LatestLife style

ಸನ್ ಸ್ಟ್ರೋಕ್ ತಡೆಯಲು ನಾವೇನು ಮಾಡಬೇಕು? ತಜ್ಞರು ನೀಡುವ ಸಲಹೆಗಳೇನು ಗೊತ್ತಾ?

ಬೇಸಿಗೆಯಲ್ಲಿ ಓಡಾಡುವವರು, ಕೆಲಸ ಮಾಡುವವರು ತಮ್ಮ ಆರೋಗ್ಯದತ್ತ ಎಚ್ಚರಿಕೆ ವಹಿಸುವುದು ಬಲು ಅಗತ್ಯವಾಗಿದೆ.. ಏಕೆಂದರೆ ಸನ್ ಸ್ಟ್ರೋಕ್ ಗೆ ಒಳಗಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಮುಂಜಾಗ್ರತಾ ಕ್ರಮಗಳೊಂದಿಗೆ ಸ್ವಲ್ಪ ಎಚ್ಚರಿಕೆ ವಹಿಸುವುದು ಒಳ್ಳೆಯದು.. ಇಷ್ಟಕ್ಕೂ ಈ ಲೇಖನದ ಉದ್ದೇಶ ಭಯಪಡಿಸುವುದಲ್ಲ… ಎಚ್ಚರಿಕೆ ವಹಿಸಲು ಸಲಹೆಯಷ್ಟೆ… ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲ ಝಳ ನಮ್ಮ ದೇಹದ ಮೇಲೆ ಪರಿಣಾಮ ಬೀರುವುದರಿಂದ ಆರೋಗ್ಯದ ಸಮಸ್ಯೆಗಳು ಕಾಡುವ ಸಾಧ್ಯತೆ ತುಸು ಹೆಚ್ಚೇ ಇರುವುದರಿಂದ ಆರೋಗ್ಯದ ಕಾಳಜಿವಹಿಸುವುದು ಅನಿವಾರ್ಯವಾಗಿದೆ.

ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಕೆಲಸ ಮಾಡುವವರು ತಣ್ಣಗಿರಬಹುದು ಆದರೆ ಬೀದಿಗೆ ಬಂದಾಗ ಬಿಸಿಲಿನಲ್ಲಿ ಓಡಾಡುವ ಅನಿವಾರ್ಯತೆ ಒದಗಿ ಬಂದಾಗ ಮುಂಜಾಗ್ರತೆ ಇರಬೇಕಾಗುತ್ತದೆ. ಇನ್ನು ಬಿಸಿಲಿನಲ್ಲಿಯೇ ಕೆಲಸ ಮಾಡುವವರು ಕೆಲಸದಿಂದ ವಿಮುಖರಾಗಲು ಸಾಧ್ಯವಿಲ್ಲ. ಮಾಡಲೇ ಬೇಕಾದ ಅನಿವಾರ್ಯತೆ ಇರುವುದರಿಂದ ಕೆಲವೊಂದು ಸಲಹೆಗಳನ್ನು ಪಾಲಿಸುವುದು ಒಳ್ಳೆಯದು. ಮನೆಯೊಳಗಿದ್ದು ಹೊರಗೆ  ಕಾರ್ಯ ನಿಮಿತ್ತ ಹೋಗುವವರು ಬೇಸಿಗೆಯ ಸಮಯದಲ್ಲಿ ಎಚ್ಚರಿಕೆ ವಹಿಸುವುದರೊಂದಿಗೆ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಂಡು ಹೊರಗೆ ಹೋಗುವುದು ಸೂಕ್ತ.

ಏಕೆಂದರೆ ಬಿಸಿಲಿಗೆ ದೇಹದ ಉಷ್ಣಾಂಶ ಹೆಚ್ಚಾಗಿ ಇದ್ದಕ್ಕಿದ್ದಂತೆ ತೊಂದರೆಯೂ ಕಾಣಿಸಬಹುದು. ಕೆಲವೊಮ್ಮೆ ಯಾರಾದರೂ ತೊದಲು ಮಾತು ಅಥವಾ ಅರ್ಥರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ಅಂತಹವರನ್ನು ನೆರಳಿನ ಪ್ರದೇಶಕ್ಕೆ ಕರೆದೊಯ್ದು ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಹಣೆ, ಕತ್ತು, ಪಾದ, ತೊಡೆಗಳನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು. (ತಂಪಾದ ಅಥವಾ ಐಸ್ ನೀರನ್ನು ಒರೆಸಲು ಬಳಸಬಾರದು) ಉಪ್ಪು, ಸಕ್ಕರೆ ಬೆರೆತ ನೀರನ್ನು ಕುಡಿಸಬೇಕು. ಬಳಿಕ ವೈದ್ಯರ ಬಳಿಗೆ ಕರೆದೊಯ್ಯಬೇಕು ಎನ್ನುವುದು ವೈದ್ಯರ ಸಲಹೆಯಾಗಿದೆ.

ಇದರಾಚೆಗೆ ಇನ್ನೇನು ಮಾಡಬೇಕೆಂದರೆ? ಬಿಸಿಲಿನ ಆಘಾತಕ್ಕೊಳಗಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆಯಾಗಿ  ಮೊದಲಿಗೆ ಬಟ್ಟೆ, ಪಾದರಕ್ಷೆ ಸಡಿಲಿಸಿ ತೆಗೆಯಬೇಕು. ತಣ್ಣಗಿನ ನೀರನ್ನು ವ್ಯಕ್ತಿಯ ಮೇಲೆ ಸಿಂಪಡಿಸಬೇಕು. ತಂಪಾದ ನೆರಳಿನ ಜಾಗಕ್ಕೆ ಸ್ಥಳಾಂತರಿಸಿ ಗಾಳಿ ಬೀಸಬೇಕು. ದೇಹವನ್ನು ಅತಿಯಾಗಿ ತಕ್ಷಣವೇ ತಂಪು ಮಾಡಬಾರದು. ಯಾವುದೇ ಔಷಧ ನೀಡಬಾರದು. ಪ್ರಜ್ಞೆ ಬಂದ ನಂತರ ನಿಧಾನವಾಗಿ ಶುದ್ಧವಾದ ನೀರನ್ನು ಸ್ಪಲ್ಪ ಸ್ವಲ್ಪವಾಗಿ ನೀಡುವ ಮೂಲಕ ಆರೈಕೆ ಮಾಡಬೇಕಾಗುತ್ತದೆ.

ಬೇಸಿಗೆಯಲ್ಲಿ ಪ್ರವಾಸ ತೆರಳುವುದು, ಶುಭಸಮಾರಂಭ, ಇತರೆ ಕಾರ್ಯಕ್ರಮಗಳು, ಕೆಲಸದ ನಿಮಿತ್ತ ಪ್ರಯಾಣ ಹೋಗುವವರು ಅಗತ್ಯವಾಗಿ ತಮ್ಮೊಂದಿಗೆ ಕುಡಿಯುವ ನೀರನ್ನು ಕೊಂಡೊಯ್ಯುವುದನ್ನು ಮರೆಯಬಾರದು. ಬಿಸಿಲಿನಲ್ಲಿ ಮಕ್ಕಳು. ವಯಸ್ಸಾದವರು ನಡೆಯುವಾಗ ಕಪ್ಪು ಬಣ್ಣವಲ್ಲದ ಛತ್ರಿ ಬಳಸುವುದು ಒಳ್ಳೆಯದು.

ಬೇಸಿಗೆಯಲ್ಲಿ ಓಡಾಡುವವರು ಕುಡಿಯಲು ನೀರು ಮಾತ್ರವಲ್ಲದೆ, ತಾವು ಧರಿಸುವ ಬಟ್ಟೆ ಬಗ್ಗೆಯೂ ಗಮನಹರಿಸಬೇಕಾಗುತ್ತದೆ. ಹೀಗಾಗಿ ಮನೆಯಿಂದ ಹೊರಗೆ ಓಡಾಡಿದಾಗ ಬಿಸಿಲಿನ ತಾಪಕ್ಕೆ ಸುಸ್ತು, ನೀರಡಿಕೆ, ತಲೆಸುತ್ತು ಮೊದಲಾದವುಗಳು ಬಾಧಿಸಬಹುದು, ಜತೆಗೆ ತಲೆನೋವು ಕಾಡುವ ಸಾಧ್ಯತೆಯೂ ಹೆಚ್ಚಿರುತ್ತದೆ. ಆದ್ದರಿಂದ ಮನೆಯಿಂದ ಹೊರಗೆ  ಹೋಗುವಾಗ ಆದಷ್ಟು ತೆಳು ಬಣ್ಣದ ಸಡಿಲವಾದ ಹತ್ತಿಯ ಬಟ್ಟೆ ಧರಿಸುವುದನ್ನು ರೂಢಿಸಿಕೊಳ್ಳಬೇಕು. ಕೈಗೆಟುಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಬೇಕು. ಆಗಾಗ್ಗೆ ಧಾರಾಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸದ ಪಾನಕ ಸೇವಿಸುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ.

ಬೇಸಿಗೆಯ ದಿನಗಳಲ್ಲಿ ತಮ್ಮ ಜೀವನ ಶೈಲಿಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯ. ಈ ದಿನಗಳಲ್ಲಿ ಕಾಫಿ ಟೀ ಸೇವನೆ ಆದಷ್ಟು ಕಡಿಮೆ ಮಾಡಬೇಕು. ಮಾರುಕಟ್ಟೆಯಲ್ಲಿ ಸಿಗುವ ಕಾರ್ಬೋನೇಟೆಡ್ ಪಾನೀಯಗಳನ್ನು ತ್ಯಜಿಸಿ ಆಗಾಗ್ಗೆ ಶುದ್ಧವಾದ ನೀರು, ಮಜ್ಜಿಗೆ, ಹಣ್ಣಿನ ಜ್ಯೂಸ್, ಎಳನೀರು ಮೊದಲಾದ ನೈಸರ್ಗಿಕ ಪಾನೀಯಗಳನ್ನು ಕುಡಿಯಬೇಕು. ಬೆಚ್ಚಗಿನ ಮಸಾಲೆರಹಿತ ಶುದ್ದ ಆಹಾರ ಸೇವಿಸಬೇಕು. ಶೂ ಧರಿಸುವುದರಿಂದ ಕಾಲು ಬೆವರಿ ದುರ್ವಾಸನೆ ಬೀರಬಹುದು. ಆದ್ದರಿಂದ ಸಾಕ್ಸ್ ಗಳನ್ನು ಒಗೆದು ಸ್ವಚ್ಛವಾಗಿಟ್ಟುಕೊಳ್ಳಬೇಕು, ಗಾಳಿಯಾಡುವಂತಹ ಪಾದರಕ್ಷೆ ಧರಿಸಿದರೆ ಇನ್ನೂ ಉತ್ತಮ.

ಸಿಕ್ಕ, ಸಿಕ್ಕಲ್ಲಿ ಆಹಾರ ಪದಾರ್ಥಗಳನ್ನು ಸೇವಿಸದೆ ಶುಚಿತ್ವಕ್ಕೆ ಒತ್ತು ನೀಡಬೇಕು. ಮನೆಗೆ ಸರಬರಾಜಾಗಾಗುವ ನೀರನ್ನು ನೇರವಾಗಿ ಉಪಯೋಗಿಸದೆ ಕುದಿಸಿ ಆರಿಸಿ ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿಟ್ಟುಕೊಂಡು ಸೇವನೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದರಾಚೆಗೆ  ವೈಯಕ್ತಿಕ ಸ್ವಚ್ಛತೆ ಜತೆಗೆ ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ನಮ್ಮ ಸುತ್ತಲ ಪ್ರದೇಶಗಳಲ್ಲಿ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ ಅಲ್ಲಲ್ಲಿ ಕೊಳಚೆ ನೀರು ನಿಂತು ಅಲ್ಲಿ ಸೊಳ್ಳೆಗಳ ಉತ್ಪಾದನೆಗೆ ಕಾರಣವಾಗ ಬಹುದು. ಈ ಸೊಳ್ಳೆಗಳು ಸೋಂಕು ಹರಡುವ ಮೂಲಕ ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದು. ಆದ್ದರಿಂದ ತ್ಯಾಜ್ಯ ನೀರು ನಿಲ್ಲದಂತೆ ನೋಡಿಕೊಳ್ಳುವ ಮೂಲಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು.

ಬೇಸಿಗೆಯಲ್ಲಿ ನಮ್ಮ ನಿತ್ಯದ ಬದುಕಿನ ಜಂಜಾಟದ ನಡುವೆ ಒಂದಷ್ಟು ಎಚ್ಚರಿಕೆ ವಹಿಸಿ ವೈದ್ಯರು ಹೇಳುವ ಸಲಹೆಗಳನ್ನು ಪಾಲಿಸಿದರೆ  ಬಿಸಿಲಿನಿಂದ ಆಗುವ ಅನಾಹುತಗಳನ್ನು ತಡೆಯಲು ಸಾಧ್ಯವಾಗಲಿದೆ. ಆರೋಗ್ಯವೇ ಭಾಗ್ಯವಾಗಿರುವುದರಿಂದ ಬಿಸಿಲಿನ ಹೊಡೆತಗಳನ್ನು ಎದುರಿಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಬೇಸಿಗೆಯ ದಿನಗಳನ್ನು ಕಳೆಯುವ ಜಾಣತನ ನಮ್ಮದಾಗಬೇಕು… ಏನಂತೀರಾ?

B M Lavakumar

admin
the authoradmin

Leave a Reply

Translate to any language you want