ಮೈಸೂರು: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದಿಂದ ದೇಶ ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಂಡ ಪರಿಣಾಮ ನಾವು ಇಂದು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ ಎಂದು ಶಾಲಾ ಶಿಕ್ಷಣ ವಿಶ್ರಾಂತ ಸಂಯೋಜಕ ಎಂ.ಎನ್.ಸುರೇಶ್ ತಿಳಿಸಿದರು.
ಅವರು ನಜರ್ ಬಾದ್ ನಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಸನಿವಾಸ ಶಾಲೆಯಲ್ಲಿ ಹಿರಣ್ಮಯಿ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಸಮಾರಂಭದಲ್ಲಿ ಮಾತನಾಡಿ, ತೀವ್ರಗಾಮಿ ನಾಯಕರಾದ ಸುಭಾಷ್ ಚಂದ್ರ ಬೋಸ್ ಅವರು ಶಸ್ತ್ರ ಸಜ್ಜಿತ ಹೋರಾಟದಿಂದ ಮಾತ್ರ ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂದು ಬಲವಾಗಿ ನಂಬಿದ್ದರು. ಅದಕ್ಕಾಗಿ ಅವರು ಜಪಾನ್, ಜರ್ಮನಿ, ರಷ್ಯಾದ ಅನೇಕ ಕ್ರಾಂತಿಕಾರಿ ನಾಯಕರನ್ನು ಭೇಟಿ ಮಾಡಿ ಸಹಾಯ ಬೇಡಿದ್ದರು. ಹೋರಾಟದಿಂದಲೇ ಸ್ವಾತಂತ್ರ್ಯ ಪಡೆಯಲು ಅಜಾದ್ ಹಿಂದ್ ಫೌಜ್ ಸೇನೆಯನ್ನು ಕಟ್ಟಿದ್ದರು. ಅಂತಹ ಅಪ್ರತಿಮ ಹೋರಾಟಗಾರನ್ನು ನಾವು ಸದಾ ಸ್ಮರಿಸಬೇಕಿದೆ ಎಂದರು.

ಪತ್ರಕರ್ತ ದೊಡ್ಡನಹುಂಡಿ ರಾಜಣ್ಣ ಸಮಾರಂಭ ಉದ್ಘಾಟಿಸಿ, ಸುಭಾಷ್ ಚಂದ್ರ ಬೋಷರ ಹೋರಾಟ, ಸಾಧನೆ, ಸಿದ್ಧಿಗಳನ್ನು ವಿವರಿಸಿದರು. ಕಲಾವಿದೆ ಹಾಗೂ ಲೇಖಕಿ ಡಾ.ಜಮುನಾರಾಣಿ ಮಿರ್ಲೆ, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಮುಖ್ಯಶಿಕ್ಷಕಿ ನಾಗರತ್ನ ಮಾತನಾಡಿದರು. ವಿಜ್ಞಾನ ಶಿಕ್ಷಕಿ ಜಗದಾಂಬಾ ಪ್ರಸನ್ನ, ಹಾಗೂ ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.








