ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಹುಣಸೂರು ನಗರದ ಆರ್ ಎಂಸಿ ಸಭಾಂಗಣದಲ್ಲಿ ಜ.27ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ತಂಬಾಕು ರೈತರ ಸಮಾಲೋಚನಾ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ನೀಡಿರುವ ಹೇಳಿಕೆಯಲ್ಲಿ ಅವರು ಇತ್ತೀಚೆಗೆ ತಂಬಾಕು ಮೇಲೆ ಶೇಕಡ 18ರಷ್ಟು ಕೇಂದ್ರ ಅಬಕಾರಿ ಶುಂಕ ವಿಧಿಸಲಾಗಿದೆ. ಅನುತ್ಪಾದಕ ತಂಬಾಕಿನ ಮೇಲಿನ ಜಿಎಸ್ಟಿಯಿಂದ ಶೇಕಡ 28 ರಿಂದ 40 ರಷ್ಟು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಅನುತ್ಪಾದಕ ತಂಬಾಕಿನ ಮೇಲಿನ ಜಿಎಸ್ಟಿ ಏರಿಕೆಯನ್ನು ಒಪ್ಪಲಾಗದು. ವಾಣಿಜ್ಯ ಮತ್ತು ಉದ್ದಿಮೆಯ ಆರ್ಥಿಕತೆಯ ಮೇಲೆ ಇದರಿಂದ ಅನಿಶ್ಚಿತತೆ ಉಂಟಾಗುತ್ತದೆ ಹಾಗೂ ಇದರಿಂದಾಗಿ ನಿಖರವಾದ ಬೆಲೆಯನ್ನು ಅಂದಾಜು ಮಾಡಿ ಹರಾಜಿನಲ್ಲಿ ಭಾಗವಹಿಸಲು ತೊಂದರೆ ಆಗುತ್ತದೆ.

ಈ ನಿಟ್ಟಿನಲ್ಲಿ ಜನವರಿ 24 ರಿಂದ ಹರಾಜಿನಲ್ಲಿ ಭಾಗವಹಿಸಬಾರದು ಹಾಗೂ ಕಂಪನಿಗಳು ಮಾರುಕಟ್ಟೆ ಬಹಿಷ್ಕರಿಸಲು ನಿರ್ಧರಿಸಿರುವುದರಿಂದ ಹಾಗೂ ತಂಬಾಕು ಬೆಳೆಗಾರರು ಯಾವ ಕ್ರಮ ಕೈಗೊಳ್ಳುವುದೆಂದು ಹಾಗೂ ಮುಂದಿನ ದಿನಗಳಲ್ಲಿ ತಂಬಾಕು ರೈತರ ಹಿತರಕ್ಷಣೆ ರೂಪಿಸುವ ಸಲುವಾಗಿ ಈ ಸಮಾಲೋಚನಾ ಸಭೆಯನ್ನು ಹಮ್ಮಿ ಕೊಳ್ಳಲಾಗಿದ್ದು, ಈ ಸಭೆಗೆ ತಂಬಾಕು ಬೆಳೆಗಾರರ ಮುಖಂಡರು, ಕಾಫ್ ಅಧ್ಯಕ್ಷರು, ಸದಸ್ಯರುಗಳು, ಫ್ಲೋರ್ ಕಮಿಟಿ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ತಂಬಾಕು ಬೆಳೆಗಾರರು ಭಾಗವಹಿಸಬೇಕಾಗಿ ಮನವಿ ಮಾಡಿದ್ದಾರೆ.

ಈಗಾಗಲೇ ಬಿತ್ತನೆ ಬೀಜ ಜ .23 ರಿಂದ ತಂಬಾಕು ಮಂಡಳಿಯವರು ವಿತರಣೆ ಮಾಡುತ್ತಿದ್ದು ಮುಂದಿನ ವರ್ಷದಲ್ಲಿ ತಂಬಾಕು ಬೆಳೆ ಬೆಳೆಯಬೇಕೋ ಬೇಡವೋ ಎಂಬುದನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಆ ಕಾರಣಕ್ಕಾಗಿ ತಂಬಾಕು ಮಂಡಳಿಯವರು ಬಿತ್ತನೆ ಬೀಜ ವಿತರಣೆ ಮಾಡುವುದನ್ನು ಸ್ಥಗಿತಗೊಳಿಸಿ ಮುಂದಿನ ವರ್ಷದ ಸಾಧಕ ಬಾದಕಗಳ ಬಗ್ಗೆ ತಂಬಾಕು ಮಂಡಳಿ ಸ್ಪಷ್ಟವಾಗಿ ನಿರ್ಧಾರ ತೆಗೆದುಕೊಂಡು ಬಿತ್ತನೆ ಬೀಜವನ್ನು ವಿತರಣೆ ಮಾಡಬೇಕಾಗಿ ಮಂಡಳಿಯವರಲ್ಲಿ ಕೋರಲಾಗಿದೆ.








