ಮನೆಯ ತಾರಸಿಯಲ್ಲಿ ಪುಷ್ಪಲೋಕ… ಆಸಕ್ತಿಯಿದ್ದರೆ ಇರುವ ಜಾಗದಲ್ಲಿಯೇ ಹೂಗಿಡ ಬೆಳೆಸುವುದು ಕಷ್ಟವೇನಲ್ಲ..!
ಕೆ.ಆರ್.ಪೇಟೆ ಹೇಮಾವತಿ ಬಡಾವಣೆಯ ಸವಿತಾ ಸೃಷ್ಟಿಸಿದ ಪುಷ್ಪಲೋಕ

ಈಗೀಗ ಬಹಳಷ್ಟು ಹೆಣ್ಣುಮಕ್ಕಳು ಗಾರ್ಡನ್ ನತ್ತ ಚಿತ್ತ ಹರಿಸುತ್ತಿದ್ದಾರೆ. ತಾವು ಇದ್ದಲ್ಲೇ ಪುಟ್ಟದೊಂದು ಪುಷ್ಪ ಲೋಕ ಸೃಷ್ಟಿಸುವತ್ತ ಗಮನಹರಿಸುತ್ತಿದ್ದಾರೆ. ಸದಾ ಮೊಬೈಲ್ ನಲ್ಲಿಯೇ ಕಾಲಕಳೆಯುವುದಕ್ಕಿಂತ ಮನೆಯ ತಾರಸಿಯಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದ್ದೇ ಆದರೆ ದೇಹಕ್ಕೆ ವ್ಯಾಯಾಮ ಮನಸ್ಸಿಗೆ ನೆಮ್ಮದಿ ಸಿಗುವುದು ಮಾತ್ರವಲ್ಲದೆ ಮನೆಯ ಅಂದ ಹೆಚ್ಚಿಸಲು ಸಾಧ್ಯವಾಗುತ್ತದೆ. ಮನೆಯಲ್ಲಿಯೇ ಪುಷ್ಪಲೋಕವನ್ನು ಹೇಗೆ ಸೃಷ್ಟಿ ಮಾಡುವುದು ಎಂದು ಆಲೋಚಿಸುವವರಿಗೆ ಕೆ.ಆರ್.ಪೇಟೆಯ ಹೇಮಾವತಿ ಬಡಾವಣೆಯ ನಿವಾಸಿ ಕೆ.ಸವಿತಾ ಹೀಗೂ ಮಾಡಬಹುದೆಂದು ತೋರಿಸಿಕೊಟ್ಟಿದ್ದಾರೆ.

ಇವರು ತಮ್ಮ ಬಿಡುವಿನ ಸಮಯವನ್ನು ಗಿಡಗಳತ್ತ ಆಸಕ್ತಿ ತೋರಿ ಅವುಗಳನ್ನು ನೆಟ್ಟು ಪೋಷಿಸಿದ ಪರಿಣಾಮ ಮನೆಯಲ್ಲಿ ಪುಟ್ಟದೊಂದು ಉದ್ಯಾನ ಜನ್ಮ ತಾಳಿದೆ. ಅಷ್ಟೇ ಅಲ್ಲದೆ ಗಿಡಗಳ ಒಡನಾಟದಲ್ಲಿ ಸಮಯ ಕಳೆಯುವುದರಿಂದ ಮಾನಸಿಕ ನೆಮ್ಮದಿ, ದೈಹಿಕ ಆರೋಗ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ಅವರು ಕಂಡುಕೊಂಡಿದ್ದಾರೆ. ಕೊರೋನಾ ಸಮಯದಲ್ಲಿ ಲಾಕ್ ಡೌನ್ ಕಾರಣದಿಂದ ಮನೆಯಲ್ಲೇ ನಾಲ್ಕುಗೋಡೆಗಳ ನಡುವೆ ಸಮಯವನ್ನು ಕಳೆಯುತ್ತಿದ್ದ ವೇಳೆಯಲ್ಲಿ ಸವಿತಾ ಅವರು ಗಿಡಗಳತ್ತ ಒಲವು ತೋರಿದ್ದು ಇವತ್ತು ತಾರಸಿಯಲ್ಲಿ ಪುಷ್ಪಲೋಕ ಸೃಷ್ಟಿಗೆ ಕಾರಣವಾಗಿದೆ.

ಸವಿತಾ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉದ್ಯೋಗಿಯಾಗಿದ್ದು, ಲಾಕ್ ಡೌನ್ ಸಮಯದಲ್ಲಿ ವ್ಯರ್ಥ ಕಾಲಹರಣ ಮಾಡುವುದೇಕೆ? ಎಂದು ಆಲೋಚಿಸುತ್ತಿರುವಾಗಲೇ ಅವರ ಮನದ ಮೂಲೆಯಲ್ಲಿ ಮೂಡಿದ್ದು ಹೂ ತೋಟ ಮಾಡುವ ಕನಸು. ಅದನ್ನು ಸಕಾರಗೊಳಿಸಲು ಮುಂದಾದ ಅವರು ಮನೆಯ ಮೇಲಿದ್ದ ತಾರಸಿಯನ್ನೇ ತನ್ನ ಕನಸು ನನಸು ಮಾಡಲು ಬಳಸಿಕೊಂಡರು. ಈಗಾಗಲೇ ಬಹಳಷ್ಟು ಜನರು ತಾರಸಿಯಲ್ಲಿ ನೂರಾರು ರೀತಿಯ ಹೂ, ಗಿಡ, ತರಕಾರಿಗಳನ್ನು ನೆಟ್ಟು ಬೆಳೆಸಿರುವ ಬಗ್ಗೆ ತಿಳಿದಿದ್ದ ಅವರು ಅದರ ಬಗ್ಗೆ ಒಂದಷ್ಟು ಮಾಹಿತಿಯನ್ನು ಪಡೆದುಕೊಂಡು ಪುಷ್ಟಲೋಕ ನಿರ್ಮಾಣಕ್ಕೆ ಮುಂದಾದರು.
ಮೊದಲೇ ಗಿಡಮರ, ಹೂ, ತರಕಾರಿ ಬಗ್ಗೆ ಒಲವಿದ್ದುದರಿಂದ ಮತ್ತು ಈಗಾಗಲೇ ಅವರು ವಿಶೇಷ ದಿನಗಳಲ್ಲಿ ಶಾಲಾ ಕಾಲೇಜು ಆವರಣ, ಪಾರ್ಕ್ ಮತ್ತು ದೇವಾಲಯಗಳ ಆವರಣದಲ್ಲಿ ಹಲವು ಸಸಿಗಳನ್ನು ನೆಟ್ಟಿದ್ದರಿಂದ ಮನೆಯಲ್ಲಿ ಗಿಡಗಳ ನೆಟ್ಟು ಆರೈಕೆ ಮಾಡುವುದು ಅವರಿದೆ ಕಷ್ಟವಾಗಿ ಕಾಣಲಿಲ್ಲ. ಮನೆಯವರು ನೀಡಿದ ಸಹಕಾರವೂ ಪ್ರೆರೇಪಣೆ ನೀಡಿತು ಹೀಗಾಗಿ ಪ್ರತಿಯೊಂದು ಕೆಲಸವನ್ನು ಇಷ್ಟಪಟ್ಟು ಮಾಡುತ್ತಾ ಹೋಗಿದ್ದರ ಪರಿಣಾಮ ಮನೆಯ ತಾರಸಿಯಲ್ಲಿ ಪುಷ್ಪಗಿಡಗಳ ಲೋಕವೊಂದು ಸದ್ದಿಲ್ಲದೆ ಎದ್ದು ನಿಲ್ಲುವಂತಾಗಿದೆ.

ಇವತ್ತು ಅವರ ಮನೆಯ ತಾರಸಿಗೆ ಹೋದರೆ ಅಲ್ಲೊಂದು ಪುಟ್ಟದಾದ ಪುಷ್ಪಲೋಕ ಕಾಣಿಸುತ್ತದೆ. ಅದರ ನಡುವೆ ಹೆಜ್ಜೆ ಹಾಕಿದರೆ ವಿವಿಧ ಜಾತಿಯ ಹೂಗಳು ಅರಳಿ ಕಂಗೊಳಿಸಿದರೆ, ತರಕಾರಿ, ದಾಳಿಂಬೆ, ಸೀಬೆ, ಸಪೋಟ ಹೀಗೆ ಹಲವು ಹಣ್ಣಿನ ಗಿಡಗಳು ಹುಲುಸಾಗಿ ಬೆಳೆದು ಅಚ್ಚರಿ ಮೂಡಿಸುತ್ತವೆ. ಈ ಹಿಂದೆ ತಾವು ಭೇಟಿ ನೀಡುವ ಸ್ಥಳದ ನೆನಪಿಗಾಗಿ ಅಲ್ಲಿಂದ ಹೂಗಿಡ ಅಥವಾ ಇನ್ಯಾವುದೇ ಗಿಡಗಳಿರಲಿ ಅದನ್ನು ತಂದು ನೆಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.

ಇದು ಕೂಡ ಮನೆಯಲ್ಲಿ ಗಿಡಗಳನ್ನು ಬೆಳೆಸಲು ಸಹಕಾರಿಯಾಯಿತು ಎಂದರೆ ತಪ್ಪಾಗಲಾರದು. ಬಗೆಬಗೆಯ ಗಿಡ, ಬಳ್ಳಿ, ಮರಗಳನ್ನು ನೆಟ್ಟು ಪೋಷಿಸಬೇಕೆಂಬ ಬಯಕೆ ಹೊಂದಿರುವ ಅವರು, ಸ್ಥಳದ ಕೊರತೆಯಿಂದ ಇರುವ ಜಾಗದಲ್ಲಿಯೇ ಗಿಡನೆಟ್ಟು ನೆಮ್ಮದಿ ಪಡುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಇರುವ ಸ್ಥಳದಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿದ್ದೇ ಒಂದೊಳ್ಳೆಯ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ನಮ್ಮ ನಿತ್ಯದ ಕೆಲಸದ ನಡುವೆ ಸ್ವಲ್ಪ ಸಮಯವನ್ನು ತೆಗೆದಿರಿಸಿದರೆ ಹೂಗಿಡಗಳನ್ನು ನೆಟ್ಟು ಬೆಳೆಸುವುದು ಕಷ್ಟದ ಕೆಲಸವಾಗಲಾರದು.. ಆದರೆ ಗಿಡಗಳತ್ತ ಪ್ರೀತಿ, ಒಲವು ಇರಬೇಕಷ್ಟೆ…







