LatestMysore

ಶರಣು ವಿಶ್ವವಚನ ಫೌಂಡೇಷನ್ ನಿಂದ ಹೆಬ್ಬಾಳು ಶಾಲೆಯಲ್ಲಿ 126ನೇ “ಶಾಲೆಗಳೆಡೆಗೆ ವಚನಗಳ ನಡಿಗೆ”

ಹೆಬ್ಬಾಳು: ದೇಶ ಸೇವೆಗೆ ಬಳಕೆಯಾಗದ ವಿದ್ಯೆ ವ್ಯರ್ಥ ಎಂದು ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಗಂಗಾವತಿ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಮೈಸೂರಿನ ಕುಂಬಾರಕೊಪ್ಪಲಿನಲ್ಲಿರುವ ಸ.ಹಿ.ಪ್ರಾ.ಶಾಲೆ ಹೆಬ್ಬಾಳು ಇಲ್ಲಿ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಗಂಗಾವತಿ ಮತ್ತು ಮಂಜುಳ ನಂದೀಶ್ವರ್ ಅವರ ದತ್ತಿ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಚನ ಸಾಹಿತ್ಯದ ಹಿರಿಮೆ–ಗರಿಮೆಗಳನ್ನು ವಿವರಿಸಿ, ವಚನಗಳು ಜೀವನ ಮೌಲ್ಯಗಳ ಮಾರ್ಗದರ್ಶಕವೆಂದರು.

ಸಮಾಜದಲ್ಲಿ ಸಮಾನತೆ, ನೈತಿಕತೆ ಮತ್ತು ಮಾನವೀಯತೆಯನ್ನು ಬಲಪಡಿಸುವ ಶಕ್ತಿ ವಚನಗಳಲ್ಲಿ ಅಡಕವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಓಮನ್ ದೇಶದ ಮಸ್ಕತ್ ನಿಂದ ಆಗಮಿಸಿದ್ದ ಡಿ.ವಿ ನಂದೀಶ್ವರ್ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಮೌಲ್ಯಾಧಾರಿತ ಶಿಕ್ಷಣ ಅತ್ಯಗತ್ಯವಾಗಿದ್ದು, ಮಕ್ಕಳಲ್ಲಿ ಸಂಸ್ಕಾರ ಬೆಳೆಸಲು ಇಂತಹ ಕಾರ್ಯಕ್ರಮಗಳು ಅವಶ್ಯಕವೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಚನ ಕುಮಾರಸ್ವಾಮಿ ಮಾತನಾಡಿ, ವಚನಗಳನ್ನು ಹೇಳಿದರೆ ಜ್ಞಾನವಾಗುತ್ತದೆ; ಅದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಅನ್ವಯವಾಗುತ್ತದೆ. ವಚನದಂತೆ ಜೀವನ ಸಾಗಿಸುವ ಸಂಕಲ್ಪವೇ ಈ ಕಾರ್ಯಕ್ರಮದ ಉದ್ದೇಶವೆಂದರು.

ಹೆಬ್ಬಾಳು ಸ.ಹಿ.ಪ್ರಾ.ಶಾಲೆ ಮುಖ್ಯಶಿಕ್ಷಕ ಲೋಹಿತೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯಲ್ಲಿ 694 ವಿದ್ಯಾರ್ಥಿಗಳಿದ್ದು, ಮೈಸೂರಿನಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯಾಗಿದೆ. 2ಕೋಟಿ ಅನುದಾನದಲ್ಲಿ ಶಾಲೆಯನ್ನು ಹೈಟೆಕ್ ಆಗಿ ಅಭಿವೃದ್ಧಿಪಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮೂವತ್ತು ವಿದ್ಯಾರ್ಥಿಗಳು ವಚನ ವಾಚನ ಮತ್ತು ಗಾಯನ ನಡೆಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಮಕ್ಕಳ ಸ್ಪಷ್ಟ ಉಚ್ಚಾರಣೆ ಹಾಗೂ ಭಾವಪೂರ್ಣ ಗಾಯನ ಎಲ್ಲರ ಮನಸೆಳೆಯಿತು.

ವಚನ ಪಠಣದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ “ವಚನದೀವಿಗೆ” ಪ್ರಮಾಣಪತ್ರ ಹಾಗೂ ವಚನ ಪುಸ್ತಕಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.

ಕನ್ನಡ ಶಿಕ್ಷಕಿ ಕವಿತ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಉಪಾಧ್ಯಕ್ಷ ಶಿವಪುರ ಉಮಾಪತಿ, ಶಿಕ್ಷಕರಾದ ಜೆ ದೀಪ, ಕೆ.ವಿ ಮೀನಾಕ್ಷಮ್ಮ, ಎಸ್.ಬಿ ನವೀನ್ ಕುಮಾರ್ ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want