ಸಮಾಜದ ಶಕ್ತಿಯಾದ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ದುಡಿಯುತ್ತಿದ್ದರೂ ಆಕೆಯ ಮೇಲೆ ವಂಚನೆ, ಮೋಸ, ಲೈಂಗಿಕ ಕಿರುಕುಳ ಹೀಗೆ ಹತ್ತಾರು ದೌರ್ಜನ್ಯಗಳು ನಡೆಯುತ್ತಲೇ ಇದೆ.. ಇದು ನಿಲ್ಲದಿರುವುದು ಮಾತ್ರ ಬೇಸರದ ಸಂಗತಿಯಾಗಿದೆ. ಮಹಿಳಾ ದಿನಾಚರಣೆ ಸಂದರ್ಭ ಮಹಿಳೆಯರ ಬಗ್ಗೆ ಮಾತನಾಡಿದರೆ ಸಾಲದು.. ಆಕೆ ನಡುರಾತ್ರಿಯೂ ಯಾವುದೇ ಭಯವಿಲ್ಲದೆ ನಡೆಯುವ ಕಾಲ ಬರಬೇಕು… ಅಷ್ಟೇ ಅಲ್ಲದೆ ಆಕೆಯ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಇತಿಶ್ರೀ ಹಾಡಬೇಕು… ಆಗ ಮಾತ್ರ ಮಹಿಳೆಗೆ ಮತ್ತು ಮಹಿಳಾ ದಿನಾಚರಣೆಗೆ ಅರ್ಥ ಬರುತ್ತದೆ..

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಬದುಕನ್ನು ಸವಾಲ್ ಆಗಿ ಸ್ವೀಕರಿಸುತ್ತಾ ಆತನಿಗೆ ಎಲ್ಲ ರೀತಿಯಲ್ಲಿಯೂ ಸಹಕಾರ ನೀಡುತ್ತಾ ಬಂದಿದ್ದರಿಂದಲೇ ಇವತ್ತಿಗೂ ನಮ್ಮ ಕುಟುಂಬ ವ್ಯವಸ್ಥೆ ಇಷ್ಟೊಂದು ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಿದೆ. ಹಲವು ಸಂದರ್ಭಗಳಲ್ಲಿ ಸಮಸ್ಯೆಗಳು ಬಂದರೂ ಅದೆಲ್ಲವನ್ನು ಮೆಟ್ಟಿ ನಿಂತು ತನ್ನ ಕುಟುಂಬ ಮತ್ತು ವೃತ್ತಿ ಕ್ಷೇತ್ರ ಎರಡನ್ನು ನಿಭಾಯಿಸಿ ಮಾದರಿಯಾದ ಮಹಿಳೆಯರ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ… ಸಾಧಕರ ಪಟ್ಟಿಯಲ್ಲಿ ಮಹಿಳೆಯರು ದೊಡ್ಡ ಮಟ್ಟದಲ್ಲಿದ್ದಾರೆ.
ಇದನ್ನೂ ಓದಿ… ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ-ಕುಟುಂಬದ ನಡುವೆ ವೈದ್ಯೆಯರು ಸಮತೋಲನ ಸಾಧಿಸುವುದು ಹೇಗೆ?
ಇನ್ನು ತಳಮಟ್ಟದಿಂದ ಮೇಲ್ಮಟ್ಟದವರೆಗೂ ಮಹಿಳೆ ಪುರುಷರಿಗೆ ಶಕ್ತಿಯಾಗಿ ನಿಂತಿರುವುದು ಎದ್ದು ಕಾಣಿಸುತ್ತಿದೆ. ಆದರೂ ತುಂಬಾ ಸಂದರ್ಭಗಳಲ್ಲಿ ಸಮಸ್ಯೆಗಳನ್ನು ಎದುರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಎಲ್ಲವನ್ನು ಮೆಟ್ಟಿ ನಿಂತು ಬದುಕುವ ಶಕ್ತಿಯನ್ನು ಆಕೆಗೆ ತುಂಬುವುದು ಅಗತ್ಯವಾಗಿದೆ.

ಇವತ್ತು ಹಳ್ಳಿಗಳಲ್ಲಿ ದಿನನಿತ್ಯದ ಮನೆ ಜವಬ್ದಾರಿಗಳನ್ನು ನಿರ್ವಹಿಸುತ್ತಾ ಹೊರಗೆ ಹೋಗಿ ತೋಟ, ಗದ್ದೆ, ಹೊಲಗಳಲ್ಲಿ ದುಡಿಯುತ್ತಾ ಕುಟುಂಬ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರೈತಮಹಿಳೆಯರು ಹಾಗೂ ಮಹಿಳಾ ಕಾರ್ಮಿಕರು ಸಮಾಜಕ್ಕೊಂದು ಕೊಡುಗೆಯಾಗಿದ್ದಾರೆ. ಅವರ ಶ್ರಮವನ್ನು ಪರಿಗಣಿಸಿ ಅವರಿಗೊಂದು ನಮನ ಹೇಳಲೇ ಬೇಕಾಗುತ್ತದೆ.ದೇಶ ಅಭಿವೃದ್ಧಿಯಾಗ ಬೇಕಾದರೆ ಮೊದಲಿಗೆ ಹಳ್ಳಿಗಳು ಉದ್ಧಾರವಾಗಬೇಕು. ಹಳ್ಳಿಗಳು ಉದ್ಧಾರವಾಗಬೇಕಾದರೆ ಅಲ್ಲಿನ ಮಹಿಳೆಯರು ಸುಶಿಕ್ಷಿತರಾಗಬೇಕು, ಆರ್ಥಿಕವಾಗಿ ಸದೃಢರಾಗಬೇಕು.
ಕೆಲವು ದಶಕಗಳ ಹಿಂದಿನ ದಿನಗಳನ್ನು ಮೆಲುಕು ಹಾಕಿದರೆ ಇವತ್ತು ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಎಲ್ಲಾ ರೀತಿಯಲ್ಲೂ ಅಭಿವೃದ್ಧಿಯತ್ತ ಸಾಗುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಸೇರಿಸಿ ಹೊಟ್ಟೆಪಾಡು ಕಳೆಯುತ್ತಿದ್ದರು. ಈಗ ಹಾಗಿಲ್ಲ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ ಅವರಿಗೊಂದು ಬದುಕು ನೀಡಬೇಕು ಎಂಬ ಕಲ್ಪನೆ ಬಂದಿದೆ. ಹಾಗಾಗಿ ಬಾಲ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದೆ.

ಅಡುಗೆ ಮನೆಗಷ್ಟೇ ಸೀಮಿತರಾಗಿದ್ದ ಮಹಿಳೆಯರು ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳು ಅಸ್ಥಿತ್ವಕ್ಕೆ ಬಂದ ನಂತರ ಆರ್ಥಿಕವಾಗಿ ಚೇತರಿಸಿಕೊಂಡಿಲ್ಲದೆ, ಬ್ಯಾಂಕ್ ವ್ಯವಹಾರ ಸೇರಿದಂತೆ ರಾಜಕೀಯವಾಗಿಯೂ ತಮ್ಮನ್ನು ತೊಡಗಿಸಿ ಕೊಳ್ಳುತ್ತಿದ್ದಾರೆ. ಇದೊಂದು ಉತ್ತಮ ಬೆಳವಣಿಗೆಯಾಗಿದೆ. ಮಲೆನಾಡಿನ ಕಾಫಿ, ಟೀ, ಅಡಿಕೆ, ತೆಂಗು ತೋಟಗಳಲ್ಲಿ, ಬಯಲುಸೀಮೆಯ ಹೊಲ, ಗದ್ದೆಗಳಲ್ಲಿ ಗಂಡಿಗೆ ಸಮಾನವಾಗಿ ದುಡಿಯುವ ಮಹಿಳೆಯರು ನಿಜಕ್ಕೂ ಶ್ರಮಜೀವಿಗಳೇ…
ಇದನ್ನೂ ಓದಿ… ನಾರಿಯು ಸಮಾಜದ ಚುಕ್ಕಾಣಿಯನ್ನು ಹಿಡಿದು ಅಭಿವೃದ್ಧಿ ಕಡೆಗೆ ಕರೆದೊಯ್ಯುವ ಮಹಾಸಾಧಕಿ…
ತೋಟಗಳಲ್ಲಿ ದುಡಿಯುವ ಕಾರ್ಮಿಕರು, ರೈತರ ಮನೆಗಳಲ್ಲಿ ನಿತ್ಯವೂ ಗಡಿಬಿಡಿ, ಧಾವಂತ ಇದ್ದೇ ಇರುತ್ತದೆ. ಬೆಳಿಗ್ಗೆ ಎದ್ದು ಅಡುಗೆ ಮಾಡಿ, ಮಕ್ಕಳನ್ನು ಶಾಲೆಗೆ ಕಳುಹಿಸಿ ತೋಟ ಗದ್ದೆಗಳಿಗೆ ತೆರಳಿ ದುಡಿಯೋದು ಸುಲಭದ ಕೆಲಸವಲ್ಲ. ಆದರೂ ಅದಕ್ಕೆ ಅಂಜದೆ ಕಷ್ಟಪಟ್ಟು ದುಡಿದು ಕುಟುಂಬಕ್ಕೆ ಆಧಾರವಾಗಿದ್ದಾರೆ. ಮೊದಲೆಲ್ಲಾ ಗಂಡ ದುಡಿದು ತಂದಿದ್ದನ್ನು ಬೇಯಿಸಿ ಹಾಕುತ್ತಾ ಮಕ್ಕಳನ್ನು ನೋಡಿಕೊಂಡಿದ್ದರಾಯಿತು ಎಂಬ ಮನೋಭಾವ ಮಹಿಳೆಯರದ್ದಾಗಿತ್ತು. ಈಗ ಹಾಗಿಲ್ಲ. ಎಲ್ಲವೂ ಬದಲಾಗಿದೆ. ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ.

ಮನೆಯಲ್ಲಿ ಕುಳಿತು ಟೈಲರಿಂಗ್ ನಂತಹ ಕೈಗಾರಿಕೆಗಳನ್ನು ಕೆಲವರು ಮಾಡಿದರೆ, ಇನ್ನು ಕೆಲವರು ಬ್ಯೂಟಿಪಾರ್ಲರ್, ವ್ಯಾಪಾರ, ಹೈನುಗಾರಿಕೆ, ಇನ್ನಿತರ ಉದ್ಯಮಗಳತ್ತ ಆಸಕ್ತಿ ವಹಿಸಿ ದುಡಿಯುತ್ತಾ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಕುಟುಂಬ ನಿರ್ವಹಣೆಯ ಜವಬ್ದಾರಿಯೊಂದಿಗೆ ತನ್ನ ಉದ್ಯೋಗವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.
ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅನ್ಯಾಯಗಳಿಗೆ ಇತಿಶ್ರೀ ಹಾಡಲು ಸರ್ಕಾರ ಕಾನೂನು ಕ್ರಮ ಜಾರಿಗೆ ತಂದಿದೆಯಲ್ಲದೆ, ನೆರವಿಗೆ ಹಲವಾರು ಸಂಘಟನೆಗಳಿವೆ ಹೀಗಿರುವಾಗ ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯಗಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗುವುದನ್ನು ಮರೆತುಬಿಡಿ. ನಿಮ್ಮನ್ನು ನಂಬಿ ಒಂದಷ್ಟು ಜೀವಗಳಿವೆ ಎಂಬುದನ್ನು ಮರೆಯಬೇಡಿ. ಎಲ್ಲವನ್ನು ಧೈರ್ಯದಿಂದ ಎದುರಿಸಿ ಬದುಕಿ ಮತ್ತು ಬದುಕಿ ತೋರಿಸಿ.. ನೀವು ಕುಟುಂಬಕ್ಕೆ ಮಾತ್ರವಲ್ಲ ಸಮಾಜಕ್ಕೂ ಆಸ್ತಿ ಎಂಬುದನ್ನು ಮರೆಯದಿರಿ..
B M Lavakumar








