DistrictLatest

ಕೊಪ್ಪದಲ್ಲಿ ಕಳಪೆ ಗುಣಮಟ್ಟದ ಕೀಟನಾಶಕದಿಂದ ಲಕ್ಷಾಂತರ ರೂ. ಮೌಲ್ಯದ ಶುಂಠಿ ಬೆಳೆ ನಾಶ

ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು ಕೊಪ್ಪ ಗ್ರಾಮದ ಖಾಸಗಿ ಕೀಟನಾಶಕ ಮಾರಾಟ ಮಳಿಗೆಯಲ್ಲಿ ಶುಂಠಿ ಬೆಳೆಗೆ ಖರೀದಿಸಿದ ಕ್ರಿಮಿನಾಶಕ ನಕಲಿಯಾಗಿದ್ದು, 15 ಲಕ್ಷ ರೂ ಬೆಲೆಬಾಳುವ ಶುಂಠಿ ಹಾಳಾಗಿದೆ. ಈ ಬಗ್ಗೆ ಪಿರಿಯಾಪಟ್ಟಣ ಸಹಾಯಕ ಕೃಷಿ ನಿರ್ದೇಶಕರಿಗೆ ಮತ್ತು ಮೈಸೂರಿನ ಜಂಟಿ ಕೃಷಿ ನಿರ್ದೇಶಕರಿಗೆ ದೂರು ನೀಡಲಾಗಿದ್ದು, ಕ್ರಿಮಿನಾಶಕ ಮಾರಾಟಗಾರನ ಅಂಗಡಿ ಲೈಸೆನ್ಸ್ ರದ್ದು ಮಾಡಿ ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ ರೈತನಿಗೆ ಪರಿಹಾರ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತಸಂಘದ(ರೈತಬಣ) ಅಧ್ಯಕ್ಷರಾದ ಇಂಗಲಗುಪ್ಪೆ ಕೃಷ್ಣೇಗೌಡ ಒತ್ತಾಯಿಸಿದ್ದಾರೆ.

ಶುಕ್ರವಾರ ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಎದುರು ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಕಳೆದ 6 ತಿಂಗಳ ಹಿಂದೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಚೆನ್ನಕಲ್ ಕಾವಲ್ ಗ್ರಾಮದ ರೈತರಾದ ಮಣಿ, ಸಿ.ಪಿ, ಎಂಬವರು ಸರ್ವೇ ನಂ.30ರ ಮೂರು ಎಕರೆಯ ಗುತ್ತಿಗೆ ಜಮೀನಿನಲ್ಲಿ ಶುಂಠಿ ಬೆಳೆಯನ್ನು ನಾಟಿ ಮಾಡಿದ್ದು, ಜಮೀನಿಗೆ ಬೆಳೆಯ ಪೋಷಣೆ ಮತ್ತು ಸಸ್ಯ ಸಂರಕ್ಷಣೆಗೆ ಜೂನ್ 25ರಂದು ಪಿರಿಯಾಪಟ್ಟಣ ತಾಲ್ಲೂಕು ಕೊಪ್ಪ ಗ್ರಾಮದ ಶ್ರೀ ನಂಜುಂಡೇಶ್ವರ ಫರ್ಟಿಲೈಸರ್ ಅವರಿಂದ ವಿವಿಧ ಉತ್ಪನ್ನಗಳನ್ನು ಖರೀದಿಸಿ ಮಾರಾಟಗಾರರ ಶಿಫಾರಸಿನಂತೆಯೇ ಜೂನ್ 26ರಂದು ಕೀಟನಾಶಕ ಸಿಂಪಡಣೆ ಮಾಡಿರುತ್ತಾರೆ, ಸಿಂಪಡಣೆ ಮಾಡಿದ ನಂತರ ಎರಡು ದಿನದಲ್ಲಿ ಎಲೆಗಳು ಸುಟ್ಟಂತಾಗಿ ಬೆಳೆಯು ಹಾಳಾಗಿರುತ್ತದೆ.

ಈ ವಿಚಾರವನ್ನು ರೈತರು. ಶ್ರೀ ನಂಜುಂಡೇಶ್ವರ ಘರ್ಟಿಲೈಸರ್ ಮಾಲೀಕರ ಗಮನಕ್ಕೆ ತಂದಿದ್ದು, ಅವರ ಪ್ರತಿನಿಧಿಗಳು ಸಹ ಜಮೀನಿಗೆ ಭೇಟಿ ನೀಡಿ, ಪರಿಶೀಲನೆ ಮಾಡಿ, ರೈತರಿಗೆ ಉಚಿತವಾಗಿ ಬೇರೆ ಉತ್ಪನ್ನಗಳನ್ನು ನೀಡಿ, ಇವುಗಳನ್ನು ಸಿಂಪಡಿಸಿ ೧೨ ದಿನಗಳಲ್ಲಿ ಸರಿಹೋಗುತ್ತದೆ ಎಂದು ಸೂಚಿಸಿರುತ್ತಾರೆ. ತದನಂತರ ಅವರು ಬೆಳೆಯು ಚೇತರಿಕೆಯಾಗುವುದಿಲ್ಲ. ಇದೀಗ ಶ್ರೀ ನಂಜುಂಡೇಶ್ವರ ಫರ್ಟಿಲೈಸರ್ ಮಾಲೀಕ ರೈತನಿಗೆ ಸಬೂಬು ಹೇಳುತ್ತಿದ್ದಾರೆ.

ಕೂಡಲೇ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಶ್ರೀ ನಂಜುಂಡೇಶ್ವರ ಫರ್ಟಿಲೈಸರ್ ಮಾಲೀಕನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಆತನ ಲೈಸೆನ್ಸ್ ರದ್ದು ಮಾಡಿ, ರೈತನಿಗೆ ಪರಿಹಾರ ಕೊಡಿಸಬೇಕು ಇಲ್ಲದಿದ್ದಲ್ಲಿ ಪಿರಿಯಾಟಪಟ್ಟಣ ಕೃಷಿ ಇಲಾಖೆ ಎದುರು ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ರೈತ ಮಣಿ ಮಾತನಾಡಿ, ಕಳೆದ ಆರು ತಿಂಗಳಿನಿಂದಲೂ ಶ್ರೀ ನಂಜುಂಡೇಶ್ವರ ಫರ್ಟಿಲೈಸರ್ ಅಂಗಡಿ ಮಾಲೀಕರು ನಮಗೆ ಪರಿಹಾರ ನೀಡುವುದಾಗಿ ಹೇಳಿ ಅಲೆದಾಡಿಸಿ ಇದೀಗ ಪರಿಹಾರ ನೀಡಲು ನಿರಾಕರಣೆ ಮಾಡುತ್ತಿದ್ದಾರೆ. ಕೂಡಲೇ ಕೃಷಿ ಅಧಿಕಾರಿಗಳು ಮಧ್ಯ ಪ್ರವೇಶಿಸಿ ನಮಗೆ ಪರಿಹಾರ ಕೊಡಿಸಬೇಕು. ನಾನು ಲಕ್ಷಾಂತರ ರೂ ಸಾಲ ಮಾಡಿ, ಜಮೀನು ಗುತ್ತಿಗೆಗೆ ಪಡೆದು ಅದರಲ್ಲಿ ಮತ್ತೆ ಲಕ್ಷಾಂತರ ರೂ ಖರ್ಚು ಮಾಡಿ ಕೃಷಿ ಮಾಡಿದ್ದೇನೆ.

ರೈತರಿಗೆ ಉತ್ತಮ ಗುಣಮಟ್ಟದ ಕೀಟನಾಶಕ ಕೊಡುವ ಬದಲು ಕಳಪೆ ಕೀಟನಾಶಕ ನೀಡಿ ನನ್ನ ಬೆಳೆ ಹಾಳಾಗಲು ಶ್ರೀ ನಂಜುಂಡೇಶ್ವರ ಫರ್ಟಿಲೈಸರ್ ಮಾಲಿಕರು ಮತ್ತು ಕಳಪೆ ಗುಣಮಟ್ಟದ ಕೀಟನಾಶಕ ಮಾರಾಟ ಮಾಡುತ್ತಿದ್ದರೂ ಅದನ್ನು ಪರಿಶೀಲಿಸದೆ ಅವರ ಅಕ್ರಮಕ್ಕೆ ಕ್ರಷಿ ಅಧಿಕಾರಿಗಳೂ ಬೆಂಬಲ ನೀಡಿದ್ದು, ಅವರ ವಿರುದ್ಧವೂ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕರಾರೈಸ (ರೈತಬಣ) ಅಧ್ಯಕ್ಷ ಮಾಲಿಕ್ ಆವರ್ತಿ ಮಾತನಾಡಿ, ಲಕ್ಷಾಂತರ ರೂ ಸಾಲ ಮಾಡಿ ಜಮೀನು ಗುತ್ತಿಗೆ ಪಡೆದು ಶುಂಠಿ ಬೆಳೆದ ರೈತನಿಗೆ ಶ್ರೀ ನಂಜುಂಡೇಶ್ವರ ಫರ್ಟಿಲೈಸರ್ ಅಂಗಡಿ ಮಾಲೀಕರು ಕಳಪೆ ಕೀಟನಾಶಕ ನೀಡಿದ್ದರಿಂದ ರೈತರಿಗೆ ಲಕ್ಷಾಂತರ ರೂ. ನಷ್ಟವಾಗಿದೆ. ಈ ಬಗ್ಗೆ ಕೃಷಿ ಅಧಿಕಾರಿಗಳು ಮಧ್ಯ ಪ್ರವೇಶಿಸಿ ರೈತನಿಗೆ ಪರಿಹಾರ ಕೊಡಿಸಬೇಕು ಇಲ್ಲದಿದ್ದಲ್ಲಿ ಕೃಷಿ ಇಲಾಖೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಮೈಸೂರು ಜಿಲ್ಲಾ ಅಧ್ಯಕ್ಷರಾದ ಮಾಲಿಕ್ ಆವರ್ತಿ, ಅರಸಿನಕೆರೆ ಕೆಂಪರಾಜು, ಪಿರಿಯಾಪಟ್ಟಣದ ಮಂಜುನಾಥ್, ಚಂಗಪ್ಪ, ಸತೀಶ, ಬೆಣಗಾಲು ಮಣಿ, ಚನ್ನಕಲ್ ಷಣ್ಮುಖ, ಕಾವೇರಿ, ಮೋಹನ, ಸಿ.ಆರ್.ಪ್ರಕಾಶ್ ಮತ್ತಿತರ ರೈತರು ಇದ್ದರು.

 

 

 

 

 

admin
the authoradmin

Leave a Reply