ಕೊಡವರ ಕುಲದೇವಿ ಕಾವೇರಿ ವರ್ಷಕ್ಕೊಮ್ಮೆ ತುಲಾಸಂಕ್ರಮಣದಂದು ಕೊಡಗಿನ ತಲಕಾವೇರಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡುವುದು ತಲತಲಾಂತರದಿಂದ ನಡೆದು ಬಂದಿದೆ. ಇದೊಂದು ರೋಮಾಂಚನಕಾರಿ ಅನುಭವವೂ ಹೌದು. ಈ ಕ್ಷಣಕ್ಕಾಗಿ ಕೊಡಗು ಮಾತ್ರವಲ್ಲದೆ, ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದಲೂ ಭಕ್ತರು ಕಾಯುತ್ತಿರುತ್ತಾರೆ. ಈ ಬಾರಿ ಅಕ್ಟೋಬರ್ 17ರ ಶುಕ್ರವಾರ ಮಧ್ಯಾಹ್ನ 1.44ರ ಮಕರ ಲಗ್ನದಲ್ಲಿ ತೀಥೋದ್ಭವ ನಡೆಯಲಿದೆ.
ಇದನ್ನೂ ಓದಿ: ಕಾವೇರಿಗೆ ಶಾಂತಳಾಗುವಂತೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಪೂಜೆ….
ಕೊಡಗಿನ ತಲಕಾವೇರಿಯಲ್ಲಿ ಉಗಮವಾಗಿ ಭಾಗಮಂಡಲ, ಬಲಮುರಿ, ಗುಹ್ಯ, ಕಣಿವೆ ಮೂಲಕ ಕೊಡಗಿನಿಂದ ಹೊರಹರಿದು ಬಳಿಕ ಕರ್ನಾಟಕದಲ್ಲಿ ಸುಮಾರು 381ಕಿ.ಮೀ. ಹರಿದು ಆ ನಂತರ ತಮಿಳುನಾಡು, ಪಾಂಡಿಚೇರಿ ಮೂಲಕ ಒಟ್ಟು 802 ಕಿ.ಮೀ. ಕ್ರಮಿಸಿ ಕಾವೇರಿ ಪಟ್ಟಣಂನಲ್ಲಿ ಬಂಗಾಳಕೊಲ್ಲಿಯನ್ನು ಸೇರುವುದರೊಳಗೆ ಹಲವು ಪವಿತ್ರ ಸಂಗಮ ಕ್ಷೇತ್ರ, ಪುಣ್ಯಕ್ಷೇತ್ರ, ದೈವಿಕ ತಾಣಗಳನ್ನು ಸೃಷ್ಟಿ ಮಾಡಿ ಲಕ್ಷಾಂತರ ಎಕರೆ ಜಮೀನಿಗೆ ನೀರುಣಿಸಿ, ಅನ್ನದಾತರಿಗೆ ಬದುಕುಕೊಟ್ಟು, ಕೋಟ್ಯಂತರ ಜನರ ದಾಹ ತಣಿಸುತ್ತಾ ಬಂದಿದ್ದಾಳೆ ಕಾವೇರಿ..
ಇನ್ನು ತಲಕಾವೇರಿಯಲ್ಲಿ ಕಾವೇರಿ ಉಗಮವಾದರೂ ಅದರ ಹರಿವು ಅಲ್ಲೆಲ್ಲೂ ಕಾಣಿಸುವುದೇ ಇಲ್ಲ. ಕಾರಣ ಆಕೆ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ. ಹೀಗಾಗಿ ತಲಕಾವೇರಿಯಿಂದ ಒಂದಷ್ಟು ದೂರದಲ್ಲಿ ಕಾವೇರಿ ತನ್ನ ಇರುವನ್ನು ತೋರ್ಪಡಿಸಿ ಬಳಿಕ ಭಾಗಮಂಡಲ ತಲುಪುತ್ತಿದ್ದಂತೆಯೇ ಕನ್ನಿಕೆ, ಸುಜ್ಯೋತಿ ನದಿಗಳ ಜತೆ ಸಂಗಮವಾಗಿ ಬಳಿಕ ವಿಶಾಲವಾಗಿ ಹರಿಯುತ್ತಾಳೆ. ವರ್ಷಕ್ಕೊಮ್ಮೆ ಸೂರ‍್ಯನು ತುಲಾ ರಾಶಿಗೆ ಪ್ರವೇಶಿಸುವ ತುಲಾಸಂಕ್ರಮಣದ ದಿನದಂದು ಕಾವೇರಿ ಮಾತೆ ತಲಕಾವೇರಿಯ ಪವಿತ್ರ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡುವುದು ಹಿಂದಿನಿಂದಲೂ ನಡೆದು ಬಂದಿದೆ. ಈ ಬಾರಿ ಅಕ್ಟೋಬರ್ 17ರ ಶುಕ್ರವಾರ ಮಧ್ಯಾಹ್ನ 1.44ರ ಮಕರ ಲಗ್ನದಲ್ಲಿ ತೀಥೋದ್ಭವ ನಡೆಯಲಿದೆ.
ಇದನ್ನೂ ಓದಿ:ಚಾಮುಂಡಿಬೆಟ್ಟದಲ್ಲೀಗ ಹಿಮಮಳೆ… ನೀವೇಕೆ ಒಮ್ಮೆ ಹಿಮದ ಮಳೆಯಲ್ಲಿ ಮಿಂದೇಳಬಾರದು?
ತೀರ್ಥೋದ್ಭವವು ಪವಿತ್ರ ಮತ್ತು ಅದ್ಭುತ ಕ್ಷಣವಾಗಿದ್ದು, ಇದನ್ನು ಜನ ಸಾಕ್ಷಾತ್ ತಾಯಿ ಕಾವೇರಿಯ ದರ್ಶನ ಎಂದೇ ಭಕ್ತರು ನಂಬಿದ್ದಾರೆ. ಹೀಗಾಗಿಯೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ನೆರೆಯುತ್ತಾರೆ. ಜತೆಗೆ ಆ ದಿನ ಕಾವೇರಿ ಕೊಳದಲ್ಲಿ ಸ್ನಾನ ಮಾಡಿ ತೀರ್ಥವನ್ನು ಪ್ರೋಕ್ಷಣೆ ಮಾಡಿಸಿಕೊಂಡರೆ ಜೀವನ ಪಾವನವೆಂದೂ, ಅದರಲ್ಲೂ ದಂಪತಿಗಳು ತೀರ್ಥಸ್ನಾನ ಮಾಡಿದರೆ ದಾಂಪತ್ಯ ಸುಖಮಯವಾಗಿರುತ್ತದೆ ಎಂಬ ನಂಬಿಕೆ ಭಕ್ತರದ್ದಾಗಿದೆ.
ಕಾವೇರಿ ನದಿಯ ಹುಟ್ಟು ಮತ್ತು ಹಿನ್ನಲೆ ತಿಳಿಯುತ್ತಾ ಹೋದರೆ ಪೌರಾಣಿಕ ಕಥೆಗಳು ಹುಟ್ಟಿಕೊಳ್ಳುತ್ತವೆ. ಕವೇರ ಮುನಿಯ ಮಗಳಾಗಿ, ಅಗಸ್ತ್ಯ ಮಹರ್ಷಿಗಳ ಮಡದಿಯಾಗಿದ್ದ ಕಾವೇರಿ ನದಿಯಾಗಿ ಹರಿದಿದ್ದು ಹೇಗೆ? ಎಂಬುದರ ಹಿಂದೆ ಪೌರಾಣಿಕ ಕಥೆಯಿರುವುದನ್ನು ಕಾಣಬಹುದಾಗಿದೆ. ಅದರಲ್ಲೂ ಕಾವೇರಿಯ ಮೂಲ ಹೆಸರು ಲೋಪಾಮುದ್ರೆ ಅದು ಕಾವೇರಿಯಾಗಿದ್ದು ಹೇಗೆ ಮತ್ತು ನದಿಯಾಗಿ ಹರಿದಿದ್ದೇಕೆ? ಇದೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಪೌರಾಣಿಕ ಕಥೆಯನ್ನು ಮೆಲುಕು ಹಾಕಬೇಕಾಗುತ್ತದೆ.
ಇದನ್ನೂ ಓದಿ: ದಕ್ಕಿಣ ಕೊಡಗಿನ ಹಾತೂರಿನ ವನಭದ್ರಕಾಳೇಶ್ವರಿ ಇಲ್ಲಿನ ವಿಶೇಷತೆಗಳೇನು?
ಪೌರಾಣಿಕ ಕಥೆಯ ಪ್ರಕಾರ ತಲಕಾವೇರಿ ಸಮೀಪದ ಬ್ರಹ್ಮಗಿರಿ ಬೆಟ್ಟದಲ್ಲಿ ಕವೇರನೆಂಬ ಮುನಿ ವಾಸವಾಗಿದ್ದನಂತೆ. ಆತನಿಗೆ ತನಗೊಬ್ಬಳು ಪುತ್ರಿ ಬೇಕೆಂಬ ಬಯಕೆಯಾಗಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡತೊಡಗಿದನಂತೆ. ಈತನ ತಪಸ್ಸಿಗೆ ಮೆಚ್ಚಿದ ಬ್ರಹ್ಮ ತನ್ನ ಮಾನಸ ಪುತ್ರಿ ಲೋಪಾಮುದ್ರೆಯನ್ನು ದತ್ತು ಮಗಳಾಗಿ ನೀಡಿದನು. ಅದರಂತೆ ಲೋಪಾಮುದ್ರೆ ಕವೇರ ಮುನಿಯ ಆಶ್ರಮದಲ್ಲಿ ಬೆಳೆಯತೊಡಗಿದಳು.
ಮುಂದೆ ಕವೇರ ಮುನಿಯ ಆಶ್ರಮದಲ್ಲಿ ಬೆಳೆದಿದ್ದರಿಂದ ಲೋಪಾಮುದ್ರೆಯು ಕಾವೇರಿಯಾದಳು. ಹೀಗೆ ದಿನಗಳು ಕಳೆಯುತ್ತಿರಲು ಒಂದು ದಿನ ಅಗಸ್ತ್ಯ ಮುನಿಗಳು ಕವೇರ ಮುನಿಯ ಆಶ್ರಮಕ್ಕೆ ಬರುತ್ತಾರೆ. ಅಲ್ಲಿ ಕಾವೇರಿಯನ್ನು ಕಂಡು ಮನಸೋತು ಆಕೆಯನ್ನು ವಿವಾಹವಾಗುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಕವೇರ ಮುನಿಗಳು ಒಪ್ಪಿ ತನ್ನ ಮಾನಸ ಪುತ್ರಿ ಕಾವೇರಿಯನ್ನು ವಿವಾಹ ಮಾಡಿಕೊಡಲು ಮುಂದಾಗುತ್ತಾರೆ.
ಇದನ್ನೂ ಓದಿ: ಚಾಮುಂಡೇಶ್ವರಿಯ ಸಹೋದರಿ ಪುರದಕಟ್ಟೆ ಚಿಕ್ಕದೇವಮ್ಮ…
ಇಲ್ಲಿ ವಿವಾಹವಾಗುವ ಬಯಕೆಯಿಲ್ಲದ ಕಾವೇರಿ ನನಗೆ ಜನಕಲ್ಯಾಣ ಮಾಡುವ ಅಭಿಲಾಷೆಯಿದ್ದು, ನೀವು ಸದಾ ನನ್ನೊಂದಿಗೆ ಇರಬೇಕು. ನನ್ನನ್ನು ಬಿಟ್ಟು ನೀವು ಎಲ್ಲಿಗೂ ಹೋಗಬಾರದು ಹಾಗೊಂದು ವೇಳೆ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದದ್ದೇ ಆದರೆ ನಾನು ನದಿಯಾಗಿ ಹರಿಯುವುದಾಗಿ ಮಾತು ನೀಡುತ್ತಾಳೆ. ಕಾವೇರಿಯ ಷರತ್ತಿಗೆ ಒಪ್ಪಿದ ಅಗಸ್ತ್ಯ ಮುನಿಗಳು ಆಕೆಯನ್ನು ವಿವಾಹವಾಗಿ ತನ್ನ ಆಶ್ರಮಕ್ಕೆ ಕರೆದೊಯ್ಯುತ್ತಾರೆ. ಕಾವೇರಿಗೆ ಕೊಟ್ಟ ಮಾತಿನಂತೆ ಅಗಸ್ತ್ಯ ಮುನಿಗಳು ತಮ್ಮ ಆಶ್ರಮದಲ್ಲಿ ಕಾವೇರಿಯೊಂದಿಗೆ ಆನಂದದಿಂದ ದಿನ ಕಳೆಯುತ್ತಿರುತ್ತಾರೆ.
ಒಂದು ದಿನ ಅಗಸ್ತ್ಯ ಮುನಿಗಳು ತಾವಿದ್ದ ಆಶ್ರಮದಿಂದ ಬೆಟ್ಟದಾಚೆಗಿರುವ ಕನ್ನಿಕೆ ನದಿಯಲ್ಲಿ ಸ್ನಾನ ಮಾಡಲೆಂದು ಹೊರಡುತ್ತಾರೆ. ಕಾವೇರಿ ನಿದ್ದೆಯಲ್ಲಿರುವುದರಿಂದ ಅವಳು ಎಚ್ಚರವಾಗುವ ವೇಳೆಗೆ ಹಿಂತಿರುಗಿ ಬರಬಹುದೆಂದು ಕೊಳ್ಳುತ್ತಾರೆ. ಆದರೆ ಅಗಸ್ತ್ಯ ಮುನಿಗಳು ಅತ್ತ ಸ್ನಾನಕ್ಕೆ ತೆರಳುತ್ತಿದ್ದಂತೆಯೇ ಇತ್ತ ನಿದ್ದೆಯಲ್ಲಿದ್ದ ಕಾವೇರಿಗೆ ಎಚ್ಚರವಾಗುತ್ತದೆ. ಸನಿಹದಲ್ಲಿ ಅಗಸ್ತ್ಯಮುನಿಗಳು ಇಲ್ಲದನ್ನು ಕಂಡು ಆಕೆಗೆ ಪತಿಯ ಮೇಲೆ ಕೋಪಬರುತ್ತದೆ.
ಇದನ್ನೂ ಓದಿ:ಚಾಮರಾಜನಗರದ ಕರಿವರದರಾಜ ಸ್ವಾಮಿಬೆಟ್ಟಕ್ಕೆ ಬನ್ನಿ… ಇಲ್ಲಿ ಮನಶಾಂತಿ ಖಚಿತ!
ಷರತ್ತು ಮೀರಿದ ಪತಿಯಿಂದ ದೂರವಾಗಿ ನದಿಯಾಗಿ ಹರಿದು ಲೋಕಕಲ್ಯಾಣ ಮಾಡಲು ಇದು ಸೂಕ್ತ ಸಮಯವೆಂದುಕೊಂಡು ಅಲ್ಲೇ ಇದ್ದ ಕೊಳಕ್ಕೆ ಇಳಿದು ಅಗಸ್ತ್ಯ ಮುನಿಗಳಿಗೆ ತಿಳಿಯದಂತೆ ಅಲ್ಲಿಂದ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲವನ್ನು ಸೇರಿ ಅಲ್ಲಿ ಕನ್ನಿಕೆ, ಸುಜ್ಯೋತಿ ನದಿಗಳೊಂದಿಗೆ ಸಂಗಮವಾಗಿ ಮುಂದೆ ಹರಿದು ಹೋಗುತ್ತಾಳೆ.
ಅಗಸ್ತ್ಯ ಮುನಿಗಳು ಸ್ನಾನ ಮುಗಿಸಿಕೊಂಡು ಬಂದು ನೋಡಿದಾಗ ಕಾವೇರಿ ಕಾಣಿಸುವುದಿಲ್ಲ. ಅವರಿಗೆ ಕಾವೇರಿ ನದಿಯಾಗಿ ಹರಿದು ಹೋಗಿದ್ದಾಳೆ ಎಂಬುದು ಗೊತ್ತಾಗುತ್ತದೆ. ಹೀಗಾಗಿ ಕಾವೇರಿಯನ್ನು ಹಿಂಬಾಲಿಸಿಕೊಂಡು ಬರುತ್ತಾರೆ. ಜತೆಗೆ ಆಕೆಯನ್ನು ನಿಲ್ಲುವಂತೆ ಭಿನ್ನಯಿಸಿಕೊಳ್ಳುತ್ತಾರೆ. ಆದರೂ ಅದಕ್ಕೆ ಕರಗದ ಕಾವೇರಿ ಭಾಗಮಂಡಲದಿಂದ ಮುಂದೆ ನದಿಯಾಗಿ ಹರಿದು ಚೇರಂಬಾಣೆ, ಹರಿಶ್ಚಂದ್ರ, ಬಲಮುರಿ, ಬೇತ್ರ್ರಿಯ ಮೂಲಕ ರಭಸದಿಂದ ಹರಿಯುತ್ತಾಳೆ.
ಇದನ್ನೂ ಓದಿ: ನಿಸರ್ಗದ ಸೂಜಿಗ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟ…
ಈ ಸಂದರ್ಭ ಹಿಂದೆಯೇ ಬಂದ ಪತಿ ಅಗಸ್ತ್ಯ ಮಹರ್ಷಿ ಆಕೆಯನ್ನು ನಿಲ್ಲುವಂತೆ ಮನವೊಲಿಸುವ ಪ್ರಯತ್ನ ಮಾಡುವುದಲ್ಲದೆ, ಮರಳಿನ ಲಿಂಗ ಮಾಡಿ ಪೂಜಿಸುತ್ತಾನೆ. ಆದರೆ, ಇದ್ಯಾವುದಕ್ಕೂ ಮಣಿಯದ ಕಾವೇರಿ ಮುಂದಕ್ಕೆ ಹರಿಯ ತೊಡಗುತ್ತಾಳೆ. ಕೊಡಗಿನ ಸಿದ್ದಾಪುರ ಬಳಿಯ ಗುಹ್ಯಕ್ಕೆ ಬರುತ್ತಿದ್ದಂತೆಯೇ ಅಗಸ್ತ್ಯ ಮಹರ್ಷಿಯು ಕಡೆಯ ಪ್ರಯತ್ನ ಎಂಬಂತೆ ಸಪ್ತ ಮಹರ್ಷಿಗಳ ಮೊರೆ ಹೋಗುತ್ತಾನೆ. ಪ್ರತ್ಯಕ್ಷರಾದ ಮಹರ್ಷಿಗಳು ಕಾವೇರಿಯನ್ನು ನಿಲ್ಲುವಂತೆ ಕೇಳಿಕೊಳ್ಳುತ್ತಾರೆ. ಮಹರ್ಷಿಗಳ ಕೋರಿಕೆಗೆ ಮನ್ನಣೆ ನೀಡಿ ಕಾವೇರಿಯು ಗುಹ್ಯದಲ್ಲಿ ನಿಲ್ಲುತ್ತಾಳೆ. ಇಲ್ಲಿರುವ ಅಶ್ವತ್ಥ ಮರದ ಕೆಳಗೆ ಸಂಧಾನದ ಮಾತುಕತೆಯೂ ನಡೆಯುತ್ತದೆ. ಆದರೆ, ಕಾವೇರಿಯು ತಾನು ಲೋಕ ಕಲ್ಯಾಣಕ್ಕೆ ಹೊರಟಿದ್ದು, ತನ್ನನ್ನು ತಡೆಯಬಾರದಾಗಿ ವಿನಂತಿಸಿಕೊಳ್ಳುತ್ತಾಳೆ. ಅಲ್ಲದೆ, ಮುಂದಕ್ಕೆ ಹರಿಯುತ್ತಾಳೆ.
ಇತ್ತ ನೊಂದ ಅಗಸ್ತ್ಯ ಮಹರ್ಷಿಯು ಸಂಧಾನ ನಡೆದ ಊರಿನಲ್ಲಿ ಲಿಂಗವೊಂದನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾನೆ. ಇದೇ ಸಿದ್ದಾಪುರ ಬಳಿಯ ಗುಹ್ಯದ ಅಗಸ್ತ್ಯೇಶ್ವರವಾಗಿದೆ. ಸಂಧಾನ ನಡೆಸಿದ ಅಶ್ವತ್ಥ ಮರವು ಈಗಲೂ ದೇವಾಲಯದ ಬಳಿ ಇರುವ ಮರವೇ ಆಗಿದೆ ಎಂದು ಇಲ್ಲಿನವರು ನಂಬುತ್ತಾರೆ. ಒಟ್ಟಾರೆಯಾಗಿ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಉದ್ಭವಿಸಿರುವ ಕಾವೇರಿ ಒಂದು ತಿಂಗಳ ಕಾಲ ಬ್ರಹ್ಮಕುಂಡಿಕೆಯಲ್ಲಿ ನೆಲೆ ನಿಂತಿರುತ್ತಾಳೆ ಎಂಬ ನಂಬಿಕೆಯಿದೆ. ಹೀಗಾಗಿ ತೀರ್ಥೋದ್ಭವದ ದಿನ ತಲಕಾವೇರಿಗೆ ಆಗಮಿಸಲು ಸಾಧ್ಯವಾಗದ ಭಕ್ತರು ಇತರೆ ದಿನಗಳಲ್ಲಿ ಆಗಮಿಸಿ ತಾಯಿಯ ದರ್ಶನ ಮಾಡುತ್ತಾರೆ.
ಇದನ್ನೂ ಓದಿ: ಭಕ್ತರ ಇಷ್ಟಾರ್ಥ ನೆರವೇರಿಸುವ ಚಾಮುಂಡಿಬೆಟ್ಟದ ತಾಯಿಗೆ ನಮೋ ಎನ್ನಿ…
ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ಬ್ರಹ್ಮಕುಂಡಿಕೆಯ ಪಕ್ಕದಲ್ಲಿಯೇ ಸ್ನಾನಕೊಳವಿದೆ. ಇಲ್ಲಿ ಗಣಪತಿ, ಅಗಸ್ತ್ಯೇಶ್ವರ ದೇವಾಲಯ ಹಾಗೂ ಜ್ಯೋತಿ ಮಂಟಪವಿದೆ. ಅಗಸ್ತ್ಯೇಶ್ವರ ದೇವಾಲಯದ ಎಡಭಾಗದಲ್ಲಿರುವ ಬ್ರಹ್ಮಗಿರಿ ಬೆಟ್ಟವನ್ನೇರಿದರೆ ಅಲ್ಲಿ ಹಿಂದೆ ಸಪ್ತಮಹರ್ಷಿಗಳು ಯಜ್ಞ ಮಾಡಿದ್ದರು ಎಂದು ಹೇಳಲಾಗುವ ಯಜ್ಞ ಕುಂಡಗಳು ಕಂಡು ಬರುತ್ತವೆ. ಇಲ್ಲಿಂದ ನಿಂತು ನೋಡಿದರೆ ಕಂಡು ಬರುವ ನಿಸರ್ಗದ ಸುಂದರ ದೃಶ್ಯ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಕಾವೇರಿಯ ಉಗಮಸ್ಥಾನ ತಲಕಾವೇರಿಯು ಮಡಿಕೇರಿಯಿಂದ ನಲವತ್ತೆರಡು ಕಿ.ಮೀ. ದೂರದ ಬ್ರಹ್ಮಗಿರಿಯ ಬೆಟ್ಟಶ್ರೇಣಿಯಲ್ಲಿದ್ದು, ಸಮುದ್ರಮಟ್ಟದಿಂದ ಸುಮಾರು ಐದು ಸಾವಿರ ಅಡಿ ಎತ್ತರದಲ್ಲಿದೆ.
B.M.Lavakumar