ಮೈಸೂರು: ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಸಂಸ್ಥೆಯ 90ನೇ ವಾರ್ಷಿಕೋತ್ಸವ ಹಾಗೂ ಈ ವರ್ಷದ ಮಹಾಶಿವರಾತ್ರಿ ಪ್ರಯುಕ್ತ ಗುಜರಾತಿನ ಸುಪ್ರಸಿದ್ಧ ಶ್ರೀ ಸೋಮನಾಥ ದೇವಸ್ಥಾನದ ಪ್ರತಿಕೃತಿ ಹಾಗೂ ಮತ್ತಿತರ ವಿಶೇಷತೆಗಳನ್ನು ಒಳಗೊಂಡಂತೆ ಫೆಬ್ರವರಿ 8 ರಿಂದ 22 ರವರೆಗೆ ಹುಣಸೂರು ರಸ್ತೆಯಲ್ಲಿ ಇರುವ ಐಶ್ವರ್ಯ ಪೆಟ್ರೋಲ್ ಬಂಕ್ ಎದುರು ಮತ್ತು ಭಾರತೀಯ ವಿದ್ಯಾ ಭವನದ ಮುಂಭಾಗದ ನಿವೇಶನದಲ್ಲಿ ಜ್ಞಾನ ವಿಜ್ಞಾನ ದರ್ಶನ ಮೇಳವನ್ನು ಆಯೋಜಿಸಲಾಗಿದೆ ಎಂದು ಡಾಕ್ಟರೇಟ್ ಪದವಿ ಪುರಸ್ಕೃತರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜಿಯವರು ತಿಳಿಸಿದ್ದಾರೆ.
ನಗರದ ಯಾದವಗಿರಿ ಜ್ಞಾನ ಪ್ರಕಾಶ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜ್ಞಾನ ವಿಜ್ಞಾನ ದಿವ್ಯ ದರ್ಶನದ ಮೇಳದಲ್ಲಿ ಶ್ರೀ ಸೋಮನಾಥ ಮಂದಿರದ ಪ್ರತಿರೂಪ, ಮಾದಕದ್ರವ್ಯ ಸೇವನೆಯ ವಿರುದ್ಧ ಜಾಗೃತಿ,ಮನಸ್ಸಿನ ಮಸಾಜು ಮಾಡುವ ಐದು ನಿಮಿಷಗಳ ಕಂಪ್ಯೂಟರ್ ಪ್ರೋಗ್ರಾಮ್ ಮೈಂಡ್ ಸ್ಪಾ, ಗೃಹಸ್ಥದಲ್ಲಿ ಸಾಮರಸ್ಯದಿಂದಿರಲು ಪ್ರಾಯೋಗಿಕ ಚಿತ್ರ ಪ್ರದರ್ಶನ, ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ ಮತ್ತು ಗುರಿ ಸಾಧನೆ ಬಗ್ಗೆ ಸಮಾಲೋಚನೆ, ಮೌಲ್ಯಗಳ ಪ್ರಯೋಗವನ್ನು ವಿವರಿಸುವ ಆಟಗಳು ಮತ್ತು ಧ್ಯಾನ ಶಿಬಿರ ಪ್ರತಿದಿನ ಚಿಂತನ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ, ವಾಹನಗಳ ಮೂಲಕ ಕಾರ್ಯಕ್ರಮಗಳ ಪ್ರಸಾರ ಮತ್ತು ಮಾದಕ ದ್ರವ್ಯಗಳ ಸೇವನೆಯ ವಿರುದ್ಧ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮವು 8ರಂದು ಭಾನುವಾರ ಸಂಜೆ 6ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್. ಸಿ. ಮಹಾದೇವಪ್ಪ, ಡಾ.ನಿಶ್ಚಲಾನಂದನಾಥ ಮಹಾಸ್ವಾಮೀಜಿ, ಶಾಸಕರಾದ ಹರೀಶ್ ಗೌಡ, ಶಾಸಕ ಡಿ ರವಿಶಂಕರ್, ಕುಲಪತಿ ಪ್ರೊಫೆಸರ್ ಶರಣಪ್ಪ ಹಲಸೆ, ಮಾಜಿ ಅಡ್ವೊಕೇಟ್ ಜನರಲ್ ಅಶೋಕ್, ಹಾರನಹಳ್ಳಿ, ಕುಲ ಸಚಿವ ಡಾ.ಸಿ ಕೆ ಸುಬ್ಬರಾಯ ಅತಿಥಿಗಳಾಗಿ ಆಗಮಿಸುವರು. ಜೀವಮಾನ ಸಾಧನೆಗಾಗಿ ಈಶ್ವರೀಯ ಪ್ರಶಸ್ತಿಯನ್ನು ಸಿಕೆ ಶಿವಪ್ಪ ಹೆಸರಾಂತ ಸಾಹಿತಿಗಳು ಹಾಗೂ ಡಾ.ವಸುಂದರಾ ದೊರೆಸ್ವಾಮಿ ಅಂತರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ನೃತ್ಯ ಪಟು ಅವರಿಗೆ ವಿತರಿಸಲಿದ್ದಾರೆ ಎಂದು ತಿಳಿಸಿದರು.
ಫೆ.11 ರಂದು ಬುಧವಾರ ಸಂಸ್ಥೆಯ ಮೈಸೂರು ಉಪವಲಯದ ಆರು ದಶಕಗಳ ಸಾರ್ಥಕ ಸೇವೆಯ ಅರವತ್ತನೆಯ ವಾರ್ಷಿಕೋತ್ಸವ, 13 ರಂದು ವಿಶ್ವ ಶಾಂತಿಗಾಗಿ ಸರ್ವಧರ್ಮ ಸಭೆ, ಶುಕ್ರವಾರ ಸಂಜೆ 6:30ಕ್ಕೆ, 15 ರಂದು ಮಹಾಶಿವರಾತ್ರಿ ಭಾನುವಾರ ಸಂಜೆ 6:30ಕ್ಕೆ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪ್ರತಿನಿತ್ಯ ಚಿಂತನ ಮತ್ತು ಧ್ಯಾನದ ಕಾರ್ಯಕ್ರಮಗಳು ಸಂಜೆ 6 :15 ರಿಂದ 6:45 ರವರೆಗೆ ಹಿರಿಯ ಬ್ರಹ್ಮಾ ಕುಮಾರಿ ಸಹೋದರಿಯರಿಂದ ಪ್ರವಚನ ನಡೆಯಲಿದೆ.

ಫೆ.9 ರಂದು ಕುಟುಂಬ ಮೌಲ್ಯಗಳು ಬಿ.ಕೆ. ಶಿವಲೀಲಾ, ಫೆ.10 ರಂದು ಧ್ಯಾನವೆಂಬ ದಿವ್ಯ ಔಷಧ, ಬಿ.ಕೆ. ವೀಣಾ, ಫೆ.12ರಂದು ಗೀತೆಯ ಮೌಲ್ಯಗಳು, ಬಿ.ಕೆ. ರಶ್ಮಿ,ಫೆ.14ರಂದು ಅಷ್ಟಶಕ್ತಿಗಳು,ಬಿ.ಕೆ. ಯತ್ನ, ಫೆ.16ರಂದು ಆರೋಗ್ಯಕರ ಜೀವನ ಶೈಲಿ, ಬಿ.ಕೆ. ಯೋಗೇಶ್ವರಿ, ಫೆ.17ರಂದು, ಸಂಬಂಧಗಳಲ್ಲಿ ಸಾಮರಸ್ಯ, ಬಿ.ಕೆ. ಸಂಧ್ಯಾ, ಫೆ.18 ರಂದು ಕೃತಜ್ಞತಾ ಭಾವ, ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪುರಸ್ಕೃತೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀಯವರಿಂದ ಫೆ.19 ರಂದು, ರಾಜಯೋಗದ ಮಹತ್ವಿಕೆ,ಬಿ.ಕೆ. ರಾಧಾ ಫೆ.20ರಂದು, ನನ್ನ ಖುಷಿ,ನನ್ನ ಕೈಯಲ್ಲಿ ಬಿ.ಕೆ. ಮೋಹನ. ಫೆ. 21ರಂದು, ಮೌನದ ಮಹತ್ವ,ಬಿ.ಕೆ. ಧನಲಕ್ಷ್ಮಿ, ನಡೆಸಿಕೊಡಲಿದ್ದಾರೆ.
ಪ್ರತಿನಿತ್ಯ ಉಪನ್ಯಾಸ ಸಂಜೆ 7:00 ರಿಂದ 8:00 ರವರೆಗೆ. ದಿನಾಂಕ 9 ರಂದು ಮುಕುಂದನ್ ಗುರೂಜಿ, 10 ರಂದು ಎಮ್.ವಿ ಅಮರನಾಥ್, 12 ರಂದು ಪಿ. ರವಿಶಂಕರ್, 14 ರಂದು ಡಾ.ವಿ. ಕೇಶವಮೂರ್ತಿ, 16 ರಂದು ಡಾ.ಡಿ.ಎಸ್. ಗುರು, 17 ರಂದು, ಡಾ. ಬಿ. ವಿ. ವಸಂತ್ ಕುಮಾರ್, 18 ರಂದು, ಪ್ರೊ. ಮೊರಬದ ಮಲ್ಲಿಕಾರ್ಜುನ, 19ರಂದು ಡಾ. ಎಸ್ ಪಿ.ಉಮಾದೇವಿ, 20 ರಂದು ಡಾ.ಜಾವೀದ್ ನಯೀಮ್ ಕೆ. 21ರಂದು, ಶ್ರೀ ಪ್ರಭುಸ್ವಾಮಿ ಮಳಿ ಮಠ ನಡೆಸಿಕೊಡಲಿದ್ದಾರೆ.
ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ 8 ರಿಂದ 9ರವರೆಗೆ ಹೆಸರಾಂತ ಕಲಾವಿದರಿಂದ ಭರತನಾಟ್ಯ ವಿವಿಧ ನೃತ್ಯ ಪ್ರಕಾರಗಳು ನೃತ್ಯ ರೂಪಕ ಜಾನಪದ ಗೀತೆಗಳು ಆಧ್ಯಾತ್ಮಿಕ ಗೀತೆಗಳು ಸುಗಮ ಸಂಗೀತ ಕರ್ನಾಟಕ ಶಾಸ್ತ್ರೀಯ ಸಂಗೀತ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಪರಿವಾರ ಕುಟುಂಬ ಸಮೇತವಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಮನವಿ ಮಾಡಿದರು.
ಈ ವೇಳೆ ಓಂಶಾಂತಿ ನ್ಯೂಸ್ ಸರ್ವಿಸ್ ಬಿ.ಕೆ ಯತ್ನ, ಬಿ.ಕೆ. ಸಿಮಾ, ಬಿ. ಕೆ ಕುಮಾರ, ಬಿ. ಕೆ. ಜಯಂತಿ, ಬಿ.ಕೆ. ಮಣಿ, ಹಾಜರಿದ್ದರು








