ವಚನ ಸಾಹಿತ್ಯ ಕೇವಲ ಧಾರ್ಮಿಕ ಪಠ್ಯವಲ್ಲ.. ಮಾನವೀಯ ಮೌಲ್ಯ, ಸಾಮಾಜಿಕ ನ್ಯಾಯದ ದೀಪ
ವಚನಗಳ ಮೌಲ್ಯಗಳು ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ಅಷ್ಟೇ ಪ್ರಸ್ತುತವಾಗಿವೆ. ವಚನ ಸಾಹಿತ್ಯದ ಸರಳತೆ, ಆಳವಾದ ತತ್ವ ಮತ್ತು ಸಮಾಜಮುಖಿ ಸಂದೇಶಗಳು ಇಂದಿನ ಪೀಳಿಗೆಗೆ ದಾರಿದೀಪವಾಗಬಲ್ಲವು.

ಮೈಸೂರು : ವಚನ ಸಾಹಿತ್ಯ ಕೇವಲ ಧಾರ್ಮಿಕ ಪಠ್ಯವಲ್ಲ; ಅದು ಮಾನವೀಯ ಮೌಲ್ಯ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ದೀಪವಾಗಿದ್ದು, ರಾಷ್ಟ್ರಮಟ್ಟಕ್ಕೆ ವಿಸ್ತರಿಸಬೇಕಿದೆ ಎಂದು ದೆಹಲಿ ಪಾರ್ಲಿಮೆಂಟ್ ಜಂಟಿ ನಿರ್ದೇಶಕ ಚಂದ್ರಶೇಖರ್ ಹೇಳಿದರು.
ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ವಿಜಯನಗರದ ಕನ್ನಡ ಸಾಹಿತ್ಯಭವನದಲ್ಲಿ ಶರಣು ದಿನದರ್ಶಿಕೆ, ವಚನಗ್ರಾಮ, ವೀಣಾ ನಂದೀಶ್ ಅವರ ಶಿವಶರಣರ ಪ್ರಶ್ನೋತ್ತರ ದೀವಿಗೆ ಕೃತಿಗಳ ಬಿಡುಗಡೆ, ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ವಚನ ಸಾಹಿತ್ಯ ಕೇವಲ ಧಾರ್ಮಿಕ ಪಠ್ಯವಲ್ಲ; ಅದು ಮಾನವೀಯ ಮೌಲ್ಯ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ದೀಪವಾಗಿದೆ. ಶರಣು ವಿಶ್ವವಚನ ಫೌಂಡೇಷನ್ ವಚನ ಸಂಸ್ಕೃತಿಯನ್ನು ಬದುಕಿನ ಹಾದಿಯನ್ನಾಗಿಸಿ ಸಮಾಜದೊಳಗೆ ನೆಲೆಯೂರಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿದೆ ಎಂದು ಶ್ಲಾಘಿಸಿ ಇಂತಹ ಚಟುವಟಿಕೆಗಳು ರಾಜ್ಯಮಟ್ಟಕ್ಕೆ ಮಾತ್ರ ಸೀಮಿತವಾಗದೆ, ರಾಷ್ಟ್ರಮಟ್ಟದಲ್ಲಿ ವಿಸ್ತರಿಸಬೇಕಾದ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ಸಹಯೋಗದಲ್ಲಿ ದೆಹಲಿಯಲ್ಲಿಯೂ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ತಾವು ಉತ್ಸುಕರಾಗಿರುವುದಾಗಿ ಘೋಷಿಸಿದರು.
ವಚನಗಳ ಮೌಲ್ಯಗಳು ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ಅಷ್ಟೇ ಪ್ರಸ್ತುತವಾಗಿವೆ. ವಚನ ಸಾಹಿತ್ಯದ ಸರಳತೆ, ಆಳವಾದ ತತ್ವ ಮತ್ತು ಸಮಾಜಮುಖಿ ಸಂದೇಶಗಳು ಇಂದಿನ ಪೀಳಿಗೆಗೆ ದಾರಿದೀಪವಾಗಬಲ್ಲವು. ಶ್ರಮ, ಸಮಾನತೆ ಮತ್ತು ಮಾನವೀಯತೆಯ ಸಂದೇಶವನ್ನು ಹೊತ್ತ ವಚನಗಳು ಭಾರತದ ಸಾಂಸ್ಕೃತಿಕ ಚೈತನ್ಯದ ಜೀವಾಳವೆಂದರು.
ಚಿಕ್ಕಮಗಳೂರು ವಿಶ್ವಧರ್ಮ ಪೀಠದ ಶ್ರೀ ಜಯಬಸವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ವಚನಗಳು ಬದುಕಿಗೆ ದೀಪವಾಗಿದ್ದು,ಇಂದಿನ ಸಮಾಜದಲ್ಲಿ ಮಾನವೀಯತೆ ಮಂಕಾಗುತ್ತಿರುವ ಸಂದರ್ಭದಲ್ಲಿ ವಚನ ಮೌಲ್ಯಗಳು ಆತ್ಮಪರಿಶೀಲನೆಗೆ ದಾರಿ ತೋರಿಸುತ್ತವೆ ಎಂದರು.

ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಜಡೇಸ್ವಾಮಿಗಳು ಮಾತನಾಡಿ, “ಶರಣು ವಿಶ್ವವಚನ ಫೌಂಡೇಷನ್ ಪ್ರಚಾರದ ಗದ್ದಲವಿಲ್ಲದೆ, ತತ್ವವನ್ನು ಮನದಟ್ಟು ಮಾಡುವ ಮೌನ ಸೇವೆ ಮಾಡುತ್ತಿದೆ. ಇದು ಸಂಸ್ಥೆಯ ಶಕ್ತಿ ಮತ್ತು ವೈಶಿಷ್ಟ್ಯ, ವಚನಗಳ ಅಂತರಂಗವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಕಾರ್ಯ ಸಂಸ್ಥೆಯಿಂದ ನಿರಂತರವಾಗಿ ನಡೆಯುತ್ತಿದೆ ಎಂದರು.
ಮಾಜಿ ವಿಧಾನ ಪರಿಷತ್ ಸದಸ್ಯ ಪ್ರೊ. ಮಲ್ಲಿಕಾರ್ಜುನಪ್ಪ ಅವರು ಮಾತನಾಡಿ, ಅಂದಿನ ವಚನ ಮೌಲ್ಯಗಳು ಇಂದಿನ ಸಮಾಜದ ಅಧಃಪತನದ ನಡುವೆ ಅತ್ಯಂತ ಅಗತ್ಯವಾಗಿವೆ. ನೈತಿಕತೆ, ಸಮಾನತೆ ಮತ್ತು ಶ್ರಮಸಂಸ್ಕೃತಿಯ ಸಂದೇಶವನ್ನು ವಚನಗಳು ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ವಚನ ಸೇವಾರತ್ನ ಪ್ರಶಸ್ತಿಯನ್ನು ಕನ್ನಡ ಕಲಾಕೂಟದ ಸಂಸ್ಥಾಪಕ ಎಂ. ಚಂದ್ರಶೇಖರ್ ಅವರಿಗೆ, ಶಿಕ್ಷಕರ ಕಣ್ಮಣಿ ಪ್ರಶಸ್ತಿಯನ್ನು ಶಿವಮೊಗ್ಗ ಯೋಗ ಗುರು ಸಿ.ವಿ ರುದ್ರಾರಾಧ್ಯ ಅವರಿಗೆ, ವಚನ ಕೋಗಿಲೆ ಪ್ರಶಸ್ತಿಯನ್ನು ಬೆಂಗಳೂರಿನ ಗಾಯಕ ಅನುರಾಗ್ ಗದ್ದಿಯವರಿಗೆ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ದತ್ತಿ ದಾಸೋಹಿಗಳು ಮತ್ತು ಆಜೀವ ಸದಸ್ಯರಿಗೆ ಸನ್ಮಾನಿಸಲಾಯಿತು. ನಿಹಾರಿಕ ಹಂಪೇಶ್ ಅವರು ವಚನ ನೃತ್ಯ ಮಾಡಿದರು.
ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ, ಪಂಚಾಕ್ಷರಯ್ಯ, ವೀಣಾ ನಂದೀಶ್, ಎ.ಆರ್. ನಾಗೇಂದ್ರಸ್ವಾಮಿ, ಅನಿಲ್ ಕುಮಾರ್ ವಾಜಂತ್ರಿ, ವಿ. ಲಿಂಗಣ್ಣ, ಶಿವಪುರ ಉಮಾಪತಿ, ಅನಿತಾ ನಾಗರಾಜ್, ನಮ್ರತಾ, ಉಷಾ ನಾಗೇಶ್, ಪುಷ್ಪಲತಾ, ವಚನ ಚೂಡಾಮಣಿ, ಪಿ.ವಿ ರುದ್ರೇಶ್, ಸಂದೀಪ್, ವಿಜಯ್, ಬಸವರಾಜು, ವಚನಾಂಬಿಕೆ ಉಪಸ್ಥಿತರಿದ್ದರು.







