ಕುಶಾಲನಗರ (ರಘುಹೆಬ್ಬಾಲೆ): ಕ್ರಿಯಾಶೀಲತೆ, ನೈಪುಣ್ಯತೆ, ಕಠಿಣ ಪರಿಶ್ರಮ ರೂಢಿಸಿಕೊಂಡಿರುವ ಜಿಲ್ಲೆಯ ಯುವ ಪ್ರತಿಭೆಗಳು ರಾಷ್ಟ್ರ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಹೇಳಿದರು.
ಕೊಡಗು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಆವರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತ ಸರ್ಕಾರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯುಕ್ತಾಶ್ರಯದಲ್ಲಿ ವಿಕಸಿತ ಭಾರತ ಯುವ ಸಂಸತ್ತು 2026 ಅಡಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಕಸಿತ ಭಾರತ ಯುವ ಸಂಸತ್ತು 2026 ಅಡಿಯಲ್ಲಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಆಗುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿ, ಎಲ್ಲರಲ್ಲೂ ಪ್ರತಿಭೆ ಮತ್ತು ಕೌಶಲ್ಯಗಳಿವೆ. ಆದರೆ ಅದಕ್ಕೆ ಸೂಕ್ತ ವೇದಿಕೆ ಸಿಗಬೇಕಿದೆ. ಅಂತಹ ಅದ್ಭುತ ವೇದಿಕೆಗೆಯನ್ನು ನಮ್ಮ ಕೊಡಗು ವಿಶ್ವವಿದ್ಯಾನಿಲಯವು ಯುವಜನೆತೆಗಾಗಿ ಕಲ್ಪಿಸಿಕೊಡುವಲ್ಲಿ ಕಾರ್ಯನಿರತವಾಗಿದೆ. ಇಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಂ.ಸುರೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸ್ಪರ್ಧೆಯ ತೀರ್ಪುಗಾರರಾಗಿ ಪ್ರಸ್ತುತ ಬೆಂಗಳೂರಿನ ನಿವೃತ್ತ ನ್ಯಾಯಾಧೀಶರಾದ ಶಫೀರ್ ಅಹಮದ್, ಏಕ್ ಭಾರತ್ ಅಬ್ಯಾನ್ ಫೌಂಡೇಶನ್‌ನ ಡಾ. ಹೊಟ್ಟೆಂಗಡ ಎ ಜೋಯಪ್ಪ, ಎಚ್.ಡಿ. ಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಸಿ.ಪುಟ್ಟರಾಜು,ಮಡಿಲು ಗ್ರಾಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಿ.ಎಂ. ತ್ರಿವೇಣಿ,ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮೂರ್ತಿ ಕೆ. ಎಸ್ ಭಾಗವಹಿಸಿದ್ದರು.

ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಸುದರ್ಶನ ಕೆ ಎನ್ ಸ್ವಾಗತಿಸಿದರು. ಕನ್ನಡ ಅಧ್ಯಯನ ವಿಭಾಗದ ಡಾ. ಜಮೀರ್ ಅಹಮದ್ ನಿರೂಪಿಸಿದರು. ಕೊಡಗು ರಾಷ್ಟ್ರೀಯ ಸೇವಾ ಯೋಜನೆ ಘಟಕದ ನೋಡಲ್ ಅಧಿಕಾರಿಗಳು ಡಾ.ಕೆ.ಸಿ.ದಯಾನಂದ ವಂದಿಸಿದರು.
ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳಾದ ಬಿ ಕೆ ಇಶಾನಿ ದೇಚಮ್ಮ , ಬಿ.ಎಸ್. ರಕ್ಷಿತಾ,ಎನ್.ಬಿ. ಮುತ್ತಮ್ಮ,ಬಿ.ಎಂ.ದರ್ಶನ್,ಕೆ.ಆರ್.ಮನು ಅವರು ಕೊಡಗು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕುಶಾಲನಗರ ಸಮೀಪದ ಚಿಕ್ಕ ಅಳುವಾರ ಕೊಡಗು ವಿವಿ ಸಭಾಂಗಣದಲ್ಲಿವಿಕಸಿತ ಭಾರತ ಯುವ ಸಂಸತ್ತು 2026 ಅಡಿಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಗಳಲ್ಲಿ ವಿವಿಧ ಕಾಲೇಜುಗಳ ಐದು ವಿದ್ಯಾರ್ಥಿಗಳು ರಾಜ್ಯ ಆಯ್ಕೆಯಾಗಿದ್ದಾರೆ. ವಿವಿ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ, ಕುಲಸಚಿವ ಪ್ರೊ.ಎಂ.ಸುರೇಶ್ ಹಾಗೂ ತೀರ್ಪುಗಾರರು, ಉಪನ್ಯಾಸಕರು ಭಾಗವಹಿಸಿದ್ದರು.








