LatestMysore

ಹುಷಾರ್…! ದುಶ್ಚಟಗಳು ಗೆಳೆಯರಂತೆ ಬಂದು ಶತ್ರುಗಳಾಗಿ ಆರೋಗ್ಯ, ಭವಿಷ್ಯ. ಜೀವವನ್ನೇ ಬಲಿ ಪಡೆಯುತ್ತವೆ..

ಶುಚಿಯಾದ ನುಡಿ, ಶಿಸ್ತುಬದ್ಧ ಜೀವನಶೈಲಿ, ಸದ್ವಿಚಾರ ಮತ್ತು ಆರೋಗ್ಯಕರ ಅಭ್ಯಾಸಗಳೇ ನಿಜವಾದ ಸ್ವಾಸ್ಥ್ಯ ಸಂಕಲ್ಪ

ಮೈಸೂರು: ಧೂಮಪಾನ ಹಾಗೂ ಮದ್ಯಪಾನ ಮೊದಲಿಗೆ ಗೆಳೆಯರಂತೆ ಆಕರ್ಷಣೆ ತೋರಿಸಿ, ಕ್ರಮೇಣ ಶತ್ರುಗಳಾಗಿ ಮನುಷ್ಯನ ಆರೋಗ್ಯ, ಭವಿಷ್ಯ ಹಾಗೂ ಜೀವವನ್ನೇ ಬಲಿ ತೆಗೆದುಕೊಳ್ಳುತ್ತವೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ನಗರದ ಬೋಗಾದಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ವಿವಿಧ ಜೀವನಾನುಭವದ ದೃಷ್ಟಾಂತಗಳು ಹಾಗೂ ಶರಣರ ವಚನಗಳನ್ನು ಉದಾಹರಿಸಿ, ದುಶ್ಚಟಗಳ ಮಾರಕ ಪರಿಣಾಮಗಳನ್ನು ಹೃದಯತಟ್ಟುವಂತೆ ವಿವರಿಸಿದರು. ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯವನ್ನು ಕೇವಲ ದೇಹಾರೋಗ್ಯಕ್ಕೆ ಸೀಮಿತಗೊಳಿಸದೆ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಮತೋಲನವೆಂದು ವ್ಯಾಖ್ಯಾನಿಸಿದೆ. ಆದರೆ ಶತಮಾನಗಳ ಹಿಂದೆಯೇ ಜಗನ್ಮಾತೆ ಅಕ್ಕಮಹಾದೇವಿ ಅವರು ಈ ಆಧುನಿಕ ಧ್ಯೇಯವಾಕ್ಯವನ್ನೂ ಮೀರಿಸುವಂತೆ “ನಡೆಶುಚಿ ನುಡಿಶುಚಿ, ತನುಶುಚಿ, ಮನಶುಚಿ ಮತ್ತು ಭಾವಶುಚಿ” ಎಂಬ ಅಮೂಲ್ಯ ವಚನವನ್ನು ನೀಡಿ ಸಮಗ್ರ ಆರೋಗ್ಯದ ಪರಿಕಲ್ಪನೆಯನ್ನು ಸಾರಿದ್ದಾರೆ.

ಅಕ್ಕಮಹಾದೇವಿಯ ಈ ವಚನವು ದೇಹದ ಶುಚಿತ್ವಕ್ಕಿಂತಲೂ ಮಿಗಿಲಾಗಿ ನುಡಿ, ಮನಸ್ಸು ಮತ್ತು ಭಾವನೆಗಳ ಶುದ್ಧತೆಯತ್ತ ದಾರಿ ತೋರಿಸುತ್ತದೆ ಎಂದು ವಿವರಿಸಿದರು. ದುಶ್ಚಟಗಳು ತನುಶುಚಿಯನ್ನಷ್ಟೇ ಅಲ್ಲ, ಮನಶುಚಿ ಮತ್ತು ಭಾವಶುಚಿಯನ್ನೂ ಕಳೆದುಕೊಳ್ಳುವಂತೆ ಮಾಡುತ್ತವೆ ಎಂದು ಎಚ್ಚರಿಸಿದರು. ಶರಣರ ವಚನಗಳು ಕೇವಲ ಧಾರ್ಮಿಕ ಪಠ್ಯಗಳಲ್ಲ; ಅವು ಜೀವನ ವಿಜ್ಞಾನ, ಆರೋಗ್ಯ ಶಾಸ್ತ್ರ ಮತ್ತು ನೈತಿಕ ಬದುಕಿನ ಮಾರ್ಗಸೂಚಿಗಳಾಗಿವೆ. ಯೌವನದ ಹಂತದಲ್ಲಿ ವಿದ್ಯಾರ್ಥಿಗಳು ತೆಗೆದುಕೊಳ್ಳುವ ನಿರ್ಣಯಗಳು ಅವರ ಸಂಪೂರ್ಣ ಜೀವನದ ದಿಕ್ಕನ್ನು ನಿರ್ಧರಿಸುತ್ತವೆ. ಶುಚಿಯಾದ ನುಡಿ, ಶಿಸ್ತುಬದ್ಧ ಜೀವನಶೈಲಿ, ಸದ್ವಿಚಾರ ಮತ್ತು ಆರೋಗ್ಯಕರ ಅಭ್ಯಾಸಗಳೇ ನಿಜವಾದ ಸ್ವಾಸ್ಥ್ಯ ಸಂಕಲ್ಪ ಎಂದು ಅಭಿಪ್ರಾಯಪಟ್ಟರು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಶಶಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಟುವಟಿಕೆಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲೆ ಶಿಕ್ಷಕರುಗಳಾದ ಚಂದ್ರಶೇಖರರಾಧ್ಯ, ದೀಪಿಕಾ, ವಿಜಯಲಕ್ಷ್ಮಿ, ಜಾನವಿ, ಭಾರತಿ, ದಿನೇಶ್ ಕುಮಾರ್, ನಿರ್ಮಲ ಉಪಸ್ಥಿತರಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want