LatestMysore

ಬಂಕವಾಡಿಯ  ಶ್ರೀ ವೀರಾಂಜನೇಯಸ್ವಾಮಿ ವಾರ್ಷಿಕ ರಥೋತ್ಸವಕ್ಕೆ ಹರಿದು ಬಂದ ಭಕ್ತಸಾಗರ

ಸರಗೂರು(ದಾಸೇಗೌಡ): ತಾಲೂಕಿನ ಬಂಕವಾಡಿ ಗ್ರಾಮದಲ್ಲಿ ಶ್ರೀ ವೀರಾಂಜನೇಯಸ್ವಾಮಿ ವಾರ್ಷಿಕ ರಥೋತ್ಸವ ಹಾಗೂ ಸಿದ್ದಪ್ಪಾಜಿ, ಗಣಪತಿ, ನವಗ್ರಹ ಮತ್ತು ಸುಬ್ರಹ್ಮಣ್ಯಸ್ವಾಮಿ ವಾರ್ಷಿಕ ಮಹೋತ್ಸವ ಭಕ್ತಿಭಾವ ಮತ್ತು ವೈಭವದ ನಡುವೆ ಅದ್ದೂರಿಯಾಗಿ ನೆರವೇರಿತು. ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವಂತೆ ಪ್ರಾರ್ಥಿಸಿದರು.

ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನವನ್ನು ವಿವಿಧ ಬಣ್ಣಗಳಿಂದ ಅಲಂಕರಿಸಿ, ಮಧುವಣಗಿತ್ತಿಯಂತೆ ಸಿಂಗರಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಗೂ ಈ ಗ್ರಾಮದ ತುಂಬ ವಿದ್ಯುತ್  ದೀಪಾಲಂಕಾರಗಳಿಂದ ಮಿನುಗುತ್ತಿದ್ದವು. ಇಡೀ ದೇವಾಲಯ ಹೂವಿನ ಅಲಂಕಾರದಿಂದ ನಳನಳಿಸುತ್ತಿತ್ತು.

ದೇವರ ಉತ್ಸವಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಭಕ್ತರು ಮೆರವಣಿಗೆಗೆ ಚಾಲನೆ ನೀಡಲಾಯಿತು. ವಾದ್ಯಗೋಷ್ಠಿ, ಸತ್ತಿಗೆ, ನಂದಿಧ್ವಜಗಳ ನಡುವೆ ಉತ್ಸವ ಮೂರ್ತಿ ಮೊಳೆಯೂರು–ಬಂಕವಾಡಿ ರಸ್ತೆಯ ಮೂಲಕ ಭಕ್ತರ ಘೋಷಣೆಗಳ ಮಧ್ಯೆ ಸಂಚರಿಸಿ ದೇವಸ್ಥಾನದತ್ತ ಆಗಮಿಸಿತು. ನಂತರ ಶ್ರೀ ವೀರಾಂಜನೇಯಸ್ವಾಮಿಯ ರಥೋತ್ಸವವೂ ಭಕ್ತರ ಜಯಘೋಷಗಳ ನಡುವೆ ನಡೆಯಿತು. ದಾರಿಯುದ್ದಕ್ಕೂ ಭಕ್ತರು ಮಜ್ಜಿಗೆ ಮತ್ತು ಪಾನಕ ವಿತರಣೆ ಮಾಡಿ ಸೇವಾಭಾವ ಮೆರೆದರು.

ಉತ್ಸವ ಮೂರ್ತಿ ದೇವಸ್ಥಾನಕ್ಕೆ ತಲುಪುತ್ತಿದ್ದಂತೆ ಭಕ್ತರು  ಬಹುಪರಾಕ್ ” ಎಂದು ಘೋಷಣೆ ಕೂಗಿ ಭಕ್ತಿ ಉತ್ಸಾಹ ವ್ಯಕ್ತಪಡಿಸಿದರು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಹರಕೆ ತೀರಿಸಿದರು. ಬಳಿಕ ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಶಾಸಕ ಅನಿಲ್ ಚಿಕ್ಕಮಾದು ದೇವರ ದರ್ಶನ ಪಡೆದು ಆಶೀರ್ವಾದ ಪಡೆದರು. ಗ್ರಾಮಸ್ಥರು ಸಮುದಾಯ ಭವನ ನಿರ್ಮಾಣಕ್ಕೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು,  ಬಂಕವಾಡಿ ಗ್ರಾಮದಲ್ಲಿ ಈಗಾಗಲೇ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇನೆ. ಸಮುದಾಯ ಭವನಕ್ಕೆ ಸೂಕ್ತ ನಿವೇಶನ ಗುರುತಿಸಿದರೆ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಈಗಾಗಲೇ ಸಿಸಿ ರಸ್ತೆ ನಿರ್ಮಾಣಕ್ಕೂ ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಗ್ರಾಮದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.

ದೇವಸ್ಥಾನದಲ್ಲಿ ನೆರೆದಿದ್ದ ಎಲ್ಲಾ ಭಕ್ತಾದಿಗಳಿಗೆ  ದಿನ ಪೂರ್ತಿ ಅನ್ನದಾಸೋಹ ನೆರವೇರಿತು. ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ. ರವಿ ಮಾತನಾಡಿದರು. ಗುಡಿಗೌಡರಾದ ಚಿಕ್ಕಸ್ವಾಮಿ, ಮುಖಂಡರಾದ ಬಿ.ಎಂ. ಪದ್ಮರಾಜ್, ಎನ್.ಪಿ. ಸುರೇಶ್, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ ಸೇರಿದಂತೆ ಯುವ ಮುಖಂಡರು, ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಗ್ರಾಮಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

admin
the authoradmin

Leave a Reply

Translate to any language you want