ಮೈಸೂರು: ವಚನಸಾಹಿತ್ಯದ ಪಾರಮಾರ್ಥಿಕ ನ್ಯಾಯಾಲಯದಲ್ಲಿ ಆತ್ಮಸಾಕ್ಷಿಯೇ ತೀರ್ಪುಗಾರ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.
ಮೈಸೂರಿನ ರಾಮಕೃಷ್ಣನಗರದ ಐ ಬ್ಲಾಕ್ ನ ರಾಮಕೃಷ್ಣ ಸಭಾಮಂಟಪದಲ್ಲಿ ರಾಮಕೃಷ್ಣ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ 44ನೇ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಸಾಮಾಜಿಕ ಪರಿವರ್ತನೆಯಲ್ಲಿ ವಚನ ಸಾಹಿತ್ಯದ ಪಾತ್ರ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ ಎಂಬ ಬಸವಣ್ಣನವರ ವಚನವನ್ನು ಕೇಂದ್ರಬಿಂದು ಮಾಡಿಕೊಂಡು ವಚನಸಾಹಿತ್ಯದಲ್ಲಿ ಇರುವ ಪಾರಮಾರ್ಥಿಕ ನ್ಯಾಯಾಲಯದ ಬಗ್ಗೆ ತಿಳಿಸುತ್ತ, ವಚನದಲ್ಲಿನ ಮಹಾದೇವಸೆಟ್ಟಿ ಎಂಬ ರೂಪಕವು ಲೋಕಜೀವನದ ವ್ಯವಹಾರಿಕತೆ, ಲಾಭ–ನಷ್ಟಗಳ ಲೆಕ್ಕಾಚಾರ ಮತ್ತು ಮಾನವನ ಅಂತರಂಗದ ದ್ವಂದ್ವವನ್ನು ಬಿಂಬಿಸಿ, ಮನುಷ್ಯನ ಒಳಗಿನ ಸತ್ಯ, ಅಸತ್ಯಗಳ ಸಂಘರ್ಷವನ್ನು ತೋರಿಸುತ್ತವೆ.
ವಚನಸಾಹಿತ್ಯವು ಪ್ರತಿಯೊಬ್ಬರ ಒಳಗಿರುವ ನ್ಯಾಯಾಧೀಶನನ್ನು ಜಾಗೃತಗೊಳಿಸುವ ಶಕ್ತಿ ಹೊಂದಿದೆ. ಮಾನವನು ಹೃದಯದಲ್ಲಿ ಹಿಂಸೆಯನ್ನು ಇಟ್ಟುಕೊಂಡಿದ್ದರೆ ಪಾವಿತ್ರ್ಯತೆ ಸಾಧ್ಯವಿಲ್ಲ. ಆದ್ದರಿಂದ ಯಾರ ಮನವನ್ನೂ ನೋಯಿಸದೆ, ಹಿಂಸೆಗೈಯದೆ ಬದುಕುವುದೇ ಪರಮ ಪಾವನತೆ ಎಂದು ವಚನಸಾಹಿತ್ಯ ಸಾರುತ್ತದೆ ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ನಾ ದೇವನಲ್ಲದೆ ನೀ ದೇವನೆ?” ಎಂಬ ಅಲ್ಲಮಪ್ರಭು ದೇವರ ವಚನವನ್ನು ಆಧರಿಸಿ ವಚನಸಾಹಿತ್ಯದ ತಾತ್ವಿಕ ಅರ್ಥವನ್ನು ಚರ್ಚಿಸಿದರು. ಈ ವಚನವು ದೇವರನ್ನು ಹೊರಗಿನ ಶಕ್ತಿಯಾಗಿ ಅಲ್ಲದೆ, ಆತ್ಮಾನುಭವದ ಪರಮ ಸತ್ಯವಾಗಿ ಅರಿಯಬೇಕೆಂಬ ಸಂದೇಶ ನೀಡುತ್ತದೆ. ದೇವರಿಂದ ಉಪಕಾರ ನಿರೀಕ್ಷಿಸುವ ಭಾವಕ್ಕಿಂತ ಸ್ವಾನುಭವ ಮತ್ತು ಜಾಗೃತ ಜೀವನವೇ ಶ್ರೇಷ್ಠ ಎಂಬುದನ್ನು ವಚನ ಸ್ಪಷ್ಟಪಡಿಸುತ್ತದೆ.
ನಡೆ, ನುಡಿ, ದೇಹ, ಮನಸ್ಸು ಮತ್ತು ಭಾವಗಳಲ್ಲಿ ಶುದ್ಧತೆಯನ್ನು ಪಾಲಿಸುವುದೇ ನಿಜವಾದ ಪಾವಿತ್ರ್ಯ ಎಂಬ ತತ್ತ್ವವನ್ನು ಅರಿಯಬೇಕು. ಬಾಹ್ಯ ತೀರ್ಥಸ್ನಾನಗಳಿಗಿಂತ ಜೀವನದ ಪ್ರತಿಕ್ಷಣದಲ್ಲಿ ಶುದ್ಧ ಆಚರಣೆ, ಸತ್ಯ ನಡವಳಿಕೆ ಮತ್ತು ನಿರ್ಮಲ ಭಾವನೆಗಳು ಮುಖ್ಯವೆಂದು ವಚನಸಾಹಿತ್ಯ ತಿಳಿಸುತ್ತದೆ ಎಂದರು.

ರಾಮಕೃಷ್ಣ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆ ಅಧ್ಯಕ್ಷ ಬಸವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಎನ್. ರಾಜೇಶ್, ತೀರ್ಥ, ನಾರಾಯಣಗೌಡ ಚೌಡಪ್ಪ. ಡಾ. ಯೋಗೇಶ್ ಇತರರು ಉಪಸ್ಥಿತರಿದ್ದರು.








