರಾದ ಉಮೇಶ್, ಎಸ್.ಎಸ್.ಕಾಳಿಂಗಪ್ಪ, ಎಸ್.ಕೆ.ಪ್ರಸನ್ನ, ಎಸ್.ಎಸ್.ಚಂದ್ರಶೇಖರ್, ಬಿ.ಎಸ್.ಬಸವಣ್ಣಯ್ಯ, ಬಸವರಾಜು, ಎಸ್.ವಿ.ನಂಜುಂಡಪ್ಪ, ಜಯಪ್ರಕಾಶ್, ಎಸ್.ವಿ.ಶಿವಾನಂದ, ಧರಣೇಂದ್ರ ಕುಮಾರ್, ಸಿ.ಎನ್.ಲೋಕೇಶ್, ಯೋಗೇಶ್, ರಮೇಶ್, ಪ್ರಸನ್ನ, ಷಡಕ್ಷರಿ, ಚೇತನ್, ಶಿವಾನಂದ, ಮಹೇಶ್, ವೀರಭದ್ರಪ್ಪ, ಸೋಮಣ್ಣ, ಹರ್ಷ, ಮತ್ತಿತರರು ಪಾಲ್ಗೊಂಡಿದ್ದರು. ರಥೋತ್ಸವ ಅಂಗವಾಗಿ ಯುವಕ ಸಂಘದ ವತಿಯಿಂದ ವಾಲಿಬಾಲ್ ಕ್ರೀಡಾಕೂಟ ನಡೆಸಲಾಯಿತು.








