ಕೆ.ಆರ್.ನಗರ(ಜಿಟೆಕ್ ಶಂಕರ್): ತಾಲೂಕಿನ ಕೆಸ್ತೂರು ಕೊಪ್ಪಲಿನ ಜನರ ಆಶಯದಂತೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಿಸಲು ಅಗತ್ಯ ಪ್ರೋತ್ಸಾಹ ನೀಡುವುದಾಗಿ ಮಾಜಿ ಸಾ.ರಾ.ಮಹೇಶ್ ಭರವಸೆ ನೀಡಿದರು.
ಗ್ರಾಮದ ಮುಖಂಡ ಸ್ಟುಡಿಯೊ ಲೋಕೇಶ್ ಅವರ ನಿವಾಸದಲ್ಲಿ ಯಜಮಾನರು ಮತ್ತು ಮುಖಂಡರ ಜತೆ ಸಭೆ ನಡೆಸಿ ಮಾತನಾಡಿದ ನಂತರ ಸುದ್ದಿಗಾರರಿಗೆ ಮಾತನಾಡಿದ ಅವರು ಈ ಗ್ರಾಮದಲ್ಲಿ ಆರು ಸಾವಿರ ಜನರಿದ್ದು ಇಲ್ಲಿನ ಹಾಲು ಉತ್ಪಾದಕರು ಅಕ್ಕಪಕ್ಕದ ಗ್ರಾಮಗಳಿಗೆ ತೆರಳಿ ಹಾಲು ನೀಡುತ್ತಿದ್ದು ಈ ಸಮಸ್ಯೆಗೆ ಸ್ಪಂದಿಸಲು ನಾನು ಮನಸ್ಸು ಮಾಡಿದ್ದೇನೆ ಎಂದರು.
ಮಾಜಿ ಸಚಿವರಿಗೆ ತಮ್ಮ ಆಹವಾಲು ಹೇಳಿಕೊಂಡ ಗ್ರಾಮದ ಕೆಲವರು ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ನಮ್ಮ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಇಲ್ಲದಿರುವುದರಿಂದ ನಾವು ಸುತ್ತಮುತ್ತಲಿನ ಗ್ರಾಮಗಳಾದ ಶ್ರೀರಾಂಪುರ, ಚುಂಚನಕಟ್ಡೆ, ಮಳಲಿ, ಕುಪ್ಪೆ ಸೇರಿದಂತೆ ಇತರ ಜಾಗಗಳಿಗೆ ಹಾಲು ಸರಬರಾಜು ಮಾಡಲು ಅಲೆಯ ಬೇಕಿದ್ದು ನಮ್ಮ ಸಮಸ್ಯೆಗೆ ಪರಿಹಾರ ಕಂಡು ಕೊಡಿ ಎಂದು ಕೇಳಿಕೊಂಡರು.
ಈ ಕೂಡಲೇ ಮೈಮುಲ್ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಂಬಂಧಿತರೊಂದಿಗೆ ಮಾತನಾಡಿ ಸ್ಥಳ ಬೇಟಿ ಮಾಡಿಸಿ ಸಂಘ ಆರಂಭಿಸುವಂತೆ ಸಲಹೆ ನೀಡುವುದಾಗಿ ತಿಳಿಸಿದರಲ್ಲದೆ ಗ್ರಾಮದಲ್ಲಿ ಸಂಘ ಆರಂಭವಾದರೆ ಹತ್ತಾರು ಕುಟುಂಬಸ್ಥರು ಹೈನುಗಾರಿಕೆ ನಡೆಸಿ ಬದುಕು ಕಟ್ಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ನುಡಿದರು.

ಗ್ರಾಮದ ಮುಖಂಡ ಸ್ಟುಡಿಯೋ ಲೋಕೇಶ್ ಮಾತನಾಡಿ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಿಸುವಂತೆ ಹತ್ತಾರು ಬಾರಿ ಶಾಸಕ ಡಿ.ರವಿಶಂಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು ಸ್ವಗ್ರಾಮದಲ್ಲಿ ಸಂಘ ಆರಂಭಿಸಲು ಅವರು ಮನಸ್ಸು ಮಾಡಿಲ್ಲ ಎಂದು ದೂರಿದರು.
ಮಾಜಿ ಸಚಿವರಾದ ಸಾ.ರಾ.ಮಹೇಶ್ ಅವರು ನಮ್ಮ ಸಮಸ್ಯೆಗೆ ಸ್ಪಂದಿಸುವುದಾಗಿ ವಚನ ನೀಡಿದ್ದು ಅವರ ಹಿಂದೆ ನಾವು ಸದಾ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದ ಅವರು ಗ್ರಾಮದಲ್ಲಿ ಬೃಹತ್ ಸಭೆ ನಡೆಸಿ ಅವರನ್ನು ಬೆಂಬಲಿಸಿ ಜೆಡಿಎಸ್ ಸೇರ್ಪಡೆ ಯಾಗುವುದಾಗಿ ಘೋಷಿಸಿದರು.
ಕುರುಬ ಸಮಾಜದ ಪ್ರಭಾವಿ ಮುಖಂಡ ಸಿ.ಬಿ.ಲೋಕೇಶ್, ಗ್ರಾ.ಪಂ.ಮಾಜಿ ಸದಸ್ಯ ಕೆ.ಕೆ.ಪ್ರಸನ್ನ, ಗ್ರಾಮಸ್ಥರಾದ ಕೆ.ಆರ್.ಕುಮಾರ್, ಕೆ.ಎ.ಕಿರಣ, ಮಂಜುನಾಥ್, ಕೆ.ಎಸ್.ಸುಗುಣ, ಜಯಂತಿಲೋಕೇಶ್, ಕೆ.ಎನ್.ಕಾಂತರಾಜು, ಕೆ.ಎನ್.ಶೇಖರ್, ಮಧು, ಶಿವಣ್ಣ, ಕೃಷ್ಣೇಗೌಡ, ಜೆ.ಮಹದೇವ, ವಿಜಯ, ಕೆ.ಕೃಷ್ಣೇಗೌಡ, ಕೆ.ಎಸ್.ಹರೀಸ್, ರವಿ, ಕಾಂತರಾಜು, ಆಶಾಮಹದೇವ್, ಮಾದಮ್ಮ ಶಿವೇಗೌಡ, ಜಯಂತಿ ಈರಣ್ಣ, ದಿವ್ಯ ಪ್ರಸನ್ನ ಸೇರಿದಂತೆ ಇನ್ನಿತರರು ಹಾಜರಿದ್ದರು.








