LatestMysore

ನಿಶ್ಯಬ್ದ ರಕ್ತಪಾತ: “ಯಶಸ್ವಿ” ಸಮಾಜದಲ್ಲಿ ಆತ್ಮಹತ್ಯೆಗಳು ಏಕೆ ಹೆಚ್ಚುತ್ತಿವೆ? ನಾವೇನು ಮಾಡಬೇಕು?

ಆರ್ಥಿಕ ಬೆಳವಣಿಗೆ, ತಾಂತ್ರಿಕ ಪ್ರಗತಿ ಮತ್ತು ಜಾಗತಿಕ ಮನ್ನಣೆಯಲ್ಲಿ  ದೇಶವಿಂದು  ಸ್ವರ್ಣ ಯುಗದತ್ತ ದಾಪುಗಾಲಿಡುತ್ತಿದೆ.  ನಮ್ಮ ಶಾಲಾ ತರಗತಿಗಳು ಸ್ಮಾರ್ಟ್ ಆಗಿವೆ.  “ಹೈ ಸ್ಪೀಡ್”  ಸಾರಿಗೆ, ಸಂವಹನ  ನಮ್ಮ ಬದುಕಿನ ವೇಗವನ್ನು ಇಮ್ಮಡಿಗೊಳಿಸಿದೆ.   ಮೂಲಸೌಕರ್ಯಗಳು  ವಿಶ್ವ ಮಟ್ಟಕ್ಕೆ ಏರಿವೆ.  ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅವಕಾಶಗಳು  ಅನಂತವಾಗುತ್ತಿದೆ.  ಈ ಎಲ್ಲ ಕಣ್ಣಿಗೆ  ರಾಚುವ ಪ್ರಗತಿಯ ನಡುವೆಯೇ ನಮ್ಮನ್ನು ಕಾಡುತ್ತಿರುವ ಬಲು ದೊಡ್ಡ ಪ್ರಶ್ನೆ – ಹಿಂದಿಗಿಂತಲೂ ಹೆಚ್ಚು ಅಭಿವೃದ್ಧಿ ಹೊಂದಿದಂತೆ ಕಾಣುತ್ತಿರುವ ನಮ್ಮ  ಸಮಾಜದಲ್ಲಿ ಆತ್ಮಹತ್ಯೆಗಳು ಏಕೆ ಹೆಚ್ಚುತ್ತಿವೆ ಎಂಬುದು?.

ಇಂದು ನಮ್ಮ ಸಮಾಜದಲ್ಲಿ  ಆತ್ಮಹತ್ಯೆ ಅನ್ನುವುದು ಕೇವಲ   ಮಾನಸಿಕ ಆರೋಗ್ಯ ಕಾಳಜಿಯ ಪ್ರಶ್ನೆಯಾಗಿ  ಮಾತ್ರ ಉಳಿದಿಲ್ಲ.  ಇದು ನಮ  ನಾಗರಿಕತೆಯ ಅಸ್ತಿತ್ವಕ್ಕೆ ಎದುರಾಗಿರುವ ಸವಾಲಾಗಿದೆ.  ಈ ಹಿನ್ನಲೆಯಲ್ಲಿ, ನಾವು ನಮ್ಮ ಸಮಾಜಕ್ಕೆ  ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ. ಇದಕ್ಕೆ ಉತ್ತರ ಕಂಡುಕೊಳ್ಳಬೇಕಿರುವುದು ಇಂದಿನ ತುರ್ತು ಅಗತ್ಯ. ನಮ್ಮ ಸಮಾಜದಲ್ಲಿ ಇಂದು  ಕಂಡು ಬರುತ್ತಿರುವ  ಅಭಿವೃದ್ಧಿಯ ಧಾವಂತ, ಅದು ತಂದಿಟ್ಟಿರುವ ಸವಾಲುಗಳನ್ನು  ಗಮನಿಸುವಾಗ ನಮ್ಮನ್ನು ಕಾಡುವ ಬಹು ಮುಖ್ಯ ಕಳವಳವೆಂದರೆ ನಮ್ಮಲ್ಲಿಂದು  ಭಾವನಾತ್ಮಕ ಬದ್ಧತೆ- ಸಿದ್ಧತೆ- ಭದ್ರತೆ ಇಲ್ಲದ ಪ್ರಗತಿಯನ್ನು ಸಾಧಿಸಲಾಗುತ್ತಿದೆಯೇ ಅನ್ನುವುದು. ಆತ್ಮವಿಲ್ಲದ ದೇಹದಂತದ ಸ್ಟಿತಿಗೆ ಈ ಸಮಾಜ ತಲುಪಿದೆಯೇ ಅನ್ನುವ  ಕಳವಳ ಕಂಡುಬರುತ್ತಿದೆ. ಇದಕ್ಕೂ ಕಾರಣವಿದೆ.

ನಮ್ಮಸಾಮಾಜಿಕ ಜೀವನದ  ಸ್ಥಿತಿಗತಿ  ಇಂದು ಎಲ್ಲಿಗೆ ತಲುಪಿದೆ ಎಂದರೆ,  ನಮ್ಮ ಬದುಕಿಂದು  ಕೂಡು  ಕುಟುಂಬಗಳಿಂದ, ಸಣ್ಣ ಕುಟುಂಬ,  ಆಟದ ಮೈದಾನದ ಸಂಭ್ರಮದಿಂದ  ಸ್ಮಾರ್ಟ್  ಪರದೆಯ  ಮೇಲೆ ಏಕಾಂಗಿಯಾಗಿ ಅನುಭವಿಸುವ, ಮೌಲ್ಯಾಧಾರಿತ ಜೀವನದ  ಬದಲಿಗೆ  ಕಾರ್ಯಕ್ಷಮತೆ ಆಧಾರಿತ ಗುರುತಿಗೆ ಬದಲಾಗಿದೆ.  ಈ ರೂಪಾಂತರ ವೈಯಕ್ತಿಕ ಆಯ್ಕೆಗೆ ಬಿಟ್ಟದ್ದು. ಆದರೆ ಈ ರೂಪಾಂತರದ ವೇಗ  ಅದೆಷ್ಟು ವೇಗವಾಗಿದೆ ಎಂದರೆ  ಮಾನವನ  ಮನಸ್ಸು ಭಾವನಾತ್ಮಕವಾಗಿ ಇದಕ್ಕೆ ಹೊಂದಿಕೊಳ್ಳಲು ತಡಕಾಡುತ್ತಿದೆ. ನಾವು ನಮ್ಮ ಜೀವನಶೈಲಿಯನ್ನೇನೋ  ಆಧುನಿಕರಣಗೊಳಿಸಿದ್ದೇವೆ. ಆದರೆ ಅದನ್ನು ನಿಭಾಯಿಸುವ ರೀತಿ ನಮಗೆ ದಕ್ಕಿಲ್ಲ.

ಇದು ನಮ್ಮ ಬಹುತೇಕ ಸಮಸ್ಯೆಗಳ ಮೂಲ. ನಮ್ಮ ಮಕ್ಕಳು ನಮ್ಮ ಸಮಾಜದ ಪ್ರತಿಬಿಂಬ. ಈಗ ಮಕ್ಕಳಿಂದಲೇ ನಾವು ಆರಂಭಿಸೋಣ. ಇಂದು ಒಂದು ಮಗುವನ್ನು “ನೀನು  ಸಂತೋಷವಾಗಿದ್ದೀಯ? ” ಎಂದು ಕೇಳುವವರೇ ಇಲ್ಲ.  ಬದಲಿಗೆ, “ನಿನ್ನ   ಅಂಕ ಎಷ್ಟು, ನಿನ್ನ ಬದುಕಿನ ಟಾರ್ಗೆಟ್ ಏನು ?” ಅನ್ನುವ ಪ್ರಶ್ನೆಗಳನ್ನೇ ಕೇಳಲಾಗುತ್ತದೆ. ಪರಿಣಾಮ ಏನು ಅನ್ನುವುದು ನಮಗೆಲ್ಲಾ ತಿಳಿದೇ ಇದೆ.  ಇದು ಎಲ್ಲಾ ವಯಸ್ಸಿನವರಿಗೂ ಅನ್ವಯವಾಗುತ್ತಲೇ ಹೋಗುತ್ತದೆ.

ಇಂದು ನಮ್ಮ ಬದುಕಿನ ಪಯಣವನ್ನು ಅನುಭವಿಸುವುದಕ್ಕೆ ಮಹತ್ವ ನೀಡಲಾಗುತ್ತಿಲ್ಲ. ಎಲ್ಲರ ಗುರಿ ಅಂತಿಮ ಫಲಿತಾಂಶವಷ್ಟೇ. ಪಯಣವನ್ನು ನಾವು ಎಲ್ಲಿಯವರೆಗೆ ಅನುಭವಿಸಲು ಆರಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಂತೃಪ್ತಿ ಅನ್ನುವುದು ಮರೀಚಿಕೆಯಾಗೇ ಉಳಿಯುತ್ತದೆ. ಬಾಲ್ಯದಲ್ಲಿ ಅಂಕ, ಬಳಿಕ ಕಾಲೇಜು ಶ್ರೇಯಾಂಕ,  ನಂತರ ಸಂಬಳ, ಒಂದಿಷ್ಟು ದಿನಗಳ ಬಳಿಕ ಸಂಬಳದ ಮೇಲಿನ ಸಂಪಾದನೆ, ಐಷಾರಾಮಿ ಬದುಕು,  ಮತ್ತು ಸಾಮಾಜಿಕ ಮಾಧ್ಯಮದಲ್ಲಿ  ಲೈಕ್ಸ್, ಕಾಮೆಂಟ್ ಇವಿಷ್ಟನ್ನು ನಾವು ನಮ್ಮ ಸಮಾಜದಲ್ಲಿನ ಯಶಸ್ಸಿನ  ಹೊಸ ಅಳತೆಗೋಲಾಗಿ  ರೂಪಿಸಿದ್ದೇವೆ.  ಇಂತಹ  ವ್ಯವಸ್ಥೆಯಲ್ಲಿ, ವೈಫಲ್ಯವನ್ನು ಒಂದು ಘಟನೆಯಾಗಿ ನೋಡಲಾಗುವುದಿಲ್ಲ. ಬದಲಿಗೆ ಅದು ವ್ಯಕ್ತಿಯ ಸೋಲು, ಆತನ ವ್ಯಕ್ತಿತ್ವದ ವೈಫಲ್ಯ ಎಂದು ಗೇಲಿ ಮಾಡಲಾಗುತ್ತದೆ.

ಆಧುನಿಕ ಪೋಷಕರಲ್ಲಿ ಭಾವನಾತ್ಮಕ ನಿರ್ವಾತ: ಇದು ಇಂದು ನಮ್ಮ ಮಧ್ಯಮ ವರ್ಗದ ಮನೆ ಮನೆಯ ವ್ಯಥೆಯ ಕತೆ.  ಇಂದಿನ ಯುವ  ಪೋಷಕರು   ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಅತ್ಯುತ್ತಮ ಸೌಲಭ್ಯಗಳು ಮತ್ತು ಅತ್ಯುತ್ತಮ ಜೀವನಶೈಲಿಯನ್ನು ನೀಡಲು ದಣಿವರಿಯಿಲ್ಲದೆ ಕತ್ತೆ ದುಡಿದಂತೆ ದುಡಿಯುತ್ತಾರೆ. ಆದರೆ ಕುಟುಂಬಗಳನ್ನು ಬಾಧಿಸುತ್ತಿರುವುದು ಭಾವನಾತ್ಮಕ ನಿರ್ವಾತ.

ನಮ್ಮ ಆಧುನಿಕ ಮನೆಗಳಲ್ಲಿ ಹಣವಿದೆ- ಹೊನ್ನಿದೆ. ಆದರೆ ಮನಸ್ಸಿನ ಮಾತು ಹೇಳುವ ಬಾಯಿಗಳಿಲ್ಲ, ಕೇಳುವ ಕಿವಿಗಳಿಲ್ಲ. ಭಾವನಾತ್ಮಕ ಬಂಧ ಸಡಿಲಗೊಂಡಿದೆ.  ಮಕ್ಕಳಿಗೆ ಸೋಲನ್ನು ಎದುರಿಸುವ ಕಲೆಯನ್ನು ಹೆಳಿಕೊಡುವವರಿಲ್ಲ. ಹಣದಿಂದ ಈ ಕಲೆಯನ್ನು ಖರೀದಿಸಲು ಸಾಧ್ಯವಿಲ್ಲ. ನಮ್ಮ ಮಕ್ಕಳನ್ನು  ಸ್ಪರ್ಧೆಗೆ ಸಿದ್ಧಗೊಳಿಸಲಾಗುತ್ತಿದೆ. ಆದರೆ ಜೀವಿಸಲು ಅಲ್ಲ.

ಹೈಪರ್ ಕನೆಕ್ಟೆಡ್ ಪೀಳಿಗೆಯ ಒಂಟಿತನ: ಇಂದು ನಾವು ಪ್ರತಿ ಕ್ಷಣವೂ ಯಾರೊಂದಿಗೆ ಕೂಡಾ   ಡಿಜಿಟಲ್ ಸಂಪರ್ಕ ಹೊಂದಲು ಸಾಧ್ಯವಿದೆ. ಎಲ್ಲರಿಗೂ ಆನ್‌ಲೈನ್ನಲ್ಲಿ ಸಾವಿರಾರು ಸ್ನೇಹಿತರಿರುತ್ತಾರೆ. ಆದರೆ ವಾಸ್ತವದಲ್ಲಿ ಯಾರೂ ಇರುವುದಿಲ್ಲ. ಸಂಪರ್ಕ-ಸಂವಹನ ತಂತ್ರಜ್ಞಾನ ಅದೆಷ್ಟೇ ಮುಂದುವರಿದಿದ್ದರು,   ಭಾವನಾತ್ಮಕವಾಗಿ ಸಂಪರ್ಕ ಸಾಧಿಸಲು ಸಾಧ್ಯವಿಲ್ಲದಂತಹ ಸ್ಥಿತಿಗೆ ತಲುಪಿದ್ದೇವೆ. ನಾವು ಭಾವನೆಗಳನ್ನು ಹಂಚಿಕೊಳ್ಳುವ ಬದಲು ರೀಲ್‌ಗಳನ್ನು ಹಂಚಿಕೊಳ್ಳುತ್ತೇವೆ. ನೋವನ್ನು ವ್ಯಕ್ತಪಡಿಸುವ ಬದಲು ಸೋಶಿಯಲ್ ಮೀಡಿಯಾದಲ್ಲಿ   ಪೋಸ್ಟ್ ಮಾಡುತ್ತೇವೆ!.

ಆದರೆ ಕೆಲವೊಮ್ಮೆ  ಆನ್‌ಲೈನ್‌ನಲ್ಲಿ ಸಾವಿರಾರು ಜನರೊಂದಿಗೆ ಸಂಪರ್ಕ ಹೊಂದಿರುವ  ವ್ಯಕ್ತಿಗೆ  ವಾಸ್ತವದಲ್ಲಿ  ನನಗೆ ಯಾರೂ ಇಲ್ಲ ಎಂದು ಅನಿಸುವುದರಲ್ಲಿ ಯಾವ ತಪ್ಪು ಇಲ್ಲ. ಶೈಕ್ಷಣಿಕ ಒತ್ತಡ, ಆರ್ಥಿಕ ಒತ್ತಡ, ವೃತ್ತಿ ಒತ್ತಡ, ಸಾಮಾಜಿಕ ನಿರೀಕ್ಷೆಗಳು, ಕುಟುಂಬದ ಜವಾಬ್ದಾರಿಗಳು ಹೀಗೆ ಒತ್ತಡಗಳೊಂದಿಗೆ  ನಾವು   ಬ್ರೇಕ್‌ಗಳಿಲ್ಲದೆ ವಾಹನದೊಂದಿಗೆ  ಯಶಸ್ಸಿನತ್ತ ಶಿಖದತ್ತ ಹೆಚ್ಚಿನ ವೇಗದಲ್ಲಿ ಸಾಗುತ್ತಿದ್ದೇವೆ. ಅಪಾಯ ಕಟ್ಟಿಟ್ಟ ಬುತ್ತಿ.

ನಮ್ಮಲ್ಲಿ ಇಂದು ಅನೇಕರು ಮೌನವಾಗಿ ಬಳಲುತ್ತಾರೆ.  ಏಕೆಂದರೆ ಅಭಿವ್ಯಕ್ತಿಯನ್ನು ಬದುಕಿನ  ದೌರ್ಬಲ್ಯವೆಂದು ನೋಡಲಾಗುತ್ತದೆ ಮತ್ತು ದುರ್ಬಲತೆಯನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. ಆದ್ದರಿಂದ ಜನರು ಸಾರ್ವಜನಿಕವಾಗಿ ನಗುತ್ತಾರೆ ಮತ್ತು ಖಾಸಗಿಯಾಗಿ ಹೋರಾಡುತ್ತಾರೆ. ಹಿತೈಷಿಗಳ ಅಥವಾ ಸಮಾಜದ ಗಮನಕ್ಕೆ ಈ ತೊಳಲಾಟ ಅರಿವಾಗುವ ಹೊತ್ತಿಗೆ ಸಮಯ ಕೈಮೀರಿರುತ್ತದೆ.

ಈ ಹಿನ್ನಲೆಯಲ್ಲಿ ನಾವು  ಏನು ಮಾಡಬಹುದು.  ನಿಜ ಆಧ್ಯಾತ್ಮಿಕತೆ ನಮ್ಮ ನೆರವಿಗೆ ಬರಬಹುದು. ನಿಜ ಆಧ್ಯಾತ್ಮಿಕತೆ ಎಂದರೆ  ಆಚರಣೆಯಲ್ಲ. ಬದಲಿಗೆ ಅದು ಆಂತರಿಕ ಸ್ಥಿರತೆ. ಅದು ನಮ್ಮ ಸೋಲಿನಲ್ಲೂ ಚಿಂತನೆಗೆ ಪ್ರೇರೇಪಿಸುತ್ತದೆ. ದುಃಖಕ್ಕೂ ಒಂದು  ಅರ್ಥವನ್ನು ನೀಡುತ್ತದೆ. ವ್ಯಕ್ತಿಯ ಜೀವನವು ಅರ್ಥವನ್ನು ಕಳೆದುಕೊಂಡಾಗ, ಒತ್ತಡ ಅಸಹನೀಯವಾಗುತ್ತದೆ.  ಜೀವನದಲ್ಲಿ  ಉದ್ದೇಶ ಈಡೇರಿದಾಗ ನೋವು ಸಹ ಸಹನೀಯವಾಗುತ್ತದೆ.

ಉತ್ತಮ ನ್ಯಾಯಯುತ  ಜೀವನಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ.  ಯಾವುದೇ ಪರೀಕ್ಷೆ, ಯಾವುದೇ ಆರ್ಥಿಕ ನಷ್ಟ, ಯಾವುದೇ ಸಾಮಾಜಿಕ ಅಭಿಪ್ರಾಯ ಮತ್ತು ಯಾವುದೇ ವೈಫಲ್ಯವು ನಿಮ್ಮ ಅಸ್ತಿತ್ವಕ್ಕಿಂತ ದೊಡ್ಡದಲ್ಲ. ಬದುಕುವುದು, ಮಾತನಾಡುವುದು, ಸಹಾಯವನ್ನು ಹುಡುಕುವುದು ಮತ್ತು ಮತ್ತೆ ಪ್ರಾರಂಭಿಸುವುದು – ಅದು ನಿಜವಾದ ಧೈರ್ಯ.

ಹಾಗಾದರೆ ನಮ್ಮ ಸಮಾಜದಲ್ಲಿ  ಏನು ಬದಲಾಗಬೇಕು?  ನಾವು ಆಧುನಿಕತೆಯನ್ನು ತಿರಸ್ಕರಿಸುವ ಅಗತ್ಯವಿಲ್ಲ. ನಾವು ಅದನ್ನು ಮಾನವೀಯಗೊಳಿಸಬೇಕಾಗಿದೆ.  ಮೊದಲಿಗೆ ಕುಟುಂಬ ವ್ಯವಸ್ಥೆ ಬಲಪಡಿಸಬೇಕಿದೆ.  ಮಕ್ಕಳಿಗೆ ಸೌಲಭ್ಯಗಳನ್ನು ಮಾತ್ರವಲ್ಲ, ಸಮಯವನ್ನು ನೀಡಿ. ಕುಟುಂಬ ಸದಸ್ಯರ ಬಗ್ಗೆ  ತೀರ್ಪು ನೀಡುವ ಬದಲು ಎಲ್ಲವನ್ನು-ಎಲ್ಲರನ್ನು  ಆಲಿಸಿ. ಮಕ್ಕಳಿಗೆ ವೈಫಲ್ಯವನ್ನು ಹೇಗೆ ನಿಭಾಯಿಸಬೇಕೆಂದು ಕಲಿಸಿ. ಶಾಲೆಗಳಲ್ಲಿ  ಅಕ್ಷರ ಪರಿಚಯಿಸುವ ಜೊತೆಗೆ  ಭಾವನಾತ್ಮಕ ಸಾಕ್ಷರತೆಯನ್ನು  ಹೇಳಿಕೊಡಬೇಕಿದೆ.

ಫಲಿತಾಂಶಗಳನ್ನು ಮಾತ್ರವಲ್ಲ, ಪ್ರಯತ್ನಕ್ಕೂ ಪ್ರತಿಫಲ ನೀಡಬೇಕಿದೆ.  ಸಮಾಜ  ಸಂಪತ್ತಿನಿಂದ ಮಾತ್ರ ವ್ಯಕ್ತಿ-ಕುಟುಂಬಗಳ  ಮೌಲ್ಯವನ್ನು ಅಳೆಯುವುದನ್ನು ನಿಲ್ಲಿಸಬೇಕು. ವೈಯಕ್ತಿಕ ಮಟ್ಟದಲ್ಲಿ ನಾವು ಕೂಡ ಒಂದಿಷ್ಟು ಬದಲಾಗಬೇಕಿದೆ.  ನೋವಿನಲ್ಲಿರುವಾಗ ಮಾತನಾಡೋಣ.   ಸಹಾಯ ಯಾಚಿಸುವುದು ತಪ್ಪಲ್ಲ ಅನ್ನುವುದನ್ನು ಅರಿತುಕೊಳ್ಳೋಣ.

ಕೊನೆಗೊಂದು ಮಾತು:  ನಾವು ನಮ್ಮ ಜೀವನಶೈಲಿಯನ್ನು ಆಧುನಿಕರಣ ಗೊಳಿಸಿಕೊಂಡಿದ್ದೇವೆ.  ಆದರೆ ಅದನ್ನು  ನಿಭಾಯಿಸುವ ಕಾರ್ಯವಿಧಾನಗಳನ್ನು ಇನ್ನು ನವೀಕರಣಗೊಳಿಸಿಲ್ಲ. ಇದು ಇಂದಿನ ತುರ್ತು ಅಗತ್ಯ.

admin
the authoradmin

Leave a Reply

Translate to any language you want