ವಚನ ಕುಮಾರಸ್ವಾಮಿ ರೂಪ ಕುಮಾರಸ್ವಾಮಿರವರಿಂದ ಸಂಪಾದಿತ ವಚನ ಗ್ರಾಮ ಕೃತಿ ಲಭ್ಯ.. ನೀವೂ ಓದಿ..
ಇದು ಶರಣು ವಿಶ್ವವಚನ ಫೌಂಡೇಷನ್ ನ ಪ್ರಕಟಣೆ

ಮೈಸೂರು: ಗ್ರಾಮವೆಂದರೆ ಕೇವಲ ಮನೆಗಳ ಗುಂಪಲ್ಲ, ಅದು ಮಣ್ಣಿನೊಳಗೆ ಉಸಿರಾಡುವ ಸಂಸ್ಕೃತಿ. ಆ ಸಂಸ್ಕೃತಿಗೆ ಆತ್ಮದ ಬೆಳಕು ಹಚ್ಚುವ ಕಾರ್ಯವನ್ನು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥೆ “ವಚನಗ್ರಾಮ” ಎಂಬ ಮಹತ್ತ್ವದ ಕಾರ್ಯಕ್ರಮ ರೂಪಿಸಿ ಇದುವರೆಗೆ 30 ಕಾರ್ಯಕ್ರಮಗಳನ್ನು ನಡೆಸಿದೆ. ಈ ಕಾರ್ಯಕ್ರಮದಲ್ಲಿ ಪ್ರತೀ ಮನೆಗೂ ಉಚಿತವಾಗಿ ವಚನ ಪುಸ್ತಕ ನೀಡುವ ಮೂಲಕ ವಚನ ಸಾಹಿತ್ಯದ ಅರಿವು ಮಾತ್ರವಲ್ಲ, ಬದುಕಿನ ದಾರಿಯನ್ನೇ ತೋರಿಸುವ ದೀಪವನ್ನು ಗ್ರಾಮೀಣ ಜನರ ಕೈಗೆ ನೀಡಲಾಗಿದೆ.

ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಅವರ ಸಂಪಾದಕತ್ವದಲ್ಲಿ ಮೂಡಿ ಬಂದಿರುವ ವಚನಗ್ರಾಮ ಕೃತಿಯಲ್ಲಿ ಬಸವಣ್ಣನವರ ತತ್ವ, ಅಲ್ಲಮಪ್ರಭುವಿನ ಚಿಂತನೆ, ಅಕ್ಕಮಹಾದೇವಿಯ ವೈರಾಗ್ಯ, ಚೆನ್ನಬಸವಣ್ಣನ ಜ್ಞಾನ, ಮೋಳಿಗೆ ಮಾರಯ್ಯನ ಸರಳತೆ, ಜೇಡರ ದಾಸಿಮಯ್ಯನ ಸಮತೆ, ವೈದ್ಯ ಸಂಗಣ್ಣನ ಮಾನವೀಯತೆ, ಆಯ್ದಕ್ಕಿ ಮಾರಯ್ಯನ ಕಾಯಕದ ಹಿರಿಮೆ, ಅಂಬಿಗರ ಚೌಡಯ್ಯನ ನಿಷ್ಠೆ, ಅಕ್ಕಮ್ಮ ಮತ್ತು ಸತ್ಯಕ್ಕನವರ ಆಂತರಿಕ ಶಕ್ತಿ.
ಸಿದ್ಧರಾಮೇಶ್ವರರ ಸಾಮಾಜಿಕ ಕಾಳಜಿ, ಉರಿಲಿಂಗದೇವರ ವೈಚಾರಿಕತೆ, ಒಕ್ಕಲಿಗ ಮುದ್ದಣ್ಣನ ನೆಲದ ಸೊಗಡು, ಷಣ್ಮುಖಸ್ವಾಮಿಯ ಆತ್ಮದ ಅರಿವು, ಹೀಗೆ ವಿವಿಧ ಶರಣರ ಒಟ್ಟು 61 ವಚನಗಳು ಕಿರು ಹೊತ್ತಿಗೆಯ ರೂಪದಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಎಲ್ಲಾ ಕ್ಷಣಗಳಲ್ಲಿ ಜೊತೆಯಾಗುವ ಪ್ರತೀ ವಚನವೂ ಒಂದು ದೀಪ, ಪ್ರತೀ ಮನೆ ಒಂದು ವಚನದ ಮನೆ, ಅದೇ ಈ ಕಿರುಹೊತ್ತಿಗೆಯ ಮಹಿಮೆಯಾಗಿದ್ದು, ಗ್ರಾಮೀಣ ಜನರ ಬದುಕಿಗೆ ಚೈತನ್ಯದ ಉಸಿರಾಗಿ ಇಳಿದಿವೆ.

ಬೆಳಗ್ಗೆ ಹಾಸಿಗೆಯಿಂದ ಎದ್ದ ಕ್ಷಣದಲ್ಲಿ ಎನ್ನ ವಾಮಕ್ಷೇಮ ನಿಮ್ಮದಯ್ಯಾ ಎಂಬ ವಚನದಿಂದ ಆರಂಭವಾಗಿ, ಮೌಢ್ಯ ನಿವಾರಣೆಗೆ, ಊಟ ಮಾಡುವ ವೇಳೆಗೆ, ಸ್ತುತಿ–ನಿಂದನೆ ಎದುರಾದಾಗ, ಸತ್ಕಾರ್ಯಕ್ಕೆ ಕೈ ಹಾಕುವಾಗ, ಹಸಿವು, ಅನಾರೋಗ್ಯ, ಕಾಯಕ, ಯಾರ ಸಂಗ ಬೇಕು, ಸಮಾಜದಲ್ಲಿ ಹೇಗೆ ಬದುಕಬೇಕು ಎಂಬ ಪ್ರತೀ ಕ್ಷಣಕ್ಕೂ ಯಾವ ವಚನ ಹೇಳಬೇಕು ಎಂಬುದನ್ನು ಈ ಕಿರು ಪುಸ್ತಕ ಅತ್ಯಂತ ಸುಂದರವಾಗಿ ಸೂಚಿಸುತ್ತದೆ. ಇದು ಓದುವ ಪುಸ್ತಕವಲ್ಲ, ಜೀವನದಲ್ಲಿ ನಡೆಯುವ ಪುಸ್ತಕ.
ಪ್ರತೀ ವಚನವೂ ಉಪದೇಶವಲ್ಲ, ಅನುಭವದ ನೆರಳು. ಗ್ರಾಮವನ್ನು ವಚನಗ್ರಾಮವೆಂದು ಘೋಷಿಸುವುದು ಘೋಷಣೆಯಲ್ಲ. ಒಂದು ಬದುಕನ್ನು ಬೆಳಕಿನ ದಾರಿಗೆ ಕರೆತರುವ ಸಂಸ್ಕೃತಿಯ ಸಂಭ್ರಮ. ವಚನಗಳೊಂದಿಗೆ ನಡೆಯುವ ಗ್ರಾಮ, ನಾಳೆಗೆ ದೀಪ ಹಚ್ಚುವ ಗ್ರಾಮ. ಅದೇ ವಚನಗ್ರಾಮದ ಅರ್ಥ. ವಚನಗ್ರಾಮ ಕೃತಿ ಕೈಯಲ್ಲಿ ಹಿಡಿದು ಓದುವ ಕ್ಷಣದಿಂದಲೇ ಅನುಭವದ ಮಾತುಗಳು ಹೃದಯ ತಟ್ಟುತ್ತವೆ. ಅರ್ಧ ತಾಸಿನ ಓದಿನೊಳಗೆ ಬದುಕು ತೆರೆದು ಪ್ರತೀ ವಚನವು ಮನಸ್ಸಿನಲ್ಲಿ ಶಾಶ್ವತವಾಗುತ್ತದೆ. ಆಸಕ್ತರು ಈ ಕೃತಿಗಾಗಿ ಮೊ. 9901137948 ಸಂಪರ್ಕಿಸಬಹುದು.







