DasaraLatest

ಮೈಸೂರು ದಸರಾದ ಯುವ ಸಂಭ್ರಮ ಆರಂಭ.. ಖುಷಿಯಲ್ಲಿ ತೇಲಾಡುತ್ತಿರುವ ಯುವಜನತೆ

ಮೈಸೂರು: ಯುವ ಮನಸ್ಸುಗಳು ಹುಚ್ಚೆದ್ದು ಕುಣಿಯುವ, ಸಾಂಸ್ಕೃತಿಕ ಮುನ್ನುಡಿ ಬರೆಯುವ,  ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲೊಂದಾದ  ಯುವ ಸಂಭ್ರಮಕ್ಕೆ ನಗರದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಬುಧವಾರ ಅದ್ಧೂರಿ ಚಾಲನೆ ಸಿಕ್ಕಿದೆ.

ನೆಚ್ಚಿನ ನಟ ನಟಿಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಕಿಚ್ಚು ಹಚ್ಚಿದರೆ ನೆರೆದ ಯುವ ಮನಸ್ಸುಗಳು ಹುಚ್ಚೆದ್ದು ಕುಣಿದವು. ಈ ಸಡಗರ ಸಂಭ್ರಮದ ಕಾರ್ಯಕ್ರಮಕ್ಕೆ ಝಗಮಗಿಸುವ ವಿದ್ಯುತ್ ಬೆಳಕು, ಕಣ್ಮನ ಸೆಳೆಯುವ ವೇದಿಕೆ, ಕಿವಿಗಡಚಿಕ್ಕುವ ಹಾಡುಗಳು ಸಾಥ್ ನೀಡಿದವು.

ಒಂದೆಡೆ ವೇದಿಕೆ ಮೇಲೆ ಹಾಡುಗಳಿಗೆ ವಿವಿಧ ಕಾಲೇಜುಗಳ ಯುವಕ ಯುವತಿಯರು ಹೆಜ್ಜೆ ಹಾಕುತ್ತಿದ್ದರೆ ವೇದಿಕೆ ಮುಂಭಾಗ ಸೇರಿದ್ದ ಸಾವಿರಾರು ಯುವಕ, ಯುವತಿಯರು ಕುಣಿದು ಕುಪ್ಪಳಿಸಿ ಸಂಭ್ರಮದ ಅಲೆಯಲ್ಲಿ ತೇಲುತ್ತಾ ಕಳೆದು ಹೋದರೆ, ಅವರಿಗೆಲ್ಲ ನಟ ಯುವ ರಾಜ್‌ಕುಮಾರ್ ಹಾಗೂ ನಟಿ ಅಮೃತಾ ಅಯ್ಯರ್ ಸುಂದರ ಕಾರ್ಯಕ್ರಮಕ್ಕೆ ಸಾಥ್ ನೀಡಿ ತಾರಾ ಮೆರುಗು ತಂದರು. ಇನ್ನು ವೇದಿಕೆಗೆ  ಸಿನಿ ತಾರೆಯರು ಪ್ರವೇಶಿಸುತ್ತಿದ್ದಂತೆ ಯುವ ಮನಸ್ಸುಗಳಲ್ಲಿ ಮಿಂಚಿನ ಸಂಚಾರವಾಗಿ ಚಪ್ಪಾಳೆ, ಶಿಳ್ಳೆಯಲ್ಲಿ ಮುಳುಗಿ ಹೋಯಿತು.

ಕಾರ್ಯಕ್ರಮಕ್ಕೆ ಸಾಕ್ಷಿಯಾದ ನಟ ಯುವರಾಜ್ ಮಾತನಾಡಿ ಈ ವೇದಿಕೆ ನಿಮ್ಮದಾಗಿದ್ದು ದಸರಾ ಅರಂಭ ಆಗುತ್ತಿರುವುದೇ ನಿಮ್ಮಿಂದ. ನಿಮ್ಮಲ್ಲಿರುವ ಪ್ರತಿಭೆಗಳಿಂದ ಎಂದು ಸಂತಸ ಹಂಚಿಕೊಂಡರು. ಜತೆಗೆ ಬ್ಯಾಂಗಲು ಬಂಗಾರಿ ಗೀತೆಗೆ ನರ್ತಿಸಿ ಯುವ ಮನಸ್ಸುಗಳು ಸಂಭ್ರಮಿಸುವಂತೆ ಮಾಡಿದರೆ,    ನಟಿ ಅಮೃತ ಅಯ್ಯರ್ ನಮ್ಮೂರಲ್ಲಿ ನಮ್ಮ ವೇದಿಕೆಯಲ್ಲಿ ಭಾಗವಹಿಸಿರುವುದು ಸಂತೋಷವಾಗುತ್ತಿದೆ. ನಾನು ಕೂಡ ಕಾಲೇಜಿನ ದಿನಗಳಲ್ಲಿ ಯುವ ಸಂಭ್ರಮ ನೋಡಲು ಬರುತ್ತಿದ್ದದ್ದು ನೆನಪಾಗುತ್ತಿದೆ. ಕಲಾವಿದರ ಮೇಲೆ ನಿಮ್ಮ ಸಹಕಾರ ಬೇಕು ಎಂದು ಹೇಳಿದರು.

ಶಾಸಕ ಜಿ.ಟಿ.ದೇವೆಗೌಡ ಮಾತನಾಡಿ, ನಮ್ಮ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರತಿಭಾವಂತರಾಗಿದ್ದು ನಮ್ಮ ದೇಶದ ಆಸ್ತಿ ಅವರಾಗಿದ್ದಾರೆ. ಜತೆಗೆ ಯಾವುದೇ ಅನಾಹುತಕ್ಕೆ ಅವಕಾಶ ನೀಡಬಾರದು. ಹೊರ ರಾಜ್ಯದಿಂದ ಬಂದವರಿಗೆ ಯಾವ ಸಮಸ್ಯೆ ಕೂಡ ಆಗಬಾರದ ರೀತಿ ಸೌಜನ್ಯದಿಂದ ವರ್ತನೆ ಮಾಡುವುದಕ್ಕೆ ನೀವು ಸಹಕಾರ ನೀಡಬೇಕು. ಜತೆಗೆ ಯುವ ಸಂಭ್ರಮದಲ್ಲಿ ಹುಚ್ಚಾಟ ಬಿಟ್ಟು ಇತರರಿಗೆ ತೊಂದರೆ ಆಗದಂತೆ ನಡೆದುಕೊಳ್ಳಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವ ಕೆ.ವೆಂಕಟೇಶ್, ಶಾಸಕ ತನ್ವೀರ್‌ಸೇಠ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪ ಅಮರ್‌ನಾಥ್, ಎಂಎಲ್ಸಿ ಸಿ.ಎನ್.ಮಂಜೇಗೌಡ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿ.ಪಂ ಸಿಇಒ ಯುಕೇಶ್ ಕುಮಾರ್, ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್, ಡಿಸಿಪಿ ಬಿಂದುಮಣಿ ಸೇರಿದಂತೆ  ಹಲವರಿದ್ದರು.

ಯುವ ಸಂಭ್ರಮದ ಮೊದಲ ದಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಅನಾವರಣ ಮಾಡಿದರು. ಮೈಸೂರಿನ  ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸ್ವರ ಭಾರತಿಯ ನ್ಯತ್ಯ ಪ್ರದರ್ಶಿಸಿದರೆ, ಮಹಾತ್ಮ ಗಾಂಧಿ ಬಿ.ಎಡ್.ಕಾಲೇಜಿನ ವಿದ್ಯಾರ್ಥಿಗಳು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ನೃತ್ಯ ನಮನ ಸಲ್ಲಿಸಿದರು.

ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಡಾ.ಬಿ.ಆರ್.ಅಂಬೇಡ್ಕರ್ ಕುರಿತ ನೃತ್ಯ ಪ್ರದರ್ಶಿಸಿದರೆ, ಶ್ರೀ ಛಾಯಾದೇವಿ ಕಾಲೇಜ್ ಆಫ್ ಎಜುಕೇಷನ್ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನರೆದಿದ್ದವರ ಮುಂದೆ ನೃತ್ಯದ ಮೂಲಕ ತೆರೆದಿಟ್ಟರು. ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಜನಕೇಂದ್ರಿತ ಆದಿವಾಸಿ ಜೀವನ ತೆರೆದಿಟ್ಟರು. ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ದಸರಾ ವೈಭವ ಅನಾವರಣ ಮಾಡಿದರೆ, ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು ಶಿವನನ್ನೇ ಧರೆಗಿಳಿಸಿದರು.

ಬೆಂಗಳೂರಿನ ಜಿ.ಸಿ.ಮ್ಯಾಟ್ ಗುಪ್ತ ಕಾಲೇಜಿನ ವಿದ್ಯಾರ್ಥಿಗಳು ಸಾಮಾಜಿಕ ನ್ಯಾಯ ಸಾರಿದರೆ, ಮಂಡ್ಯದ ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ರೈತನ ಮಹತ್ವ ಸಾರಿದರು. ಪ್ರತಿಯೊಂದು ಹಾಡಿಗೂ ಯುವ ಸಮೂಹ ಶಿಳ್ಳೆ, ಚಪ್ಪಾಳೆಯ ಮೂಲಕ ಪ್ರೋತ್ಸಾಹ ನೀಡುತ್ತಿದ್ದದ್ದು ಕಂಡು ಬಂದಿತು. ಒಟ್ಟಾರೆ ಯುವ ಸಂಭ್ರಮದ ಆರಂಭವೇ ಅದ್ಧೂರಿಯಾಗಿ ನಡೆದಿರುವುದು ಖುಷಿಪಡುವಂತಾಗಿದೆ.

admin
the authoradmin

Leave a Reply