ಡಿಕೆಶಿ ರೆಬಲ್ ಆಗುತ್ತಿರುವುದೇಕೆ? ಇಷ್ಟಕ್ಕೂ ಡಿಕೆಶಿಗೆ ವಿರೋಧಿಗಳಿರುವುದು ಸ್ವಪಕ್ಷದಲ್ಲಾ? ವಿಪಕ್ಷದಲ್ಲಾ?

*ಸಿದ್ದರಾಮಯ್ಯರವರ ತಂತ್ರಕ್ಕೆ ಬೆಚ್ಚಿದ ‘ಕೈ’ಕಮಾಂಡ್
*ಡಿ.ಕೆ.ಶಿವಕುಮಾರ್ ಸಿಎಂ ಆಗೋದು ಕಷ್ಟ… ಕಷ್ಟ…
*ಇನ್ನೆರಡು ವರ್ಷಗಳ ಕಾಲ ಕಾಂಗ್ರೆಸ್ ಗೆ ಅಗ್ನಿಪರೀಕ್ಷೆ

2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಪೂರ್ವ ಇದ್ದಂತಹ ಒಗ್ಗಟ್ಟು ಈಗ ಇಲ್ಲದಾಗಿದೆ. ಮೇಲ್ನೋಟಕ್ಕೆ ನಾವೆಲ್ಲ ಒಂದೇ ಎಂದು ಬೊಬ್ಬೆ ಹೊಡೆದುಕೊಂಡರೂ ಒಳಗೊಳಗೆ ಕಾಂಗ್ರೆಸ್ ಬಣಗಳಾಗಿ ಹಂಚಿ ಹೋಗಿರುವುದು ಸುಳ್ಳೇನಲ್ಲ. ಸದ್ಯಕ್ಕೆ ಡಿಕೆಶಿ ಮತ್ತು ಸಿದ್ದರಾಮಯ್ಯ ಬಣಗಳ ಜಟಾಪಟಿ ನಮಗೆ ಕಾಣಿಸಿದರೂ ಅದರಾಚೆಗೂ ಅತೃಪ್ತ ಮನಸ್ಸುಗಳು ಮಸಲತ್ತು ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ…
ಪಕ್ಷ ಅಧಿಕಾರ ಹಿಡಿದು ಸಿದ್ದರಾಮಯ್ಯ ಸಿಎಂ ಆದ ಬಳಿಕದಿಂದ ಇಲ್ಲಿವರೆಗೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣಗಳ ನಡುವೆ ಮಾತಿನ ಜಟಾಪಟಿ ನಡೆಯುತ್ತಲೇ ಇದೆ. ಅದಕ್ಕಿಂತ ಹೆಚ್ಚಾಗಿ ಡಿ.ಕೆ.ಶಿವಕುಮಾರ್ ಅವರ ಸಿಎಂ ಆಗುವ ಕನಸುಗಳು ನನಸಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿಯೇ ಅವರು ರೆಬಲ್ ಆಗುತ್ತಿದ್ದು ಅವರು ಒತ್ತಡದಲ್ಲಿದ್ದಾರೆ ಎಂಬುದನ್ನು ಅವರ ನಡೆ, ನುಡಿ ಮಾತುಗಳೇ ತೋರ್ಪಡಿಸುತ್ತಿವೆ. ಮಾತುಗಳು ಹಿಡಿತ ಕಳೆದುಕೊಳ್ಳುತ್ತಿದ್ದು ಸರ್ವಾಧಿಕಾರಿಯ ವರ್ತನೆಗಳು ಕಾಣಿಸುತ್ತಿವೆ. ಇದು ಅವರಿಗೆ ಶೋಭೆ ತರುತ್ತಿಲ್ಲ ಎನ್ನುವುದು ಹಲವರ ಅಭಿಪ್ರಾಯವಾಗಿದೆ.

ಆರಂಭದಲ್ಲಿ ಸಿದ್ದರಾಮಯ್ಯ ಇದೇ ರೀತಿ ವರ್ತಿಸುತ್ತಿದ್ದರು. ಡಿಸಿಗೆ ಏಕವಚನದಲ್ಲಿ ನಿಂದನೆ ಮಾಡಿರುವುದು, ಎಸ್ಪಿ ಮೇಲೆ ಕೈಎತ್ತಿರುವುದು ಹೀಗೆ ಹತ್ತಾರು ಘಟನೆಗಳು ನಡೆದಿದ್ದು ಇದೀಗ ಅವರು ಮೌನಕ್ಕೆ ಜಾರಿದ್ದು, ತಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಈಗ ರೆಬಲ್ ಆಗುತ್ತಿರುವುದು ಡಿ.ಕೆ.ಶಿವಕುಮಾರ್ ಎನ್ನುವುದಂತು ಸ್ಪಷ್ಟವಾಗುತ್ತಿದೆ. ಸರ್ಕಾರ ರಚನೆಯಾಗಿ ಮೂರು ವರ್ಷವಾಗುತ್ತಾ ಬಂದರೂ ಸಿಎಂ ಆಗುವ ಯೋಗ ಕೂಡಿ ಬರುತ್ತಿಲ್ಲವಲ್ಲ ಎಂಬ ಹತಾಶೆ ಹೀಗೆ ಮಾಡುತ್ತಿದೆಯಾ? ಗೊತ್ತಿಲ್ಲ…
ಇನ್ನು ಡಿಸಿಎಂ ಆಚೆಗೆ ಅವರೊಬ್ಬ ಪಕ್ಷದ ರಾಜ್ಯ ಅಧ್ಯಕ್ಷರಾಗಿದ್ದಾರೆ. ಪಕ್ಷದ ನಾಯಕತ್ವ ಅವರ ಕೈನಲ್ಲಿದೆ. ಆದರೆ ಇದೀಗ ಅವರು ನಾಯಕತ್ವ ನಿಭಾಯಿಸುವಲ್ಲಿಯೂ ವಿಫಲರಾಗುತ್ತಿದ್ದಾರಾ? ಎಂಬ ಪ್ರಶ್ನೆ ಮೂಡುತ್ತಿದೆ. ಏಕೆಂದರೆ ಕೈ ಮುಖಂಡರು ಅರ್ಥಾತ್ ಸಿಎಂ ಸಿದ್ದರಾಮಯ್ಯ ಬಣದ ಶಾಸಕರು ಡಿ.ಕೆ.ಶಿವಕುಮಾರ್ ಅವರ ಮಾತಿಗೆ ಸೊಪ್ಪು ಹಾಕುತ್ತಿಲ್ಲ. ಇದಕ್ಕೆ ಶಾಸಕರ ವಿದೇಶಿ ಪ್ರವಾಸವೇ ಸಾಕ್ಷಿಯಾಗಿದೆ. ಇನ್ನು ಹೈಕಮಾಂಡ್ ಮೇಲೆ ಒತ್ತಡ ತಂದರೂ ಅದು ಪ್ರಯೋಜನಕ್ಕೆ ಬರುತ್ತಿಲ್ಲ. ಸಿದ್ದರಾಮಯ್ಯರವರು ಸ್ವ ಇಚ್ಚೆಯಿಂದ ಅಧಿಕಾರ ಬಿಟ್ಟುಕೊಡುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಇದರಿಂದ ಅಧಿಕಾರ ಪಡೆದೇ ಪಡೆಯುತ್ತೇನೆಂದು ಹಠಕ್ಕೆ ಬಿದ್ದಿರುವ ಡಿಕೆಶಿಗೆ ಸಿಎಂ ಸ್ಥಾನ ದಕ್ಕುವ ಲಕ್ಷಣಗಳು ಗೋಚರಿಸುತ್ತಿಲ್ಲ..

ಸಿಎಂ ಮತ್ತು ಡಿಸಿಎಂ ನಡುವಿನ ಅಧಿಕಾರ ಹಸ್ತಾಂತರದ ಹಗ್ಗ ಜಗ್ಗಾಟ ಕಾಂಗ್ರೆಸ್ ಪಕ್ಷದ ಮೇಲೆ ಪರಿಣಾಮ ಬೀರುತ್ತಿದೆ. ಸಿದ್ದರಾಮಯ್ಯ ಅವರು ಹಿಂದುಳಿದ, ಅಲ್ಪಸಂಖ್ಯಾತ ಶಾಸಕರು, ಸಚಿವರನ್ನು ತಮ್ಮೊಟ್ಟಿಗೆ ಇಟ್ಟುಕೊಂಡು ಆಟ ಆಡುತ್ತಿದ್ದಾರೆ. ಡಿ ಕೆ ಶಿವಕುಮಾರ್ ಅವರೊಂದಿಗೆ ಕೆಲವು ಒಕ್ಕಲಿಗ ನಾಯಕರು ಹಾಗೂ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಹೊರತು ಪಡಿಸಿದರೆ ಮತ್ಯಾರು ಬಹಿರಂಗಾಗಿ ಕಾಣಿಸುತ್ತಿಲ್ಲ. ಹೀಗಾಗಿ ಅಧಿಕಾರ ಹಸ್ತಾಂತರ ವಿಚಾರದಲ್ಲಿ ಹೈಕಮಾಂಡ್ ಗಟ್ಟಿಯಾದ ನಿರ್ಧಾರಕ್ಕೆ ಬರಲಾರದೆ ದಿನಗಳನ್ನು ತಳ್ಳುವುದಕ್ಕೆ ಸೀಮಿತವಾಗುತ್ತಿದೆ.
ಹಾಗೆನೋಡಿದರೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗುತ್ತಿವೆ. ಇನ್ನು ಎರಡು ವರ್ಷವಷ್ಟೇ ಬಾಕಿಯಿದೆ. ಈ ಎರಡು ವರ್ಷಗಳು ಅಧಿಕಾರದ ಅಗ್ನಿಪರೀಕ್ಷೆಯ ದಿನಗಳಾಗಿವೆ. 2028ಕ್ಕೆ ಮತ್ತೆ ವಿಧಾನಸಭಾ ಚುನಾವಣೆಗೆ ಹೋಗಲೇ ಬೇಕಾಗುತ್ತದೆ. ಅದರ ನಡುವೆ ಕಾಂಗ್ರೆಸ್ ಹೈಕಮಾಂಡ್ ಇತರೆ ರಾಜ್ಯಗಳಲ್ಲಿನ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕಾಗಿದೆ. ಆ ಎಲ್ಲ ಚುನಾವಣೆಗಳನ್ನು ಎದುರಿಸಬೇಕಾದರೆ ಕರ್ನಾಟಕದ ಸಹಕಾರ ಸರ್ವ ರೀತಿಯಲ್ಲಿ ಬೇಕಾಗುತ್ತದೆ. ಹೀಗಾಗಿ ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ವಿಚಾರಕ್ಕೇನಾದರೂ ಕೈ ಹಾಕಿದರೆ ಥೇಟ್ ಜೇನುಗೂಡಿಗೆ ಕಲ್ಲು ಹಾಕಿದಂತೆ ಆಗಲಿದೆ. ಅದರ ಪರಿಣಾಮಗಳು ಕರ್ನಾಟಕದಾಚೆಗೂ ಬೀರಬಹುದು ಎಂಬ ಭಯ ಹೈಕಮಾಂಡ್ ನ್ನು ಕಾಡಲಾರಂಭಿಸಿದೆ.

ಸಿದ್ದರಾಮಯ್ಯರವರನ್ನು ಅಧಿಕಾರದಿಂದ ಇಳಿಸಿ ಡಿ ಕೆ ಶಿವಕುಮಾರ್ ಅವರಿಗೆ ಪಟ್ಟಕಟ್ಟುವ ಕಡೆಗೆ ಹೈಕಮಾಂಡ್ ಚಿಂತನೆ ಮಾಡುತ್ತಿರುವಂತೆ ಕಾಣಿಸುತ್ತಿಲ್ಲ. ಬದಲಿಗೆ ಡಿ.ಕೆ.ಶಿವಕುಮಾರ್ ಅವರಿಗೆ ಬೇರೆ ರಾಜ್ಯಗಳ ಚುನಾವಣೆಯ ಜವಬ್ದಾರಿಗಳನ್ನು ನೀಡಿ ಅವರನ್ನು ಆ ಕಡೆಗೆ ಫೋಕಸ್ ಮಾಡುವಂತೆ ಮಾಡುತ್ತಿದೆ. ಇದು ಡಿಕೆಶಿಗೆ ಮತ್ತು ಅವರ ಬಣದ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಧಿಕಾರದ ಹಸ್ತಾಂತರದ ವಿಚಾರದಲ್ಲಿ ಹೈಕಮಾಂಡ್ ತ್ರಿಶಂಕು ಸ್ಥಿತಿಯಲ್ಲಿದೆ. ಏನೇ ನಿರ್ಧಾರ ತೆಗೆದುಕೊಂಡರೂ ಅದರ ಪರಿಣಾಮಗಳು ನಂತರದ ದಿನಗಳಲ್ಲಿ ನೆಟ್ಟಗಿರಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿಯೇ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.
ಇತ್ತೀಚೆಗಿನ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಬಣದವರು ಯಾವುದೇ ಹೇಳಿಕೆ ನೀಡದೆ, ಹೈಕಮಾಂಡ್ ಸೂಚನೆಗೂ ಬಗ್ಗದೆ ವಿದೇಶಿ ಪ್ರವಾಸ ಮಾಡಿದ್ದಾರೆ. ಇದು ಬರೀ ಪ್ರವಾಸ ಅಂಥ ಅಂದುಕೊಂಡರೆ ಅದು ತಪ್ಪಾಗಿ ಬಿಡುತ್ತದೆ. ಇದೊಂದು ರಾಜಕೀಯ ತಂತ್ರವಾಗಿದೆ. ಆ ಮೂಲಕ ಹೈಕಮಾಂಡ್ ಮತ್ತು ಡಿಕೆಶಿ ಬಣಕ್ಕೊಂದು ಸಂದೇಶವನ್ನು ರವಾನಿಸಲಾಗಿದೆ. ನಾವು ಸಿಎಂ ಬಣದವರು ಒಗ್ಗಟ್ಟಾಗಿದ್ದೇವೆ. ಸಿದ್ದರಾಮಯ್ಯರಿಂದ ಅಧಿಕಾರ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂಬ ಪರೋಕ್ಷ ಎಚ್ಚರಿಕೆಯೂ ಇದಾಗಿದೆ. ಈ ಬೆಳವಣಿಗೆಯಿಂದ ಹೈಕಮಾಂಡ್ ವಿಚಲಿತವಾಗಿದೆ. ಹೀಗಾಗಿ ಅಧಿಕಾರ ಹಸ್ತಾಂತರ ವಿಚಾರಕ್ಕೆ ಕೈ ಹಾಕಲು ಹೆದರುತ್ತಿದೆ.

ಇದೆಲ್ಲ ಬೆಳವಣಿಗೆಗಳು ಡಿ.ಕೆ.ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅವರ ಸಿಎಂ ಆಗುವ ಕನಸು ನುಚ್ಚುನೂರಾಗಲು ಆರಂಭಿಸಿದೆ. ಅವರ ಬಣದ ಶಾಸಕರು ಮೇಲಿಂದ ಮೇಲೆ ಅಧಿಕಾರ ಹಸ್ತಾಂತರದ ದಿನಾಂಕಗಳನ್ನು ನಿಗದಿ ಮಾಡುತ್ತಾ ಹೋಗುತ್ತಿದ್ದರೂ ಅದ್ಯಾವುದೂ ನಡೆಯುತ್ತಿಲ್ಲ. ಪಕ್ಷಕ್ಕಾಗಿ ಇಷ್ಟೆಲ್ಲ ಶ್ರಮಪಟ್ಟರೂ ಸಿಎಂ ಆಗಲು ಸಾಧ್ಯವಾಗದೆ ಹೋಯಿತಲ್ಲ ಎಂಬ ಕೊರಗು ಡಿಕೆಶಿ ಸೇರಿದಂತೆ ಬಣದವರನ್ನು ಕಾಡಲು ಆರಂಭಿಸಿದೆ. ಅಧಿಕಾರ ಹಸ್ತಾಂತರ ಎಂಬ ಬಿಸಿ ತುಪ್ಪ ಗಂಟಲಲ್ಲಿ ಸಿಕ್ಕಿಕೊಂಡು ಉಗುಳಲು ನುಂಗಲು ಆಗದೆ ಒದ್ದಾಡುವಂತಾಗಿದೆ.
ಸರ್ಕಾರ ಉಚಿತ ಭಾಗ್ಯಗಳನ್ನು ನೀಡಿದ್ದರೂ ಕೂಡ ಜನ ಸರ್ಕಾರದ ವಿರುದ್ಧವೇ ಹಿಡಿಶಾಪ ಹಾಕುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಬೆಲೆ ಏರಿಕೆ ಬಿಸಿ ಜನರನ್ನು ಸುಡುತ್ತಿದೆ. ಜನವಲಯದಲ್ಲಿ ಅತೃಪ್ತಿ ಕಾಡಲಾರಂಭಿಸಿದೆ. ಭ್ರಷ್ಟಾಚಾರದ ಸುದ್ದಿಗಳು ಮಾಮೂಲಿಯಾಗಿದೆ. ಸರ್ಕಾರ ಸಾಲ ಮಾಡಿ ಆಡಳಿತ ನಡೆಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ವಲಯದಿಂದ ಬರುವ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರಕ್ಕೆ ಸುಲಭವಾಗಿ ಉಳಿದಿಲ್ಲ. ಸಾರ್ವಜನಿಕವಾಗಿ ಕಾಂಗ್ರೆಸ್ ನ ನಾಯಕರು ಉಚಿತ ಯೋಜನೆಯಿಂದ ಜನಸಾಮಾನ್ಯರ ಜೀವನ ಮಟ್ಟ ಸುಧಾರಿಸಿದೆ ಎಂಬ ಹೇಳಿಕೆ ನೀಡಿದರೂ ಖಜಾನೆ ಖಾಲಿಯಾಗಿರುವ ಹೆಚ್ಚೆಚ್ಚು ಸಾಲವಾಗಿರುವ ವಿಚಾರವನ್ನು ಅರಿತುಕೊಳ್ಳದಷ್ಟು ಜನ ದಡ್ಡರಲ್ಲ.

ಈಗಿನ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ ಡಿ.ಕೆ.ಶಿವಕುಮಾರ್ ಅವರಿಗೆ ಸಿದ್ದರಾಮಯ್ಯರವರು ಸಿಎಂ ಸ್ಥಾನವನ್ನು ಹಸ್ತಾಂತರ ಮಾಡುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಹೈಕಮಾಂಡ್ ನತ್ತ ಬೆರಳು ತೋರಿಸುತ್ತಿರುವ ಸಿದ್ದರಾಮಯ್ಯ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ ಎನ್ನುತ್ತಿದ್ದಾರೆ. ಆದರೆ ಹೈಕಮಾಂಡ್ ಗೆ ಸಿಎಂ ಬಣದ ಶಾಸಕರು ಫಾರಿನ್ ಟ್ರಿಪ್ ಹೋಗುವುದನ್ನೇ ತಡೆಯಲು ಆಗದ ಮೇಲೆ ಸಿಎಂ ಸ್ಥಾನವನ್ನು ಬಿಟ್ಟುಕೊಡುವಂತೆ ಆದೇಶ ನೀಡಲು ಸಾಧ್ಯವಾಗುತ್ತಾ? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಇದೆಲ್ಲದರ ನಡುವೆ ಎಷ್ಟೇ ಒತ್ತಡ ತಂದರೂ ಹೈಕಮಾಂಡ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಜಾರಿರುವುದು ಡಿ.ಕೆ.ಶಿವಕುಮಾರ್ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಅವರೀಗ ರೆಬಲ್ ಆಗುತ್ತಿದ್ದಾರೆ. ಅವರ ಮಾತುಗಳು ಹೇಳಿಕೆಗಳಲ್ಲಿ ಆಕ್ರೋಶಗಳು ಎದ್ದು ಕಾಣುತ್ತಿವೆ.. ಒಂದು ರೀತಿಯಲ್ಲಿ ಸರ್ವಾಧಿಕಾರಿಯಂತೆ ಕಾಣುವ ಅವರ ವರ್ತನೆಗಳು ಈಗಲೇ ಈ ರೀತಿ ವರ್ತಿಸುವ ಇವರು ಸಿಎಂ ಆದರೆ ಹೇಗಪ್ಪಾ? ಎಂದು ಸಾರ್ವಜನಿಕ ವಲಯದಲ್ಲಿ ಜನ ಮಾತನಾಡಿಕೊಳ್ಳುವಂತಾಗಿದೆ..

ಡಿಕೆಶಿ ತಮ್ಮ ನಡೆ ನುಡಿಗಳಲ್ಲಿ ಬದಲಾವಣೆ ತಂದುಕೊಳ್ಳುವುದು ಜರೂರಾಗಿದೆ. ತಮ್ಮ ಕೋಪ, ಆಕ್ರೋಶವನ್ನು ಪಕ್ಷದ ವೇದಿಕೆಯಲ್ಲಿಟ್ಟುಕೊಳ್ಳಬೇಕೆ ವಿನಃ ಸಾರ್ವಜನಿಕವಾಗಿ ತೋರ್ಪಡಿಸಿದರೆ ಅದು ಬೇರೆಯದ್ದೇ ಆದ ಸಂದೇಶವನ್ನು ಸಮಾಜಕ್ಕೆ ರವಾನಿಸುತ್ತದೆ ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ. ಇಷ್ಟಕ್ಕೂ ಅವರಿಗೆ ಸಿಎಂ ಸ್ಥಾನ ದಕ್ಕದಂತೆ ನೋಡಿಕೊಳ್ಳುತ್ತಿರುವುದು ವಿಪಕ್ಷದವರಲ್ಲ… ಮತದಾರರಲ್ಲ… ಅವರದ್ದೇ ಪಕ್ಷದ ನಾಯಕರು… ಹೀಗಿರುವಾಗ ಅವರಿಗೆ ಶತ್ರುಗಳಿರುವುದು ಹೊರಗೆ ಅಲ್ಲ.,. ಪಕ್ಷದೊಳಗೆ ಎಂಬುದು ಸ್ಪಷ್ಟವಾಗುತ್ತದೆ. ಅದು ಏನೇ ಇರಲಿ… ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಇನ್ನಿಲ್ಲದಂತೆ ಶ್ರಮಪಟ್ಟಿರುವ ಡಿಕೆಶಿಗೆ ಸಿಎಂ ಸ್ಥಾನ ದಕ್ಕದೇ ಹೋದರೆ ಅದಕ್ಕಿಂತ ದೊಡ್ಡ ದೌರ್ಭಾಗ್ಯ ಮತ್ತೊಂದಿಲ್ಲ…
B M Lavakumar







