ಬ್ಯಾಂಕಿಂಗ್ ವ್ಯವಹಾರದಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವುದು ಅಗತ್ಯ:ಕೆನರಾ ಬ್ಯಾಂಕ್ ನ ಹೇಮಚಂದ್ರ ಸಲಹೆ

ತಿ.ನರಸೀಪುರ : ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬ್ಯಾಂಕ್ ನಲ್ಲಿ ಖಾತೆಗಳನ್ನು ತೆರೆಯುವ ಮೂಲಕ ಹಣಕಾಸು ವಹಿವಾಟು ನಡೆಸಿ, ಆರ್ಥಿಕ ಮತ್ತು ಡಿಜಿಟಲ್ ವ್ಯವಹಾರದ ಬಗ್ಗೆ ತಿಳಿದುಕೊಳ್ಳಬೇಕು. ಬ್ಯಾಂಕಿಂಗ್ ವ್ಯವಹಾರದಲ್ಲಿ ಗೌಪ್ಯತೆ ಕಾಪಾಡಿಕೊಂಡು ವಹಿವಾಟು ನಡೆಸುವ ಮೂಲಕ ಅನ್ ಲೈನ್ ವಂಚನೆಗೆ ಕಡಿವಾಣ ಹಾಕಬೇಕು ಎಂದು ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಎಂ.ಎ.ಹೇಮಚಂದ್ರ ಸಲಹೆ ನೀಡಿದರು.
ಪಟ್ಟಣದ ತಲಕಾಡು ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆನರಾ ಬ್ಯಾಂಕ್ ಹಾಗೂ ನಬಾರ್ಡ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಆರ್ಥಿಕ ಮತ್ತು ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೀರೋ ಮೋಟಾರ್ಸ್ ವ್ಯವಸ್ಥಾಪಕ ಎಂ.ಪಿ.ದೀಪಕ್ ಮಾತನಾಡಿ ಅಕ್ಷರದ ಅರಿವಿರುವ ವಿದ್ಯಾವಂತರು ಆರ್ಥಿಕ ಮತ್ತು ಡಿಜಿಟಲ್ ವ್ಯವಹಾರದಲ್ಲಿ ಅನಕ್ಷರಸ್ಥರು ಆಗಿರುವುದರಿಂದ ಸುಲಭವಾಗಿ ಅನ್ ಲೈನ್ ವಂಚನೆಗೆ ಸಿಲುಕಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರಲ್ಲದೆ, ಆರ್ಥಿಕತೆ ಮತ್ತು ಡಿಜಿಟಲ್ ಬಗ್ಗೆ ಅರಿವಿಲ್ಲದ್ದರಿಂದ ವಿದ್ಯಾವಂತರು, ಬುದ್ಧಿವಂತರು ಎನಿಸಿಕೊಂಡಿರುವ ಪದವಿ, ಸ್ನಾತಕೋತ್ತರ ಪದವಿ ಪಡೆದಿರುವ ವೈದ್ಯರು , ಇಂಜಿನಿಯರ್ಸ್ ಹಾಗೂ ಚಲನಚಿತ್ರ ತಾರೆಯರೇ ಇತ್ತೀಚೆಗಿನ ದಿನಗಳಲ್ಲಿ ಅಂತರ್ಜಾಲ ವಂಚಕರಿಂದ ಮೋಸ ಹೋಗುತ್ತಿದ್ದಾರೆ ಎಂದರು.

ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರ ಎಸ್.ವಿ.ರಮೇಶ್ ರಾವ್ ಮಾತನಾಡಿ, ಜನರ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು ಬ್ಯಾಂಕ್ ಖಾತೆ, ಮೊಬೈಲ್ ಕರೆ ಮಾಡಿ ಓಟಿಪಿ ಇನ್ನಿತರ ವಿವಿರಗಳನ್ನು ಕೇಳುವ ಮೂಲಕ ಮೋಸ ಮಾಡುವ ಭಾಂಚಕರಿಗೆ ಯಾವುದೇ ಮಾಹಿತಿಯನ್ನು ನೀಡಬಾರದು. ಈ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಹಂತದಲ್ಲಿ ಆರ್ಥಿಕ ಮತ್ತು ಡಿಜಿಟಲ್ ಸಾಕ್ಷರತೆಯ ಕಾರ್ಯಕಾರಗಳನ್ನು ನಬಾರ್ಡ್ ನ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಕೆನರಾ ಬ್ಯಾಂಕ್ ಗ್ರಾಮೀಣ ಕ್ಷೇತ್ರೀಯ ಕಚೇರಿಯ ಆರ್ಥಿಕ ಸೇರ್ಪಡೆಯ ವ್ಯವಸ್ಥಾಪಕ ಬಿ.ಎನ್.ಲೋಹಿತ್ ಹಾಗೂ ಕಾಲೇಜಿನ ಪ್ರಾಂಶುಪಾಲ ಡಿ.ಸಿ.ಲಿಂಗರಾಜು ಮಾತನಾಡಿದರು. ಇದೇ ವೇಳೆ ಎಂ.ಪಿ.ದೀಪಕ್ ಹಾಗೂ ಗ್ರಾಮೀಣ ಫೌಂಡೇಶನ್ ಆಫ್ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಮರಿಸ್ವಾಮಿ(ಕುಮಾರ್) ಅವರನ್ನು ಸನ್ಮಾನಿಸಲಾಯಿತು. ಆರ್ಥಿಕ ಸಾಕ್ಷರತೆ ಕುರಿತ ರಸಪ್ರಶ್ನೆಗಳ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಉಪನ್ಯಾಸಕರಾದ ಎನ್.ಜವರಯ್ಯ, ಸುಮಿತ್ರಾ, ಕಾವ್ಯ, ಮೀನಾಕ್ಷಿ, ಸಿದ್ಧಪ್ಪ ಹಾಗೂ ಇತರರು ಇದ್ದರು.







