ಬೇಸಿಗೆಯಲ್ಲಿ ಚಿಂಚಾಪಾನಕ ಕುಡಿಯಿರಿ…. ಏನಿದು ಚಿಂಚಾಪಾನಕ? ಇದರ ತಯಾರಿ ಹೇಗೆ?
ಇದು ಆಯುಷ್ ಇಲಾಖೆ ಶಿಫಾರಸ್ಸು ಮಾಡಿದ ಪಾನಕ

ಬೇಸಿಗೆ ಶುರುವಾಗಿದೆ.. ಹೀಗಾಗಿ ಬಿಸಿಲ ಝಳದಿಂದ ಪಾರಾಗುವ ಮತ್ತು ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿಟ್ಟುಕೊಳ್ಳುವತ್ತ ಗಮನಹರಿಸಲೇ ಬೇಕಾಗುತ್ತದೆ. ಬೇಸಿಗೆಯಲ್ಲಿ ಕಂಡು ಬರುವ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಸೇವಿಸುವ ಆಹಾರ ಕುಡಿಯುವ ಪಾನೀಯಗಳು ಕಾರಣವಾಗಬಹುದು.. ಆದ್ದರಿಂದ ಬೇಸಿಗೆಯಲ್ಲಿ ಹೆಚ್ಚೆಚ್ಚು ದಾಹ ಕಾಣಿಸುವುದರಿಂದ ಯಾವ ಪಾನೀಯ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ಪ್ರಶ್ನೆಗೆ ಆಯುಷ್ ಇಲಾಖೆ ಶಿಫಾರಸ್ಸು ಮಾಡಿರುವ ಚಿಂಚಾಪಾನಕ ಸೇವಿಸಿ ಎನ್ನುವುದೇ ಉಪಯುಕ್ತ ಸಲಹೆಯಾಗಿದೆ.

ಹಾಗಾದರೆ ಏನಿದು ಚಿಂಚಾಪಾನಕ ಎನ್ನುವು ಪ್ರಶ್ನೆ ಮೂಡದಿರದು.. ಹೆಚ್ಚಿನವರಿಗೆ ಇದರ ಬಗ್ಗೆ ಗೊತ್ತಿರುತ್ತದೆ. ಈಗಾಗಲೇ ಇದರ ಬಳಕೆಯನ್ನು ಹಲವರು ಮಾಡುತ್ತಿದ್ದಾರೆ. ಬಹುಶಃ ಇದೇ ಮೊದಲ ಬಾರಿಗೆ ಇದರ ಬಗ್ಗೆ ಓದುತ್ತಿದ್ದರೆ ತಮ್ಮ ಮನೆಯಲ್ಲಿ ಪಾನಕ ತಯಾರು ಮಾಡಿ ಸೇವಿಸಬಹುದಾಗಿದೆ. ಏಕೆಂದರೆ ಬೇಸಿಗೆಯ ಸಮಯದಲ್ಲಿ ದೇಹದ ಉಷ್ಣಾಂಶ ತಗ್ಗಿಸುವ ಈ ಪಾನಕ ಸರ್ವ ಕಾಲದಲ್ಲಿಯೂ ಉಪಯೋಗಕ್ಕೆ ಬರುತ್ತದೆ. ಇದನ್ನು ತಯಾರು ಮಾಡಿರುವುದು ಆಯುಷ್ ಇಲಾಖೆ. ಈ ಪಾನಕವನ್ನು ಮನೆಯಲ್ಲಿಯೇ ಸುಲಭವಾಗಿ ತಯಾರು ಮಾಡಲು ಸಾಧ್ಯವಿರುವುದರಿಂದ ಎಲ್ಲರೂ ತಯಾರು ಮಾಡಿ ಸೇವಿಸಲು ಅಡ್ಡಿಯಿಲ್ಲ.

ಬೇಸಿಗೆಯಲ್ಲಿ ಬಾಯಾರಿಕೆ ಕಾಣಿಸಿದಾಗ ಮಾರುಕಟ್ಟೆಯಲ್ಲಿ ಸಿಗುವ ತಣ್ಣಗಿನ ಯಾವುದಾದರೊಂದು ಪಾನಕವನ್ನು ಸೇವಿಸಿದರೆ ದಾಹ ಕಡಿಮೆಯಾಗುತ್ತದೆ ಎನ್ನುವುದು ಭ್ರಮೆ.. ಆ ಕ್ಷಣಕ್ಕೆ ಹಾಯೆನಿಸಬಹುದು ಆದರೆ ಅದೇ ಪಾನೀಯ ನಮ್ಮ ಆರೋಗ್ಯಕ್ಕೆ ಹಿತವಾಗುತ್ತದೆಯಾ? ಖಂಡಿತಾ ಇಲ್ಲ. ಹೀಗಾಗಿಯೇ ಚಿಂಚಾ ಪಾನಕ ತಯಾರಿಸಿಟ್ಟುಕೊಂಡು ಕುಡಿದರೆ ಇದರಿಂದ ದಾಹ ನೀಗುವುದಲ್ಲದೆ ಆರೋಗ್ಯಕ್ಕೂ ಉಪಯುಕ್ತವಾಗುತ್ತದೆ. ಈ ಪಾನಕದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವ ಶಕ್ತಿಯಿರುವ ಕಾರಣದಿಂದಾಗಿ ಮಲಬದ್ಧತೆ ಇರುವವರು ಇದನ್ನು ಸೇವಿಸುವುದರಿಂದ ಬಹುಶಃ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗಲಿದೆ.

ಇಷ್ಟಕ್ಕೂ ಈ ಚಿಂಚಾಪಾನಕ ತಯಾರಿಸಲು ಹೆಚ್ಚೇನು ಕಷ್ಟವಿಲ್ಲ. ಜತೆಗೆ ಮನೆಯಲ್ಲಿರುವ ಪದಾರ್ಥಗಳಿಂದಲೇ ಇದನ್ನು ತಯಾರಿಸಬಹುದಾಗಿದೆ. ಇದನ್ನು ಹೇಗೆ ತಯಾರಿಸಬೇಕು ಎಂಬುದನ್ನು ಆಯುಷ್ ಇಲಾಖೆ ಹೇಳಿದ್ದು ಅದರಂತೆ ತಯಾರಿಸಬೇಕಾಗುತ್ತದೆ. ಹುಣಸೆಹಣ್ಣು, ಬೆಲ್ಲದ ಪುಡಿ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಸೈಂದವ ಲವಣವಿದ್ದರೆ ಸಾಕು ಚಿಂಚಾ ಪಾನಕ ತಯಾರು ಮಾಡಬಹುದಾಗಿದೆ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ, ಮಲಬದ್ಧತೆ ನಿವಾರಿಸಿ, ಶರೀರದ ದಾಹ ಹಾಗೂ ಬಾಯಾರಿಕೆಯನ್ನು ನೀಗಿಸುತ್ತದೆ.

ಚಿಂಚಾಪಾನಕ ತಯಾರು ಮಾಡಲು ಏನೆಲ್ಲ ಪದಾರ್ಥಗಳು ಬೇಕು? ಮತ್ತು ಹೇಗೆ ತಯಾರಿಸಬಹುದು ಎಂಬುದರ ವಿವರ ಇಲ್ಲಿದೆ… ಮೊದಲಿಗೆ ಹುಣಸೆ ಹಣ್ಣನ್ನು ಅಗತ್ಯ ಪ್ರಮಾಣದ ನೀರಿನಲ್ಲಿ ರಾತ್ರಿಯಿಡೀ ನೆನೆಸಿಟ್ಟು ಮರುದಿನ ಬೆಳಿಗ್ಗೆ ಅದನ್ನು ಶುದ್ಧವಾದ ಕೈಗಳಿಂದ ಚೆನ್ನಾಗಿ ಹಿಸುಕಿ ಸೋಸಿಕೊಳ್ಳಬೇಕು (ಗಾಡವಾದ ಹುಣಸೆ ಮಿಶ್ರಣ ಬಾಟಲಿಗಳಲ್ಲಿ ತುಂಬಿಸಿಕೊಂಡು ಪಾನಕ ತಯಾರಿಸುವಾಗ ಬೇಕಾದಷ್ಟನ್ನು ಬಳಸಿಕೊಳ್ಳಬಹುದು). ಅಗತ್ಯ ಪ್ರಮಾಣದಷ್ಟು ನೀರನ್ನು ಪಾತ್ರೆಗೆ ಹಾಕಿಕೊಳ್ಳಿ. ಅಷ್ಟೇ ಪ್ರಮಾಣದಷ್ಟು ಹುಣಸೆ ಹಣ್ಣಿನ ಮಿಶ್ರಣವನ್ನು ಆ ನೀರಿನ ಪಾತ್ರೆಗೆ ಹಾಕಬೇಕು. ಇದಾದ ನಂತರ ಬೆಲ್ಲದ ಪುಡಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕರಗಿಸಿ ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಸೈಂದವ ಲವಣವನ್ನು ಸೇರಿಸಿದರೆ ಚಿಂಚಾಪಾನಕ ರೆಡಿಯಾಗುತ್ತದೆ.

ಮೊದಲ ಬಾರಿಗೆ ಮಾಡುವಾಗ ಯಾವುದು ಎಷ್ಟು ಪ್ರಮಾಣದಲ್ಲಿ ಇರಬೇಕು ಎಂಬ ಅಂದಾಜು ಸಿಗದೆ ತೊಂದರೆಯಾಗಬಹುದು ಹೀಗಾಗಿ ಚಿಂಚಾ ಪಾನಕವನ್ನು ತಯಾರಿಸುವಾಗ ಹುಣಸೆಹಣ್ಣು – 100 ಗ್ರಾಂ, ಬೆಲ್ಲದ ಪುಡಿ – 400 ಮಿಲಿಗ್ರಾಂ, ಜೀರಿಗೆ ಪುಡಿ – 10 ಗ್ರಾಂ, ಕಾಳು ಮೆಣಸಿನಪುಡಿ – 5 ಗ್ರಾಂ, ಸೈಂದವ ಲವಣ – 5 ಗ್ರಾಂ ಹಾಕಿ ತಯಾರು ಮಾಡಿಕೊಳ್ಳಬೇಕು. ಇದನ್ನು 50 ರಿಂದ 100 ಮಿಲಿಯಷ್ಟು ಸೇವನೆ ಮಾಡುವುದು ಒಳ್ಳೆಯದು. ಚಿಂಚಾಪಾನಕ ತಯಾರು ಮಾಡಿಟ್ಟುಕೊಂಡು ಸೇವಿಸಿದರೆ ಆರೋಗ್ಯ ವೃದ್ಧಿಗೆ ಇದು ಸಹಕಾರಿ ಆಗಲಿದೆ.

ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಹೆಚ್ಚಿಸುವ ಆಹಾರಗಳನ್ನು ಸೇವಿಸಿದಾಗ ಕೆಲವೊಮ್ಮೆ ಮಲಬದ್ಧತೆ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಹೊರಗಿನ ಬಿಸಿಲು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರಿದರೂ ಅಚ್ಚರಿಯಿಲ್ಲ. ಕೆಲವು ಆಹಾರ ಪದಾರ್ಥಗಳು ನಾಲಿಗೆಗೆ ರುಚಿಯಾಗಿದ್ದರೂ ದೇಹಕ್ಕೆ ಒಗ್ಗುವುದಿಲ್ಲ ಹೀಗಾಗಿ ಅವುಗಳನ್ನು ಸೇವಿಸಿದ ಬಳಿಕ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಕೆಲವೊಂದು ಆಹಾರ ಪದಾರ್ಥಗಳನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಸೇವಿಸಿ ಬಿಡುತ್ತೇವೆ ಆ ನಂತರ ಪರದಾಡುತ್ತೇವೆ.

ಮಾಂಸಹಾರವಿರಲಿ, ಸಸ್ಯಹಾರವೇ ಆಗಿರಲಿ ನಾವು ಸೇವಿಸುವ ತರಕಾರಿ ಸೇರಿದಂತೆ ಆಹಾರ ಪದಾರ್ಥಗಳು ತನ್ನದೇ ಆದ ಗುಣಗಳನ್ನು ಹೊಂದಿರುತ್ತವೆ. ಕೆಲವರಿಗೆ ಕೆಲವೊಂದು ಆಹಾರ ಪದಾರ್ಥಗಳು ಶರೀರಕ್ಕೆ ಹೊಂದದೆ ಇರಬಹುದು. ಆದರೆ ಅನಿವಾರ್ಯವಾಗಿ ಸೇವಿಸಿ ಬಿಟ್ಟಿರುತ್ತೇವೆ. ಬಳಿಕ ದೇಹದಲ್ಲಿ ಉಷ್ಣತೆ ಹೆಚ್ಚಿ ಮಲಬದ್ಧತೆ ಸಮಸ್ಯೆಗೂ ದಾರಿ ಮಾಡಿಕೊಟ್ಟು ಬಿಡುತ್ತೇವೆ. ಇಂತಹ ಸಂದರ್ಭಗಳಲ್ಲಿ ದೇಹವನ್ನು ತಂಪಾಗಿಟ್ಟು, ಮಲಬದ್ಧತೆಯ ಸಮಸ್ಯೆಯಿಂದ ದೂರ ಮಾಡಲು ಚಿಂಚಾಪಾನಕ ಸಹಕಾರಿಯಾಗಲಿದೆ…
B.M.Lavakumar








ಅಮೋಘ ಆಪ್ಯಾಯಮಾನ ಆರೋಗ್ಯ ವರ್ಧಕ, ಧನ್ಯವಾದ ನಮಸ್ಕಾರ
ಕುಮಾರಕವಿ ಬೋ.ನಾ.ನಟರಾಜ, ಮೈಸೂರು/ಬೆಂಗಳೂರು
ಬಹಳ ಅನುಕೂಲಕರವಾದ ಮತ್ತು ಆರೋಗ್ಯಕರವಾದ ಪಾನೀಯ, ನಿಮಗೆ ಧನ್ಯವಾದ ಸರ್. ಕುಮಾರಕವಿ ಅವರಿಂದ ನಮಗೆಲ್ಲ ಶೇರ್ ಮಾಡುವ ಮೂಲಕ ಪರಿಚಯವಾದ ನಿಮ್ಮ e-newsletter ಜನಮನ ಕನ್ನಡ ಪತ್ರಿಕೆಯ ಅನೇಕ ಓದುಗರ ಬಳಗದಲ್ಲಿ ನಾನೂ ಓರ್ವ ಅಭಿಮಾನಿ ಓದುಗ. ನಿಮ್ಮ ಪತ್ರಿಕೆಯ ಪ್ರತಿಯೊಂದು ಲೇಖನ/ಮಾಹಿತಿ/ಸುದ್ದಿ ಇತ್ಯಾದಿ ಎಲ್ಲವೂ ಅರ್ಥಪೂರ್ಣ ಹಾಗೂ ಉಪಯುಕ್ತ, ಧನ್ಯವಾದ
ಅಮೋಘ ಆಪ್ಯಾಯಮಾನ ಆರೋಗ್ಯ ವರ್ಧಕ, ಧನ್ಯವಾದ ನಮಸ್ಕಾರ
ಕುಮಾರಕವಿ ಬೋ.ನಾ.ನಟರಾಜ, ಬೆಂಗಳೂರು