District

ಹುಣಸೂರು ಗ್ರಾಮೀಣ ಭಾಗದ ಹೊಲದಲ್ಲಿ ಹುಲಿ ಪ್ರತ್ಯಕ್ಷ… ಸೆರೆ ಹಿಡಿಯಲು ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಹುಲಿಯ ಭಯದಲ್ಲಿಯೇ ಬದುಕುತ್ತಿರುವ ಗ್ರಾಮಸ್ಥರ ಸಹನೆಯ ಕಟ್ಟೆಒಡೆಲಾರಂಭಿಸಿದೆ. ಹೀಗಾಗಿ ಬೀದಿಗಿಳಿದು ಪ್ರತಿಭಟನೆ ಮಾಡುವ ಮಟ್ಟಕ್ಕೆ ಹೋಗಿರುವ ಘಟನೆ ತಾಲೂಕಿನ ಹುಣಸೂರು-ವಿರಾಜಪೇಟೆ ಹೆದ್ದಾರಿಯ ಮುತ್ತುರಾಯನ ಹೊಸಹಳ್ಳಿ ಬಳಿ ನಡೆದಿದೆ.

ಈ ವ್ಯಾಪ್ತಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ವನ್ಯ ಪ್ರಾಣಿಗಳು ಜನರಿಗೆ ಹಾವಳಿ ನೀಡುತ್ತಾ ಬಂದಿದ್ದು ಶುಕ್ರವಾರ ಬೆಳಗಿನ ಸಮಯದಲ್ಲಿ  ಹುಲಿಯೊಂದು ಹೊಲದಲ್ಲಿ ಕಾಣಿಸಿದ್ದರಿಂದ ಭಯದಿಂದ ಆಕ್ರೋಶಗೊಂಡ ಗ್ರಾಮಸ್ಥರು ಹೊಸಹಳ್ಳಿ ಬಳಿ ರಸ್ತೆ ತಡೆ ನಡೆಸಿ ಹುಲಿ ಸೆರೆಗೆ ಆಗ್ರಹಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಮುತ್ತುರಾಯನಹೊಸಹಳ್ಳಿ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಮುತ್ತುರಾಯನಹೊಸಹಳ್ಳಿ, ಕಲ್ಲಹಳ್ಳಿ, ನಾಗಮಂಗಲ, ಹೈರಿಗೆ, ತಟ್ಟಿಕೆರೆ ಮತ್ತಿತರ ಗ್ರಾಮಗಳಲ್ಲಿ ಹುಲಿ ಆಗಾಗ್ಗೆ ದಾಳಿ ನಡೆಸುತ್ತಾ ಜಾನುವಾರುಗಳನ್ನು ಬೇಟೆಯಾಡುತ್ತಿದ್ದರೆ, ಆರು ತಿಂಗಳ ಹಿಂದಷ್ಟೆ ಹೈರಿಗೆಯ ತೋಟದಲ್ಲಿದ್ದ ಹುಲಿ ಜನರನ್ನು ಕಂಡು ಕಾಡಿನತ್ತ ಪೇರಿ ಕಿತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದನ್ನು ಸ್ಮರಿಸಬಹುದು.

ಈಗಾಗಲೇ ಸುತ್ತಮುತ್ತಲ ಗ್ರಾಮಗಳಲ್ಲಿ ಆಗಾಗ್ಗೆ ದಾಳಿ ನಡೆಸುತ್ತಿದ್ದ ಹುಲಿಯು  ಶುಕ್ರವಾರ ಬೆಳಗ್ಗೆ  8ರ ಸಮಯದಲ್ಲಿ ಮುತ್ತುರಾಯನಹೊಸಹಳ್ಳಿಯ ವೆಂಕಟೇಶ್ ಅರಣ್ಯದಂಚಿನ ಹೊಲಕ್ಕೆ ಹೋಗುತ್ತಿದ್ದ ವೇಳೆ ಕಾಣಿಸಿದೆ. ಅಲ್ಲಿ ಮಲಗಿದ್ದ ಹುಲಿಯ ಗರ್ಜನೆ ಕೇಳಿ ಹೆದ್ದಾರಿಗೆ ಓಡಿ ಬಂದು ಪ್ರಾಣ ಉಳಿಸಿಕೊಂಡು, ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ನಿಲ್ಲಿಸಿ ಹಾರನ್ ಮಾಡಿಸಿದ್ದರಿಂದ ಬೆದರಿದ ಹುಲಿಯು ಕಾಡಿನತ್ತ ದೌಡಾಯಿಸಿದೆ.

ಈ ನಡುವೆ ಅರಣ್ಯದಂಚಿನ ನಾಗಮಂಗಲದ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ರೈತ ಹರೀಶ್ ಅವರಿಗೆ ಸೇರಿದ್ದ ಹಸುವನ್ನು ಕೊಂದು ಕಾಡಿನತ್ತ ಎಳೆದೊಯ್ಯುತ್ತಿರುವುದನ್ನು ಗಾಬರಿಗೊಂಡ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದೆಲ್ಲದರಿಂದ ಬೇಸತ್ತ ಮುತ್ತುರಾಯನಹೊಸಹಳ್ಳಿ ಗ್ರಾಮಸ್ಥರು ಹುಲಿ ಸೆರೆಹಿಡಿಯಲು ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಅರಣ್ಯ ಇಲಾಖೆ ವಿರುದ್ಧ ಮುತ್ತುರಾಯನಹೊಸಹಳ್ಳಿ ಅರಣ್ಯ ಪ್ರದೇಶದ ಹೆದ್ದಾರಿಯಲ್ಲೇ ಟಯರ್‌ಗೆ ಬೆಂಕಿಹಚ್ಚಿ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನಿಟ್ಟು ರಸ್ತೆ ತಡೆ ನಡೆಸಿ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಮೊಳಗಿಸಿ, ಹುಲಿ ಸೆರೆ ಹಿಡಿಯಬೇಕು, ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಬೇಕು ಎಂದು ಪಟ್ಟು ಹಿಡಿದು ಘೋಷಣೆ ಕೂಗಿದ್ದಾರೆ.

ಪ್ರತಿಭಟನೆಯಲ್ಲಿ ಕಲ್ಲಹಳ್ಳಿ ಗ್ರಾ.ಪಂ.ಅಧ್ಯಕ್ಷ ಪ್ರಸನ್ನನಾಯಕ, ಮಾಜಿ ಅಧ್ಯಕ್ಷ ಜಗದೀಶ್ ಮಾತನಾಡಿ, ಈ ಭಾಗದಲ್ಲಿ ಹಗಲು ವೇಳೆಯೇ ಹುಲಿ ಓಡಾಡುತ್ತಿದೆ. ಜಾನುವಾರು ಗಳನ್ನು ಕೊಂದು ಹಾಕುತ್ತಿದ್ದರೂ ಹುಲಿ ಸೆರೆಗೆ ಅಧಿಕಾರಿಗಳು ವಿಫಲರಾಗಿದ್ದಾರೆ. ಕಾಟಾಚಾರದ ಕೂಂಬಿಂಗ್ ನಡೆಸುತ್ತಿದ್ದಾರೆ. ಹುಲಿ ಸೆರೆ ಹಿಡಿಯುವ ತನಕ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಸ್ಥಳಕ್ಕಾಗಮಿಸಿದ ಪ್ರಾದೇಶಿಕ ಅರಣ್ಯ ವಿಭಾಗದ ಎಸಿಎಫ್ ಮಹದೇವಯ್ಯ, ಆರ್.ಎಫ್.ಒ. ನಂದಕುಮಾರ್, “ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಕೂಂಬಿಂಗ್ ನಡೆಸುತ್ತಿದ್ದೇವೆ. ಒಮ್ಮೆ ಕಾಣಿಸಿಕೊಂಡ ಹುಲಿ ಮತ್ತೆ ಪತ್ತೆಯಾಗಿಲ್ಲ, ನಾವು ಹುಲಿ ಸೆರೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಇಂದಿನಿಂದಲೇ ಮತ್ತೆ ಕೂಂಬಿಂಗ್ ನಡೆಸಲಾಗುವುದು, ಎಂದು ಭರವಸೆ ನೀಡಿದರು.

ನೀವು ಕಾಟಾಚಾರಕ್ಕೆ ಕೂಂಬಿಂಗ್ ಮಾಡದೆ ಹೆಚ್ಚಿನ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಹಳ್ಳಿಗರಿಗೆ ಕಂಟಕವಾಗಿರುವ ಹುಲಿ ಸೆರೆ ಮಾಡಲೇಬೇಕು, ಎಂದು ಒತ್ತಾಯಿಸಿದರು. ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಸ್ವಾಮಿ, ಮುತ್ತುರಾಯನಹೊಸಹಳ್ಳಿ ಇನ್ನಾದರೂ ಹುಲಿ ಸೆರೆ ಹಿಡಿಯಲು ಶಾಸಕರು ಸರಕಾರದ ಮೇಲೆ ಒತ್ತಡ ಹಾಕಬೇಕು. ಸದನದಲ್ಲಿ ಪ್ರಸ್ತಾಪಿಸಬೇಕು ಎಂದು ಮನವಿ ಮಾಡಿದ್ದಾರೆ.

ಇನ್ಸ್‌ಪೆಕ್ಟರ್ ಮುನಿಯಪ್ಪ, ಎಸ್.ಐ.ರಾಮು ಹಾಗೂ ಸಿಬ್ಬಂದಿ ಪ್ರತಿಭಟನಾಕಾರರ ಮನವೊಲಿಸಿ ರಸ್ತೆ ತಡೆ ತೆರವುಗೊಳಿಸಿದರು. ಅರ್ಧ ಗಂಟೆ ಕಾಲ ಹೆದ್ದಾರಿಯ ಎರಡೂ ಕಡೆ ನೂರಾರು ವಾಹನಗಳು ಸಾಲುಗಟ್ಟಿನಿಂತಿದ್ದವು. ಪ್ರತಿಭಟನೆಯಲ್ಲಿ ಯ.ಹನುಮಂತೇಗೌಡ, ಮುಖಂಡರಾದ ರಾಜನಾಯಕ, ಶಿವರಾಜು, ಬಸವರಾಜು, ಗುಣಪ್ರಕಾಶ್, ಪುಟ್ಟೇಗೌಡ, ರಾಜಶೇಖರ್ ಸೇರಿದಂತೆ ನೂರಕ್ಕೂ ಹೆಚ್ಚು ಗ್ರಾಮಸ್ಥರು ಹಾಗೂ ಪಿರಿಯಾಪಟ್ಟಣ, ಕೋಟೆ ರೈತ ಸಂಘದ ಮುಖಂಡರು ಭಾಗವಹಿಸಿದ್ದರು.

ಹುಲಿ ಸೆರೆಗಾಗಿ ಶುಕ್ರವಾರ ಸಂಜೆಯಿಂದಲೇ ಮೂರು ಸಾಕಾನೆಗಳು, ಥರ್ಮಲ್ ಡೋನ್‌ಗಳು ಹಾಗೂ 50 ಮಂದಿ ಸಿಬ್ಬಂದಿಯ ತಂಡ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ. ಹುಲಿ ಒಂದು ಕಡೆ ನಿಲ್ಲದೆ ಅಲೆದಾಡುತ್ತಿರುವುದು ಕಾರ್ಯಾಚರಣೆಗೆ ಅಡಚಣೆಯಾಗಿದೆ. ಆದರೂ ಸೆರೆಗೆ ವನ್ಯಜೀವಿ ವಿಭಾಗದ ಎಸಿಫ್ ಲಕ್ಷ್ಮಿಕಾಂತ್ ಮತ್ತವರ ತಂಡದ ಸಹಕಾರದೊಂದಿಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ. ಎಂದು ಎಸಿಎಫ್ ಮಹದೇವಯ್ಯ, ಆರ್‌ಎಫ್‌ಒ ನಂದಕುಮಾರ್ ತಿಳಿಸಿದ್ದಾರೆ.

admin
the authoradmin

Leave a Reply