LatestMysore

ಎನ್ ಎಸ್ ಎಸ್ ಶಿಬಿರದೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ವಚನ ಕುಮಾರಸ್ವಾಮಿ ಹೇಳಿದ್ದೇನು?

ಮೈಸೂರು: ವಚನ ಸಾಹಿತ್ಯ ಅನುಭವ ಮತ್ತು ಮಾನವೀಯತೆಯ ಸಂಗಮ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಜೆ.ಎಸ್.ಎಸ್. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಊಟಿ ರಸ್ತೆ, ಮೈಸೂರು ಇವರ ಸಹಯೋಗದೊಂದಿಗೆ ಹುಣಸೂರು ತಾಲ್ಲೂಕಿನ ಶ್ರೀ ಕೆಂಡಗಣ್ಣಸ್ವಾಮಿ ಗದ್ದಿಗೆಯಲ್ಲಿ ನಡೆಯುತ್ತಿರುವ ಎನ್‌ಎಸ್‌ಎಸ್ ಶಿಬಿರದಲ್ಲಿ ಮೈಸೂರಿನ ಯು.ಎಂ ಉಮಾದೇವಿ ಮತ್ತು ಕೆ.ಜಿ.ಮಹದೇವಸ್ವಾಮಿ ಅವರ ದತ್ತಿ ಅಂಗವಾಗಿ ಹಮ್ಮಿಕೊಂಡಿದ್ದ ಎನ್ ಎಸ್ ಎಸ್ ಶಿಬಿರದೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ  ವಚನ ಸಾಹಿತ್ಯ ಮತ್ತು ವೈಚಾರಿಕತೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು

ಎನ್‌.ಎಸ್‌.ಎಸ್ ಶಿಬಿರವು ಕೇವಲ ಸೇವಾ ಚಟುವಟಿಕೆಗಳಿಗೆ ಸೀಮಿತವಾಗದೆ, ಸಮಾಜವನ್ನು ಅರಿಯುವ ಮತ್ತು ಮೌಲ್ಯಾಧಾರಿತ ಬದುಕಿನ ಕುರಿತು ಚಿಂತಿಸುವ ವೇದಿಕೆಯಾಗಿ ರೂಪುಗೊಳ್ಳಬೇಕು. ವಚನ ಸಾಹಿತ್ಯವು ಕೇವಲ ಭಕ್ತಿ ಅಥವಾ ಧಾರ್ಮಿಕ ಪಠ್ಯವಲ್ಲ; ಅದು ಸಮಾಜವನ್ನು ಪ್ರಶ್ನಿಸುವ, ಅಸಮಾನತೆ ವಿರುದ್ಧ ಧ್ವನಿ ಎತ್ತುವ ಹಾಗೂ ಮಾನವ ಘನತೆಯನ್ನು ಪ್ರತಿಪಾದಿಸುವ ಜೀವಂತ ಸಾಹಿತ್ಯ. ಶರಣರು ತಮ್ಮ ಕಾಲದ ಅಂಧಶ್ರದ್ಧೆ, ಜಾತಿ–ವರ್ಗ ಭೇದ, ಶೋಷಣೆ ಮತ್ತು ಅಹಂಕಾರಗಳ ವಿರುದ್ಧ ವಚನಗಳ ಮೂಲಕ ನೇರವಾಗಿ ಮಾತನಾಡಿದರು.

ವಚನಗಳು ಜನರೊಂದಿಗೆ ಸಂಭಾಷಿಸುವ ಸಾಹಿತ್ಯ; ಅವು ಪ್ರಶ್ನೆ ಕೇಳುತ್ತವೆ, ಉತ್ತರ ಹುಡುಕುವಂತೆ ಮಾಡುತ್ತವೆ. ಬದುಕಿನ ಶಿಸ್ತು ಶರಣರ ತತ್ತ್ವದಲ್ಲಿ ಕಾಯಕ ಮತ್ತು ದಾಸೋಹ ಕೇವಲ ಆರ್ಥಿಕ ಚಟುವಟಿಕೆಗಳಲ್ಲ, ಅವು ಬದುಕಿನ ಶಿಸ್ತು, ದುಡಿಯುವ ಕೈಗಳಿಗೆ ಗೌರವ, ದುಡಿಮೆಯಿಂದ ಬಂದ ಫಲವನ್ನು ಸಮಾಜದ ಹಿತಕ್ಕಾಗಿ ಹಂಚಿಕೊಳ್ಳುವ ಮನೋಭಾವ – ಈ ಎರಡು ತತ್ತ್ವಗಳು ಇಂದಿನ ಕಾಲಕ್ಕೂ ಅತೀ ಪ್ರಸ್ತುತ. ಎನ್‌ಎಸ್‌ಎಸ್ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಶ್ರಮದ ಮೂಲಕ ಸೇವೆ ಸಲ್ಲಿಸುವುದು ಶರಣರ ಕಾಯಕ–ದಾಸೋಹ ತತ್ತ್ವದ ಜೀವಂತ ರೂಪವಾಗಿದೆ ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಾತನಾಡಿ, ವಚನ ಸಾಹಿತ್ಯವನ್ನು ಕೇವಲ ಭಕ್ತಿ ಅಥವಾ ಆಧ್ಯಾತ್ಮಿಕ ಸಾಹಿತ್ಯವೆಂದು ಸೀಮಿತಗೊಳಿಸುವುದು ತಪ್ಪು. ಶರಣರು ತಮ್ಮ ಅನುಭವ, ತರ್ಕ ಮತ್ತು ಪ್ರಶ್ನಿಸುವ ಮನೋಭಾವದ ಮೂಲಕ ವಚನಗಳನ್ನು ರಚಿಸಿದ್ದು, ವಚನಗಳಲ್ಲಿ ವೈಜ್ಞಾನಿಕ ಚಿಂತನೆಯ ಬೀಜಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಅಂಧಶ್ರದ್ಧೆಗೆ ವಿರೋಧವಾಗಿದ್ದು, “ಶರಣರು ದೇವರನ್ನು ಕೂಡ ಪ್ರಶ್ನಿಸಿದರು; ಅರ್ಥವಿಲ್ಲದ ಆಚರಣೆಗಳನ್ನು ತಿರಸ್ಕರಿಸಿದರು. ಇದು ವೈಜ್ಞಾನಿಕ ಚಿಂತನೆಯ ಮೂಲ ತತ್ವ – ಪ್ರಶ್ನೆ ಕೇಳುವುದು” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮರಿಮಲ್ಲಪ್ಪ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಅಧಿಕಾರಿ ಮಂಗಳ ಮುದ್ದುಮಾದಪ್ಪ ಮಾತನಾಡಿ, ಎನ್‌.ಎಸ್‌.ಎಸ್ ಕೇವಲ ಒಂದು ಕಾರ್ಯಕ್ರಮವಲ್ಲ, ಅದು ಸೇವೆ, ಸಹಬಾಳ್ವೆ ಮತ್ತು ಶಿಸ್ತು ಬೆಳೆಸುವ ಜೀವಂತ ಚಳವಳಿ, ವಿದ್ಯಾರ್ಥಿಗಳು ಸಮಾಜದ ನೈಜ ಸಮಸ್ಯೆಗಳನ್ನು ಅರಿತು ಪರಿಹಾರಕ್ಕೆ ಕೈಜೋಡಿಸಬೇಕು. ಶರಣರ ಕಾಯಕ–ದಾಸೋಹ ತತ್ತ್ವಗಳು ಎನ್‌.ಎಸ್‌.ಎಸ್ ಚಟುವಟಿಕೆಗಳ ಮೂಲಕ ಕಾರ್ಯರೂಪಕ್ಕೆ ಬರುತ್ತಿರುವುದು ಶ್ಲಾಘನೀಯ. ಎನ್‌.ಎಸ್‌.ಎಸ್ ಮೂಲಕ ಪಡೆದ ಅನುಭವಗಳು ಬದುಕಿನಾದ್ಯಂತ ದಾರಿದೀಪವಾಗುತ್ತವೆ ಎಂದು ತಿಳಿಸಿದರು.

ವಚನ ಕೋಗಿಲೆ ಉಮಾ ಮಹದೇವಸ್ವಾಮಿ ಅವರು ವಚನ ಗಾಯನ ಮೂಲಕ ಶಿಬಿರಕ್ಕೆ ಸಾಂಸ್ಕೃತಿಕ ರಂಗು ತುಂಬಿದರು. ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಚಟುವಟಿಕೆಗಳನ್ನು ಪರಿಚಯಿಸಿದರು. ನಂತರ ವಚನ ವಾಚನ ಮಾಡಿದ 42 ವಿದ್ಯಾರ್ಥಿಗಳಿಗೆ “ವಚನ ದೀವಿಗೆ” ಪ್ರಮಾಣಪತ್ರ ಹಾಗೂ ಬಸವಭಾನು ಸಂಚಿಕೆಯನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಕೆ.ಜಿ. ಮಹದೇವಸ್ವಾಮಿ, ಎನ್‌.ಎಸ್‌.ಎಸ್ ಕಾರ್ಯಕ್ರಮಾಧಿಕಾರಿ ಎನ್. ಸಂತೋಷ್ ಕುಮಾರ್, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ.ಲಿಂಗಣ್ಣ, ಉಪಾಧ್ಯಕ್ಷ ಶಿವಪುರ ಉಮಾಪತಿ ಹಾಗೂ ಶಿಕ್ಷಕರಾದ ರವಿಕುಮಾರ್, ರಾಜು, ಮಹೇಶ್, ಗಿರೀಶ್, ರೂಪ, ಸಿ.ಆರ್ ಮಾನಸ ನಿರೂಪಿಸಿದರು. ಚಂದನ ಸ್ವಾಗತಿಸಿದರು. ರಶ್ಮಿತಾ ವಂದಿಸಿದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want