ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಆ ಮನೆಯನ್ನು ಸೂತಕ ಆವರಿಸಿದೆ… ಆಡಿ ಬೆಳೆದು ದೊಡ್ಡವನಾಗಬೇಕಾಗಿದ್ದ ಮಗು ಕಣ್ಮುಚ್ಚಿದೆ… ಅದರ ಸಾವಿಗೆ ನಾವೇ ಕಾರಣರಾಗಿಬಿಟ್ಟಿವಲ್ಲ ಎಂಬ ನೋವು ಹೆತ್ತವರನ್ನು ಕಾಡುತ್ತಿದೆ… ಅದೇನೋ ಗೊತ್ತಿಲ್ಲ ಸಾವು ಕೂಡ ಅಷ್ಟೇ ಯಾವಾಗ ಹೇಗೆ ಬಂದು ಅಪ್ಪಳಿಸಿ ಬಿಡುತ್ತದೆಯೋ ಗೊತ್ತಿಲ್ಲ… ಸದ್ಯಕ್ಕೆ ಎಲ್ಲರ ಮನದಲ್ಲಿ ಮೂಡುತ್ತಿರುವ ಒಂದೇ ಪ್ರಶ್ನೆ ಈ ಸಾವು ನ್ಯಾಯವೇ?
ಇದೊಂದು ಘಟನೆ ಆ ಮನೆಯನ್ನು ನೋವಿನ ಕಡಲಿಗೆ ನೂಕಿದೆ… ಪುತ್ರ ಶೋಕ ಅಷ್ಟು ಸುಲಭಕ್ಕೆ ದೂರವಾಗುವುದಿಲ್ಲ… ನಿತ್ಯ ಮನೆ ತುಂಬಾ ಓಡಾಡುತ್ತಿದ್ದ ಮಗು ಇವತ್ತಿಲ್ಲ… ಖಾಲಿ… ಖಾಲಿ.. ಅದು ಅವರಿಗೆ ಮಾತ್ರವಲ್ಲ ಮಕ್ಕಳಿರುವ ಪ್ರತಿ ಮನೆಗೂ ಎಚ್ಚರಿಕೆಯ ಗಂಟೆಯೇ….

ಇವತ್ತು ಮಕ್ಕಳು ಅತ್ತಾಗ ಕುರ್ ಕುರೆ, ಲೇಸ್ ಹೀಗೆ ಜಂಕ್ ಫುಡ್ ಗಳನ್ನು ನೀಡಿ ಸಮಾಧಾನ ಮಾಡುತ್ತೇವೆ. ಮಕ್ಕಳು ಕೂಡ ಅದರ ರುಚಿಗೆ ಮಾರು ಹೋಗಿದ್ದಾರೆ. ಈ ತಿನಿಸುಗಳು ಮಕ್ಕಳ ಆರೋಗ್ಯಕ್ಕೆ ಮಾರಕ ಎಂಬುದು ನಮಗೆ ನಿಮಗೆ ಎಲ್ಲರಿಗೂ ಗೊತ್ತು. ಆದರೂ ಅದನ್ನೇ ಕೊಡಿಸುತ್ತೇವೆ. ಇನ್ನು ಇಂತಹ ತಿನಿಸುಗಳನ್ನು ತಯಾರಿಸುವ ಕಂಪನಿಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದು ವ್ಯಾಪಾರದಲ್ಲಿ ಪೈಪೋಟಿ ಶುರುವಾಗಿದೆ ಹೀಗಾಗಿ ಮಕ್ಕಳನ್ನು ಸೆಳೆಯಲು ತಿನಿಸು ಜತೆಗೆ ಗಿಫ್ಟ್ ಗಳನ್ನು ನೀಡುತ್ತಾರೆ.
ಇವತ್ತು ಅದೇ ಗಿಫ್ಟ್ ಬಾಲಕನ ಪ್ರಾಣ ತೆಗೆದಿದೆ.. ಇಲ್ಲಿ ಯಾರದ್ದು ತಪ್ಪೋ ಸರಿಯೋ ಮುಖ್ಯವಲ್ಲ.. ಆದರೆ ಮಕ್ಕಳ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ. ಇವತ್ತು ಕುರ್ ಕುರೆ ಪ್ಯಾಕೆಟ್ ನಲ್ಲಿದ್ದ ಬಾಲ್ ನುಂಗಿ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದ ಸಂತೋಷ್- ಐಶ್ವರ್ಯ ದಂಪತಿಯ ಮೂರು ವರ್ಷದ ಏಕೈಕ ಪುತ್ರ ಮುಕುಂದ್ ಮಯೂರ್ ಸಾವನ್ನಪ್ಪಿದೆ. ಈ ಮಗು ಅಳುತ್ತಿದ್ದುದ್ದನ್ನು ಕಂಡ ಸಂಬಂಧಿಕರ ಮಕ್ಕಳು ಗೌರಿಪುರದ ಅಂಗಡಿಯಲ್ಲಿ ಕುರ್ ಕುರೆ ಪ್ಯಾಕೆಟ್ ಕೊಡಿಸಿದ್ದಾರೆ.

ಕುರ್ ಕುರೆ ಕಂಪನಿಯವರು ಮಕ್ಕಳ ಆಕರ್ಷಣೆಗಾಗಿ ಒಳಗೆ ಪ್ಲಾಸ್ಟಿಕ್ ಬಾಲ್ ಹಾಕಿದ್ದರು. ಆ ಮಗುವಿಗೆ ಅದು ಆಟದ ಸಾಮಾನು ಎಂಬುದು ಗೊತ್ತಾಗದೆ ಕುರ್ ಕುರೆಯೊಂದಿಗೆ ಗಿಫ್ಟ್ ಬಾಲನ್ನು ನುಂಗಿದ್ದು ಅದು ಗಂಟಲಲ್ಲಿ ಸಿಕ್ಕಿಕೊಂಡು ಒದ್ದಾಡಿದೆ. ಇದನ್ನು ಗಮನಿಸಿದ ಮನೆಯವರು ತಕ್ಷಣವೇ ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮಗು ಉಸಿರು ಚೆಲ್ಲಿದೆ.
ಈ ಘಟನೆ ಬಗ್ಗೆ ಕೇಳುವಾಗಲೇ ಮೈಜುಮ್ಮೆನ್ನುತ್ತದೆ.. ಇನ್ನಾದರೂ ಕಂಪನಿಗಳು ಮಕ್ಕಳ ಆಕರ್ಷಣೆಗೆ ಜೀವಕ್ಕೆ ಮಾರಕವಾಗುವ ಗಿಫ್ಟ್ ಗಳನ್ನು ನೀಡದಿರಲಿ.. ಹಾಗೆಯೇ ಪೋಷಕರು ಇಂತಹುಗಳಿಂದ ಮಕ್ಕಳನ್ನು ದೂರವಿರುವಂತೆ ನೋಡಿಕೊಳ್ಳಲಿ ಎನ್ನುವುದೇ ಕಳಕಳಿಯ ವಿನಂತಿಯಾಗಿದೆ.








