LatestMysore

ಮಠಗಳಿಂದ ಸಾಕ್ಷರತೆ ಪ್ರಮಾಣ ಹೆಚ್ಚಳ: ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಮತ

ಹನೂರು: ರಾಜ್ಯದಲ್ಲಿ ಇಂದು ಸಾಕ್ಷರತಾ ಪ್ರಮಾಣ ಹೆಚ್ಚಳವಾಗಿದೆ ಎಂದರೆ ಅದು ಮಠಗಳಿಂದ ಸಾಧ್ಯವಾಗಿದೆ ಎಂದು ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಪೀಠಾಧ್ಯಕ್ಷ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಗೋಪಿಶೆಟ್ಟಿಯೂರು ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಸುಬ್ಬೇದೇವರು ಸ್ವಾಮೀಜಿ ಅವರ 17ನೇ  ಪುಣ್ಯಸ್ಮರಣೆ  ಹಾಗೂ ಕಂತೆ ಭಿಕ್ಷಾ ಕಾಯಕ ಸಂತ ಶ್ರೀ ಸುಬ್ಬೇದೇವರು ಸ್ವಾಮೀಜಿ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಡ ವಿದ್ಯಾರ್ಥಿಗಳಿಗೆ ಆಶ್ರಯ, ಅನ್ನ ನೀಡಿ ಶ್ರೀ ಸುಬ್ಬೇದೇವರು ಸ್ವಾಮೀಜಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಕಿರಿಯ ಶ್ರೀ ಗಳಾದ ಶ್ರೀ ಸೋಮಶೇಖರ ಸ್ವಾಮೀಜಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಮಠದ ಆಶ್ರಯ ಪಡೆದು ವಿದ್ಯಾಭ್ಯಾಸ ಮಾಡಿದ ದೊಡ್ಡ ಮರಳವಾಡಿ ಮಠದ ಶ್ರೀ ಪ್ರಭು ಕಿರೀಟ ಸ್ವಾಮೀಜಿ ಹಾಗೂ ದೊಡ್ಡನಹುಂಡಿ ರಾಜಣ್ಣ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ಎಂದರು.

ದೇವನೂರು ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿದರು. ಮಠದ ಹಳೆಯ ವಿದ್ಯಾರ್ಥಿ ಹಾಗೂ ಪತ್ರಕರ್ತ ದೊಡ್ಡನಹುಂಡಿ ರಾಜಣ್ಣ ಅವರು ರಚಿಸಿರುವ ಕಂತೆ ಭಿಕ್ಷಾ ಕಾಯಕ ಸಂತ ಶ್ರೀ ಸುಬ್ಬೇದೇವರು ಸ್ವಾಮೀಜಿ ಕೃತಿಯನ್ನು ಶ್ರೀ ಗಳು ಹಾಗೂ ಇತರ ಗಣ್ಯರು ಬಿಡುಗಡೆ ಮಾಡಿದರು.

ದೊಡ್ಡ ಮರಳವಾಡಿ ಮಠದ ಶ್ರೀಪ್ರಭು ಕಿರೀಟ ಸ್ವಾಮೀಜಿ ಮಾತನಾಡಿ, ಶ್ರೀಮಠ ನಮ್ಮ ಜೀವನದ ಬೇರಿದ್ದಂತೆ. ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಬೇರನ್ನು ಮರೆಯಬಾರದು. ನಾನೂ ಸಹ ಮಠದಲ್ಲಿ ಐದು ವರ್ಷ ಆಶ್ರಯ ಪಡೆದು ವಿದ್ಯಾಭ್ಯಾಸ ಮಾಡಿದೆ. ಅಂದು ಕಲಿತ ವಿದ್ಯೆ ಹಾಗೂ ಸಂಸ್ಕಾರ ನಮ್ಮನ್ನು ಇಷ್ಟು ಉನ್ನತ ಸ್ಥಾನಕ್ಕೆ ಏರುವಂತೆ ಮಾಡಿದೆ ಎಂದರು.

ಶರಣು ವಿಶ್ವ ವಚನ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ವಚನ ಕುಮಾರ ಸ್ವಾಮೀಜಿ ಮಾತನಾಡಿ, ಕತ್ತಲೆ ರಾಜ್ಯವೆಂದೇ ಹೆಸರಾಗಿದ್ದ ಮಲೆ ಮಹದೇಶ್ವರ ಬೆಟ್ಟದ ಈ ಭಾಗಕ್ಕೆ ಶ್ರೀ ಮಹದೇಶ್ವರರು, ಶ್ರೀ ಗುರುಮಲ್ಲೇಶ್ವರರು ಆಗಮಿಸಿ ಮೌಢ್ಯ, ಅಂಧಕಾರವನ್ನು ತುಂಬಿಕೊಂಡಿದ್ದ ಜನರಿಗೆ ಲಿಂಗಧೀಕ್ಷೆ ನೀಡಿ ಅವರನ್ನು ಉದ್ದರಿಸಿದರು.

ಶ್ರೀ ಗುರುಮಲ್ಲೇಶ್ವರರು ಸಂಚರಿಸಿದ ಸ್ಥಳಗಳಲ್ಲಿ ಮಠಗಳು ಸ್ಥಾಪನೆಯಾಗಿ ಅನ್ನ ದಾಸೋಹ, ಜ್ಞಾನ ದಾಸೋಹವನ್ನು ನೀಡುವುದರ ಜತೆಗೆ ಕಾಯಕ ತತ್ವವನ್ನು ಪಸರಿಸುತ್ತಿವೆ. ಗೋಪಿಶೆಟ್ಟಿಯೂರಿನ ಶ್ರೀ ಮಠವು ಭಕ್ತರಿಗೆ ಅನ್ನ, ಆಶ್ರಯ ನೀಡುವುದರ ಜತೆಗೆ ಸಾವಿರಾರು ಬಡ ಮಕ್ಕಳಿಗೂ ಅನ್ನ, ಆಶ್ರಯ ನೀಡಿ ಅವರ ಭವಿಷ್ಯವನ್ನು ಉಜ್ವಲಗೊಳಿಸಿದೆ. ಶ್ರೀ ಸುಬ್ಬೇದೇವರು ಸ್ವಾಮೀಜಿ ಅವರ ಸೇವೆಯನ್ನು ಸ್ಮರಿಸಿ  ಶ್ರೀ ಮಠದ ಹಳೆಯ ವಿದ್ಯಾರ್ಥಿ ದೊಡ್ಡನಹುಂಡಿ ರಾಜಣ್ಣ ಅವರು ಶ್ರೀಮಠ ಹಾಗೂ ಗೋಪಿಶೆಟ್ಟಿಯೂರು ಇತಿಹಾಸದಲ್ಲಿ ದಾಖಲಾಗುವಂತೆ ‘ಕಂತೆ ಭಿಕ್ಷಾ ಕಾಯಕ ಸಂತ ಶ್ರೀ ಸುಬ್ಬೇದೇವರು ಸ್ವಾಮೀಜಿ’ ಕೃತಿಯನ್ನು ರಚಿಸಿ, ಮಠ ನೀಡಿದ ಸೇವೆಯನ್ನು ಸ್ಮರಿಸಿದ್ದಾರೆ ಎಂದರು.

ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಗ್ರಾಮದ ವಿದ್ಯಾರ್ಥಿನಿಯರಾದ ಜಿ.ದೀಕ್ಷಾ ಹಾಗೂ ಆರ್.ಸೃಷ್ಟಿ ಅವರನ್ನು ಸನ್ಮಾನಿಸಲಾಯಿತು.

ಶ್ರೀ ಮಠದ ಶ್ರೀ ಸೋಮಶೇಖರ ಸ್ವಾಮೀಜಿ, ಕುಂತೂರು ಶ್ರೀ ವೀರಸಿಂಹಾಸನ ಮಠಾಧ್ಯಕ್ಷ ಶ್ರೀ ಶಿವಪ್ರಭುಸ್ವಾಮೀಜಿ, ಶರಣು ವಿಶ್ವ ವಚನ ಫೌಂಡೇಷನ್ ಅಧ್ಯಕ್ಷರಾದ ರೂಪಾ, ವಚನ ಕುಮಾರಸ್ವಾಮಿ ಮಾತನಾಡಿದರು.

ಗೋಪಿಶೆಟ್ಟಿಯೂರು ಹಾಗೂ ಗೆಜ್ಜಲನತ್ತ ಗ್ರಾಮದ ಬಸವ ದಳ ಭಜನಾ ತಂಡ ಭಜನಾ ಕಾರ್ಯಕ್ರಮ ನಡೆಸಿಕೊಟ್ಟಿತು.  ಸಮಾರಂಭದಲ್ಲಿ ಗೋಪಿಶೆಟ್ಟಿಯೂರು, ರಾಮಾಪುರ ಹಾಗೂ ಗೆಜ್ಜಲನತ್ತ ಗ್ರಾಮಸ್ಥರು ಭಾಗವಹಿಸಿದ್ದರು. ಭಕ್ತರಿಗೆ ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಮಠದ ಭಕ್ತರಾದ ಪೊನ್ನಾಚಿ ನಾಗೇಶ್, ಮಠದ ಹಳೆಯ ವಿದ್ಯಾರ್ಥಿಗಳಾದ ಶ್ರೀ ಮಹೇಶ್ ಸ್ವಾಮೀಜಿ, ಗೇರುಮಾಳ ಬಸವಣ್ಣ, ಪೊನ್ನಾಚಿ ಕುಮಾರ್, ಪಿ.ಜಿ.ಪಾಳ್ಯ ಮಹದೇವಸ್ವಾಮಿ, ಮುರುಗೇಶ್ ಮತ್ತಿತರರು ಭಾಗವಹಿಸಿದ್ದರು.

admin
the authoradmin

Leave a Reply

Translate to any language you want