ಹುಣಸೂರು(ಹಿರಿಕ್ಯಾತನಹಳ್ಳಿಸ್ವಾಮಿಗೌಡ): ತಂಬಾಕಿಗೆ ಸೂಕ್ತ ಮತ್ತು ನ್ಯಾಯಯುತ ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ತಂಬಾಕು ಹರಾಜು ಮಾರುಕಟ್ಟೆಯನ್ನು ಡಿ.25ರಂದು ಬಂದ್ ಮಾಡಿ, ಸಂಸದರ ಕಚೇರಿ ಮುಂಭಾಗ ಧರಣಿ ಆಯೋಜಿಸಲು ರೈತ ಮುಖಂಡರು ನಿರ್ಧರಿಸಿದ್ದಾರೆ.
ತಾಲೂಕಿನ ಕಟ್ಟೆಮಳಲವಾಡಿಯ ಡಿ.ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯ ರೈತಭವನದಲ್ಲಿ ರಾಜ್ಯ ವರ್ಜೀನಿಯಾ ತಂಬಾಕು ಬೆಳೆಗಾರರ ಒಕ್ಕೂಟದ ವತಿಯಿಂದ ಸೇರಿದ ಸಭೆಯಲ್ಲಿ ಖರೀದಿ ಕಂಪನಿಗಳ ದ್ವಿಮುಖ ನೀತಿ ಮತ್ತು ತಂಬಾಕು ಮಂಡಳಿಯ ಬೇಜವಾಬ್ದಾರಿ ವರ್ತನೆಯನ್ನು ರೈತಮುಖಂಡರು ತೀವ್ರವಾಗಿ ಖಂಡಿಸಿ ತಂಬಾಕು ಮಾರುಕಟ್ಟೆ ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಮತ್ತು ಖರೀದಿದಾರರಿಗೆ ಎಚ್ಚರಿಕೆ ನೀಡಲು ತೀರ್ಮಾನ ಕೈಗೊಂಡರು. ಬಂದ್ ನಂತರವೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ, ತಂಬಾಕು ಬೆಳೆಯುವ ಜಿಲ್ಲೆಗಳ ಸಂಸದರಕಚೇರಿ ಮುಂದೆ ವ್ಯಾಪ್ತಿಯ ಎಲ್ಲ ನಾಲ್ಕು ಸಂಸದರ ಕಚೇರಿ ಮುಂಭಾಗ ಧರಣಿ ಧರಣಿ ನಡೆಸಲು ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಯಿತು.
ಈ ವೇಳೆ ಕಾಫ್(ಕಮಿಟಿ ಆಫ್ ಫಾರ್ಮಸ್) ಸಮಿತಿ ಸದಸ್ಯ ನಿಲುವಾಗಿಲು ಪ್ರಭಾಕರ್ ಮಾತನಾಡಿ, ಪಕ್ಕದ ಆಂಧ್ರಪ್ರದೇಶದಲ್ಲಿ ತಂಬಾಕು ಬೆಳೆಗಾರರಿಗೆ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಬೆಳೆ ಬೆಳೆದರೂ ನಮಗಿಂತ ಉತ್ತಮ ದರ ನೀಡುತ್ತಿದ್ದಾರೆ. ವಿದೇಶಗಳಿಗೆ ರಫ್ತಾಗುವ ಗುಣಮಟ್ಟದ ವರ್ಜೀನಿಯಾ ತಂಬಾಕು ಬೆಳೆಯನ್ನು ಕರ್ನಾಟಕ ಬೆಳೆಯುತ್ತಿದ್ದರೂ ಉತ್ತಮ ಗುಣಮಟ್ಟದ ಹೊಗೆಸೊಪ್ಪಿಗೆ ಕೇವಲ 300 ರೂ. ನೀಡಲಾಗು ತ್ತಿದೆ. ಇದೀಗ ಕಳೆದ ಮೂರು ತಿಂಗಳುಗಳಿಂದ ಸರಾಸರಿ ದರ ಪಾತಾಳ ಸೇರುತ್ತಿದೆ. ನಾವೆಲ್ಲರೂ ಒಗ್ಗಟ್ಟಾಗಿ ಖರೀದಿದಾರರ ವಿರುದ್ಧ ಹೋರಾಟ ನಡೆಸುವ ಅಗತ್ಯವಿದೆ ಎಂದರು.

ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಉಂಡವಾಡಿ ಸಿ.ಚಂದ್ರೇಗೌಡ ಮಾತನಾಡಿ, ತಂಬಾಕು ಮಂಡಳಿಯ ಫುಲ್ ಬೋರ್ಡ್ ಮೀಟಿಂಗ್ ವೇಳೆ ಪ್ರತಿ ಖರೀದಿದಾರರು ಖರೀದಿಸುವ ತಂಬಾಕು ಪ್ರಮಾಣವನ್ನು ತಿಳಿಸುತ್ತಾರೆ. ಇದೇ ವೇಳೆ ಮಂಡಳಿಯು ಖರೀದಿದಾರರಿಗೆ ಗುಣಮಟ್ಟದ ಹೊಗೆಸೊಪ್ಪಿನ ಜತೆಗೆ ಲೋ ಗ್ರೇಡ್ ಸೊಪ್ಪನ್ನೂ ಖರೀದಿಸಬೇಕೆನ್ನುವ ಷರತ್ತು ವಿಧಿಸಬೇಕು. ಗುಣಮಟ್ಟದ ಹೊಗೆಸೊಪ್ಪು ಖರೀದಿಸುವ ಕಂಪನಿಗಳು ಕಡಿಮೆ ಗುಣಮಟ್ಟದ ತಂಬಾಕು ಖರೀದಿಸಲು ಹಿಂದೇಟು ಹಾಕಿ, ಮೂರು ಕಾಸಿನ ಬೆಲೆ ನೀಡುವ ಮೂಲಕ ರೈತರಿಗೆ ಅನ್ಯಾಯವೆಸಗುವುದು ಸರಿಯೇ ಎಂದು ಪ್ರಶ್ನಿಸಿದರು.
ಪಿರಿಯಾಪಟ್ಟಣದ ಮುಖಂಡ ಪ್ರಕಾಶ್ ರಾಜೆ ಅರಸ್ ಮಾತನಾಡಿ, ಮಂಡಳಿಯ ಅಧಿಕಾರಿಗಳು ರೈತಪರವಾಗಿ ಕಾರ್ಯ ನಿರ್ವಹಿಸಬೇಕೇ ಹೊರತು ಖರೀದಿ ಕಂಪನಿಗಳ ಅಡಿಯಾಳಾಗಿ ಅಲ್ಲ. ಖರೀದಿದಾರರಿಗೆ ಉತ್ತಮ ದರ ನೀಡುವಲ್ಲಿ ಅಗತ್ಯ ಒತ್ತಡಗಳನ್ನು ಹಾಕಬೇಕು. ಈ ವಿಚಾರದಲ್ಲಿ ಜನಪ್ರತಿನಿಧಿಗಳು ರೈತಪರ ನಿಲುವುಗಳೊಂದಿಗೆ ಸರ್ಕಾರದ ಕಿವಿಹಿಂಡುವಲ್ಲಿ ವಿಫಲರಾಗುತ್ತಿದ್ದಾರೆ ಎಂದರು.
ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಖರೀದಿ ಕಂಪನಿಗಳ ದ್ವಿಮುಖ ನೀತಿ ಕರ್ನಾಟಕದ ರೈತರನ್ನು ದಶಕ ಗಳಿಂದಲೂ ಕಾಡುತ್ತಿದೆ. ರಾಜ್ಯಕ್ಕೊಂದು ನ್ಯಾಯ ಎನ್ನುವ ನೀತಿ ಅನುಸರಿಸುತ್ತಿದ್ದಾರೆ. ರೈತರು ಇಂತಹ ಅನ್ಯಾಯವನ್ನು ಸಹಿಸುವು ದಿಲ್ಲ. ಡಿ.25ರಂದು ರಾಜ್ಯದ್ಯಂತ ಎಲ್ಲ ತಂಬಾಕು ಹರಾಜು ಮಾರು ಕಟ್ಟೆಗಳನ್ನು ಬಂದ್ ಮಾಡಿ ಖರೀದಿ ದಾರರ ಮತ್ತು ಜನಪ್ರತಿನಿಧಿಗಳ ವಿರುದ್ಧ ನಮ್ಮ ಆಕ್ರೋಶವನ್ನು ವ್ಯಕ್ತಪಡಿಸಲಿದ್ದೇವೆ. ನಂತರವೂ ಪರಿಸ್ಥಿತಿ ಬದಲಾಗದಿದ್ದರೆ ತಂಬಾಕು ಬೆಳೆವ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ನಾಲ್ವರು ಸಂಸದರ ಕಚೇರಿ ಮುಂಭಾಗ ತಂಬಾಕು ಬೆಳೆಗಾರರು ಧರಣಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು.

ಸಭೆಗೆ ಆಗಮಿಸಿದ ತಂಬಾಕು ಮಂಡಳಿಯ ಮೈಸೂರು ವಿಭಾಗದ ಪ್ರಾದೇಶಿಕ ಅಧಿಕಾರಿ ಕೆ.ಗೋಪಾಲ್ ಮಾತನಾಡಿ, ಈ ಕುರಿತು ಹಲವಾರು ಬಾರಿ ಮಂಡಳಿ ನಿರ್ದೇಶಕರು ಇನ್ನಿತರ ಅಧಿಕಾರಿಗಳ ಸಭೆ ನಡೆದಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖರೀದಿ ಕಂಪನಿಗಳಿಗೆ ಇನ್ನೂ ನಿರ್ದಿಷ್ಟ ಪ್ರಮಾಣದಲ್ಲಿ ಹೊಗೆಸೊಪ್ಪು ಖರೀದಿಸುವ ಒಪ್ಪಂದಗಳು ಆಗಿಲ್ಲ. ಡಿ.25ರ ನಂತರ ಎಲ್ಲವೂ ಸುಲಲಿತವಾಗಿ ಆಗಲಿದೆ ಎಂದು ತಿಳಿಸುತ್ತಿದ್ದಾರೆ. ಈ ಬಾರಿ ಐಟಿಸಿ ಕಂಪನಿ ಶೇ.50ರಷ್ಟು ಷೇರು ಪ್ರಮಾಣದಲ್ಲಿ ಹೊಗೆಸೊಪ್ಪು ಖರೀದಿಸಲು ಮುಂದಾಗಿದೆ. ಜಿಪಿಐ ಕಂಪನಿ ಕಳೆದ ಸಾಲಿನಲ್ಲಿ ಶೇ.6ರ ಪ್ರಮಾಣದಲಿ ಖರೀದಿಸಿತ್ತು. ಈ ಬಾರಿ ಶೇ.12ರ ಪ್ರಮಾಣದಲ್ಲಿ ಖರೀದಿಸಲು ಮುಂದೆ ಬಂದಿದೆ. ಹೀಗೆ ಸಾಕಷ್ಟು ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲಿದೆ. ರಾಜ್ಯ ರೈತರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ಮಂಡಳಿ ಬೆಂಬಲ ಸೂಚಿಸಿ ಅವರ ಶ್ರೇಯೋಭಿವೃದ್ಧಿಗಾಗಿ ಕ್ರಮವಹಿಸಲಿದೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಮುಖಂಡರಾದ ಎಚ್.ಡಿ.ಕೋಟೆಯ ಬಸವರಾಜಪ್ಪ, ಶಿರೇನಹಳ್ಳಿಬಸವರಾಜೇಗೌಡ, ಬಿ.ಎನ್.ನಾಗರಾಜಪ್ಪ, ಚಿಲ್ಕುಂದ ಶಿವಯ್ಯ ಮಾತನಾಡಿದರು. ಮುಖಂಡರಾದ ಕಟ್ಟೆಮಳಲವಾಡಿ ಅಶೋಕ್ ಕುಮಾರ್, ರೈತಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಉಪಾಧ್ಯಕ್ಷ ಕಟ್ಟೆಮಳಲವಾಡಿ ಮಹದೇವ್, ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಸತೀಶ್, ಕಾಫ್ ಕಮಿಟಿ ಸದಸ್ಯರಾದ ರಾಜಶೇಖರ್, ನಿಂಗೇಗೌಡ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೋದೂರು ಶಿವಣ್ಣ, ರೈತಮುಖಂಡರಾದ ಕಿರಿಜಾಜಿ ಶಿವಶಂಕರ್, ಧನಂಜಯ್, ಅತ್ತಿಕುಪ್ಪೆ ರಾಮಕೃಷ್ಣ, ವಿಜಯಕುಮಾರ್, ಮಾದೇಗೌಡ ಇತರರು ಇದ್ದರು.








