ಸಾಮಾಜಿಕ ಕಾರ್ಯಕರ್ತ ಸ್ನೇಹಿಮಯಿ ಕೃಷ್ಣ ಬೆಂಗಳೂರಿನಲ್ಲಿ ಪೊಲೀಸ್ ವಶಕ್ಕೆ.. ಇಷ್ಟಕ್ಕೂ ಆಗಿದ್ದೇನು?

ಬೆಂಗಳೂರು: ಮೈಸೂರು ಮುಡಾ ಪ್ರಕರಣ ಪ್ರಕರಣ ಬಯಲಿಗೆಳೆದು ಮುಖ್ಯಮಂತ್ರಿ ಸಿದ್ದರಾಮಯ್ಯರವರೇ ತಮ್ಮ 14 ನಿವೇಶನಗಳನ್ನು ವಾಪಸ್ ನೀಡುವಂತೆ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಿಮಯಿ ಕೃಷ್ಣ ಅವರನ್ನು ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.
ಮುಡಾದ ಮಾಜಿ ಆಯುಕ್ತ ಡಿ.ಬಿ ನಟೇಶ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಒಂದೂವರೇ ಕೋಟಿ ಹಣ ನೀಡಿ, ನಟೇಶ್ ಮುಂಬಡ್ತಿ ತೆಗೆದುಕೊಂಡಿದ್ದಾರೆ ಎಂಬ ಆರೋಪವನ್ನು ಸ್ನೇಹಿಮಯಿ ಕೃಷ್ಣ ಮಾಡಿದ್ದರು. ಇದು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತಲ್ಲದೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕಂಗೆಣ್ಣಿಗೆ ಗುರಿಯಾಗಿತ್ತು.

ಪ್ರಕರಣದ ಸಂಬಂಧ ಮುಡಾ ಮಾಜಿ ಆಯುಕ್ತ ನಟೇಶ್ ಬೆಂಗಳೂರು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಸ್ನೇಹಮಯಿ ಕೃಷ್ಣ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. 66a IT BNS 337, 336, 340, ಅಡಿ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಇದೀಗ ಪೊಲೀಸರು ಬೆಂಗಳೂರಿನಲ್ಲಿ ಸ್ನೇಹಿಮಯಿ ಕೃಷ್ಣ ಅವರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ದೂರಿನ ಸಂಬಂಧ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ವಾರೆಂಟ್ ಪಡೆದಿರುವ ಸಿಸಿಬಿ ಪೊಲೀಸರು ಮೈಸೂರಿನಲ್ಲಿರುವ ಸ್ನೇಹಮಯಿ ಕೃಷ್ಣ ಅವರ ಎರಡು ಮನೆಗಳಲ್ಲಿ ಪರಿಶೀಲನೆ ನಡೆಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇನ್ನು ಮಾಧ್ಯಮದೊಂದಿಗೆ ಮಾತನಾಡಿರುವ ಪುತ್ರ ತಂದೆ ಸ್ನೇಹಿಮಯಿ ಕೃಷ್ಣ ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.







