ಒಲಂಪಿಕ್ಸ್ ಗೆ ಸ್ಕೀಯಿಂಗ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಸತತ ಪ್ರಯತ್ನದಲ್ಲಿರುವ ಕೊಡಗಿನ ಭವಾನಿ… ಯಾರಿವರು? ಏನಿವರ ಸಾಧನೆ?

ದಕ್ಷಿಣ ಭಾರತದವರಿಗೆ ಸ್ಕೀಯಿಂಗ್ ಕಬ್ಬಿಣದ ಕಡಲೆ… ಮಂಜುಗಡ್ಡೆಯಲ್ಲಿ ಆಡುವ ಈ ಕ್ರೀಡೆ ಉತ್ತರ ಭಾರತದವರಿಗೆ ಕಷ್ಟವಾಗಲಾರದು. ಆದರೆ ಅಂತಹ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸಾಧನೆ ಮಾಡಲು ಹೊರಟಿರುವ ಕನ್ನಡದ ಕುವರಿ, ಕೊಡಗಿನ ತೆಕ್ಕಡ ಭವಾನಿ ಅವರ ಕ್ರೀಡಾ ಬದುಕಿನ ಪುಟಗಳನ್ನು ಇಲ್ಲಿ ತೆರೆದಿಡಲಾಗಿದೆ.
ತೆಕ್ಕಡ ಭವಾನಿ ಕೊಡಗಿನ ನಾಪೋಕ್ಲು ಸಮೀಪದ ಪೆರೂರು ಗ್ರಾಮದ ತೆಕ್ಕಡ ನಂಜುಂಡ, ಪಾರ್ವತಿ ದಂಪತಿ ಪುತ್ರಿ. ಇವರು ಶಾಲಾ ದಿನಗಳಲ್ಲಿಯೇ ಕ್ರೀಡೆ, ಎನ್ ಸಿಸಿಯತ್ತ ಹೆಚ್ಚಿನ ಒಲವು ಹೊಂದಿದ್ದರು. ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುವಾಗ ಎನ್ಸಿಸಿಗೆ ಸೇರ್ಪಡೆಗೊಂಡ ಬಳಿಕ ಸಾಹಸಮಯ ಚಟುವಟಿಕೆಯತ್ತ ತನ್ನನ್ನು ತೊಡಗಿಸಿಕೊಳ್ಳಲು ಆರಂಭಿಸಿದರು.
ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ದಕ್ಷಿಣ ಕೊಡಗಿನ ಶ್ರೀಮಂಗಲದ ಜೆಸಿ ಶಾಲೆಯಲ್ಲಿ, ಬಳಿಕ ಮಡಿಕೇರಿ ತಾಲೂಕಿನ ಗಾಳಿಬೀಡುವಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಮುಗಿಸಿ, ಮಂಗಳೂರಿನ ಸೆಂಟ್ ಅಗ್ನೇಸ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಡಾರ್ಜಲಿಂಗ್ ನ ಹಿಮಾಲಯ ಮೌಂಟೇನಿಯರಿಂಗ್ ಇನ್ಸಿಟ್ಯೂಟ್ನಲ್ಲಿ ಬೋಧಕರಾಗಿಯೂ ಕೆಲಸ ಮಾಡಿದ್ದಾರೆ. ಪ್ರೌಢಶಾಲೆಯಿಂದಲೇ ಎನ್ಸಿಸಿಗೆ ಸೇರಿ ಕಾಲೇಜಿನಲ್ಲಿಯೂ ಅದನ್ನು ಮುಂದುವರೆಸಿ ವಿವಿಧ ಕ್ಯಾಂಪ್ಗಳಲ್ಲಿ ಭಾಗವಹಿಸಿ ತರಬೇತಿ ಪಡೆದು 2016ರಲ್ಲಿ ನವದೆಹಲಿಯ ರಾಜಪಥ್ ನಲ್ಲಿ ನಡೆದ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಭಾಗವಹಿಸಿದ್ದು ಇವರ ಸಾಧನೆ.
ಇತ್ತೀಚೆಗೆ ಕ್ರೀಡಾ ಕ್ಷೇತ್ರದಲ್ಲಿ ಧೈತ್ಯ ಸಾಧನೆ ಮಾಡುವ ಚೀನಾದ ನೆಲಕ್ಕೆ ಹೋಗಿ ಅಲ್ಲಿ ಭಾರತದ ಪತಾಕೆಯನ್ನು ಹಾರಿಸಿದ್ದು ಇವರ ಸಾಧನೆಗೊಂದು ಕಿರೀಟ. ಅಷ್ಟೇ ಅಲ್ಲದೆ ಈ ಕ್ರೀಡೆಯಲ್ಲಿ ಚೀನಾದ ನೆಲಕ್ಕೆ ಕಾಲಿಟ್ಟ ಮೊದಲ ಮಹಿಳೆ ಎಂಬುದು ಕೂಡ ಇವರ ಸಾಧನೆ ಜತೆಗೆ ಸೇರಿಕೊಳ್ಳುತ್ತದೆ. ಸ್ಕೀಯಿಂಗ್ ನಲ್ಲಿ ಏನಾದರೊಂದು ಸಾಧಿಸಬೇಕೆಂದು ಹೊರಟಿರುವ ಕೊಡಗಿನ ಭವಾನಿ ತೆಕ್ಕಡ ಅವರು ಕೊಡಗಿನಲ್ಲಿ ಹುಟ್ಟಿ ಕೊಡಗು ಮತ್ತು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಸ್ಕೀಯಿಂಗ್ ನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸಾಧನೆ ಮಾಡುತ್ತಾ ಬಂದಿದ್ದಾರೆ. ಮುಂದಿನ ಒಲಂಪಿಕ್ಸ್ ನಲ್ಲಿ ಭಾಗವಹಿಸುವುದು ಇವರ ಗುರಿಯಾಗಿದ್ದು ಅದಕ್ಕಾಗಿ ಮಹಾರಾಷ್ಟ್ರದಲ್ಲಿ ಉನ್ನತ ತರಬೇತಿಯನ್ನು ಪಡೆಯುತ್ತಿದ್ದಾರೆ.
ಭವಾನಿಯವರ ಸಾಧನೆಯನ್ನು ನೋಡಿದ್ದೇ ಆದರೆ ಚೀನಾದ ಏಷ್ಯನ್ ವಿಂಟರ್ ಗೇಮ್ಸ್ ನ 1.3 ಕಿಮೀ ಕ್ಲಾಸಿಕ್ ಸ್ಪ್ರಿಂಟ್ ವಿಭಾಗದಲ್ಲಿ ಕ್ವಾರ್ಟ್ರ್ ಫೈನಲ್ ತಲುಪಿದ್ದು. 5 ಕಿಮೀ ವೈಯಕ್ತಿಕ ರೇಸ್ ನಲ್ಲಿ 18 ನಿಮಿಷ 10 ಸೆಕೆಂಡುಗಳಲ್ಲಿ ಗುರಿ ತಲಪುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಸ್ಕೀಯರ್ ಎಂಬ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ನಾರ್ವೆಗೆ ತೆರಳಿ ಅಲ್ಲಿಯೂ ಭಾರತವನ್ನು ಪ್ರತಿನಿಧಿಸಿ ಬಂದಿದ್ದಾರೆ.
ಸ್ಕೀಯಿಂಗ್ ನಲ್ಲಿ ಹಲವು ರೀತಿಯ ಸಾಧನೆಗಳನ್ನು ಮಾಡಿದ್ದು, ಖೇಲೋ ಇಂಡಿಯಾ ವಿಂಟರ್ ಗೇಮ್ಸ್, -2020 (5 ಕಿಮೀ)ರಲ್ಲಿ ಕಂಚಿನ ಪದಕ, ಮೊದಲ ಖೇಲೋ ಇಂಡಿಯಾ ವಿಂಟರ್ ಗೇಮ್ಸ್-2020 (10 ಕಿಮೀ) ಕಂಚಿನ ಪದಕ, ಎರಡನೇ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ -2021 (1.4 ಕಿಮೀ) ಚಿನ್ನದ ಪದಕ, ಎರಡನೇ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2021 (5 ಕಿ ಮೀ) ಕಂಚಿನ ಪದಕ, ಆಲ್ಇಂಡಿಯಾ ಓಪನ್ ಸ್ಕೀ ಮತ್ತು ಸ್ನೋಬಾಲ್ ಚಾಂಪಿಯನ್ಷಿಪ್-2022 (1.5 ಕಿಮೀ) ಬೆಳ್ಳಿ ಪದಕ, ಆಲ್ಇಂಡಿಯಾ ಓಪನ್ ಸ್ಕೀ ಮತ್ತು ಸ್ನೋಬಾಲ್ ಚಾಂಪಿಯನ್ ಷಿಪ್-2022 (5 ಕಿಮೀ) ಕಂಚಿನ ಪದಕ ಪಡೆದುಕೊಂಡಿದ್ದಾರೆ.
ನ್ಯಾಷನಲ್ ಕ್ರಾಸ್ ಕಂಟ್ರಿ ಸ್ಕೀಯಿಂಗ್ ಚಾಂಪಿಯನ್ಷಿಪ್ -2022 (5 ಕಿಮೀ) ಬೆಳ್ಳಿ ಪದಕ, ನ್ಯಾಷನಲ್ ಕ್ರಾಸ್ ಕಂಟ್ರಿ ಸ್ಕೀಯಿಂಗ್ ಚಾಂಪಿಯನ್ಷಿಪ್ -2022 (10 ಕಿಮೀ) ಬೆಳ್ಳಿ ಪದಕ, ನ್ಯಾಷನಲ್ ವಿಂಟರ್ ಬೈಥ್ಲಾನ್ ಚಾಂಪಿಯನ್ಷಿಪ್-2022 (10 ಕಿಮೀ) ಬೆಳ್ಳಿ ಪದಕ, ನ್ಯಾಷನಲ್ ವಿಂಟರ್ ಬೈಥ್ಲಾನ್ ಚಾಂಪಿಯನ್ಷಿಪ್-2022 (5 ಕಿಮೀ) ಬೆಳ್ಳಿ ಪದಕ, ನ್ಯಾಷನಲ್ ಕ್ರಾಸ್ ಕಂಟ್ರಿ ಸ್ಕೀಯಿಂಗ್ ಚಾಂಪಿಯನ್ಷಿಪ್ -2022 (1. 5 ಕಿಮೀ) ಚಿನ್ನದ ಪದಕ, 3ನೇ ಖೇಲೋ ಇಂಡಿಯಾ ವಿಂಟರ್ ಗೇಮ್ 2023 (10 ಕಿ ಮೀ) ಚಿನ್ನದ ಪದಕ, 3ನೇ ಖೇಲೋ ಇಂಡಿಯಾ ವಿಂಟರ್ ಗೇಮ್ 2023 (5 ಕಿ ಮೀ) ಚಿನ್ನದ ಪದಕ, 3ನೇ ಖೇಲೋ ಇಂಡಿಯಾ ವಿಂಟರ್ ಗೇಮ್ 2023 (1.5 ಕಿ ಮೀ) ಚಿನ್ನದ ಪದಕ ಗಳಿಸಿದ್ದಾರೆ. ಇನ್ನು ಮೂರನೇ ಖೇಲೋ ಇಂಡಿಯಾ ವಿಂಟರ್ ಗೇಮ್ 2024 (10 ಕಿ ಮೀ) ಚಿನ್ನದ ಪದಕ, 3ನೇ ಖೇಲೋ ಇಂಡಿಯಾ ವಿಂಟರ್ ಗೇಮ್ 2024 (10 ಕಿ ಮೀ) ಚಿನ್ನದ ಪದಕ, 3ನೇ ಖೇಲೋ ಇಂಡಿಯಾ ವಿಂಟರ್ ಗೇಮ್ 2024 (10 ಕಿ ಮೀ) ಚಿನ್ನದ ಪದಕ ವನ್ನು ಪಡೆದಿದ್ದಾರೆ.
ಅಂತರಾಷ್ಟ್ರೀಯವಾಗಿ ಹತ್ತು ಹಲವು ಸಾಧನೆ ಮಾಡಿದ್ದು, ಎಫ್ಐಎಸ್ ಸ್ಕೀಯಿಂಗ್ ರೇಸ್ ಐಸ್ಲ್ಯಾಂಡ್ 2022 (1.2 ಕಿಮೀ) 7ನೇ ಸ್ಥಾನ, ಎಫ್ಐಎಸ್ ಸ್ಕೀಯಿಂಗ್ ರೇಸ್ ಐಸ್ಲ್ಯಾಂಡ್ 2022 (05 ಕಿಮೀ) 6ನೇ ಸ್ಥಾನ, ರೈಪ್ಫಿಸೆನ್ ಲಾಂಗ್ಲೌಫ್ ಕಪ್ ಇಟಲಿ, 2022 (05 ಕಿಮೀ) ಬೆಳ್ಳಿ ಪದಕ, ಏಷ್ಯನ್ ಸಮ್ಮರ್ ಬೈಥ್ಲಾನ್, ಕಝಕಿಸ್ತಾನ್, 2023 (7.5 ಕಿಮೀ) 17ನೇ ಸ್ಥಾನ, ಎಫ್ಐಎಸ್ ಸ್ಕೀಯಿಂಗ್ ರೇಸ್ ಐಸ್ಲ್ಯಾಂಡ್ 2023 (1.2 ಕಿಮೀ) 4ನೇ ಸ್ಥಾನ, ಎಫ್ಐಎಸ್ ಸ್ಕೀಯಿಂಗ್ ರೇಸ್ ಐಸ್ಲ್ಯಾಂಡ್ 2023 (05 ಕಿಮೀ) 4 ನೇ ಸ್ಥಾನ, ನಾರ್ಡಿಕ್, ವಿಶ್ವ ಸ್ಕೀಯಿಂಗ್ ಚಾಂಪಿಯನ್ ಶಿಪ್ ಸ್ಲೊವೆನಿಯಾ 2023 (05 ಕಿಮೀ) 31ನೆ ಸ್ಥಾನ ಪಡೆದರೂ ಭಾರತದಿಂದ ಆಯ್ಕೆಯಾದ ಏಕೈಕ ಸ್ಫರ್ಧಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲದೆ, ಈಸ್ಟರ್ನ್ ಯೂರೋಪ್ ಕಪ್, ಕಝಕಿಸ್ತಾನ್ 2024 (5 ಕಿಮೀ) 36ನೇ ಸ್ಥಾನ, ಈಸ್ಟರ್ನ್ ಯೂರೋಪ್ ಕಪ್, ಕಝಕಿಸ್ತಾನ್ 2024 (1.4 ಕಿಮೀ) 43ನೇ ಸ್ಥಾನ ಪಡೆದುಕೊಂಡಿದ್ದಾರೆ.
ಕಾಶ್ಮೀರದಲ್ಲಿ ಸ್ಕೀಯಿಂಗ್ ತರಬೇತಿ ಪಡೆದು ಅಲ್ಲಿ ನಡೆದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲುವು ಪಡೆದಿರುವುದಲ್ಲದೆ, ವಿದೇಶಗಳಿಗೂ ತೆರಳಿ ಅಲ್ಲಿಯೂ ಕಂಚು, ಬೆಳ್ಳಿ ಮತ್ತು ಚಿನ್ನದ ಪದಕಗಳಿಗೆ ಭಾಜನರಾಗಿರುವುದು ಇವರ ಸಾಧನೆಯಾಗಿದೆ.
B.M.Lavakumar