ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮೀಗೌಡ): ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆ ಪುನರ್ ಆರಂಭವಾದರೂ ಕುಸಿದ ದರ ರೈತರಿಗೆ ನಿರಾಶೆ ತಂದು ಧರಣಿ ನಡೆಸಿದರೂ ಯಾವುದೇ ರೀತಿಯ ಪ್ರಯೋಜನವಿಲ್ಲದಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ತಂಬಾಕು ದರ ಕುಸಿತ ಹಿನ್ನೆಲೆಯಲ್ಲಿ ತಂಬಾಕು ಮಾರುಕಟ್ಟೆಯೊಳಗೆ ತಂಬಾಕು ಹಾಕಿ ಪ್ರತಿಭಟನೆ ಮಾಡಿದ ರೈತರಿಗೆ ಜನಪ್ರತಿನಿಧಿಗಳು, ಸಂಘ ಸಂಸ್ಥೆಯವರು ಧರಣಿಗೆ ಬೆಂಬಲ ಸೂಚಿಸಿದರಲ್ಲದೆ, ಭರವಸೆಯನ್ನು ನೀಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ರೈತರೇ ಸ್ವಯಂಕೃತವಾಗಿ ತಂಬಾಕು ಮಾರಾಟ ಮಾಡಲು ಮಾರುಕಟ್ಟೆ ತೆರೆಯುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ದುರಂತವೇನೆಂದರೆ? ಸೋಮವಾರ ನಡೆದ ತಂಬಾಕು ಹರಾಜಿನಲ್ಲಿ ಮತ್ತಷ್ಟು ಬೆಲೆ ಕುಸಿತ ಕಂಡಿದ್ದು ರೈತರು ಹೌಹಾರುವಂತೆ ಮಾಡಿದ್ದು ಇನ್ನಷ್ಟು ಸಂಕಷ್ಟಕ್ಕೆ ನೂಕಿದೆ.

ಸೋಮವಾರ ನಡೆದ ತಂಬಾಕು ಹರಾಜಿನಲ್ಲಿ ಸರಾಸರಿ ರೂ.222 ದೊರೆತಿದ್ದರೆ, ಅಧಿಕ ಬೆಲೆ 282 ರೂ ದೊರೆತಿದೆ. ಈ ವರ್ಷ ಪ್ರಾರಂಭದ ಮಾರುಕಟ್ಟೆಯಲ್ಲಿ 320 ಅಧಿಕ ಬೆಲೆ ಇದ್ದರೆ ಸರಾಸರಿ 300 ತಲುಪಿತ್ತು ಸೋಮವಾರ ಮೈಸೂರಿನಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ಟ್ರೇಡರ್ಸ್ ಗಳು ರೈತ ಸಂಘಟನೆ ಹಾಗೂ ತಂಬಾಕು ಬೆಳೆಗಾರರ ಸಭೆ ನಡೆದರೂ ಪ್ರಯೋಜನವಾಗಿಲ್ಲ.
ತಂಬಾಕು ಮಾರುಕಟ್ಟೆಗೆ ಸುಮಾರು ನಾಲ್ಕು ಬೇಲುಗಳನ್ನು ಮಾದಹಳ್ಳಿ ಗ್ರಾಮದ ಮಹಿಳೆಯೊಬ್ಬರು ಮಾರಾಟ ಮಾಡಲು ತಂದಿದ್ದರು ಆದರೆ ಯಾರೂ ಹರಾಜು ಕೂಗದೆ ಇದ್ದಾಗ ರೈತ ಮಹಿಳೆಯು ಕಣ್ಣೀರಿಟ್ಟ ಘಟನೆ ನಡೆದಿದೆ. ನಂತರ ರೈತ ಮಹಿಳೆಯನ್ನು ಸಮಾಧಾನಪಡಿಸಿದ ತಂಬಾಕು ಮಂಡಳಿಯ ಅಧಿಕಾರಿಗಳು ಮತ್ತೆ ಬೇಲುಗಳನ್ನು ಕೂಗಿಸಿ ತೆಗೆದುಕೊಂಡಾಗ ರೈತ ಮಹಿಳೆ ತುಸು ಸಮಾಧಾನಪಡುವಂತಾಯಿತು.

ಕಳೆದ ನಾಲ್ಕು ದಿನಗಳಿಂದ ತಂಬಾಕು ಬೆಲೆ ಕುಸಿತವಾಗಿದ್ದರಿಂದ ಧರಣಿ ಮಾಡಿದರೂ ಪ್ರಯೋಜನವಾಗಿಲ್ಲ ಧರಣಿಗೂ ಹಿಂದೆ ಇದ್ದ ಬೆಲೆಗಿಂತ ಸೋಮವಾರ ರೂ. 20 ಕಡಿಮೆಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿಧಿ ಇಲ್ಲದೆ ರೈತರು ತಂಬಾಕನ್ನು ಮಾರಾಟ ಮಾಡಿ ತಮ್ಮ ಊರಿನ ಕಡೆಗೆ ನಿರಾಸರಾಗಿ ತೆರಳುತ್ತಿದ್ದ ದೃಶ್ಯಗಳು ಮನಕಲಕುವಂತಿತ್ತು








