ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಯುಗಾದಿಯ ಕಹಿ ಅನುಭವಿಸಲು ಯಾವ ನಾಯಕರೂ ತಯಾರಿಲ್ಲ… ಎಲ್ಲರೂ ಸಿಹಿಯ ಕಡೆಗೆ ಬಾಯಿ ತೆರೆದು ಕುಳಿತಂತೆ ಭಾಸವಾಗುತ್ತಿದೆ… ಸಿಎಂ ಗದ್ದುಗೆಯಲ್ಲಿರುವ ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರ ಮಾಡಿದರೆ ಅವರ ಪಾಲಿಗೆ ಯುಗಾದಿ ಕಹಿಯಾಗಲಿದೆ… ಹಸ್ತಾಂತರ ಮಾಡಿದರೆ ಸಿಎಂ ಗದ್ದುಗೆಗಾಗಿ ತವಕಿಸುತ್ತಾ ಕಹಿಯುಣ್ಣುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ಸಿಹಿ ಸಿಗಲಿದೆ… ಇದರಾಚೆಗೆ ಸಚಿವ ಸ್ಥಾನಕ್ಕಾಗಿ ಕಾದು ಕುಳಿತಿರುವ ಹಿರಿಯ ಮತ್ತು ಕಿರಿಯ ಶಾಸಕರು ಸಂಪುಟ ಪುನರ್ರಚನೆಯಾಗಿ ಸಚಿವರಾದರೆ ಅವರ ಪಾಲಿಗೆ ಸಿಹಿ ಸಿಗಲಿದೆ ಇಲ್ಲದೆ ಹೋದರೆ ಕಹಿ ಅವರ ರಾಜಕೀಯ ಬದುಕನ್ನು ಆವರಿಸಲಿದೆ… ಹಾಗೆಯೇ ಸಚಿವರಾಗಿರುವ ಕೆಲವರು ಅಧಿಕಾರ ಕಳೆದುಕೊಳ್ಳುವ ಸಾಧ್ಯತೆಯಿದ್ದು ಅವರಿಗೆ ಸಿಹಿ ಹೋಗಿ ಕಹಿ ಬಂದರೂ ಬರಬಹುದು..

ಈ ಬಾರಿಯ ಯುಗಾದಿ ರಾಜ್ಯ ರಾಜಕೀಯದಲ್ಲಿ ಹಲವು ರೀತಿಯ ಸವಾಲ್ ಗಳನ್ನು ರಾಜಕಾರಣಗಳಿಗೆ ತಂದೊಡ್ಡಲಿದೆ. ಅದರಲ್ಲೂ ಅಧಿಕಾರದಲ್ಲಿರುವ ಕಾಂಗ್ರೆಸ್ ನಾಯಕರಿಗೆ ಅಗ್ನಿಪರೀಕ್ಷೆಯೇ… ನಿಜ ಹೇಳಬೇಕೆಂದರೆ ಬಹುಮತ ಪಡೆದು ಅಧಿಕಾರ ಪಡೆದರೂ ಸಿಎಂ ಗದ್ದುಗೆಯಲ್ಲಿರುವ ಸಿದ್ದರಾಮಯ್ಯರಾಗಲೀ, ಡಿಸಿಎಂ ಡಿ.ಕೆ.ಶಿವಕುಮಾರ್ ಆಗಲೀ ನೆಮ್ಮದಿಯಾಗಿ ಆಡಳಿತ ನಡೆಸಲು ಸಾಧ್ಯವಾಗಲೇ ಇಲ್ಲ.. ಗ್ಯಾರಂಟಿ ಯೋಜನೆಗಳು ಅವರು ಅಂದುಕೊಂಡಂತೆ ಆಡಳಿತ ನಡೆಸಲು ಅವಕಾಶ ಮಾಡಿ ಕೊಡಲಿಲ್ಲ. ಇವತ್ತು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬಡವರು ಉದ್ಧಾರವಾಗಿದ್ದಾರೆ ಎಂದು ಪುಂಗಿ ಊದಿದರೂ ಅದರ ಎಫೆಕ್ಟ್ ಅಭಿವೃದ್ಧಿ ಕಾರ್ಯಗಳ ಮೇಲೆ ಆಗಿದೆ ಎನ್ನುವುದು ಅಷ್ಟೇ ಸತ್ಯ.
ಇನ್ನು ಸಿದ್ದರಾಮಯ್ಯರಿಗೆ ಸಿಎಂ ಗದ್ದುಗೆ ಸಿಹಿಗಿಂತ ಕಹಿಯನ್ನೇ ತಂದೊಡ್ಡಿದೆ.. ಸ್ವತಃ ತಾವೇ ಮುಡಾ ಹಗರಣದಲ್ಲಿ ಸಿಲುಕುವಂತಾಯಿತಲ್ಲದೆ ಮುಡಾ ಸೈಟ್ ಗಳನ್ನು ವಾಪಾಸ್ಸು ನೀಡುವಂತಾಯಿತು. ಜತೆಗೆ ಭ್ರಷ್ಟಾಚಾರ, ದುರುಪಯೋಗದ ಆರೋಪಗಳು ಸಚಿವ ಸಂಪುಟದ ಸಹದ್ಯೋಗಿಗಳ ಮೇಲೆ ಬಂತು ಕೆಲವರು ಜೈಲ್ ಪಾಲಾದರು.. ಇನ್ನು ನೀಡಿದ ಭರವಸೆ ಈಡೇರಿಸಿಲ್ಲ ಎಂದು ಅಂಗನವಾಡಿ, ಕೆಎಸ್ ಆರ್ ಟಿಸಿ ನೌಕರರು ಸೇರಿದಂತೆ ಹಲವರು ಬೀದಿಗಿಳಿದರು.. ಯುವ ಜನತೆ ಉದ್ಯೋಗದ ನೇಮಕಾತಿ ಮಾಡುತ್ತಿಲ್ಲವೆಂದು ಆರೋಪಿಸಿ ಹೋರಾಟ ಮಾಡಿದರು.. ಬಜೆಟ್ ಮಂಡಿಸಿದರೂ ಅದು ಸಾಲದ ಬಜೆಟ್ ಆಗಿ ಸಿದ್ದರಾಮಯ್ಯ ಅಲ್ಲ ಸಾಲದ ರಾಮಯ್ಯ ಎಂದು ಪ್ರತಿಪಕ್ಷದವರು ಟೀಕೆ ಮಾಡುವಂತಾಯಿತು.

ನಿಜ ಹೇಳಬೇಕೆಂದರೆ ರಾಜಕೀಯದಲ್ಲಿ ಬೇವು ಬೆಲ್ಲ ಇದ್ದದ್ದೇ ಆದರೆ ಪ್ರತಿಯೊಬ್ಬ ನಾಯಕರು ಕೂಡ ತಮಗೆ ಸಿಹಿ ಬೇಕೆಂದು ಬಯಸುತ್ತಾರೆ. ಅದರಂತೆ ಸಿದ್ದರಾಮಯ್ಯರವರು ಕೂಡ… ಸದ್ಯಕ್ಕೆ ದಕ್ಕಿರುವ ಸಿಹಿ ಅಂದರೆ ಸಿಎಂ ಗದ್ದುಗೆಯನ್ನು ಬಿಟ್ಟುಕೊಟ್ಟು ಕಹಿಯುಣ್ಣಲು ಅವರು ತಯಾರಿಲ್ಲ.. ಹೀಗಾಗಿ ಸಿಹಿಯ ನಿರೀಕ್ಷೆಯಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಇನ್ನೆಷ್ಟು ದಿನ ಕಹಿಯನ್ನು ಬಾಯಿಯಲ್ಲಿಟ್ಟುಕೊಂಡು ಮುನ್ನಡೆಯುತ್ತಾರೆ ಎಂಬುದನ್ನು ಊಹೆ ಮಾಡುವುದು ಕಷ್ಟವೇ… ಇದರಾಚೆಗೆ ಪಂಚರಾಜ್ಯಗಳ ಚುನಾವಣೆಗಳು ಘೋಷಣೆಯಾಗಿವೆ… ಅದರತ್ತಲೂ ರಾಜ್ಯ ಕಾಂಗ್ರೆಸ್ ಗಮನಹರಿಸಬೇಕಾಗಿದೆ.
ಕಳೆದ ಬಾರಿ ಪಂಚರಾಜ್ಯಗಳ ಚುನಾವಣೆಗಳು ನಡೆದಾಗ ಅಲ್ಲೆಲ್ಲ ಕರ್ನಾಟಕದ ಗ್ಯಾರಂಟಿಗಳನ್ನು ಪ್ರಚಾರ ಮಾಡಲಾಯಿತು. ಆದರೆ ಅದು ಅಲ್ಲಿ ಕೆಲಸ ಮಾಡಲಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ಅಲ್ಲಿ ಹೋಗಿ ಪ್ರಚಾರ ಮಾಡಿದರು. ಆದರೆ ಅದ್ಯಾವುದೂ ಸಿಹಿಯಾಗಲಿಲ್ಲ.. ಪರಿಣಾಮ ಇಡೀ ಕಾಂಗ್ರೆಸ್ ಪಕ್ಷಕ್ಕೆ ಬರೀ ಬೇವು ತಿಂದ ಅನುಭವಾಯಿತು.. ಇದೆಲ್ಲದರ ನಡುವೆ ಕಾಂಗ್ರೆಸ್ ಚುನಾವಣೆ ಎದುರಿಸಬೇಕಾದರೆ ಸಂಪನ್ಮೂಲಗಳು ಕರ್ನಾಟಕದ ಕಡೆಯಿಂದಲೇ ಹೋಗಬೇಕಾಗಿದೆ.

ಈಗಾಗಲೇ ಅಸ್ಸಾಂ ಚುನಾವಣೆಯ ಜವಬ್ದಾರಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹೆಗಲಿಗೆ ಹಾಕಿದ್ದಾರೆ. ಅಲ್ಲಿ ಹೋಗಿ ಚುನಾವಣೆಯನ್ನು ಗೆಲ್ಲಿಸಿಕೊಂಡು ಬರಲು ಡಿಕೆಶಿಗೆ ಸಾಧ್ಯವಾಗುತ್ತಾ? ಗೊತ್ತಿಲ್ಲ… ಏಕೆಂದರೆ ಅಲ್ಲಿನ ಕಾಂಗ್ರೆಸ್ ಮುಖಂಡರನ್ನು ಬಿಜೆಪಿ ಸದ್ದಿಲ್ಲದೆ ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವಿನ ರಾಜಕೀಯ ಸಂಘರ್ಷದಲ್ಲಿ ಕಾಂಗ್ರೆಸ್ ಬಡವವಾಗಿದೆ.. ಟಿಎಂಸಿ ಮತ್ತು ಕಾಂಗ್ರೆಸ್ ಇಂಡಿ ಒಕ್ಕೂಟದಲ್ಲಿದ್ದರೂ ಚುನಾವಣೆ ಬಂದಾಗ ಕಾಂಗ್ರೆಸ್ ನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಲು ಮಮತಾ ಬ್ಯಾನರ್ಜಿ ತಯಾರಿಲ್ಲ.. ಹೀಗಾಗಿ ಅಲ್ಲಿ ರಾಜಕೀಯವಾಗಿ ಕಾಂಗ್ರೆಸ್ ಶತ್ರುವೇ…
ಪಂಚ ರಾಜ್ಯ ಚುನಾವಣೆಗಳು ರಾಷ್ಟ್ರೀಯ ಕಾಂಗ್ರೆಸ್ ನ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ… ಆ ತಲೆನೋವಿನ ಪೈಕಿ ಕೆಲವನ್ನು ರಾಜ್ಯ ಕಾಂಗ್ರೆಸ್ ನಾಯಕರ ಮೇಲೆ ಹೈಕಮಾಂಡ್ ಹೇರುವ ಸಾಧ್ಯತೆಯಿದೆ. ಪಂಚರಾಜ್ಯ ಚುನಾವಣೆಯನ್ನು ಎದುರಿಸಬೇಕಾದರೆ ರಾಜ್ಯ ಕಾಂಗ್ರೆಸ್ ನ ಸಹಕಾರ ಇರಲೇ ಬೇಕಾಗಿದೆ. ಅತ್ತ ಕಡೆಗೆ ರಾಜ್ಯ ನಾಯಕರು ಅನಿವಾರ್ಯವಾಗಿ ಫೋಕಸ್ ಮಾಡಲೇ ಬೇಕಾಗಿದ್ದು, ಅದರ ಪರಿಣಾಮಗಳು ರಾಜ್ಯದ ಅಭಿವೃದ್ಧಿ ಮೇಲೆ ಆದರೂ ಅಚ್ಚರಿಯಿಲ್ಲ. ಹಾಗೆಯೇ ರಾಜ್ಯ ಸರ್ಕಾರ ಮುಂದೆ ಬರಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಡೆಗೂ ಗಮನ ನೀಡಲೇ ಬೇಕಾಗಿದೆ.

ಇದೆಲ್ಲವನ್ನು ಗಮನಿಸಿದರೆ ಸದ್ಯಕ್ಕೆ ಈ ಬಾರಿ ಯುಗಾದಿಯ ಆರಂಭವೇ ಕಾಂಗ್ರೆಸ್ ನಾಯಕರಿಗೆ ಕಹಿಯಾಗಿ ಕಾಣುತ್ತಿದೆ. ಜತೆಗೆ ಇತ್ತೀಚೆಗಿನ ರಾಜಕೀಯ ಚಿಂತನೆಗಳು ಅಚ್ಚರಿ ಮೂಡಿಸುತ್ತಿವೆ. ಪ್ರತಿಯೊಬ್ಬ ನಾಯಕನೂ ತಾನು ಮುಂದಿನ ಅವಧಿಗೂ ಆಯ್ಕೆಯಾಗಿ ಬರಬೇಕು, ತನ್ನ ಜನಪ್ರಿಯತೆ ಉಳಿಸಿಕೊಳ್ಳಬೇಕಾದರೆ ಏನು ಮಾಡಬೇಕು? ಓಟ್ ಬ್ಯಾಂಕ್ ನ್ನು ಗಟ್ಟಿ ಮಾಡಿಕೊಳ್ಳುವುದು ಹೇಗೆ? ಹೀಗೆ ದಿನ ನಿತ್ಯವೂ ತನ್ನ ರಾಜಕೀಯ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದಾರೆಯೇ ವಿನಃ ಯಾರೂ ಕೂಡ, ರಾಜ್ಯದ ಅಭಿವೃದ್ಧಿ ಬಗ್ಗೆಯಾಗಲೀ, ಜನ ಸಾಮಾನ್ಯರ ಬದುಕಿನ ಬಗ್ಗೆಯಾಗಲೀ ಚಿಂತೆ ಮಾಡುತ್ತಿಲ್ಲ ಎನ್ನುವುದು ನಮ್ಮ ಮುಂದಿರುವ ಸತ್ಯವಾಗಿದೆ.
ರಾಜ್ಯವನ್ನು ಬೆಲೆ ಏರಿಕೆಯ ಬೆಂಕಿ ಇನ್ನಿಲ್ಲದಂತೆ ಸುಡುತ್ತಿದೆ.. ಸರ್ಕಾರಿ ನೌಕರರು, ಕಾರ್ಪೋರೇಟ್ ಉದ್ಯೋಗಿಗಳು ಹೇಗೋ ಜೀವನ ಮಾಡಿಕೊಂಡು ಹೋಗುತ್ತಾರೆ ಆದರೆ ದಿನಕೂಲಿಗಳು, ಸಣ್ಣಪುಟ್ಟ ಕೆಲಸ ಮಾಡಿ ಬದುಕುವವರ ಸ್ಥಿತಿ ಏನು? ಬೆಲೆ ಏರಿಕೆಯ ಹೊಡೆತದಲ್ಲಿ ಅವರು ಜೀವನ ನಡೆಸುವುದಾದರೂ ಹೇಗೆ? ಆಡಳಿತ ಪಕ್ಷದಲ್ಲಿರುವ ನಾಯಕರಿಗೆ ಸಿಎಂ ಸ್ಥಾನ, ಸಚಿವ ಸ್ಥಾನವನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಾದರೆ, ವಿಪಕ್ಷದಲ್ಲಿರುವವರಿಗೆ ನಾವು ಅಧಿಕಾರಕ್ಕೆ ಬರುವುದು ಯಾವಾಗ ಎಂಬ ಚಿಂತೆ. ಎಲ್ಲರಿಗೂ ಅವರ ರಾಜಕೀಯ ಭವಿಷ್ಯದ ಚಿಂತೆಯೇ ವಿನಃ ಜನರ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಹೀಗಾಗಿಯೇ ಸಿಹಿಯನ್ನು ತಾವುಂಡು ಕಹಿಯನ್ನು ಜನರ ಬಾಯಿಗೆ ಹಾಕಿ ನೆಮ್ಮದಿಯಾಗಿರುವಂತೆ ಕಾಣುತ್ತಿದೆ.

ಸದ್ಯಕ್ಕೆ ರಾಜ್ಯದಲ್ಲಿ ಮೂರು ಪಕ್ಷಗಳಿದ್ದು, ಮೂರು ಪಕ್ಷಗಳಲ್ಲೂ ಮೂರು ತರಹದ ಸಮಸ್ಯೆಗಳು ಇದೀಗ ಗೋಚರಿಸಲಾರಂಭಿಸಿದೆ. ಆಡಳಿತ ಪಕ್ಷದಲ್ಲಿ ಕುರ್ಚಿ ಗಲಾಟೆ ಒಳಗೊಳಗೆ ನಡೆಯುತ್ತಿದ್ದು, ಇದರ ಪರಿಣಾಮ ಆಡಳಿತ ಹಳ್ಳ ಹಿಡಿಯುತ್ತಿದೆ. ಇನ್ನು ಆಡಳಿತ ಪಕ್ಷ ಹಳಿ ತಪ್ಪಿದಾಗ ಅದನ್ನು ಎಚ್ಚರಿಸಬೇಕಾದ ವಿಪಕ್ಷಗಳ ಸ್ಥಿತಿ ಊರು ಬಾಗಿಲಾಗಿದೆ. ಇರುವ ನಾಲ್ಕು ಮಂದಿಯೇ ಕಿತ್ತಾಡಿಕೊಂಡು ಉಚ್ಛಾಟನೆ ಶಿಕ್ಷೆ ಅನುಭವಿಸಿಕೊಂಡು ಒಬ್ಬರನೊಬ್ಬರು ಬೈಯ್ದುಕೊಂಡು ತಿರುಗಾಡುತ್ತಿದ್ದು ಅವರು ಒಂದಾಗಿ ಆಡಳಿತ ಪಕ್ಷದ ವಿರುದ್ಧ ಹೋರಾಟ ಮಾಡುವ ಲಕ್ಷಣಗಳು ಕಾಣಿಸುತ್ತಿಲ್ಲ…
ರಾಜಕಾರಣಿಗಳು ಬೇವುಗಿಂತ ಬೆಲ್ಲಕ್ಕಾಗಿಯೇ ಹೋರಾಡುವುದು ಸಾಮಾನ್ಯವಾಗಿದ್ದು, ಪರಿಸ್ಥಿತಿ ಏನೇ ಆದರೂ ಬೆಲ್ಲ ತಿಂದು ಬೇವನ್ನು ಜನಸಾಮಾನ್ಯರ ಬಾಯಿಗೆ ಹಾಕುವ ಜಾಣ್ಮೆ ಅವರಿಗಿದೆ.. ಹೀಗಾಗಿ ಜನ ಸಾಮಾನ್ಯರ ಬದುಕು ಅದೆಷ್ಟು ಯುಗಾದಿ ಬಂದರೂ ಸುಧಾರಿಸುವ ಲಕ್ಷಣಗಳು ಗೋಚರಿಸುತ್ತಿಲ್ಲ… ಅದು ಏನೇ ಇರಲಿ ಬೇವು- ಬೆಲ್ಲ ತಿಂದು ಕಷ್ಟ ಮತ್ತು ಸುಖಗಳನ್ನು ಸಮನಾಗಿ ಸ್ವೀಕರಿಸೋಣ… ದೇವರು ನಮ್ಮನ್ನಾಳುವ ನಾಯಕರಿಗೆ ಒಳ್ಳೆಬುದ್ದಿ ಕೊಡಲಿ ಎಂದು ಬೇಡಿಕೊಳ್ಳೋಣ…
B M Lavakumar








