ಮೈಸೂರು: ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ವತಿಯಿಂದ ಮೈಸೂರಿನ ನಟರಾಜ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯತ ವಧು-ವರರ ಸಮಾವೇಶ ನಡೆಯಿತು.

ಜ್ಯೋತಿ ಬೆಳಗಿಸಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಡಾ. ಎಸ್ ಶಿವರಾಜಪ್ಪ ಅವರು, ಪ್ರಸ್ತುತ ದಿನಮಾನಗಳಲ್ಲಿ ಸಮುದಾಯಕ್ಕೆ ಅತ್ಯಗತ್ಯ ಕಾರ್ಯಕ್ರಮ ಇದಾಗಿದ್ದು, ಪ್ರತಿ ಹಳ್ಳಿಗಳಲ್ಲಿ ನೂರಾರು ಯುವಕರು ಹೆಣ್ಣು ಸಿಗದೆ ವಿವಾಹದ ವಯಸ್ಸು ಮೀರುತ್ತಿದ್ದು, ಅವಿವಾಹಿತರಾಗಿಯೇ ಉಳಿದು ಹೋಗುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಅತ್ಯಂತ ಔಚಿತ್ಯ ಪೂರ್ಣ ಕಾರ್ಯಕ್ರಮವನ್ನು ಈ ಸಂಘ ಆಯೋಜಿಸಿದ್ದು ಇದಕ್ಕಾಗಿ ನಾನು ಸಂಘದ ಪದಾಧಿಕಾರಿಗಳನ್ನು ಅಭಿನಂದಿಸುವುದಾಗಿ ಹೇಳಿದರು.

ಸಂಘದ ಸಂಸ್ಥಾಪಕ ಗೌರವ ಸಲಹೆಗಾರ ಕಲ್ಮಳ್ಳಿ ನಟರಾಜು ಮಾತನಾಡಿ, ಸಂಘಟನೆ ಕೇವಲ ನೌಕರರ ಕ್ಷೇಮಾಭಿವೃದ್ಧಿ ಕಾರ್ಯಕ್ಕೆ ಸೀಮಿತವಾಗದೆ ಸಮುದಾಯಕ್ಕೆ ಕಿಂಚಿತ್ ಸಹಾಯ ಹಸ್ತ ಚಾಚುವ ನಿಟ್ಟಿನಲ್ಲಿ ಅತ್ಯಗತ್ಯ ಉಪಯುಕ್ತ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳ ಬಹುದು ಎಂದು ಆಲೋಚಿಸಿದಾಗ ಪ್ರಸ್ತುತ ಸಮುದಾಯದ ಯುವಕರು ಎದುರಿಸುತ್ತಿರುವ ಬಹು ದೊಡ್ಡ ಸಮಸ್ಯೆ ಮದುವೆಯಾಗದೆ ಉಳಿದಿರುವುದು ಆಗಿದೆ. ಇದರಿಂದ ಬೇಸತ್ತು ಅನಾರೋಗ್ಯಕರ ದುಶ್ಚಟಗಳಿಗೆ ಮುಖ ಮಾಡುತ್ತಿದ್ದು, ಸಮುದಾಯದ ವಧು-ವರರ ಮತ್ತು ಪೋಷಕರನ್ನು ಒಂದೇ ವೇದಿಕೆಗೆ ತಂದು ಮುಖಾಮುಖಿಯಾಗಿ ಸರಿ ಕಂಡ ವಧು ಅಥವಾ ವರರು ಕಾರ್ಯ ನಿರ್ವಹಿಸುವ ವಿವಿಧ ಕ್ಷೇತ್ರಗಳ ಪರಿಚಯದ ಮೂಲಕ ಮುಕ್ತ ಅವಕಾಶ ನೀಡುತ್ತಿದ್ದೇವೆ.

ಆ ಮೂಲಕ ವಧು ವರರ ಮತ್ತು ಅವರ ಪೋಷಕರ ಮನವೊಲಿಕೆ ಮೂಲಕ ವಿಮುಖವಾಗಿರುವ ಯುವಕರಲ್ಲಿ ಆಶಾಭಾವನೆ ಮೂಡಿಸುವ ನಿಟ್ಟಿನಲ್ಲಿ ಸಮುದಾಯವನ್ನು ಸಂಘವು ಬೆಸೆಯುವ ಉದ್ದೇಶ ಮತ್ತು ಬಾಂಧವ್ಯ ಗಟ್ಟಿಗೊಳಿಸಬೇಕೆನ್ನುವ ಮಹದಾಸೆ ಹೊಂದಿದೆ. ಅದರ ಪ್ರಾರಂಭಿಕ ಹಂತದ ಕಾರ್ಯ ಚಟುವಟಿಕೆಯಾಗಿ ಈ ಕಾರ್ಯಕ್ರಮ ಹಮ್ಮಿ ಕೊಂಡಿದ್ದು, ನಮ್ಮ ನಿರೀಕ್ಷೆ ಮೀರಿ ಸಮುದಾಯದ ಬೆಂಬಲ ಸಿಕ್ಕಿದೆ. ನಮ್ಮ ಹುಮ್ಮಸ್ಸು ಆಸಕ್ತಿ ಇಮ್ಮಡಿ ಗೊಳಿಸಿದೆ ಇದನ್ನು ಪ್ರತಿ ತಿಂಗಳು ಆಯೋಜಿಸಲು ಮುಂದಿನ ಮಾಸಿಕ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ನಂತರ ಬೇರಾವುದೋ ಸಮುದಾಯದ ಸಂಘಟನೆ ಕೆಲಸ ಮಾಡಲಿಲ್ಲ ಎಂದು ವೃಥಾ ಆರೋಪ ಮಾಡದೆ ಇಂತಹ ಕಾರ್ಯ ಯೋಜನೆಗಳ ಮೂಲಕ ಮುಂದುವರೆದರೆ ಅವುಗಳು ತಾವು ನಿರ್ವಹಿಸಬೇಕಾದ ಜವಾಬ್ದಾರಿ ಅರಿತರೆ ನಮ್ಮ ಸಂಘಟನೆ ಶ್ರಮ ಸಾರ್ಥಕ ಎಂದರು

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬಿ ಆರ್ ಶಿವಕುಮಾರ್ ಇಂದಿನ ಕಾರ್ಯಕ್ರಮದ ಯಶಸ್ಸಿಗೆ ಮಾರ್ಗದರ್ಶಕರಿಗೆ ಪದಾಧಿಕಾರಿಗಳಿಗೆ ತುಂಬು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರಲ್ಲದೆ, ಮುಂದಿನ ದಿನಗಳಲ್ಲಿ ಸಮುದಾಯದ ನಿರುದ್ಯೋಗ ಯುವಕ ಯುವತಿಯರಿಗೆ ಸಮುದಾಯದ ಉದ್ಯಮಿಗಳ ಸಹಕಾರದಲ್ಲಿ ಉದ್ಯೋಗ ಮೇಳ ಹಮ್ಮಿ ಕೊಳ್ಳಲು ತೀರ್ಮಾನಿಸಿದೆ ಮತ್ತು ಸರಗೂರು ತಾಲೂಕಿನ ಆಯ್ದ ಒಂದು ಹಳ್ಳಿಯಲ್ಲಿ ಜೆಎಸ್ಎಸ್ ಆಸ್ಪತ್ರೆಯ ಸಹಯೋಗದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುತ್ತಿದೆ ಎಂದರು

ನಿಕಟ ಪೂರ್ವ ಮೈಸೂರು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷರಾದ ಕಾನ್ಯ ಶಿವಮೂರ್ತಿ, ಸನ್ಮಾರ್ಗ ಜೋತಿಷ್ಯ ಕೇಂದ್ರದ ಜ್ಯೋತಿಷಿ ಸು.ಕು ಮಹದೇವಸ್ವಾಮಿ ಮಾಲಂಗಿ ಸುರೇಶ್ ಪರಮೇಶ್ ಮಾಸ್ಟರ್ ಸುರೇಶ್ ಗಣೇಶ್, ಶ್ರೀಮತಿ ಮೀನಾಕ್ಷಿ ಬಸವಣ್ಣ, ಶ್ರೀಮತಿ ಶರ್ಮಿಳಾ ಮೋಹನ್, ಶಿಲ್ಪಾ ನಂದೀಶ್, ಮಂಜುಳಾ, ಶ್ರೀಮತಿ ಜಗದಾಂಬ, ಶ್ರೀಮತಿ ಮಾದಲಾಂಬಿಕೆ ಸಂಘದ ಪದಾಧಿಕಾರಿಗಳಾದ ಬಾಗಳಿ ಮಹೇಶ್ ಸಂತೋಷ್ ಬಾನಹಳ್ಳಿ ಗಜೇಂದ್ರ ಜಗದೀಶ್ ಶ್ರೀಮತಿ ಗಾಯತ್ರಿ, ವಿರೂಪಾಕ್ಷ ಆಯರ ಹಳ್ಳಿ, ಬಸವ ಬಳಗದ ಅಧ್ಯಕ್ಷ ಕ ಸಾ ಪಾ ಚಂದ್ರಶೇಖರ್, ಕೆ ವಿ ಮಲ್ಲೇಶ್ ಸೇರಿದಂತೆ ಸಾವಿರಾರು ಮಂದಿ ಉಪಸ್ಥಿತರಿದ್ದರು








