LatestMysore

ತಂಬಾಕು ದರ ಕುಸಿತಕ್ಕೆ ಕಾರಣ ಕೇಳಿದವರಿಗೆ ವಿಷ ಕುಡಿಯುವಂತೆ ಹೇಳಿದ ಅಧಿಕಾರಿ.. ರೈತರ ಆಕ್ರೋಶ!

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ತಂಬಾಕು ರೈತರು ಪ್ರತಿ ವರ್ಷವೂ ಕಷ್ಟ ಪಟ್ಟು ಬೆಳೆದ ಬೆಳೆಗೆ ಸೂಕ್ತ ದರ ಸಿಗದೆ ಪರದಾಡುವುದು ತಪ್ಪುತ್ತಿಲ್ಲ. ಅಲ್ಲದೆ ತಂಬಾಕು ಬೆಳೆದ ರೈತರು ಹರಾಜು ಮಾರುಕಟ್ಟೆಗೆ ತೆರಳಿದರೆ ಅಧಿಕಾರಿಗಳು ಸ್ಪಂದಿಸದಿರುವುದು ಇನ್ನೊಂದು ರೀತಿಯ ಸಮಸ್ಯೆಯಾಗಿದೆ. ಇದೆಲ್ಲ ಕಿರಿಕಿರಿಗಳ ನಡುವೆ  ತಂಬಾಕು ದರ ಕುಸಿತವಾಗಿದ್ದರಿಂದ  ರೊಚ್ಚಿಗೆದ್ದ ರೈತರು ತಂಬಾಕು ಹರಾಜು ಮಾರುಕಟ್ಟೆಯ ಕಿಟಕಿ  ಗಾಜು ಪುಡಿ ಮಾಡಿದ್ದಲ್ಲದೆ, ಅಧಿಕಾರಿಯ ದರ್ಪದ ಮಾತಿಗೆ ಕಚೇರಿಗೆ ಬಾಗಿಲು ಮುರಿದು ಅಧಿಕಾರಿಯನ್ನು ಎಳೆದಾಡಿದ ಘಟನೆ ವರದಿಯಾಗಿದೆ.

ಈ ಘಟನೆ ನಡೆದಿರುವುದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಡಿ. ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯಲ್ಲಿ..  ಬುಧವಾರ ತಂಬಾಕು ಮಾರುಕಟ್ಟೆಗೆ ತಾವು ಬೆಳೆದು ಹದಗೊಳಿಸಿದ ತಂಬಾಕಿನೊಂದಿಗೆ ರೈತರು ಬಂದಿದ್ದರು. ಆದರೆ ಅವರಿಗೆ ದರ ಕುಸಿತದ ಸುದ್ದಿ ಬರಸಿಡಿಲಿನಂತೆ ಬಡಿದಿತ್ತು.

ಇದರಿಂದ ರೈತರು ಹರಾಜು ಮಾರುಕಟ್ಟೆಯನ್ನು ಬಹಿಷ್ಕರಿಸಿ ಹೊರ ನಡೆದರು. ನಂತರ ತಂಬಾಕು ದರ ಕುಸಿತದ ಬಗ್ಗೆ ರೈತರು ಅಧಿಕಾರಿಗಳನ್ನು ಕೇಳಿದಾಗ 6/4 ಮಾರುಕಟ್ಟೆಯ ಕ್ಷೇತ್ರ ಅಧಿಕಾರಿ  ಕಿರಣ್ ರೈತರಿಗೆ ವಿಷ ಕುಡಿಯಿರಿ ಎಂದು ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ಅಧಿಕಾರಿಯ ಕಚೇರಿ ಬಾಗಿಲು ಒಡೆದು ಒಳ ನುಗ್ಗಿ ಅಧಿಕಾರಿಯನ್ನು ಎಳೆದಾಡಿದ ಘಟನೆ ನಡೆದಿದೆ.

ಮಾರುಕಟ್ಟೆಯಲ್ಲಿ ಪ್ರಸ್ತುತ ಪ್ರಾರಂಭದ ದಿನದಲ್ಲಿ ಪ್ರತಿ ಕೆಜಿಗೆ 320 ರೂ ಇದ್ದ ಬೆಲೆ  ದಿಢೀರ್  260 ರಿಂದ 270 ರೂ.ಗೆ ಕುಸಿದು ರೈತನಿಗೆ ಪ್ರತಿ ಕೆಜಿಗೆ 50 ರೂ ನಷ್ಟವುಂಟಾಗಿದೆ. ಇದರಿಂದ ರೈತರು ಆಕ್ರೋಶಗೊಂಡಿದ್ದರು.

ಆ ನಂತರ ತಂಬಾಕು  ಅಧಿಕಾರಿಗಳು ಪೊಲೀಸ್ ಮಧ್ಯಸ್ಥಿಕೆಯಲ್ಲಿ ರೈತರನ್ನು ಹೀನಾಯವಾಗಿ ವಿಷ ಕುಡಿಯಿರಿ ಎಂದು ಹೇಳಿದ ಅಧಿಕಾರಿಯನ್ನು ಪೊಲೀಸರ ಸಮ್ಮುಖದಲ್ಲಿ ಕ್ಷಮೆಯಾಚಿಸಿದರು. ಈ ವೇಳೆ ಪಟ್ಟು ಬಿಡದ ರೈತರು ಇವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಆಗ್ರಹಿಸಿ ಕಚೇರಿ ಮುಂದೆ ಧರಣಿ ಕುಳಿತರು. ಶಾಮಿಯಾನ ಹಾಕಿಸಿ ರಸ್ತೆಯಲ್ಲಿ ಧರಣಿ ನಡೆಸಿದರು ಇದರಿಂದ ಕೆ.ಆರ್.ನಗರ ಹುಣಸೂರು ಮುಖ್ಯ ರಸ್ತೆಯಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು.

ಧರಣಿ ನಡೆಸುತ್ತಿರುವ ರೈತರು ಪ್ರಾರಂಭದಲ್ಲಿ ಇದ್ದ ಬೆಲೆ ನೀಡಬೇಕು, 20ಗ್ರಾಂ ತಂಬಾಕು ಬೀಜಕ್ಕೆ 500 ಪಡೆಯುವುದನ್ನು ರದ್ದು ಮಾಡಬೇಕು, ಗೊಬ್ಬರಕ್ಕೆ ಮುಂಗಡ ಹಣ 5ಸಾವಿರ ಬದಲು 7 ಸಾವಿರ ಹಿಡಿಯುತ್ತಿರುವುದನ್ನು ರದ್ದು ಮಾಡಬೇಕು,  ಉಚಿತ ಬಿತ್ತನೆ ಬೀಜ ನೀಡಬೇಕು ಎಂಬ ಆಗ್ರಹವನ್ನು ಮಾಡುತ್ತಿದ್ದಾರೆ.

admin
the authoradmin

Leave a Reply

Translate to any language you want