ಪರೀಕ್ಷೆಗೆ ಮೊದಲೇ ವಿದ್ಯಾರ್ಥಿಗಳು ಗುರಿ ನಿರ್ಧರಿಸಿಕೊಳ್ಳಬೇಕು… ಶಾಸಕ ಸುರೇಶ್ ಗೌಡರ ಕಿವಿಮಾತು

ತುಮಕೂರು: ಭವಿಷ್ಯದಲ್ಲಿ ನೀವು ಏನಾಗಬೇಕು ಎಂಬುದನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮೊದಲೇ ನಿರ್ಧಾರ ಮಾಡಬೇಕು. ಶ್ರದ್ಧೆಯಿಂದ ಓದಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬೇಕು.ಸಂಸ್ಕಾರ ರೂಢಿಸಿಕೊಂಡು ಶಿಸ್ತು, ಶ್ರದ್ಧೆ, ಆತ್ಮವಿಶ್ವಾಸ ಅಳವಡಿಸಿಕೊಂಡರೆ ಗುರಿ ಸಾಧನೆ ಮಾಡುವಲ್ಲಿ ಯಶಸ್ವಿಯಾಗಬಹುದು ಎಂದು ಶಾಸಕ ಬಿ.ಸುರೇಶ್‌ಗೌಡರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಗ್ರಾಮಾಂತರ ಕ್ಷೇತ್ರದ ಬೆಳ್ಳಾವಿ ಕೆಪಿಎಸ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೂ ಹಾಗೂ ಸಾಕ್ಸ್ ವಿತರಣೆ ಮಾಡಿ ಮಾತನಾಡಿದ ಶಾಸಕರು, ಸರ್ಕಾರ ಸಮವಸ್ತ್ರ, ಬಿಸಿಯೂಟ, ಪಠ್ಯಪುಸ್ತಕ, ಉತ್ತಮವಾದ ಶಾಲಾ ಕ್ಯಾಂಪಸ್, ಉತ್ತಮ ಶಿಕ್ಷಕರು ಎಲ್ಲವನ್ನೂಕೊಟ್ಟಿದೆ. ಈಗಿನ ಶಿಕ್ಷಣ ಪದ್ದತಿಯೂ ಉತ್ತಮವಾಗಿದೆ. ಎಲ್ಲವನ್ನೂ ಬಳಸಿಕೊಂಡು ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉನ್ನತ ಸ್ಥಾನಕ್ಕೆ ಹೋಗಬೇಕು ಎಂದರು.

ವಿದ್ಯಾರ್ಥಿಗಳ ಪಾಲಿಗೆ ಎಸ್‌ಎಸ್‌ಎಸ್‌ಸಿ ಪರೀಕ್ಷೆ ಪ್ರಮುಖಘಟ್ಟ. ಈ ಹಂತದಲ್ಲಿ ಒಳ್ಳೆಯ ಅಂಕ ಪಡೆಯಬೇಕು. ಶಿಕ್ಷಕರ ಮಾರ್ಗದರ್ಶನ ಪಡೆದು ಒಳ್ಳೆಯ ಸಾಧನೆ ಮಾಡಿ ಶಾಲೆಗೆ, ಪೋಷಕರಿಗೆ ಕೀರ್ತಿ ತರಬೇಕು. ಮಕ್ಕಳಲ್ಲಿ ಜ್ಞಾನವಿದೆ. ಅವರಿಗೆ ಮಾರ್ಗದರ್ಶನ ನೀಡಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕು. ವಿದ್ಯೆಯ ಜೊತೆಗೆ ಸಂಸ್ಕಾರವೂ ಮುಖ್ಯ. ಸಂಸ್ಕಾರವಿಲ್ಲದ ವಿದ್ಯೆಗೆ ಗೌರವವಿಲ್ಲ.

ತಂದೆತಾಯಿ, ಗುರುಹಿರಿಯರನ್ನು ಗೌರವಿಸುವ, ದೇಶಾಭಿಮಾನ ಹೊಂದುವ ಸಂಸ್ಕಾರವನ್ನು ಮಕ್ಕಳು ರೂಢಿಸಿಕೊಳ್ಳಬೇಕು. ಕೆಪಿಎಸ್ ಶಾಲೆಗೆ ಶೀಘ್ರದಲ್ಲೇ ಐದು ಕೊಠಡಿಗಳನ್ನು ನಿರ್ಮಿಸಲಾಗುತ್ತದೆ. ಅಗತ್ಯ ಸೌಕರ್ಯಗಳನ್ನೂ ಒದಗಿಸಲಾಗುತ್ತದೆಎಂದು ಸುರೇಶ್‌ಗೌಡರು ಹೇಳಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಿಕ್ಷಕರು ಹಾಜರಿದ್ದರು.ನಂತರ ಶಾಸಕರು ಶಾಲಾಭಿವೃದ್ಧಿ ಸಮಿತಿ ಸಭೆ ನಡೆಸಿ, ಶಾಲಾ ಚಟುವಟಿಕೆಗಳ ಪ್ರಗತಿ ಪರಿಶೀಲಿಸಿದರು.







