CrimeLatest

ಸೋಷಿಯಲ್ ಮೀಡಿಯಾದಲ್ಲಿ ಚಾಟ್ ಕಾಮೆಂಟ್ ಮಾಡುವ ಮುನ್ನ ಎಚ್ಚರ! ನಿಮ್ಮ ವೀಕ್ ನೆಸ್ಸೇ ವಂಚಕರಿಗೆ ಮಹಾಅಸ್ತ್ರ!

ಸಾಮಾಜಿಕ ಜಾಲತಾಣಗಳ ಜಮಾನದಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿದ್ದು, ಪುಂಡ ಪೋಕರಿಗಳಿಗೆ ಇದು ಟೈಂಪಾಸ್ ಮಾಡುವ ಮತ್ತು ಹೆಣ್ಣು ಮಕ್ಕಳಿಗೆ ಅಶ್ಲೀಲ ಮೆಸೇಜ್ ಕಳಿಸಿ ವಿಕೃತ ಖುಷಿ ಪಡುವ ಮತ್ತು ಹಣವಂತರನ್ನು ಬಲೆಗೆ ಕೆಡವಿಕೊಂಡು ಕಾಸು ಕೀಳುವ, ಒಳ್ಳೆಯದಕ್ಕಿಂತ ಹೆಚ್ಚಾಗಿ ಕೆಟ್ಟವಿಚಾರಗಳಿಗೆ ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೋಸ ಮಾಡುವವರು ಹಾಗೂ ಮೋಸ ಹೋಗುವವರು  ಹೀಗೆ ತರಾವರಿ ಜನರಿದ್ದು, ಕೆಲವರು ಹೆಣ್ಮಕ್ಕಳಿಗೆ ಮೆಸೇಜ್ ಮಾಡಿಯೋ, ಇನ್ನೇನೋ ಕಳಿಸಿ ತಗಲಾಕಿಕೊಳ್ಳುತ್ತಿರುವುದು, ಸಂಸಾರದಲ್ಲಿ ಜಟಾಪಟಿಗಳು ನಡೆಯುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ.

ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಉದ್ದೇಶದಿಂದ ಮಾಡಿದ್ದರೂ ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಸಂಸಾರಗಳು ಒಡೆದು ಹೋಗಿವೆ, ಕೊಲೆಗಳಾಗಿವೆ ಹಲವರು ಜೈಲ್ ಸೇರಿದ್ದರೆ, ಮತ್ತೊಂದಷ್ಟು ಜನರು ಮಾನಮರ್ಯಾದೆ ಕಳೆದುಕೊಂಡಿದ್ದಾರೆ. ಅದರಾಚೆಗೆ ಲಕ್ಷಾಂತರ ಹಣವನ್ನು ಕಳೆದುಕೊಂಡವರು ಇಲ್ಲದಿಲ್ಲ. ಇಷ್ಟೇ ಅಲ್ಲದೆ ಹನಿಟ್ರ್ಯಾಪ್ ಗೆ ಒಳಗಾಗಿ ಪ್ರಾಣ ಕಳೆದುಕೊಂಡವರು, ಮಾನಮರ್ಯಾದೆ ಹರಾಜು ಹಾಕಿಕೊಂಡವರು ಒಬ್ಬರೇ ಇಬ್ಬರೇ ಬೇಕಾದಷ್ಟು ಮಂದಿಯಿದ್ದಾರೆ. ಇದೆಲ್ಲದರ ನಡುವೆ ಸಾಮಾಜಿಕ ಜಾಲವನ್ನು ಸದುದ್ದೇಶಕ್ಕೆ ಬಳಸಿಕೊಂಡು ಬದುಕು ಕಟ್ಟಿಕೊಂಡವರ ಪಟ್ಟಿಯೂ ದೊಡ್ಡದಾಗಿದೆ.

ಇದನ್ನೂ ಓದಿ : ಹನಿಟ್ರ್ಯಾಪ್… ಇದು ಮಾಯಾಂಗನೆಯರ ವಿಷವರ್ತುಲ… ಇಲ್ಲಿ ಸಿಕ್ಕಿಬಿದ್ದರೆ ಹಣ, ಮಾನ ಮಾರ್ಯಾದೆ ಖತಂ

ಸಾಮಾಜಿಕ ತಾಲತಾಣಗಳಲ್ಲಿ ಎಲ್ಲ ರೀತಿಯ ಮನಸ್ಥಿತಿಯವರು ಸಿಗುತ್ತಾರೆ. ಟೈಂಪಾಸ್ ಗಾಗಿ ಇಲ್ಲಿಗೆ ಬರುವವರು ಏನೇನೋ ಪೋಸ್ಟ್ ಗಳನ್ನು ಹಾಕಿ ವಿಕೃತ ಸುಖಪಡುತ್ತಿರುತ್ತಾರೆ. ಅಪ್ಪಿತಪ್ಪಿ ಇಂತಹವರನ್ನು ನೀವೇನಾದರೂ ಫ್ರೆಂಡ್ಸ್ ಮಾಡಿಕೊಂಡರೆ ಕಥೆ ಮುಗಿದಂತೆಯೇ.. ಇಂತಹವರಿಂದಲೇ ಬಹಳಷ್ಟು ಮನೆಗಳು, ಮನಸ್ಸುಗಳು ಹಾಳಾಗಿವೆ. ಇಲ್ಲಿ ಸುಧಾರಣೆ ತರುವುದು ಕಷ್ಟವೇ.. ಇದನ್ನು ಬಳಸುವವರು ಎಚ್ಚರಿಕೆ ವಹಿಸುವುದು ಒಳ್ಳೆಯದು. ಇನ್ನು ಕೆಲವರು ಹೆಣ್ಣು ಮಕ್ಕಳ ಹೆಸರಲ್ಲಿ ಅಕೌಂಟ್ ಓಪನ್ ಮಾಡಿ ಥೇಟ್ ಹೆಣ್ಮಕ್ಕಂತೆ ಚಾಟ್ ಮಾಡಿ, ಗಂಡಸರನ್ನು ಪರಿಚಯಿಸಿಕೊಂಡು ಅವರ ಬ್ಯಾಕ್ ರೌಂಡ್ ತಿಳಿದುಕೊಂಡು ಹಣವಿದೆ ಎನ್ನುವುದು ಗೊತ್ತಾದರೆ ಖೆಡ್ಡಾಕ್ಕೆ ಕೆಡವಲು ಹಲವು ಮಸಲತ್ತು ಮಾಡುತ್ತಾರೆ.

ಮೋಸ, ವಂಚನೆ, ಅನೈತಿಕ ವಿಚಾರಗಳಿಗೆ ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ದುರಂತವೇ.. ಇದನ್ನು ಸಜ್ಜನರು ಸದುಪಯೋಗಪಡಿಸಿಕೊಂಡರೆ ದುಷ್ಟರು ತಮ್ಮ ಕೆಟ್ಟ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇಲ್ಲಿ ಎಚ್ಚರಿಕೆಯ ಹೆಜ್ಜೆಯಿಡದೆ ಹೋದರೆ ಸಂಕಷ್ಟವಂತು ತಪ್ಪಿದಲ್ಲ. ದುಷ್ಟ ಜನರ ಕೈಗೆ ಸಿಕ್ಕಿಕೊಂಡು ನಲುಗಿದ ಬಹಳಷ್ಟು ಮಂದಿಯಿದ್ದಾರೆ. ಇತ್ತೀಚೆಗೆ ಯಾವುದೋ ಹೆಂಗಸಿಗೆ ಮೆಸೇಜ್ ಮಾಡಿದ ತಪ್ಪಿಗೆ ವ್ಯಕ್ತಿಯೊಬ್ಬ ಏಳು ಲಕ್ಷ ಕಕ್ಕಿದಲ್ಲದೆ, ಪದೇ ಪದೇ ಪೋನ್ ಮಾಡಿ ಹಣಕ್ಕಾಗಿ ಪೀಡಿಸಿದಾಗ ಅನ್ಯ ಮಾರ್ಗವಿಲ್ಲದೆ ಪೊಲೀಸರಿಗೆ ದೂರು ನೀಡಿದ್ದರಿಂದ ಹೀಗೂ ನಡೆಯುತ್ತದೆ? ಎಂಬ  ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ :  ಫೇಸ್ ಬುಕ್ ಪ್ರೇಮ.. ಪ್ರಣಯ… ಪ್ರಾಣ ತೆಗೆಯಿತು! ಗಂಡನ ಬಿಟ್ಟು ಬಂದವಳನ್ನು ಪ್ರಿಯಕರ ಕೊಂದು ಬಿಟ್ಟ!

ಇಲ್ಲಿ ವ್ಯಕ್ತಿಯಿಂದ ವಸೂಲಿ ಮಾಡಿದ ಖತರ್ ನಾಕ್ ಗ್ಯಾಂಗ್ ನಲ್ಲಿ ಹೆಂಗಸೊಬ್ಬಳು ಇದ್ದಳು ಎನ್ನುವುದು ಗಮನದಲ್ಲಿರ ಬೇಕಾದ ಸಂಗತಿಯಾಗಿದೆ. ಗಂಡ ಹೆಂಡತಿ ಇಬ್ಬರು ಸೇರಿ ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು ಎನ್ನುವುದು ಅಷ್ಟೇ ಸತ್ಯ. ಹಣ ಸಂಪಾದನೆಗಾಗಿ ಸುಲಭದ ಮಾರ್ಗ ಕಂಡುಕೊಂಡಿದ್ದು, ಕೆಲವು ಗಂಡಸರು ಮಾನಮರ್ಯಾದೆಗೆ ಹೆದರಿ ಕೇಳಿದಷ್ಟು ಹಣ ನೀಡಿ ಬಿಡುತ್ತಾರೆ. ಜತೆಗೆ ಪೊಲೀಸರಿಗೂ ದೂರು  ನೀಡುವುದಿಲ್ಲ. ಇದನ್ನು ಚೆನ್ನಾಗಿ ಅರಿತ ವಂಚಕರು  ಹೆಣ್ಣು ಮಕ್ಕಳ ಮೂಲಕವೇ ಡೀಲ್ ಮಾಡುತ್ತಾರೆ. ವಂಚನೆಗೊಳಗಾದವರು ಬಾಯಿ ಬಿಡದ ಕಾರಣದಿಂದಾಗಿ ಮತ್ತೆ ಮತ್ತೆ ಅದನ್ನೇ ಮಾಡುತ್ತಿರುತ್ತಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೇಗೆಲ್ಲ ವಂಚಿಸುತ್ತಾರೆ ಎಂಬುದನ್ನು ಖತರ್ ನಾಕ್ ಗ್ಯಾಂಗ್ ನ್ನು ಬಂಧಿಸಿ ಜೈಲಿಗೆ ಅಟ್ಟುವ ಮೂಲಕ ಕುಶಾಲನಗರ ಟೌನ್ ಪೊಲೀಸರು ಬಯಲು ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣವನ್ನು ಬಳಸುವಾಗ ಎಚ್ಚರವಾಗಿರಿ ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಿದ್ದಾರೆ. ಇಷ್ಟಕ್ಕೂ ಆಗಿದ್ದೇನು ಎಂಬುದನ್ನು ಕೆದಕುತ್ತಾ ಹೋದರೆ ಫೇಸ್ ಬುಕ್ ಕಹಾನಿಯೊಂದು ತೆರೆದುಕೊಳ್ಳುತ್ತದೆ. ಎಲ್ಲರೂ ಬಳಸುವಂತೆ, ಮೆಸೇಜ್ ಮಾಡುವಂತೆ ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಪಟ್ಟಣ ನಿವಾಸಿಯಾದ ಪರಶಿವಮೂರ್ತಿ ಎಂಬುವರು ಕೂಡ ಮಾಡಿದ್ದರು.

ಇದನ್ನೂ ಓದಿ :  ಹನಿಟ್ರ್ಯಾಪ್ ಅಡ್ಡಾದಲ್ಲಿ ಖತರ್ ನಾಕ್ ಪೊಲೀಸ್ ಪೇದೆ… ಬಟ್ಟೆ ವ್ಯಾಪಾರಿಗೆ  ಖೆಡ್ಡಾ ತೋಡಿದ್ದು ಹೇಗೆ ಗೊತ್ತಾ?

ಇವರಿಗೆ ಫೇಸ್ ಬುಕ್ ನಲ್ಲಿ ಪರಿಚಯವಾದ ಮಹಿಳೆ (ಮಹಿಳೆ ಹೆಸರಿನಲ್ಲಿದ್ದ)ಗೆ ಮೆಸೇಜ್ ಮಾಡುತ್ತಿದ್ದರು. ಆ ಕಡೆಯಿಂದಲೂ ಮೆಸೇಜ್ ಗಳು ಬರುತ್ತಿದ್ದವು. ಗುಡ್ ಮಾರ್ನಿಂಗ್, ತಿಂಡಿ ಆಯಿತಾ? ಊಟ ಆಯಿತಾ ಹೀಗೆ ಮಾತುಕತೆಗಳು ಆರಂಭವಾಗಿದ್ದು ಆ ಮೂಲಕ ಸ್ವಲ್ಪ ಮಟ್ಟಿಗೆ ಕ್ಲೋಸ್ ಆಗಿ ಬಿಟ್ಟರು. ಅಷ್ಟೇ ಆಗಿದ್ದರೆ ಏನೂ ಆಗುತ್ತಿರಲಿಲ್ಲವೇನೋ ಅದೊಂದು ಕೆಟ್ಟಗಳಿಗೆಯೋ ಏನೋ? 2024ನೇ ಅಕ್ಟೊಬರ್ ತಿಂಗಳಿನಲ್ಲಿ ಕಾಮೆಂಟ್ ಹಾಕಿ ಮೆಸೇಜ್ ನಲ್ಲಿ ಖುಷಿಯಿಂದ ಐ ಲವ್ ಯೂ ಎಂದು ಬಿಟ್ಟಿದ್ದರು. ಅಷ್ಟೇ ಅಲ್ಲಿಗೆ ಅವರ ದೆಸೆಯೇ ವಕ್ರವಾಗಿ ಬಿಟ್ಟಿತು.

02-11-2024 ರಂದು ಪರಶಿವಮೂರ್ತಿಯ ಮೊಬೈಲ್ ಸಂಖ್ಯೆಗೆ ಫೋನ್ ಬಂದಿತ್ತು. ಏರು ಧ್ವನಿಯಲ್ಲಿಯೇ ಅತ್ತ ಕಡೆಯಿಂದ ಮಾತನಾಡಿದ ವ್ಯಕ್ತಿ ನಾವು ಪಿರಿಯಾಪಟ್ಟಣ ಸೈಬರ್ ಪೊಲೀಸ್ ಮಾತಾಡುತ್ತಿರೋದು ಏನ್ರಿ ಫೇಸ್ ಬುಕ್ ನಲ್ಲಿ ಕಂಡ, ಕಂಡ, ಹೆಂಗಸರು, ಹುಡುಗಿಯರಿಗೆ ಅಶ್ಲೀಲ ಮೆಸೇಜ್, ಕಾಮೆಂಟ್ ಮಾಡುತ್ತಿದ್ದೀರಂತೆ? ನಮಗೆ ಕಂಪ್ಲೆಂಟ್ ಬಂದಿದೆ ಎಲ್ಲಿದ್ದೀರಾ? ಈಗಲೇ ಬನ್ನಿ ಇಲ್ಲಾಂದ್ರೆ ಮನೆಹತ್ತಿರ ಬಂದು ಎತ್ತಾಕಿಕೊಂಡು ಬಂದು ಜೈಲಿಗೆ ತಳ್ಳುತ್ತೇವೆ ಎಂದು ಗದರಿದ್ದಾನೆ. ಆ ಮಾತಿಗೆ ಪರಶಿವಮೂರ್ತಿ ನಡುಗಿ ಹೋಗಿದ್ದಾರೆ. ಮೆಸೇಜ್ ಮಾಡಿದ್ದು ನಿಜವಾಗಿದ್ದರಿಂದ ಅತ್ತ ಕಡೆಯಿಂದ ಮಾತನಾಡುತ್ತಿರುವವರು ನಿಜವಾದ ಪೊಲೀಸರೇ ಎಂದು ಬಲವಾಗಿ ನಂಬಿದ್ದರು.

ಇದನ್ನೂ ಓದಿ : ಭಾರತಕ್ಕೆ ಬಾಂಗ್ಲಾ-ನೇಪಾಳಿ ಹುಡ್ಗೀರ್ ಬರೋದ್ಯಾಕೆ?… ಅವರನ್ನು ಕರೆ ತರುವ ಜಾಲ ಯಾವುದು? 

ಹೀಗಾಗಿ ಫೋನ್ ಮಾಡಿದವರನ್ನು ಬೇಡಿಕೊಂಡು ತಪ್ಪಾಯ್ತು ಸರ್ ಯಾವತ್ತೂ ಹಾಗೆ ಮಾಡಲ್ಲ ಎಂದೆಲ್ಲ ಗೋಗರೆದಿದ್ದಾರೆ. ಈ ವೇಳೆ  ಸರಿ ದುಡ್ಡುಕೊಟ್ಟು ಸರಿ ಮಾಡಿಕೊಳ್ಳಿ ಎಂದಿದ್ದಾರೆ. ಆ ನಂತರ ಆಗಾಗ್ಗೆ ಫೋನ್ ಮಾಡಿ ಬೆದರಿಸುತ್ತಾ ಸುಮಾರು ಏಳು ಲಕ್ಷ ಹಣವನ್ನು ಪೀಕಿದ್ದಾರೆ. ಮಾನಮರ್ಯಾದೆಗೆ ಅಂಜಿದ ಪರಶಿವಮೂರ್ತಿ ಸಾಲ ಮಾಡಿ ಹಣತಂದು ಕೊಟ್ಟಿದ್ದಾರೆ. ಆದರೆ ಖತರ್ ನಾಕ್ ಗಳಿಗೆ ಇದು ಹಾಲುಕೊಡುವ ಹಸು ಎನ್ನುವುದು ಗೊತ್ತಾಗಿದೆ. ಬೆದರಿಸಿದರೆ ಇನ್ನೊಂದಷ್ಟು ಹಣ ಕಿತ್ತುಕೊಳ್ಳಬಹುದು ಎಂಬ ಆಲೋಚನೆ ಬಂದಿದೆ. ಹೀಗಾಗಿ ಮತ್ತೆ, ಮತ್ತೆ ಫೋನ್ ಮಾಡಿ ಬೆದರಿಸುವುದು, ಹಣಕ್ಕೆ ಬೇಡಿಕೆ ಇಡುವುದು ಮಾಡಿದ್ದಾರೆ.

ಅಷ್ಟರಲ್ಲಿಯೇ ಸಾಲ ಮಾಡಿಕೊಂಡು ಸುಸ್ತಾಗಿದ್ದ ಪರಶಿವಮೂರ್ತಿ ಹಣಕೊಡುವ ಪರಿಸ್ಥಿತಿಯಲ್ಲಿರಲಿಲ್ಲ. ಜತೆಗೆ ಅವರಿಗೆ ಅಷ್ಟರಲ್ಲಾಗಲೇ ಹಣ ಕೀಳುತ್ತಿರುವವರು ಪೊಲೀಸರಲ್ಲ ಎಂಬುದು ಗೊತ್ತಾಗಿತ್ತು. ಹೀಗಾಗಿ ಬೇರೆ ದಾರಿ ಕಾಣದೆ ಕುಶಾಲನಗರ ಟೌನ್ ಪೊಲೀಸ್ ಠಾಣೆಗೆ ಹೋಗಿ 11-01-2025ರಂದು ದೂರು ನೀಡಿದ್ದರು. ಈ ಸಂಬಂಧ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಕಲಂ 318(2), 319(1), 308(2)ರ ಬಿಎನ್‌ಎಸ್‌ ಆಕ್ಟ್‌ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ.ರಾಮರಾಜನ್ ಅವರ ಆದೇಶದ ಮೇರೆಗೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸೋಮವಾರಪೇಟೆ ಉಪವಿಭಾಗ ಡಿಎಸ್ಪಿ ಚಂದ್ರಶೇಖರ್, ಕುಶಾಲನಗರ ವೃತ್ತ ನಿರೀಕ್ಷಕರಾದ ಬಿ.ಜಿ.ಪ್ರಕಾಶ್, ಸಬ್ ಇನ್ಸ್ ಪೆಕ್ಟರ್ ಗೀತಾ ಹಾಗೂ ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಈ ತಂಡ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸ ತೊಡಗಿತ್ತು. ಈ ವೇಳೆ ನಕಲಿ ಪೊಲೀಸ್ ವೇಷದಲ್ಲಿ ಹಣ ವಸೂಲಿ ಮಾಡಿದ ತಂಡದ ಮಾಹಿತಿ ಪತ್ತೆಯಾಗಿತ್ತು.

ಇದನ್ನೂ ಓದಿ : ಮಗಳು ಮನೆ ಬಿಟ್ಟಳು.. ಹೆತ್ತವರು ಹೆಣವಾದರು.. ಯಾರಿಗೂ ಇಂತಹ ಪರಿಸ್ಥಿತಿ ಬಾರದಿರಲಿ…

ಅದರಂತೆ  ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹಾಲೇರಿ ಗ್ರಾಮದ ಇಬ್ರಾಹಿಂ ಬಾದ್ ಷಾ. (25), ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಬಳಿಯ ಬಳಿಘಟ್ಟದ ರಾಘವೇಂದ್ರ(19), ಇಬ್ರಾಹಿಂ ಬಾದ್ ಷಾನ ಹೆಂಡತಿ ಬೆಂಗಳೂರು ಬನಶಂಕರಿಯ ಸಂಗೀತಾ(30),  ಕುಶಾಲನಗರ, ಆದರ್ಶ ದ್ರಾವಿಡ ಕಾಲೋನಿಯ  ಚರಣ್ ಸಿ.ಕೆ, (19) ಮತ್ತೊಬ್ಬ ಅಪ್ರಾಪ್ತ ಬಾಲಕ ಸೇರಿದಂತೆ ಐದು ಮಂದಿಯನ್ನು ಎತ್ತಾಕಿಕೊಂಡು ಪೊಲೀಸ್ ಭಾಷೆಯಲ್ಲಿ ರುಬ್ಬಿದ್ದಾರೆ. ಈ ವೇಳೆ ಆರೋಪಿಗಳು ತಾವು ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.  ಆರೋಪಿಗಳಿಂದ ನಾಲ್ಕು ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನಾದರೂ ಹೆಣ್ಣಾಗಲೀ, ಗಂಡಾಗಲೀ ಅಪರಿಚಿತರೊಂದಿಗೆ ಚಾಟ್ ಮಾಡುವ ಮುನ್ನ ಎಚ್ಚರವಾಗಿರಿ.. ಇಲ್ಲದೇ ಹೋದರೆ ಪರಶಿವಮೂರ್ತಿಗೆ ಆಗಿರುವ ಪರಿಸ್ಥಿತಿ ನಿಮಗೂ ಆಗಬಹುದು… ಹುಷಾರ್…!

ಇದನ್ನೂ ಓದಿ :  ಜನ ಸ್ಪಾಗಳನ್ನು ಅನುಮಾನದಿಂದ ನೋಡುತ್ತಿರುವುದೇಕೆ? ಹೆಣ್ಮಕ್ಕಳೇ ಹುಷಾರ್!

 

 

ಬಿ.ಎಂ.ಲವಕುಮಾರ್

admin
the authoradmin

Leave a Reply