LatestMysore

ಮಾ.22, ಮೈಸೂರು ಜಿಲ್ಲಾ ಉಪ್ಪಾರ ನೌಕರರ, ವೃತ್ತಿಪರರ ಸಂಘದಿಂದ ಪ್ರತಿಭಾ ಪುರಸ್ಕಾರ, ಸನ್ಮಾನ

ಸಾಲಿಗ್ರಾಮ(ಸಂಘಟನೆ ಮಂಜುನಾಥ್): ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ ವತಿಯಿಂದ ಮಾ.22ರ ಭಾನುವಾರ ಬೆಳಿಗ್ಗೆ 10ಗಂಟೆಗೆ ಮೈಸೂರು ನಗರದ ಕರ್ನಾಟಕ ಕಲಾಮಂದಿರದಲ್ಲಿ  ಸಂಘದ 30ನೇ ವಾರ್ಷಿಕ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳ ಸಾಧಕರು ಮತ್ತು ಬಡ್ತಿ ಹೊಂದಿದ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಪ್ರಚಾರ ಕಾರ್ಯದರ್ಶಿ ಕೆ.ಟಿ.ಮೋಹನ್ ಕುಮಾರ್ ತಿಳಿಸಿದ್ದಾರೆ.

ಅವರು ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿ ಹೊಸದುರ್ಗದ ಭಗೀರಥ ಪೀಠದ ಜಗದ್ಗುರುಗಳಾದ ಡಾ.ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿಗಳು ಹಾಗೂ ಮಳವಳ್ಳಿಯ ಐಯ್ಯನ ಸರಗೂರು ಮಠದ ಶ್ರೀ ಮಹದೇವಸ್ವಾಮಿಗಳು  ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.

ಚಾಮರಾಜನಗರ ಕ್ಷೇತ್ರದ ಶಾಸಕರು ಹಾಗೂ ಎಂಎಸ್ ಐ ಎಲ್ ಅಧ್ಯಕ್ಷರಾದ ಸಿ.ಪುಟ್ಟರಂಗಶೆಟ್ಟಿ ಅವರು ಸಮಾರಂಭವನ್ನು  ಉದ್ಘಾಟನೆ ಮಾಡಲಿದ್ದು, ಶ್ರೀ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಜಿ ಎಸ್ ಟಿ ಆಫೀಲು ನ್ಯಾಯಾಧಿಕರಣದ  ತಾಂತ್ರಿಕ ಸದಸ್ಯರಾದ (ಕರ್ನಾಟಕ ರಾಜ್ಯ) ಡಿ.ಜಗನ್ನಾಥ್ ಸಾಗರ್ ನೆರವೇರಿಸಲಿದ್ದು, ಶ್ರೀ ಭಗೀರಥ ವಿದ್ಯಾಶ್ರೀ ಪ್ರಶಸ್ತಿಯನ್ನು ಕೆಎಂಎಫ್ ನಿರ್ದೇಶಕಿ ಶೀಲಾ ಪುಟ್ಟರಂಗಶೆಟ್ಟಿ  ಪ್ರಧಾನ ಮಾಡಲಿರುವ ಸಮಾರಂಭದ  ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎಂ.ರಾಮಚಂದ್ರು ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ  ಅತಿ ಹೆಚ್ಚಿನ ಅಂಕಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ವಿವಿಧ ಇಲಾಖೆಗಳಲ್ಲಿ ಬಡ್ತಿ ಹೊಂದಿರುವ ನೌಕರರು ಹಾಗೂ ನಿವೃತ್ತ ನೌಕರರು ಮತ್ತು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸೇವೆಯನ್ನು ಮಾಡುತ್ತಿರುವ ಸಮಾಜದ ಸಾಧಕರುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ವಿವಿಧ ಜನಪ್ರತಿನಿಧಿಗಳು, ಮುಖಂಡರುಗಳು, ಸಂಘ-ಸಂಸ್ಥೆಗಳವರು, ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರುಗಳು ಭಾಗವಹಿಸಲಿದ್ದಾರೆ. ಈ ಸಮಾರಂಭಕ್ಕೆ ಉಪ್ಪಾರ ಸಮಾಜದ ಬಂಧುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ಮನವಿ ಮಾಡಿದ್ದಾರೆ.

admin
the authoradmin

Leave a Reply

Translate to any language you want