LatestMysore

ತಂಬಾಕು ಖರೀದಿ ಮಾಡುವಂತೆ 190 ದೇಶಗಳ ರಾಯಭಾರಿ ಕಚೇರಿಗಳಿಗೆ ಪತ್ರ: ಸಾರಾ ಮಹೇಶ್

ಮೈಸೂರು: ತಂಬಾಕು ಖರೀದಿಯಲ್ಲಿ ನಡೆಯುತ್ತಿದ್ದ ಲಾಭಿ ತಪ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ತಂಬಾಕು ಹರಾಜು ಪ್ರಕ್ರಿಯೆಯನ್ನು ಜಾಗತಿಕ ಮಟ್ಟಕ್ಕೆ ಮುಕ್ತಗೊಳಿಸಲು ಮುಂದಾಗಿದೆ ಎಂದು ತಿಳಿಸಿರುವ ಮಾಜಿ ಸಚಿವ ಸಾ.ರಾ.ಮಹೇಶ್ ಅವರು ಈ ಸಂಬಂಧ 190  ದೇಶಗಳ ರಾಯಭಾರಿ ಕಚೇರಿಗಳಿಗೆ ಪತ್ರ ಬರೆಯಲು ಕ್ರಮ ಕೈಗೊಳ್ಳಲಾಗಿರುವುದಾಗಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಒತ್ತಾಸೆಯಂತೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ತಂಬಾಕು ಖರೀದಿಯಲ್ಲಿ ಭಾಗವಹಿಸುವಂತೆ 190 ದೇಶಗಳ ರಾಯಭಾರಿ ಕಚೇರಿಗಳಿಗೆ ಪತ್ರ ಬರೆಯಲು ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂಬಾಕು ಬೆಳೆಗಾರರ ಸಮಸ್ಯೆ ಬಗೆಹರಿಸಲು ಬದ್ಧವಾಗಿದೆ ಎಂದು ಶನಿವಾರ ಭರವಸೆ ವ್ಯಕ್ತಪಡಿಸಿದರು.

ತಂಬಾಕು ಖರೀದಿ ಪ್ರಕ್ರಿಯೆಯಲ್ಲಿ ಐಟಿಸಿ ಕಂಪನಿಯವರ ಲಾಭಿ ಇದೆ. ಆದ್ದರಿಂದಲೇ ಬೇರೆಯವರು ಖರೀದಿಗೆ ಬರುವುದಿಲ್ಲ ಎಂಬ ಅನುಮಾನ ರೈತರಲ್ಲಿದೆ. ಈ ವಿಚಾರವನ್ನು ಕೇಂದ್ರ ಸಚಿವರ ಗಮನಕ್ಕೆ ತರಲಾಯಿತು. ಕೂಡಲೇ ಪಿಯೂಷ್ ಗೋಯಲ್ ಅವರು, ವಿದೇಶಗಳಿಗೆ ಪತ್ರ ಬರೆಯುವಂತೆ ಸೂಚನೆ ನೀಡಿದರು. ವಿದೇಶಿ ಕಂಪನಿಗಳೂ ಹರಾಜಿನಲ್ಲಿ ಭಾಗವಹಿಸಿದರೆ ಸಹಜವಾಗಿಯೇ ರೈತರಿಗೆ ಸ್ಪರ್ಧಾತ್ಮಕ ಬೆಲೆ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಪ್ರತಿ ಕೆ.ಜಿ. ಹೊಗೆ ಸೊಪ್ಪಿಗೆ 30ರಿಂದ 50 ರೂ. ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ತಂಬಾಕು ಬೆಳೆಗಾರರಿಗೆ ನೆರವಾಗಲಿ. ಇಡೀ ರಾಜ್ಯದಲ್ಲಿ ಹೆಚ್ಚಿನ ತಂಬಾಕು ಬೆಳೆಗಾರರು ಇರುವುದು ಮೈಸೂರಿನಲ್ಲಿ. ಇದೇ ಜಿಲ್ಲೆಯವರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಬಜೆಟ್ ಮಂಡಿಸಿದ್ದಾರೆ. ಇಲ್ಲಿನ ಕೆಲ ಕಾಂಗ್ರೆಸ್ ಮುಖಂಡರು ಐಟಿಸಿ ಕಂಪನಿ ಎದುರು ಪ್ರತಿಭಟನೆ ನಡೆಸುವ ಬದಲು ಬೆಂಬಲ ಬೆಲೆ ಕೊಡಿಸುವ ಬಗ್ಗೆ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಲಿ ಎಂದು ಸಾರಾ ಮಹೇಶ್ ತಿರುಗೇಟು ನೀಡಿದರು.

ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಕೆ.ಆರ್.ನಗರ, ಅರಕಲಗೂಡು ತಾಲೂಕುಗಳಲ್ಲಿ ತಂಬಾಕು ಬೆಳೆಗಾರರು ಇದ್ದಾರೆ. ಬೆಲೆ ಕುಸಿತದಿಂದ ಉಂಟಾಗಿರುವ ಸಮಸ್ಯೆ ಬಗೆಹರಿಸಲು ಜೆಡಿಎಸ್ ಯಶಸ್ವಿಯಾಗಿದೆ. ನೀರಾವರಿ ಸೇರಿದಂತೆ ಯಾವುದೇ ರೀತಿಯಲ್ಲಿ ರೈತರಿಗೆ ಸಮಸ್ಯೆಯಾದರೂ ಸ್ಪಂದಿಸುವುದು ಎಚ್.ಡಿ.ದೇವೇಗೌಡರ ಕುಟುಂಬ ಎಂದರು.

ಒಂದು ಕೆ.ಜಿ.ತಂಬಾಕು ಬೆಳೆಯಲು ರೈತರಿಗೆ 180 ರೂ. ಖರ್ಚಾಗುತ್ತದೆ. ಆದ್ದರಿಂದ ಕನಿಷ್ಠ ಕೆ.ಜಿ.ಗೆ 300 ರೂ. ಬೆಲೆ ಸಿಕ್ಕರೆ ಮಾತ್ರ ಅನುಕೂಲವಾಗುತ್ತದೆ ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಹುಣಸೂರು ಮತ್ತು ಸುತ್ತಲಿನ ತಾಲೂಕಿನಲ್ಲಿ ಬೆಳೆಯುವ ಗುಣಮಟ್ಟದ ಹೊಗೆಸೊಪ್ಪು ಬೇರೆಲ್ಲೂ ಬೆಳೆಯಲು ಸಾಧ್ಯವಿಲ್ಲ. ಇಲ್ಲಿ ಬೆಳೆಯುವ ತಂಬಾಕಿನ ಪೈಕಿ ಶೇ.47ರಷ್ಟನ್ನು ಐಟಿಸಿ ಕಂಪನಿಯೇ ಖರೀದಿಸುತ್ತದೆ. ಈ ಬಾರಿ ತಂಬಾಕು ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಹಿರೀಕ್ಯಾತನಹಳ್ಳಿಯ ರೈತನೊಬ್ಬ ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ಸ್ಮರಿಸಿದರು.

ತಂಬಾಕು ಮಂಡಳಿ ಕರ್ನಾಟಕಕ್ಕೆ 100 ಮಿಲಿಯನ್ ಕೆ.ಜಿ ತಂಬಾಕು ಉತ್ಪಾದನೆಯ ಗುರಿ ನಿಗದಿಪಡಿಸಿದೆ. ಈ ವರ್ಷ ಐದೂ ತಾಲೂಕುಗಳಲ್ಲಿ 75 ಮಿಲಿಯನ್ ಕೆ.ಜಿ. ಮಾತ್ರ ಬೆಳೆದಿದ್ದೇವೆ. ಆದರೂ ರೈತರಿಗೆ 210-220 ರೂ. ಬೆಲೆ ಸಿಗುತ್ತಿದೆ. ಇದು ಮಾಡಿರುವ ಸಾಲದ ಬಡ್ಡಿಗೂ ಸಾಲುವುದಿಲ್ಲ ಎಂದು ರೈತರು ಆಕ್ರೋಶ ಭರಿತರಾಗಿದ್ದಾರೆ. ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ನಿಗದಿತ ಗುರಿಗಿಂತಲೂ ಹೆಚ್ಚಿನ ತಂಬಾಕು ಬೆಳೆಯಲಾಗಿದೆ.

ಆದರೆ, ನಮ್ಮ ರಾಜ್ಯದಲ್ಲಿ ಗುರಿಗಿಂತಲೂ ಕಡಿಮೆ ಉತ್ಪಾದನೆ ಮಾಡಿದ್ದರೂ ಬೆಲೆ ಸಿಗುತ್ತಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಈ ವಿಚಾರವನ್ನು ಪಿಯೂಷ್ ಗೋಯಲ್ ಐಟಿಸಿ ಕಂಪನಿ ಅಧ್ಯಕ್ಷ ಸಂಜೀವ್ ಪುರಿ ಅವರೊಂದಿಗೆ ಚರ್ಚಿಸಿದ್ದು, ಸೋಮವಾರದಿಂದಲೇ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ ಎಂದು ವಿವರಿಸಿದರು.

ವಿಧಾನ ಪರಿಷತ್ ಸದಸ್ಯರಾದ ಕೆ.ವಿವೇಕಾನಂದ, ಸಿ.ಎನ್.ಮಂಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಅಶ್ವಿನ್ ಕುಮಾರ್, ನಗರಾಧ್ಯಕ್ಷ ಎಸ್.ಬಿ.ಎಂ.ಮಂಜು, ಮುಖಂಡರಾದ ಕೃಷ್ಣನಾಯಕ, ಎಂ.ಜಿ.ರವಿಕುಮಾರ್, ಸಿ.ಜೆ.ದ್ವಾರಕೀಶ್, ರವಿ, ಅಭಿಷೇಕ್ ಮುಂತಾದವರಿದ್ದರು.

 

 

 

 

 

 

 

admin
the authoradmin

Leave a Reply

Translate to any language you want