ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಎಲ್ಲವೂ ಪ್ಲಾಸ್ಟಿಕ್ ಮಯವಾಗುತ್ತಿರುವ ಈ ಕಾಲದಲ್ಲಿ ಬಿದಿರಿನಿಂದ ತಯಾರಿಸುವ ವಸ್ತುಗಳನ್ನು ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಬಿದಿರಿನಿಂದ ವಿವಿಧ ವಸ್ತುಗಳನ್ನು ತಯಾರಿಸಿ ಬದುಕು ಕಟ್ಟಿಕೊಂಡವರು ಈಗ ಸಂಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ. ಹಿಂದಿನ ಕಾಲದಲ್ಲಿ ಪ್ರತಿ ಮನೆಯ, ಬದುಕಿನ ಅವಿಭಾಜ್ಯ ಅಂಗವಾಗಿದ್ದ ಬಿದಿರಿನ ವಸ್ತುಗಳು ಬಹುತೇಕ ಮರೆಯಾಗುತ್ತಿರುವುದು ಕಂಡು ಬರುತ್ತಿದೆ.
ಮೊದಲೆಲ್ಲ ಮನೆ ನಿರ್ಮಾಣದಿಂದ ಹಿಡಿದು ದಿನನಿತ್ಯದ ಗೃಹೋಪಯೋಗಿ ಸಾಮಗ್ರಿಗಳವರೆಗೆ ಬಿದಿರು ಪ್ರಧಾನ ಪಾತ್ರವಹಿಸುತ್ತಿತ್ತು. ಪ್ಲಾಸ್ಟಿಕ್, ಕಬ್ಬಿಣ ಹಾಗೂ ಸ್ಟೀಲ್ ವಸ್ತುಗಳ ಪ್ರವೇಶದಿಂದ ಸಾಂಪ್ರದಾಯಿಕ ಬಿದಿರಿನ ಗುಡಿ ಕೈಗಾರಿಕೆ ನೇಪಥ್ಯಕ್ಕೆ ಸರಿಯುತ್ತಿದೆ. ಅವತ್ತಿನ ಕಾಲದಲ್ಲಿ ಮಧ್ಯಮ ಹಾಗೂ ಕೆಳವರ್ಗದ ಜನರು ಬಿದಿರಿನ ಬಂಬೂ ಮತ್ತು ಸಣ್ಣ ಬಿದಿರಿನಿಂದ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದರು. ಬಿದಿರಿನಿಂದ ಹೆಣೆದ ದಬ್ಬೆ ಬಾಗಿಲು, ಕುಕ್ಕೆ, ಮೊರ, ಬೀಸಣಿಗೆ, ದವಸ-ಧಾನ್ಯ ಸಂಗ್ರಹಿಸಲು ಸುನಿಗೆ, ದನ-ಕರುಗಳಿಗೆ ಔಷಧಿ ಹಾಕಲು ಕೊಟ್ಟೆ, ಮೊಸರು ಕಡೆಯಲು ಮಂತು, ಉಪ್ಪು ತುಂಬಿಡಲು ಬೊಂಬಿನ ಡಬ್ಬ, ರಾಗಿ ಒಕ್ಕಣೆಗೆ ಮೆರೆಗೋಲು ಸೇರಿದಂತೆ ಅನೇಕ ಉಪಯೋಗಿ ವಸ್ತುಗಳು ಎಲ್ಲರ ಮನೆಯಲ್ಲಿಯೂ ಇರುತ್ತಿದ್ದವು.

ಗ್ರಾಮೀಣ ಸಂಸ್ಕೃತಿಯಲ್ಲಿ ಬಿದಿರು ಮನುಷ್ಯನ ಅವಿಭಾಜ್ಯ ಅಂಗವಾಗಿ ಹುಟ್ಟಿನಿಂದ ಸಾವಿನವರೆಗೆ ಹತ್ತು ಹಲವು ವಿಧಗಳಲ್ಲಿ ಇದರ ಬಳಕೆಯನ್ನು ಜನ ಮಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್, ಕಬ್ಬಿಣ ಮತ್ತು ಸ್ಟೀಲ್ ನಿಂದ ತಯಾರಾದ ವಸ್ತುಗಳು ಮನೆಗಳಿಗೆ ಲಗ್ಗೆ ಇಟ್ಟಿದ್ದು, ಬಿದಿರಿನ ವಸ್ತುಗಳು ನಿಧಾನವಾಗಿ ಕಣ್ಮರೆಯಾಗಿ ಇಲ್ಲದಂತಾಗಿದೆ. ಬಿದಿರಿನ ಬಳಕೆಯ ಬಗ್ಗೆ ಈಗಿನ ಪೀಳಿಗೆಯವರಿಗೆ ಗೊತ್ತೇ ಇಲ್ಲದಾಗಿದೆ.
ಈ ಬೆಳವಣಿಗೆಯು ಬಿದಿರಿನ ಕೆಲಸ ಮಾಡಿ ಬದುಕುತ್ತಿದ್ದ ಕುಶಲಕರ್ಮಿಗಳ ಬದುಕನ್ನೇ ಕಿತ್ತುಕೊಂಡಿದೆ. ಇದನ್ನೇ ಕುಲ ಕಸುಬನ್ನಾಗಿಸಿಕೊಂಡು ಬದುಕು ಕಟ್ಟಿಕೊಂಡವರಿಗೆ ಈಗ ಸಂಕಷ್ಟ ಎದುರಾಗಿದೆ. ಮೊರ, ಬುಟ್ಟಿ ಸೇರಿದಂತೆ ವಿವಿಧ ವಸ್ತುಗಳನ್ನು ಕಷ್ಟಪಟ್ಟು ತಯಾರಿಸಿದರೂ ಖರೀದಿಸುವವರ ಸಂಖ್ಯೆ ಕಡಿಮೆಯಾಗಿರುವುದರಿಂದ ವ್ಯಾಪಾರ ನಡೆಯದೆ ಪರದಾಡುವಂತಾಗಿದೆ. ಬಿದಿರಿಗೂ ಬೆಲೆ ಏರಿದೆ. ಮೊದಲಿನಂತೆ ಎಲ್ಲೆಂದರಲ್ಲಿ ಬಿದಿರನ್ನು ಕಡಿಯುವಂತಿಲ್ಲ. ಹೀಗಾಗಿ ಬಿದಿರನ್ನು ಖರೀದಿ ಮಾಡಿ ಅದರಿಂದ ವಸ್ತುಗಳನ್ನು ತಯಾರಿ ಮಾಡಿದರೂ ಕಡಿಮೆ ಬೆಲೆಗೆ ಕೇಳುವುದರಿಂದ ನಷ್ಟ ಅನುಭವಿಸಬೇಕಾಗುತ್ತದೆ.
ಇನ್ನು ಕಷ್ಟಪಟ್ಟು ಹಗಲು ರಾತ್ರಿ ಎನ್ನದೆ ಬಿದಿರಿನ ವಸ್ತುಗಳನ್ನು ತಯಾರಿಸಿಟ್ಟರೂ ವ್ಯಾಪಾರವಿಲ್ಲದೆ ಪರದಾಡುವಂತಾಗಿದೆ. ಹೀಗಾಗಿ ವ್ಯಾಪಾರ ಮಾಡಲೆಂದು ಕುಳಿತ ಕುಶಲಕರ್ಮಿಗಳನ್ನು ಮಾತನಾಡಿಸಿದರೆ ವಿಷಾದದ ಮಾತುಗಳನ್ನಾಡುತ್ತಾರೆ. ನಾವು ಮಾಡುವ ವೃತ್ತಿಯಲ್ಲಿ ಪ್ರತಿದಿನ ವ್ಯಾಪಾರ ಇರಲ್ಲ. ಸಂಘಗಳಿಂದ ಸಾಲ ಪಡೆದು ಜೀವನ ನಡೆಸುತ್ತೇವೆ. ಸಾಲ ತೀರಿಸಲು ಮುಂಗಡ ಹಣ ಪಡೆದವರಿಗೆ ಕಡಿಮೆ ಬೆಲೆಯಲ್ಲಿ ಮೊರ, ಕುಕ್ಕೆಗಳನ್ನು ಹೆಣೆದು ಕೊಡಬೇಕಾಗುತ್ತದೆ ಎಂದು ನೋವುಗಳನ್ನು ತೋಡಿಕೊಳ್ಳುತ್ತಾರೆ.

ಹೂಬುಟ್ಟಿ, ಪಂಜರ, ಕುಕ್ಕೆ, ಬೀಸಣಿಗೆ, ಮೊರಗಳನ್ನು ಹೆಣೆದು ಮಾರುತ್ತೇನೆ. ಸಂಘ ಸಂಸ್ಥೆಗಳಿಂದ ಸಾಲ ಪಡೆದು ತೀರಿಸಲಾಗದೆ ಕಿರುಕುಳಕ್ಕೆ ಒಳಗಾದೆ. ಆತ್ಮಹತ್ಯೆ ಯೋಚನೆಯೂ ಬಂದಿತ್ತು. ಸಾಲಗಾರರು ಬಲವಂತವಾಗಿ ಹಣ ಕೇಳಬಾರದು ಎಂಬ ಕಾನೂನನ್ನು ಸರ್ಕಾರ ಜಾರಿಗೆ ತಂದ ನಂತರ ಸ್ವಲ್ಪ ನೆಮ್ಮದಿ ಸಿಕ್ಕಿದೆ. ನಿಜಹೇಳಬೇಕೆಂದರೆ ಬಿದಿರಿನ ಕೈಗಾರಿಕೆ ಕೇವಲ ವೃತ್ತಿಯಲ್ಲ ಅದೊಂದು ಸಂಸ್ಕೃತಿ ಎನ್ನುತ್ತಾರೆ ಅದರಿಂದ ಬದುಕು ಕಟ್ಟಿಕೊಂಡ ಕೆಲವರು..
ಹುಣಸೂರಿನ ರಂಗನಾಥ ಬಡಾವಣೆ ನಿವಾಸಿ ಸಣ್ಣಮ್ಮ ಅವರು ಹೇಳುವ ಪ್ರಕಾರ ಗೌರಿ ಹಬ್ಬದ ಸಮಯದಲ್ಲಿ ಬಾಗಿನ ನೀಡಲು ಬಿದಿರು ಮೊರಗಳು ಹೆಚ್ಚಾಗಿ ಖರ್ಚಾಗುತ್ತವೆ. ಇನ್ನುಳಿದ ಹಬ್ಬದ ದಿನಗಳಲ್ಲಿ ಬಿದಿರಿನ ವಸ್ತುಗಳು ವ್ಯಾಪಾರವಾಗುವುದಿಲ್ಲ ಇದರಿಂದ ಜೀವನ ಸಾಗಿಸಲು ಕಷ್ಟವಾಗುತ್ತಿದೆ. ಇಂತಹ ಸಮಸ್ಯೆಗಳಿಂದಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದೆ ತಮ್ಮ ಮೂಲ ಕಸುಬನ್ನು ತೊರೆದು ಬೇರೆ ಕೆಲಸಗಳ ಕಡೆಗೆ ಮುಖಮಾಡುತ್ತಿರುವುದು ಇತ್ತೀಚೆಗಿನ ವರ್ಷಗಳಲ್ಲಿ ಕಂಡು ಬರುತ್ತಿದೆ.
ಬಿದಿರು ಗ್ರಾಮೀಣ ಸಂಸ್ಕೃತಿ ಮತ್ತು ಪರಿಸರ ಸ್ನೇಹಿ ಜೀವನಶೈಲಿಯ ಪ್ರತೀಕವಾಗಿದ್ದು, ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಕಾಲದಲ್ಲಿ ನೈಸರ್ಗಿಕ ವಸ್ತುಗಳ ಬಳಕೆಯನ್ನು ಪ್ರೋತ್ಸಾಹಿಸುವುದು ಅವಶ್ಯಕ. ಸರ್ಕಾರ, ಸಂಘ ಸಂಸ್ಥೆಗಳು ಬಿದಿರು ಕೈಗಾರಿಕೆಗೆ ಆಧುನಿಕ ಮಾರುಕಟ್ಟೆ ಸಂಪರ್ಕ, ತರಬೇತಿ ಮತ್ತು ಆರ್ಥಿಕ ನೆರವು ಒದಗಿಸಿದರೆ ಈ ಪಾರಂಪರಿಕ ವೃತ್ತಿಗೆ ಪುನರ್ಜೀವ ಸಿಗಬಹುದೇನೋ?








