ಜನರು ಮೌಲ್ಯವಂತರನ್ನು ನೆನಪಿಸಿಕೊಳ್ಳುತ್ತಾರೆ.. ವ್ಯಸನಿಗಳನ್ನು ಮರೆಯುತ್ತಾರೆ..: ವಚನ ಕುಮಾರಸ್ವಾಮಿ

ಮೈಸೂರು: ಜನರು ಮೌಲ್ಯವಂತರನ್ನು ನೆನಪಿಸಿಕೊಳ್ಳುತ್ತಾರೆ ವ್ಯಸನಿಗಳನ್ನು ಮರೆಯುತ್ತಾರೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಮೈಸೂರು ತಾ. ಇನ್ಕಲ್ ರೂರಲ್ ಐ.ಟಿ.ಐ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಜನರು ಮೌಲ್ಯವಂತರನ್ನು ಮಾತ್ರ ನೆನಪಿಸಿಕೊಳ್ಳುತ್ತಾರೆ. ವ್ಯಸನಿಗಳಿಗೆ ಕಾಲವೇ ಸಾಕ್ಷಿಯಾಗಿ ಮರೆವಿನ ತೆರೆ ಬೀಳುತ್ತದೆ ವ್ಯಕ್ತಿಯ ಜೀವನದಲ್ಲಿ ಹೆಸರು ಮತ್ತು ಕೀರ್ತಿಯನ್ನು ಉಳಿಸಿಕೊಳ್ಳುವುದು ಆಸ್ತಿ ಅಥವಾ ಸ್ಥಾನಮಾನದಿಂದಲ್ಲ, ಮೌಲ್ಯಗಳು ಮತ್ತು ಸದ್ಗುಣಗಳಿಂದ ಮಾತ್ರ ಸಾಧ್ಯ ಎಂದರು.

ವ್ಯಸನಗಳು ಕ್ಷಣಿಕ ಸುಖವನ್ನು ನೀಡಿದರೂ ಜೀವನಪೂರ್ತಿ ದುಃಖವನ್ನುಂಟು ಮಾಡುತ್ತವೆ. ಶರೀರವನ್ನು ಹಾಳು ಮಾಡುವ ವ್ಯಸನಗಳು ಭವಿಷ್ಯವನ್ನೇ ಕಸಿದುಕೊಳ್ಳುತ್ತವೆ. ಆದರೆ ಶಿಸ್ತು, ಪರಿಶ್ರಮ ಮತ್ತು ಸಂಸ್ಕಾರ ವ್ಯಕ್ತಿಯನ್ನು ಸಮಾಜದ ನೆನಪಿನಲ್ಲಿ ಶಾಶ್ವತಗೊಳಿಸುತ್ತವೆ. ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರು ವಿಜ್ಞಾನಿಯಾಗಿದ್ದಾಗ ಪೋಲಿಯೊ ಪೀಡಿತ ಮಕ್ಕಳಿಗಾಗಿ ಹಗುರವಾದ ಕ್ಯಾಲಿಪರ್ ಅಭಿವೃದ್ಧಿಪಡಿಸಿದ ಉದಾಹರಣೆಯನ್ನು ಪ್ರಸ್ತಾಪಿಸಿದರು.
ಭಾರವಾದ ಲೋಹದ ಕ್ಯಾಲಿಪರ್ ಗಳಿಂದ ಬಳಲುತ್ತಿದ್ದ ಮಕ್ಕಳಿಗೆ ಕೇವಲ ಕೆಲವು ಮುನ್ನೂರು ಗ್ರಾಂ ತೂಕದ ಸಾಧನವನ್ನು ನೀಡಿದ ಪರಿಣಾಮ, ಅವರ ಬದುಕಿನಲ್ಲಿ ಉಂಟಾದ ಸಂತೋಷವನ್ನು ವಿವರಿಸಿ, ಮಾನವೀಯತೆ ಮತ್ತು ಸೇವಾಭಾವವೇ ವ್ಯಕ್ತಿಯನ್ನು ಅಮರಗೊಳಿಸುತ್ತದೆ ಎಂದು ಹೇಳಿದರು.

ನೋಬೆಲ್ ಪ್ರಶಸ್ತಿಯ ಸ್ಥಾಪಕ ಆಲ್ಫ್ರೆಡ್ ನೋಬೆಲ್ ಅವರ ಜೀವನವನ್ನು ಉದಾಹರಣೆಯಾಗಿ ನೀಡಿ, ಡೈನಾಮೈಟ್ ಆವಿಷ್ಕಾರದ ಮೂಲಕ ಖ್ಯಾತಿ ಪಡೆದ ಅವರು, ತಮ್ಮ ಆವಿಷ್ಕಾರವು ಯುದ್ಧಗಳಲ್ಲಿ ದುರುಪಯೋಗವಾಗುತ್ತಿರುವುದನ್ನು ಕಂಡು ಮನಸ್ಸು ಮರುಗಿ, ತಮ್ಮ ಸಂಪತ್ತನ್ನು ಮಾನವ ಕಲ್ಯಾಣಕ್ಕಾಗಿ ಬಳಸಲು ನಿರ್ಧರಿಸಿ ನೋಬೆಲ್ ಬಹುಮಾನ ಸ್ಥಾಪಿಸಿದರು. ಇಂದು ವಿಶ್ವದ ಶ್ರೇಷ್ಠ ಸಾಧಕರಿಗೆ ನೀಡಲಾಗುವ ಈ ಪ್ರಶಸ್ತಿ, ಒಬ್ಬ ವ್ಯಕ್ತಿಯ ಜೀವನ ಪರಿವರ್ತನೆಯ ಪ್ರೇರಕ ಚಿಹ್ನೆಯಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಐ ಟಿ ಐ ಕಾಲೇಜು ಪ್ರಾಂಶುಪಾಲರಾದ ಕೆ. ಶಿವಕುಮಾರ್ ಮಾತನಾಡಿ ವ್ಯಸನಕ್ಕೆ ಬಲಿಯಾದವರ ಜೀವನ ಕೋತಿಗೆ ಮದ್ಯ ಕುಡಿಸಿದಂತೆ ಅಸ್ತವ್ಯಸ್ತವಾಗುತ್ತದೆ. ದೆವ್ವ ಬಂದಂತೆ ವರ್ತಿಸಿ ತಾನು ಏನು ಮಾಡುತ್ತಿದ್ದಾನೆ ಎಂಬ ಅರಿವು ಕಳೆದುಕೊಳ್ಳುತ್ತಾನೆ ಎಂಬ ರೂಪಕದ ಮೂಲಕ ವಿವರಿಸಿ, ವ್ಯಸನವು ಮನುಷ್ಯನ ವಿವೇಕ, ಆತ್ಮನಿಯಂತ್ರಣ ಮತ್ತು ಕುಟುಂಬದ ವಿಶ್ವಾಸವನ್ನು ನಾಶಮಾಡುತ್ತದೆ ಎಂದು ಎಚ್ಚರಿಸಿದರು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಶಶಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಸ್ಥ್ಯ ಸಂಕಲ್ಪದ ಯೋಜನೆಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಐ ಟಿ ಐ ಕಾಲೇಜಿನ ಸಿಬ್ಬಂದಿ ವರ್ಗದವರಾದ ಪಿ. ವೇಣು, ಎಂ. ಕೃಷ್ಣಮೂರ್ತಿ, ರಾಜಶೇಖರ್, ಚಂದ್ರದೇವ್, ಗಿರೀಶ್ ಉಪಸ್ಥಿತರಿದ್ದರು.







