ದಕ್ಷಿಣ ಕೊಡಗಿನ ಹಾತೂರಿನಲ್ಲಿ ವನಭದ್ರಕಾಳೇಶ್ವರಿ ಹಬ್ಬದ ಸಂಭ್ರಮ… ಇದೊಂದು ವಿಭಿನ್ನ, ವಿಶಿಷ್ಟ ಹಬ್ಬ.. ವಿಶೇಷತೆಗಳೇನು?

ಒಂದೆಡೆ ಬಿಡುವಿಲ್ಲದೆ ಮಳೆ ಸುರಿಯುತ್ತಿದ್ದರೆ ಮತ್ತೊಂದೆಡೆ ದಕ್ಷಿಣ ಕೊಡಗಿನ ಗೋಣಿಕೊಪ್ಪ ಬಳಿಯಿರುವ ಹಾತೂರು ಕೊಳತ್ತೋಡು ಬೈಗೋಡಿನ ರಸ್ತೆ ಬದಿಯ ಅರಣ್ಯದಲ್ಲಿ ನೆಲೆ ನಿಂತಿರುವ ವನಭದ್ರಕಾಳಿಗೆ ಎರಡು ದಿನಗಳ ಹಬ್ಬದ ಸಂಭ್ರಮ ಮನೆ ಮಾಡಿದೆ. ಸದಾ ರಸ್ತೆ ರಸ್ತೆಯಲ್ಲಿ ಸಾಗುವ ಪ್ರಯಾಣಿಕರು ಮತ್ತು ಊರ ಜನ ಜಾನುವಾರುಗಳನ್ನು ಕಾಪಾಡುತ್ತಾ ಬಂದಿರುವ ವನಭದ್ರಕಾಳಿಗೆ ಪ್ರಾರ್ಥಿಸಿ ತಲೆಮಾರುಗಳಿಂದ ಆಚರಿಸಿಕೊಂಡು ಬಂದಿರುವ ಹಬ್ಬದ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತಿದೆ.
ಈ ಬಾರಿ ಮೇ ತಿಂಗಳಿನಿಂದ ಆರಂಭವಾದ ಮಳೆ ಧೋ ಎಂದು ಸುರಿದು ಜನರನ್ನು ಸಂಕಷ್ಟಕ್ಕೆ ನೂಕಿದೆ. ಹೀಗಾಗಿ ಜನ ವನಭದ್ರಕಾಳಿ ಸನ್ನಿದಾನದಲ್ಲಿ ತಲೆ ಬಾಗಿ ಮಳೆ ಕಡಿಮೆ ಸುರಿಸಿ ರಕ್ಷಿಸು ಎಂದು ಬೇಡಿಕೊಳ್ಳುವಂತಾಗಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಸರಿಯಾಗಿ ಮಳೆ ಬಾರದೆ ಇದ್ದಾಗ ತಾಯಿ ಮುಂದೆ ಮಳೆಗಾಗಿ ಬೇಡಿಕೊಳ್ಳುವ ಪರಿಸ್ಥಿತಿಯಿತ್ತು. ಆದರೆ ಈ ವರ್ಷದ ಮಳೆ ಜನತೆಗೆ ಸಂಕಷ್ಟವನ್ನು ತಂದೊಡ್ಡಿದೆ. ಹೀಗಾಗಿ ಹಬ್ಬದಲ್ಲಿ ಊರ ಜನ ದೇವರಲ್ಲಿ ಮಳೆ ಕಡಿಮೆ ಮಾಡಿ ಯಾವುದೇ ಅನಾಹುತ ಸೃಷ್ಟಿಸದಂತೆ ಪ್ರಾರ್ಥಿಸುವಂತಾಗಿದೆ.
ಇದನ್ನೂ ಓದಿ: ಭಕ್ತರ ಇಷ್ಟಾರ್ಥ ನೆರವೇರಿಸುವ ಚಾಮುಂಡಿಬೆಟ್ಟದ ತಾಯಿಗೆ ನಮೋ ಎನ್ನಿ…
ಇನ್ನು ವನಭದ್ರಕಾಳಿ ದೇಗುಲ ಮತ್ತು ಹಬ್ಬದ ಬಗ್ಗೆ ಹೇಳಬೇಕೆಂದರೆ, ವನಭದ್ರಕಾಳೇಶ್ವರಿ ದೇಗುಲ ಗೋಣಿಕೊಪ್ಪ ವಿರಾಜಪೇಟೆ ಮುಖ್ಯ ರಸ್ತೆಯ ಹಾತೂರು ಕೊಳತ್ತೋಡು ಬೈಗೋಡಿನಲ್ಲಿದ್ದು, ರಸ್ತೆಗೆ ಹೊಂದಿಕೊಂಡಂತೆ ಪ್ರವೇಶ ದ್ವಾರ ಕಾಣಿಸುತ್ತದೆ. ಸಾಮಾನ್ಯವಾಗಿ ಈ ರಸ್ತೆಯಲ್ಲಿ ತೆರಳುವವರು ಈ ದೇವತೆಗೆ ನಮಿಸಿ ಮುಂದೆ ಸಾಗುವುದು ಮಾಮೂಲಿಯಾಗಿದೆ. ಇಲ್ಲಿ ದಿನನಿತ್ಯ ಪೂಜಾ ಕೈಂಕರ್ಯ ನಡೆದರೂ ಎರಡು ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ಹಬ್ಬ ನಡೆಯುತ್ತದೆ. ಈ ಬಾರಿ ಜುಲೈ 7 ಮತ್ತು 8 ಎರಡು ದಿನಗಳ ಕಾಲ ಹಬ್ಬಾಚರಣೆ ನಡೆಯುತ್ತಿದೆ. ಈ ಹಬ್ಬದ ಆಚರಣೆ ವಿಭಿನ್ನವಾಗಿ ಗಮನಸೆಳೆಯುತ್ತದೆ.
ಇದನ್ನೂ ಓದಿ:ಚಾಮುಂಡೇಶ್ವರಿಯ ಸಹೋದರಿ ಪುರದಕಟ್ಟೆ ಚಿಕ್ಕದೇವಮ್ಮ..
ದೇವಾಲಯ ವ್ಯಾಪ್ತಿಗೊಳಪಡುವ ಸುತ್ತಲಿನ ಗ್ರಾಮಗಳ ಕುಟುಂಬಗಳ ನೇತೃತ್ವದಲ್ಲಿ ವನಭದ್ರಕಾಳಿ ಹಬ್ಬವನ್ನು ಆಚರಿಸುತ್ತಿದ್ದು, ಈ ವೇಳೆ ಗ್ರಾಮಸ್ಥರು ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮದ ಜನರು ನೆರೆದು ಹೂವು, ಹಣ್ಣು, ಕಾಯಿಗಳನ್ನು ಅರ್ಪಿಸಿ ಮಳೆ ಬೆಳೆಯಾಗಿ ಜನಜಾನುವಾರುಗಳನ್ನು ರಕ್ಷಿಸುವಂತೆ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಹಬ್ಬದ ದಿನದಂದು ಇಡೀ ಊರಲ್ಲಿ ಭದ್ರಕಾಳಿಯಮ್ಮೆ ಪೂಜೋ, ಇಗ್ಗುತಪ್ಪ ಪೂಜೋ, ಕಾವೇರಮ್ಮೆ ಪೂಜೋ ಎಂಬ ಘೋಷಣೆ ಮುಗಿಲು ಮುಟ್ಟುತ್ತದೆ. ದೇವರು ತಿರುವಳಗಾರನ ಮೇಲೆ ಅವಾಹನೆಗೊಳ್ಳುತ್ತದೆ.
ಇದನ್ನೂ ಓದಿ: ನಿಸರ್ಗದ ಸೂಜಿಗ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟ…
ಇನ್ನು ಹಬ್ಬದ ಸಂಪ್ರದಾಯದಂತೆ ಕೊಕ್ಕಂಡ ಕುಟುಂಬದ ಐನ್ ಮನೆಯಿಂದ ಭದ್ರಕಾಳಿ ದೇವತೆಯ ಮೊಗವನ್ನು ಹಿಡಿದು ದೈವ ನೃತ್ಯದ ತೆರೆಯ ಮೂಲಕ ಕೊಳತ್ತೋಡು ಗ್ರಾಮ ತಲುಪಿ, ಅಲ್ಲಿ ದೈವ ನೃತ್ಯದ ನಂತರ ಭಕ್ತಾಧಿಗಳಿಂದ ಹರಕೆ ಒಪ್ಪಿಸುವ ಕಾರ್ಯ ನೆರವೇರುತ್ತದೆ. ಇದಾದ ಬಳಿಕ ಕೊಂಗೇಪಂಡ ಐನ್ ಮನೆಯಿಂದ ತೆರೆ ಹೊರಟು, ಗದ್ದೆ ಮಧ್ಯೆ ನಡೆದು ಬಂದ ದೇವಿ, ಹಾತೂರಿನ ಮಹಾದೇವ ದೇವಸ್ಥಾನದ ಬಳಿ ಇರುವ ಅರಳಿ ಮರದ ಬಳಿ ಆಸೀನಳಾಗುತ್ತಾಳೆ. ದೇವಿಯ ಆಯುಧವನ್ನು ಪುಟ್ಟಮಕ್ಕಳು ಕೈಯಲ್ಲಿ ಹಿಡಿದು ದೇವಿ ನಮ್ಮನ್ನು ಕಾಪಾಡು ಎಂದು ಪ್ರಾರ್ಥಿಸುತ್ತಾರೆ.
ಇದನ್ನೂ ಓದಿ: ಚಾಮರಾಜೇಶ್ವರ ಸ್ವಾಮಿ ರಥೋತ್ಸವ… ಇದು ನವದಂಪತಿಗಳ ಜಾತ್ರೆ
ಇದೆಲ್ಲದರ ನಡುವೆ ಅಯ್ಯಪ್ಪ ಸ್ವಾಮಿಯ ತೆರೆ ಕೇಳಪಂಡ ಐನ್‌ಮನೆಯಿಂದ ಗದ್ದೆ ಮಧ್ಯೆ ನಲಿಯುತ್ತಾ, ಓಡಿಬಂದು ಭದ್ರಕಾಳಿಯ ಸಮೀಪ ನೆರೆಯುತ್ತದೆ. ಬಳಿಕ ಈ ಅರಳಿ ಮರದ ಸುತ್ತಲೂ ದೈವಗಳ ನೃತ್ಯ ನಡೆಯುತ್ತದೆ. ದೇವಾಲಯದ ಸನ್ನಿಧಿಗೆ ತೆರಳಿ ಎತ್ತರದ ದೇವರ ಕಲ್ಲಿನ ಮೇಲೆ ಹತ್ತಿ, ಗರ್ಭಗುಡಿಗೆ ಮೂರು ಸುತ್ತು ಬಂದು ನೆರೆದಿದ್ದ ಭಕ್ತಾಧಿಗಳ ಹರಕೆಯನ್ನು ವನದೇವಿ ಸ್ವೀಕರಿಸುತ್ತಾಳೆ. ಆ ನಂತರ ಭಂಡಾರ ಅರ್ಪಣೆ ಕಾರ್ಯ ನೆರವೇರುತ್ತದೆ ಬಳಿಕ ಮಹಾಪೂಜೆಯೊಂದಿಗೆ ವನಭದ್ರಕಾಳಿ ದೇವರಕಾಡು ಹಬ್ಬಕ್ಕೆ ತೆರೆ ಬೀಳುತ್ತದೆ. ಹಬ್ಬ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆಯಾದರೂ ಇಲ್ಲಿ ಪ್ರತೀ ತಿಂಗಳು ಅಮವಾಸ್ಯೆಯಂದು ಹಾಗೂ ಕೊಡಗಿನ ಹಬ್ಬ ಹರಿದಿನಗಳಂದು ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತದೆ.
ಇದನ್ನೂ ಓದಿ:ಚಾಮರಾಜನಗರದ ಕರಿವರದರಾಜ ಸ್ವಾಮಿಬೆಟ್ಟಕ್ಕೆ ಬನ್ನಿ… ಇಲ್ಲಿ ಮನಶಾಂತಿ ಖಚಿತ!
ಕೊಡಗಿಗೊಂದು ಸುತ್ತು ಹೊಡೆದರೆ ಭಗವತಿ, ಭದ್ರಕಾಳಿ, ವನಭದ್ರಕಾಳಿ ಹೆಸರಿನ ದೇಗುಲಗಳು ಮತ್ತು ಅವುಗಳ ಎದುರು ವಾಹನಗಳನ್ನು ನಿಲ್ಲಿಸಿ ಕಾಣಿಕೆ ಹಾಕಿ ಮುಂದೆ ಸಾಗುವ ದೃಶ್ಯಗಳು ಹೆಚ್ಚಾಗಿ ಕಂಡು ಬರುತ್ತವೆ. ಈ ದೇವತೆಗಳು ಊರ ದೇವರಾಗಿದ್ದು, ಊರ ದೇವತೆಯನ್ನು ಪ್ರಾರ್ಥಿಸಿ ಮುಂದೆ ಸಾಗುವುದು ಹಿಂದಿನಿಂದ ಬಂದ ರೂಢಿಯಾಗಿದೆ. ದಟ್ಟ ಕಾಡಿನಿಂದ ಕೂಡಿದ್ದ ಕಾಲದಲ್ಲಿ ಕ್ರೂರ ಪ್ರಾಣಿಗಳ ನಡುವೆ ಅರಣ್ಯದ ಹಾದಿಯಲ್ಲಿಯೇ ಸಾಗಬೇಕಾಗಿತ್ತು.
ಜತೆಗೆ ಕಾಡಿಗೆ ಹೊಂದಿಕೊಂಡಂತೆ ಕೃಷಿ ಭೂಮಿಗಳು ಇದ್ದಿದ್ದರಿಂದ ಕಾಡು ಪ್ರಾಣಿಗಳ ನಡುವೆ ಬೆಳೆಯನ್ನು ಕಾಪಾಡಿಕೊಳ್ಳಬೇಕಾಗಿತ್ತು. ಈ ವೇಳೆ ತಮಗೆ ರಕ್ಷಣೆಯನ್ನು ನೀಡುವಂತೆ ಊರ ದೇವತೆಗಳಲ್ಲಿ ಗ್ರಾಮಸ್ಥರು ಬೇಡಿಕೊಳ್ಳುತ್ತಿದ್ದರು. ಊರ ದೇವತೆ ಗ್ರಾಮರಕ್ಷಕಳಾಗಿ ಊರನ್ನು ಜನರನ್ನು ಕಾಪಾಡುತ್ತಿದ್ದಳು. ಇಂತಹ ದೇವತೆಗಳಲ್ಲಿ ಹಾತೂರು ಕೊಳತ್ತೋಡು ಬೈಗೋಡಿನ ವನಭದ್ರಕಾಳಿಯೂ ಒಬ್ಬಳಾಗಿದ್ದಾಳೆ.
B M Lavakumar