News

ಮಕ್ಕಳ ಗ್ರಾಮಸಭೆಯಲ್ಲಿ ಏಕಾಗ್ರತೆಗೆ ಭಂಗ ತರುವ ಧ್ವನಿವರ್ಧಕಗಳಿಗೆ ಕಡಿವಾಣ ಹಾಕಲು ವಿದ್ಯಾರ್ಥಿಗಳ ಮನವಿ

ಯಳಂದೂರು: ಈಗ ಪರೀಕ್ಷಾ ಸಮಯವಾಗಿದೆ, ಗ್ರಾಮಗಳಲ್ಲಿ ಈಗ ಹಬ್ಬ ಹರಿದಿನಗಳ ಸಮಯವೂ ಆಗಿದೆ. ಇದರಿಂದ ಧ್ವನಿವರ್ಧಕಗಳನ್ನು ಹಾಕಲಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಓದಲು ತೊಂದರೆಯಾಗುತ್ತದೆ. ಏಕಾಗ್ರತೆಗೆ ಭಂಗವಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ವಿದ್ಯಾರ್ಥಿಗಳು ಗ್ರಾಪಂ ಅಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡ ಪ್ರಸಂಗ ನಡೆದಿದೆ.

ತಾಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಹಾಗೂ ಮಹಿಳಾ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡರು. ಧ್ವನಿವರ್ಧಕದಿಂದ ಏಕಾಗ್ರತೆಗೆ ಧಕ್ಕೆಯಾಗುತ್ತದೆ. ಹಾಗಾಗಿ ಇದಕ್ಕೆ ಕಡಿವಾಣ ಹಾಕಲು ಕ್ರಮ ವಹಿಸಬೇಕು. ಗ್ರಾಮದಲ್ಲಿ ಎಲ್ಲೆಂದರಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಹಾದಿಬೀದಿಯಲ್ಲೇ ಕುಡಿಯುವ ಹವ್ಯಾಸ ಹೆಚ್ಚಾಗುತ್ತಿದೆ. ಇದು ವಿದ್ಯಾರ್ಥಿಗಳಿಗೆ ಮುಜುಗರ ಮೂಡಿಸುತ್ತದೆ. ಇದಕ್ಕೂ ನಿಯಂತ್ರಣ ಹೇರಬೇಕು. ನಮ್ಮ ಶಾಲೆಯ ಮೈದಾನವನ್ನು ಅಭಿವೃದ್ಧಿಗೊಳಿಸಬೇಕು. ಇನ್ನಷ್ಟು ಶೌಚಗೃಹಗಳ ನಿರ್ಮಾಣವಾಗಬೇಕು. ಕೊಮಾರನಪುರ, ಗಣಿಗನೂರು ಸೇರಿದಂತೆ ಇತರೆ ಗ್ರಾಮಗಳಿಂದ ಗುಂಬಳ್ಳಿಗೆ ಬರಲು ಕೆಸ್ಸಾರ್ಟಿಸಿ ವತಿಯಿಂದ ಬಸ್‌ಗಳ ಸೌಲಭ್ಯವನ್ನು ಒದಗಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಸೂಕ್ತ ಕ್ರಮ ವಹಿಸುವ ಭರವಸೆಯನ್ನು ನೀಡಿದರು.

ನಂತ ಮಹಿಳಾ ಗ್ರಾಮಸಭೆಯಲ್ಲಿ ನಾರಿ ಕಿಲ್ಪ್ ಯೋಜನೆಯ ಬಗ್ಗೆ ಪಿಡಿಒ ಬಸವಣ್ಣ ಮಾಹಿತಿ ನೀಡಿ ಇದು ಹೊಸ ಯೋಜನೆಯಾಗಿದ್ದು ಅತ್ಯಂತ ಕಡು ಬಡತನದಲ್ಲಿ ಜೀವನ ನಡೆಸುತ್ತಿರುವ ವಿಧವೆಯರು, ವಿವಾಹವಾಗದ ಮಹಿಳೆಯರೂ ಸೇರಿದಂತೆ ಸರ್ಕಾರದ ಇತರೆ ಹತ್ತು ಹಲವು ಮಾನದಂಡಗಳಲ್ಲಿ ಮಹಿಳೆಯರನ್ನು ಗುರುತಿಸಿ ಅವರು ಆರ್ಥಿಕವಾಗಿ ಸಬಲರಾಗುವಂತೆ ಮಾಡುವ ನೂತನ ಯೋಜನೆ ಇದಾಗಿದೆ. ಈಗಾಗಲೇ ನಮ್ಮ ಪಂಚಾಯಿತಿಯಿಂದ 4 ಗ್ರಾಮಗಳಲ್ಲಿ ಇಂತಹ 74ಮಂದಿಯನ್ನು ಗುರುತಿಸಲಾಗಿದೆ. ಇಂತಹ ಮಹಿಳೆಯರು ಇದ್ದಲ್ಲಿ ಪಂಚಾಯಿತಿಗೆ ಮಾಹಿತಿ ನೀಡಿ ಹೆಸರು ನಮೂದಿಸಿಕೊಳ್ಳುವಂತೆ ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷೆ ಪುಟ್ಟಮಾಧವಿ, ಸದಸ್ಯರಾದ ಬಸವರಾಜು, ನಟರಾಜು, ಚಂದ್ರಶೇಖರ್ ಪಶು ಇಲಾಖೆಯ ಬಸವರಾಜು, ಸಿಆರ್‌ಪಿ ರೇಚಣ್ಣ ಮುಖ್ಯ ಶಿಕ್ಷಕ ನಿಂಗೇಗೌಡ, ಶಿಕ್ಷಕರಾದ ವೀರಭದ್ರಸ್ವಾಮಿ, ಕುಮಾರಸ್ವಾಮಿ, ಪಿಎಂಎಸ್‌ಆರ್ ಸಂಸಂಸ್ಥೆಯ ಆಡ್ರಿಸ್ ಅರ್ನಾಲ್ಡ್ ಮುಖಂಡರಾದ ಚಿಕ್ಕಣ್ಣ, ವೆಂಕಟರಾಜು, ಕೃಷ್ಣಮೂರ್ತಿ, ಕಿಟ್ಟಿ, ಗೋವಿಂದ ಸೇರಿದಂತೆ ಅನೇಕರು ಇದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want