ArticlesLatest

ಎಲ್ಲಿ ಹೋಯಿತು ಸುಣ್ಣ ಬೇಯಿಸುವ ಉದ್ಯಮ?…. ತಲೆಮಾರುಗಳಿಂದ ಸುಣ್ಣ ಬೇಯಿಸುತ್ತಾ ಬಂದವರ ಬದುಕು ಅತಂತ್ರ!

ತಲೆಮಾರುಗಳಿಂದ ಮಾಡಿಕೊಂಡು ಬಂದಿದ್ದ ಕೆಲವು ಸಣ್ಣಪುಟ್ಟ ಉದ್ಯಮಗಳು ಇವತ್ತು ಕಣ್ಮರೆಯಾಗಿವೆ. ಇನ್ನು ಕೆಲವು ಅವಸಾನದತ್ತ ಮುಖ ಮಾಡಿವೆ… ಇಂತಹ ಉದ್ಯಮಗಳಲ್ಲಿ ಸುಣ್ಣ ತಯಾರಿಸುವ  ಉದ್ಯಮವೂ ಒಂದಾಗಿದ್ದು, ಇದನ್ನು ನಂಬಿದ್ದವರು ಇದರಿಂದ ಜೀವನ ನಡೆಯಲ್ಲ ಎಂಬುದು ಗೊತ್ತಾಗುತ್ತಿದ್ದಂತೆಯೇ ಅದಕ್ಕೆ ತಿಲಾಂಜಲಿ ಹೇಳಿದ್ದಾರೆ. ಈಗ ಸುಣ್ಣದ ಒಲೆಗಳಲ್ಲಿ ಬೆಂಕಿ ಆರಿದೆ.. ಹೀಗಾಗಿ ವೃತ್ತಾಕಾರದ ಮೂರ್ನಾಲ್ಕು ಅಡಿ ಎತ್ತರದ ಅಚ್ಚರಿ ಹುಟ್ಟಿಸುವಂತಿದ್ದ ಒಲೆಗಳು(ಭಟ್ಟಿ) ಇತಿಹಾಸ ಸೇರಿವೆ…

ಮೊದಲೆಲ್ಲ ಅಲ್ಲಲ್ಲಿ ಸುಣ್ಣ ತಯಾರು ಮಾಡುವ ಒಲೆಗಳು ಮತ್ತು ಸುಣ್ಣವನ್ನು ತಂದು ಮಾರಾಟ ಮಾಡುವವರು ಕಾಣಸಿಗುತ್ತಿದ್ದರು. ಆದರೀಗ ಅಂತಹ ದೃಶ್ಯಗಳು ಮಾಯವಾಗಿದೆ. ಇದಕ್ಕೆ. ಔದ್ಯೋಗಿಕ ವಲಯಗಳಲ್ಲಿನ ತಾಂತ್ರಿಕ ಅಭಿವೃದ್ಧಿ ಮತ್ತು ಕಾರ್ಖಾನೆ ಸುಣ್ಣವನ್ನು ಅವಲಂಭಿಸಿರುವುದು ಹೀಗೆ ಹತ್ತಾರು  ಕಾರಣಗಳು ಸಿಗುತ್ತವೆ. ಇದೆಲ್ಲದರ ನಡುವೆ ಸುಣ್ಣ ಬೇಯಿಸುವ ಒಲೆಗಳು ಅಚ್ಚರಿ ಹುಟ್ಟಿಸಿದರೆ, ಅದರ ತಯಾರಿಕೆಗೆ ಪಡಬೇಕಾದ ಪರಿಪಾಟಲನ್ನು ನೋಡಿದರೆ ನಿಜಕ್ಕೂ ಸುಣ್ಣದ ಸಹವಾಸವೇ ಬೇಡವೆಂದು ದೂರ ಸರಿಯುವುದು ಖಚಿತ.. ಹೀಗಿದ್ದರೂ ಹಿಂದಿನವರು ಅದನ್ನು ಮುಂದುವರೆಸಿಕೊಂಡು ಬಂದಿದ್ದರು, ಆದರೆ ಅವರು ಹೋದ ನಂತರ ಈಗಿನವರು ಅದರತ್ತ ಮುಖ ಮಾಡುವ ಗೋಜಿಗೆ ಹೋಗಲಿಲ್ಲ… ಬದುಕಿಗೆ ಬೇರೆ ದಾರಿಗಳನ್ನು ಕಂಡುಕೊಂಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಹುಣಸೂರು ಪಟ್ಟಣದ ಹೊರ ವಲಯದಲ್ಲಿ ಪಿರಿಯಾಪಟ್ಟಣದ ಕಡೆಗೆ ತೆರಳುವ ರಾಜ್ಯ ಹೆದ್ದಾರಿ ಬದಿಯಲ್ಲಿ ವೃತ್ತಾಕಾರದ ಎತ್ತರದ ಒಲೆಗಳು. ಅದರಿಂದ ಹೊರಗೆ ಬರುತ್ತಿದ್ದ ಹೊಗೆ.. ಅದರಾಚೆಗೆ ಕಲ್ಲನ್ನು ಕುಟ್ಟಿ ಪುಡಿ ಮಾಡುತ್ತಾ ಕುಳಿತಿರುತ್ತಿದ್ದ ವೃದ್ದರು, ಮಹಿಳೆಯರು ಕಾಣಿಸುತ್ತಿದ್ದರು. ಬಸ್ ಸೇರಿದಂತೆ ವಾಹನಗಳಲ್ಲಿ ಸಾಗುವವರು ಅತ್ತ ಕಡೆ ಅಚ್ಚರಿಯ ನೋಟ ಬೀರುತ್ತಿದ್ದರು.  ಆದರೀಗ ಆ ಸ್ಥಳದಲ್ಲಿ ಮೌನ ಆವರಿಸಿದೆ.. ಸುಣ್ಣದ ಒಲೆಗಳು ಮಣ್ಣುಪಾಲಾಗಿವೆ. ಅಲ್ಲಿಗೆ ಹಲವು ತಲೆಮಾರಿನ ಕಠಿಣ ಶ್ರಮದ ಉದ್ಯಮ ಇತಿಹಾಸ ಸೇರಿದೆ.

ಇವತ್ತು ಸುಣ್ಣ ತಯಾರಿಸುವ ದೊಡ್ಡ, ದೊಡ್ಡ ಕಾರ್ಖಾನೆಗಳು ಹುಟ್ಟಿಕೊಂಡಿವೆ. ಹೀಗಿರುವಾಗ ಸುಣ್ಣ ಬೇಯಿಸುವವರ ಬಳಿಗೆ ಬಂದು ಸುಣ್ಣ ಖರೀದಿಸುವವರು ಯಾರಿದ್ದಾರೆ. ಎಲ್ಲವೂ ಸುಂದರ ಪ್ಯಾಕ್ ಗಳಲ್ಲಿ ನಮ್ಮನ್ನು ತಲುಪುವಾಗ ಸುಣ್ಣ ಬೇಯಿಸುವವರು ಪೈಪೋಟಿ ನಡೆಸಲು ಸಾಧ್ಯವೇ? ಇಷ್ಟಕ್ಕೂ ಅವರ ಬಳಿಗೆ ಬರುವ ಗ್ರಾಹಕರು ಯಾರಿದ್ದಾರೆ? ಈ ಹಿಂದೆ ಸುಣ್ಣ ತಯಾರಿಕೆಯಲ್ಲಿ ತೊಡಗಿರುತ್ತಿದ್ದ ವೃದ್ಧರನ್ನು ಮಾತನಾಡಿಸಿದಾಗಲೆಲ್ಲ ಅವರು ಹೇಳುತ್ತಿದ್ದ ಮಾತು ಒಂದೇ.. ನಮಗೆ ಬೇರೆ ಕೆಲಸ ಗೊತ್ತಿಲ್ಲ. ನಮ್ಮ ಹಿರಿಯರು ಮಾಡುತ್ತಿದ್ದರು. ಅದನ್ನು ನಾವು ಕಲಿತಿದ್ದೇವೆ. ಇದನ್ನು ಬಿಟ್ಟು ಈ ಇಳಿ ವಯಸ್ಸಲ್ಲಿ ಬೇರೇನು ಮಾಡಲು ಸಾಧ್ಯ? ಹೊಟ್ಟೆಪಾಡಿಗಾಗಿ ಏನಾದರು ಮಾಡಬೇಕಲ್ಲವೆ? ಹೀಗಾಗಿ ಕಷ್ಟವಾದರೂ ನಷ್ಟವಾದರೂ ಮಾಡಿಕೊಂಡು ಹೋಗುತ್ತಿದ್ದೇವೆ ಎನ್ನುತ್ತಿದ್ದರು.

ಹಿಂದಿನ ಕಾಲದಲ್ಲಿ ಎಲೆ ಅಡಿಕೆಗೆ ಮತ್ತು ಮನೆಗಳಿಗೆ ಬಣ್ಣ ಬಳಿಯಲು ಇದೇ ಸುಣ್ಣವನ್ನು ಬಳಸುತ್ತಿದ್ದರು. ಆಗ ಜೀವನಕ್ಕೆ ಕಷ್ಟವಾಗಿರಲಿಲ್ಲ. ಈಗ ಫ್ಯಾಕ್ಟರಿಗಳು ಬಂದಿವೆ. ಎಲ್ಲದಕ್ಕೂ ಕಂಪನಿ ಸುಣ್ಣವನ್ನೇ ಬಳಸುತ್ತಾರೆ. ಕೆಲವರಷ್ಟೆ ನಮ್ಮಿಂದ ಕೊಂಡು ಕೊಳ್ಳುತ್ತಾರೆ ಎಂಬ ಅಸಹಾಯಕ ಮಾತನಾಡಿದ್ದರು. ಇವತ್ತು  ಆ ಹಿರಿಯ ಜೀವಗಳಿಲ್ಲ.. ಸುಣ್ಣದ ಒಲೆಗಳೂ ಇಲ್ಲವಾಗಿವೆ.. ಆದರೂ ಅವರು ಅವತ್ತು ಸುಣ್ಣ ತಯಾರಿಕೆ ಬಗ್ಗೆ ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗ ಇಷ್ಟೊಂದು ಕಷ್ಟಪಡಬೇಕಾ? ಎಂಬ ಪ್ರಶ್ನೆ ಮೂಡುತ್ತಿತ್ತು.

ಇನ್ನು ಸುಣ್ಣ ತಯಾರಿ ಸುಲಭದ ಕೆಲಸವಾಗಿರಲಿಲ್ಲ.. ಎಲ್ಲೆಂದರಲ್ಲಿ ಸುಣ್ಣದ ಕಲ್ಲುಗಳು ಸಿಗುತ್ತಿರಲಿಲ್ಲ. ಅವುಗಳನ್ನು ಹುಡುಕಿ ಟ್ರ್ಯಾಕ್ಟರ್ ಗಳಲ್ಲಿ ತುಂಬಿ ತರಬೇಕಿತ್ತು. ಆ ನಂತರ ಕುಟ್ಟಿ ಅದನ್ನು ಬೇಯಿಸ ಬೇಕಿತ್ತು. ಇದಕ್ಕೆ ಸೌದೆ ಇದ್ದಿಲು ಬೇಕಾಗುತ್ತಿತ್ತು. ಒಂದು ಟ್ರ್ಯಾಕ್ಟರ್ ಕಲ್ಲಿನಲ್ಲಿ 100 ರಿಂದ 110 ಮೂಟೆ ಸುಣ್ಣ ಬರುತ್ತಿತ್ತು. ಇದರಲ್ಲಿ ಕಚ್ಚಾ ಸುಣ್ಣ  ಕಳೆದು ಶುದ್ದವಾದ ಹರಳು ಸುಣ್ಣ 70 ರಿಂದ 80 ಮೂಟೆ ಸಿಗುತ್ತಿತ್ತು. ಆದರೆ ಇದನ್ನು ಬೇಯಿಸಲು ಸೌದೆಗೆ ಹಣ  ಕೊಡಬೇಕಾಗುತ್ತಿತ್ತು. ಯಾರಾದರು ಇವರ ಬಳಿಯಿಂದ ಸುಣ್ಣ ಖರೀದಿಸಿದರೆ ಮಾತ್ರ ಬದುಕು ಮುನ್ನಡೆಯುತ್ತಿತ್ತು… ಎಲೆ ಅಡಿಕೆಗೆ ತೋಟಕ್ಕೆ ಸುಣ್ಣ ಖರೀದಿಸುವವರು ಬಂದರೆ ಮಾತ್ರ ಇವರ ಬದುಕು ನಡೆಯುತ್ತಿತ್ತು. ಇಲ್ಲಾಂದ್ರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿಯಾಗುತ್ತಿತ್ತು.

ಇವತ್ತಿನ ಕಾಲದಲ್ಲಿ ಇಂತಹದೊಂದು ಸಂಕಷ್ಟದ ಕೆಲಸವನ್ನು ಮಾಡಿ ಬದುಕು ಕಟ್ಟಿಕೊಳ್ಳಲು ಸಾಧ್ಯನಾ? ಖಂಡಿತಾ ಇಲ್ಲ… ಹೀಗಾಗಿಯೇ ಸುಣ್ಣ ಬೇಯಿಸುವ ಆ ಪುಟ್ಟ ಉದ್ಯಮ ನಮ್ಮಿಂದ ದೂರವಾಗಿದೆ. ಕೆಲವೇ ಕೆಲವು ಕಡೆ ಇರಬಹುದಷ್ಟೆ… ಹಾಗೊಂದು ವೇಳೆ ಇದ್ದರೆ ಅವರ ನೆರವಿಗೆ ಸರ್ಕಾರ ಮುಂದಾಗಿ ಪ್ರೋತ್ಸಾಹಿಸಿದರೆ ಉತ್ತಮ.. ಹಾಗೆ ಮಾಡಿದರೆ ಅವರ ಬದುಕು ಕೂಡ ಸುಧಾರಿಸಬಹುದೇನೋ?

B M Lavakumar

 

admin
the authoradmin

Leave a Reply

Translate to any language you want