ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಉಪಾಧ್ಯಕ್ಷರು ಮತ್ತು ಕೆ.ಪಿ.ಟಿ ಸಿ ಎಲ್ ಬನ್ನಿ ಮಂಟಪ, ಹೂಟಗಳ್ಳಿ ವಿಭಾಗದಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಾ ತಮ್ಮ ಕರ್ತವ್ಯದ ನಡುವೆಯೂ ಸಮಾಜ ಸೇವೆ ಮತ್ತು ಕನ್ನಡದ ಸೇವೆಯನ್ನು ಮಾಡುತ್ತಾ ಬಂದಿರುವ ಟಿ ತ್ಯಾಗರಾಜು ಅವರು ಇದೀಗ 103ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಗಮನಸೆಳೆದಿದ್ದಾರೆ.
ರಕ್ತದಾನವನ್ನು ಮಹಾದಾನ ಎಂಬ ಮಾತಿಗೆ ಒತ್ತು ನೀಡುವಂತೆ ತ್ಯಾಗರಾಜು ಅವರು ಕಳೆದ ಮೂವತ್ತೇಳು ವರ್ಷಗಳಿಂದ ರಕ್ತದಾನ ಮಾಡುತ್ತಾ ಬಂದಿದ್ದು, ಹಲವರ ಬದುಕಿಗೆ ಆಸರೆಯಾಗಿದ್ದಾರೆ. ಜತೆಗೆ ಇತರರಿಗೆ ಮಾದರಿಯಾಗಿದ್ದಾರೆ. ರಕ್ತದಾನ ಮಾಡುವುದರಿಂದ ಸಂಕಷ್ಟದಲ್ಲಿರುವ ಜನರ ಪ್ರಾಣ ಉಳಿಸಲು ಸಹಕಾರಿಯಾಗುತ್ತದೆ. ಅದರಂತೆ 103 ಬಾರಿ ರಕ್ತದಾನ ಮಾಡಿದ್ದಾರೆ. ಒಬ್ಬ ವ್ಯಕ್ತಿ ನೀಡುವ ರಕ್ತದಿಂದ ನಾಲ್ಕು ಮಂದಿಗೆ ಉಪಯೋಗವಾಗುತ್ತದೆ ಎನ್ನುವುದಾದರೆ ಇವರಿಂದ 412 ಮಂದಿಗೆ ಸಹಕಾರಿಯಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಅದು ಏನೇ ಇರಲಿ ತ್ಯಾಗರಾಜು ಅವರ ಈ ಸೇವಾಗುಣವನ್ನು ಇತರರು ಪಾಲಿಸಿದರೆ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಕೊರತೆಯಿಂದ ಉಂಟಾಗುವ ಸಂಕಷ್ಟವನ್ನು ತಪ್ಪಿಸಲು ಸಾಧ್ಯವಾಗಲಿದೆ. ತ್ಯಾಗರಾಜು ಅವರ ಕಾರ್ಯವನ್ನು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಭಿನಂದಿಸಿದೆ. ಸುಗಮ ಸಂಗೀತ ಕರ್ನಾಟಕದ ಅಧ್ಯಕ್ಷ ನಾಗರಾಜ್ ವಿ ಭೈರಿ ಅವರು ಶುಭಕೋರಿದ್ದಾರೆ.








