ArticlesLatest

ಬೆಳೆಗಾರರಿಗೆ ಸವಾಲ್ ಆಗುತ್ತಿರುವ ತಂಬಾಕು ಕೃಷಿ… ಬೇರೆ ಬೆಳೆಗಳತ್ತ ವಾಲುತ್ತಿರುವ ರೈತರು

ಮೈಸೂರು: ಈಗ ತಂಬಾಕು  ಬೆಳೆಯುವ ಪ್ರದೇಶಗಳಲ್ಲಿ ತಂಬಾಕು ನಾಟಿ ಕಾರ್ಯ ಆರಂಭಗೊಂಡಿದೆ… ತಂಬಾಕನ್ನೇ ಬೆಳೆದು ಬದುಕುವ ಬಹುತೇಕ ಲೈಸೆನ್ಸ್ ಹೊಂದಿದ ಬೆಳೆಗಾರರು ಅದನ್ನು ಒಲ್ಲದ ಮನಸ್ಸಿನಿಂದಲೇ ಮಾಡುತ್ತಿದ್ದಾರೆ. ಏಕೆಂದರೆ ಮಾರುಕಟ್ಟೆಯಲ್ಲಿ ತಂಬಾಕು ದರ ಪಾತಾಳಕ್ಕಿಳಿದಿದೆ. ಕಳೆದ ವರ್ಷ ಬೆಳೆದ ಬೆಳೆಗೆ ಖರ್ಚು ಮಾಡಿದ ಹಣವೂ ಬಂದಿಲ್ಲ… ಹೀಗಿದ್ದರೂ ಮುಂದಿನ ವರ್ಷವಾದರೂ ಕೈಹಿಡಿಯಬಹುದೇನೋ ಎಂಬ ನಂಬಿಕೆಯಲ್ಲಿ ಕೃಷಿಯತ್ತ ತೊಡಗಿಸಿಕೊಂಡಿದ್ದಾರೆ.

ಈಗಾಗಲೇ ತಂಬಾಕು ಮಂಡಳಿ ತಂಬಾಕು ಕೃಷಿ ಮಾಡಲು ಲೈಸೆನ್ಸ್ ದಾರರಿಗೆ ಇಂತಿಷ್ಟೇ ಬೆಳೆಯಬೇಕೆಂದು ನಿಗದಿ ಮಾಡಿರುವುದು ತಂಬಾಕು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದೊಂದು ದಶಕದ ಹಿಂದೆಯೇ ತಂಬಾಕು ಕೃಷಿಗೆ ನಿರ್ಬಂಧ ಹೇರಬೇಕೆಂಬ ಒತ್ತಾಯಗಳು ಕೇಳಿ ಬಂದಿದ್ದವು. ಹೀಗಾಗಿ ಬಹುತೇಕ ತಂಬಾಕು ಬೆಳೆಗಾರರು ತಂಬಾಕು ಕೃಷಿಯನ್ನು ಬಿಟ್ಟು ಬೇರೆ ಕೃಷಿ ಕಡೆಗೆ ಒಲವು ತೋರಿದ್ದರು. ಕಳೆದ ಕೆಲವು ವರ್ಷಗಳಿಂದ ಉತ್ತಮ ದರ ಸಿಗದೆ ರೈತರು ನಷ್ಟ ಹೊಂದಿದ್ದಾರೆ.

ಮಾಡಿಕೊಂಡ ಸಾಲವನ್ನು ತೀರಿಸುವ ಸಲುವಾಗಿ ಮತ್ತೆ ಸಾಲ ಮಾಡಿ ತಂಬಾಕು ಬೆಳೆಯುವ ಪ್ರಯತ್ನ ಮಾಡಿ ಕೈಸುಟ್ಟುಕೊಳ್ಳುತ್ತಿದ್ದಾರೆ. ಈಗಾಗಲೇ ಕೆಲವರು ಸಾಲ ಮಾಡಿಕೊಂಡ ಕಾರಣದಿಂದ ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ. ಆದರೂ  ಅನಿವಾರ್ಯ ಎಂಬಂತೆ ಬೆಳೆ ಬೆಳೆಯುತ್ತಿದ್ದಾರೆ. ಸದ್ಯದ ಮಟ್ಟಿಗೆ ತಂಬಾಕು ಕೃಷಿ ಮಾಡಿ ಅದರಿಂದ ಲಾಭ ಪಡೆಯುವುದು ಎಂದರೆ ಅದೊಂದು ಜೂಜಾಟ ಎಂದರೂ ತಪ್ಪಾಗುವುದಿಲ್ಲ. ಎಲ್ಲವೂ ಚೆನ್ನಾಗಿ ಆಗಿ ಬೆಲೆಯೂ ಉತ್ತಮವಾಗಿದ್ದರೆ ರೈತರಿಗೆ ಬಂಪರ್ ಹಣ ಬರುತ್ತದೆ. ಇಲ್ಲದೆ ಹೋದರೆ ನಷ್ಟವಂತು ಖಚಿತ.

ತಂಬಾಕು ಸೃಷ್ಟಿಸುತ್ತಿರುವ ಅನಾಹುತಗಳಿಂದ ಎಚ್ಚೆತ್ತವರು ತಂಬಾಕಿನಿಂದ ದೂರವಿರಿ ಎಂಬ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಬಹಳಷ್ಟು ರೈತರು ಇದರ ಜೊತೆಗೆ ಹೋರಾಡಿ ಸುಸ್ತಾಗಿ ಬೇಡಪ್ಪಾ ಸಹವಾಸ ಎಂದು ಮೌನಕ್ಕೆ ಶರಣಾಗಿದ್ದಾರೆ. ಆದರೆ ಪರವಾನಗಿ ಪಡೆದ ಕೆಲವು ರೈತರು ನಷ್ಟವೋ ಲಾಭವೋ ಬೆಳೆಯುತ್ತಲೇ ಬರುತ್ತಿದ್ದಾರೆ. ಲಾಭ ಆದಾಗ ಹಿಗ್ಗದೆ, ನಷ್ಟವಾದಾಗ ಕುಗ್ಗದೆ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ತಂಬಾಕು ಬೆಳೆಯುವುದು ಸುಲಭವಾಗಿಲ್ಲ. ಏಕೆಂದರೆ ಅಂತರ್ರಾಷ್ಟ್ರೀಯ ಮಾರುಕಟ್ಟೆಗೆ ಬೇರೆಕಡೆಯಿಂದಲೂ ತಂಬಾಕು ಬರಲಾರಂಭಿಸಿದೆ.

ಬೇಡಿಕೆ ತಗ್ಗುತ್ತಿರುವುದರಿಂದ ತಂಬಾಕು ಮಂಡಳಿ ಉತ್ಪಾದನೆ ಕಡಿಮೆ ಮಾಡುವಂತೆ ಸೂಚಿಸುತ್ತಿದೆ. ಹೀಗಾಗಿ ಈ ಬಾರಿ ತಂಬಾಕು ಬೆಳೆಯಬೇಕೋ ಬೇಡವೋ ಎಂಬ ಜಿಜ್ಞಾಸೆಯಲ್ಲಿ ಬೆಳೆಗಾರರಿದ್ದಾರೆ. ಇನ್ನು ತಂಬಾಕು ಬೆಳೆಯುವ ಮನಸ್ಸು ಮಾಡಿದರೂ ಲಕ್ಷಾಂತರ ರೂಪಾಯಿ ಬಂಡವಾಳ ಸುರಿಯಲು ತಯಾರಿರಬೇಕು. ಜತೆಗೆ ಕೂಲಿ ಕಾರ್ಮಿಕರು, ತಂಬಾಕು ಬೇಯಿಸಲು ಸೌದೆ.. ಹೀಗೆ ಎಲ್ಲವೂ ದುಬಾರಿಯಾಗುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ಸೌದೆ, ಕೂಲಿ ಎಲ್ಲವೂ ಹೆಚ್ಚಾಗಿದ್ದು ಅದೆಲ್ಲವನ್ನು ಭರಿಸಿ ಕೃಷಿ ಮಾಡುವುದು ರೈತರಿಗೂ ಸವಾಲ್ ಆಗುತ್ತಿದೆ. ಅದರಾಚೆಗೆ  ಫಸಲು ಬರುವ ಹೊತ್ತಿಗೆ ಕಾಡುವ ದರಕುಸಿತ ಬೆಳೆಗಾರರಿಗೆ ಶಾಕ್ ನೀಡುತ್ತಿದೆ.

ಮೈಸೂರು ಜಿಲ್ಲೆಯ ಮಟ್ಟಿಗೆ ಕೆ.ಆರ್.ನಗರ, ಪಿರಿಯಾಪಟ್ಟಣ, ಹುಣಸೂರು ವ್ಯಾಪ್ತಿಯ ರೈತರು ತಂಬಾಕು ಬೆಳೆಯುವ ಮೂಲಕ ಬದುಕು ಕಂಡುಕೊಂಡಿದ್ದಾರೆ. ಈ ವ್ಯಾಪ್ತಿಯಲ್ಲಿ ಬಹುತೇಕ ರೈತರು ತಂಬಾಕನ್ನು ಬೆಳೆಯುತ್ತಾರೆ. ಆದರೆ ಈ ಬಾರಿ ಬೆಳೆಯುವ ಪ್ರಮಾಣ ಕಡಿಮೆಯಾಗುತ್ತಿದೆ. ಏಕೆಂದರೆ ದರ ಕುಸಿತ ಮತ್ತು ಸಾಲ ನೀಡಲು ಬ್ಯಾಂಕ್ ಗಳು ಹಿಂದೇಟು ಹಾಕುತ್ತಿವೆ. ಇದರಾಚೆಗೆ ಉತ್ಪಾದನೆ ಕಡಿಮೆಗೊಳಿಸುವಂತೆ ಆದೇಶವೂ ಬಂದಿರುವುದರಿಂದ ತಂಬಾಕು ಬೆಳೆಗಾರರು ಆತಂಕದಲ್ಲಿದ್ದಾರೆ.

ತಂಬಾಕು ಅದೆಷ್ಟು ರೈತರ ಕೈಹಿಡಿದಿದೆಯೋ ಗೊತ್ತಿಲ್ಲ. ಹೆಚ್ಚಿನ ರೈತರು ಕೆಲವೊಂದು ಕಾರಣಗಳಿಂದ ನಷ್ಟ ಅನುಭವಿಸಿದ್ದಾರೆ. ಲಾಭದ ನಿರೀಕ್ಷೆಯಿಂದ ಸಾಮರ್ಥ್ಯ ಮೀರಿದ ಬಂಡವಾಳ ಸುರಿದು ಕೃಷಿ ಮಾಡಿದವರು ನಿರೀಕ್ಷೆಯಷ್ಟು ಲಾಭವಾಗದೆ ನಷ್ಟ ಅನುಭವಿಸಿದ ಬಹಳಷ್ಟು ನಿದರ್ಶನಗಳಿವೆ. ಹೀಗಾಗಿ ತಂಬಾಕು ಕೃಷಿಯನ್ನು ತುಂಬಾ ಎಚ್ಚರಿಕೆಯಿಂದ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ತಂಬಾಕು ಗಿಡಗಳನ್ನು ನಾಟಿ ಮಾಡಿ ಅದು ಬೆಳೆದು ಕೊಯ್ಲುಗೆ ಬಂದು ನಂತರ ಅದನ್ನು ಹದಗೊಳಿಸಿ ಮಾರುಕಟ್ಟೆಗೆ ತಲುಪುವ ತನಕ ಅದಕ್ಕೆ ತಗಲುವ ವೆಚ್ಚವನ್ನೆಲ್ಲ ಲೆಕ್ಕ ಹಾಕಿದರೆ ಅದರಿಂದ ಯಾವ ಲಾಭವೂ ರೈತರಿಗೆ ದೊರೆತಂತೆ ಕಾಣುತ್ತಿಲ್ಲ. ಹೀಗಾಗಿಯೇ ಹೆಚ್ಚಿನ ರೈತರು ತಂಬಾಕು ಬದಲಿಗೆ  ಶುಂಠಿ ಕೃಷಿಯತ್ತ ವಾಲುತ್ತಿದ್ದಾರೆ. ಆದರೆ ಶುಂಠಿ ಕೃಷಿ ಕೂಡ ತಂಬಾಕಿಗೆ ಹೊರತಾಗಿಲ್ಲ. ಅದು ಕೂಡ ರೈತರ ಜೊತೆ ಚೆಲ್ಲಾಟವಾಡುತ್ತಿದೆ. ಇತ್ತೀಚೆಗೆ ತಂಬಾಕು ಮತ್ತು ಶುಂಠಿ ಎರಡು ವಾಣಿಜ್ಯ ಬೆಳೆಗಳನ್ನು ಬೆಳೆದು ಹಲವು ರೀತಿಯ ಪಾಠಗಳನ್ನು ಕಲಿತವರು ಅದರಿಂದ ದೂರವಾಗಿದ್ದಾರೆ.

ಇದೀಗ ಕೆಲವು ರೈತರು ರೇಷ್ಮೆ ಕೃಷಿ, ತರಕಾರಿ ಬೆಳೆಯುವುದು, ಹೈನುಗಾರಿಕೆ ಹೀಗೆ ತಮ್ಮ ಕೃಷಿ ಹಾದಿಯನ್ನು ಬದಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು  ಕೆಲವರು ತಮಗಿರುವ ಜಮೀನಿನಲ್ಲಿ  ಅಲ್ಪ ಪ್ರಮಾಣದಲ್ಲಿ ಶುಂಠಿ, ಹೆಸರು, ಉದ್ದು, ತೊಗರಿ, ಅಲಸಂದೆ, ಹೂ ಕೋಸು, ಎಲೆ ಕೋಸು, ಬದುಗಳ ಸುತ್ತ ವಿವಿಧ ಮರ ಮತ್ತು ಸೀಮೆಹುಲ್ಲು ಬೆಳೆಯುತ್ತಿರುವುದಲ್ಲದೆ,  ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣ ಮಾಡಿಕೊಂಡು ಎರೆಹುಳು ಗೊಬ್ಬರ ತಯಾರಿಸುವುದು, ಹಸು, ಮೇಕೆ, ಕುರಿ, ಕೋಳಿಗಳನ್ನು ಸಾಕುವ ಮೂಲಕ ಮಿಶ್ರ ಕೃಷಿಯ ಕಡೆಗೆ ಒತ್ತು ನೀಡುತ್ತಿದ್ದಾರೆ. ಅದು ಏನೇ ಇರಲಿ ತಂಬಾಕು ಕೃಷಿ ಮಾಡುವವರು ಎಚ್ಚರ ವಹಿಸುವುದು ಒಳ್ಳೆಯದು.

 

B M Lavakumar

admin
the authoradmin

Leave a Reply

Translate to any language you want